
ಮೈಸೂರು, ಅಕ್ಟೋಬರ್ 11: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ವಿದ್ಯುಕ್ತ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಶ್ರೀಗಳು, “ನಾನು ದಸರಾ ಉದ್ಘಾಟಿಸಲು ಬಂದಿಲ್ಲ, ಚಾಮುಂಡೇಶ್ವರಿ ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ” ಎಂದರು.
ಶ್ರೀಗಳು ತಮ್ಮ ಭಾಷಣದಲ್ಲಿ, ಮೈಸೂರು ನಾಡಿನ ಗತವೈಭವದ ಸಂಕೇತವಾಗಿದ್ದು, ಭೂತ, ಭವಿಷ್ಯ ಹಾಗೂ ವರ್ತಮಾನಗಳ ಸಂಗಮವಾಗಿದೆ ಎಂದು ಬಣ್ಣಿಸಿದರು. ನಾಡನ್ನು ಜಾತಿಯಿಂದ ಕಟ್ಟದೆ ನೀತಿ ಮತ್ತು ಪ್ರೀತಿಯಿಂದ ಕಟ್ಟಬೇಕು ಎಂದು ಕರೆ ನೀಡಿದ ಅವರು, ಪಂಪನ ‘ಮಾನವ ಕುಲ ತಾನೊಂದೇ ವಲಂ’ ತತ್ತ್ವವನ್ನು ಸ್ಮರಿಸಿದರು. ಮೈಸೂರಿನ ರಾಜರು ಅಧಿಕಾರ ನಡೆಸಿ ಜನರ ಮನಸ್ಸನ್ನು ಆಳಿದರು ಎಂದ ಶ್ರೀಗಳು, ಭೂಮಿ, ನೀರು ಮತ್ತು ಗಾಳಿಯನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಅಣೆಕಟ್ಟುಗಳು ನಮ್ಮ ಅನ್ನದ ತಟ್ಟೆಗಳಿದ್ದಂತೆ, ಇವು ನಿಸರ್ಗ ನೀಡಿದ ಕೊಡುಗೆಯಾಗಿದ್ದು ಪರಿಸರ ಸಂರಕ್ಷಣೆ ಅತ್ಯಗತ್ಯ ಎಂದು ಕಿವಿಮಾತು ಹೇಳಿದ್ದಾರೆ. ನಾನು ದೀಪ ಹಚ್ಚಿದ್ದೇನೆ ಬೆಳಕು ದೇವಿಯದು, ಚಾಮುಂಡಿ ದೇವಿ ಟವರ್ ಆಫ್ ಪವರ್ ಎಂದರು.
ಮುಂದುವರಿದು ಮಾತನಾಡಿದ ಶ್ರೀಗಳು, ಸಾಲುಮರದ ತಿಮ್ಮಕ್ಕ ಮತ್ತು ಹರೆಕಾಳ ಹಾಜಪ್ಪ ಅವರ ಉದಾಹರಣೆ ನೀಡಿ ಮರ-ಗಿಡ ಬೆಳೆಸಲು ಹಾಗೂ ಸಮಾಜಮುಖಿ ಕಾರ್ಯಗಳನ್ನು ಮಾಡಲು ಕರೆ ನೀಡಿದರು. ಕೇವಲ ತಂತ್ರಜ್ಞಾನ ಬೆಳೆದರೆ ಸಾಲದು, ಊಟವನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ, ರೈತನ ಬೆವರು ಭೂಮಿಗೆ ಇಳಿಯಲೇಬೇಕು ಎಂದರು. ತಾಯಂದಿರು ಮಕ್ಕಳಿಗೆ ಫೇಸ್‌ಬುಕ್ ತೋರಿಸುವ ಬದಲು ಕನ್ನಡ ಸಾಹಿತ್ಯ, ಕವಿತೆ ಹಾಗೂ ವಚನಗಳನ್ನು ಕಲಿಸಿ ಕನ್ನಡ ಸಂಸ್ಕೃತಿಯನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಐತಿಹಾಸಿಕ ದಸರಾ ಮಹೋತ್ಸವದಲ್ಲಿ ಭಾಗಿಯಾಗಿರುವುದು ತಮ್ಮ ಬದುಕಿನ ಸ್ಮರಣೀಯ ಕ್ಷಣ ಹಾಗೂ ಪೂರ್ವಜನ್ಮದ ಪುಣ್ಯ ಎಂದು ಹೇಳಿದರು. ಕೊಪ್ಪಳದ ಗವಿಮಠವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಬರ ಎದುರಿಸಲು ಶ್ರೀಗಳು ಕೈಗೊಂಡ ಜಲದೀಕ್ಷೆ ಕಾರ್ಯಾಚರಣೆ ಅಭೂತಪೂರ್ವವಾದದ್ದು. ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಮೂಲಕ ಶ್ರೀಗಳು ನಾಡಿಗೆ ದೊಡ್ಡ ಸಂದೇಶ ನೀಡಿದ್ದಾರೆ ಮತ್ತು ಅವರ ಉಪಸ್ಥಿತಿಯಿಂದ ಈ ದಸರಾ ಆಚರಣೆಗೆ ನಿಜವಾದ ಅರ್ಥ ಬಂದಿದೆ ಎಂದು ಅವರು ಶ್ರೀಗಳ ಸರಳತೆ ಹಾಗೂ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:47 pm, Sun, 11 October 26