ಮೈಸೂರು, ಡಿಸೆಂಬರ್ 24: ಮೈಸೂರಿನ ಪ್ರಮುಖ ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯ ಹೆಸರಿಟ್ಟು ಮರುನಾಮಕರಣ ಮಾಡಲು ಮೈಸೂರು ನಗರ ಪಾಲಿಕೆ ಮುಂದಾಗಿರುವುದು ಈಗ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಮೈಸೂರಿನ ಹೃದಯಭಾಗದಲ್ಲಿರುವ ಒಂಟಿಕೊಪ್ಪಲ್ ಲಕ್ಷೀ ವೆಂಕಟೇಶ್ವರ ದೇವಸ್ಥಾನದಿಂದ ರಾಯಲ್ ಇನ್ ಹೋಟೆಲ್‌ವರೆಗಿನ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ಹೆಸರಿಡಲು ಪಾಲಿಕೆ ಮುಂದಾಗಿದೆ.
ಪಾಲಿಕೆಯ ನಿರ್ಧಾರಕ್ಕೆ ಸಾಮಾಜಿಕ ಕಾರ್ಯಕರ್ತ, ಮುಡಾ ಹಗರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಬೆಂಬಲ ಸೂಚಿಸಿದ್ದಾರೆ.
ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ನಾಮಕರಣ ಮಾಡುವ ವಿಚಾರವಾಗಿ ಮೈಸೂರು ನಗರ ಪಾಲಿಕೆ ಪ್ರಕಟಣೆ ಹೊರಡಿಸಿ ಸಾರ್ವಜನಿಕರ ಆಕ್ಷೇಪಣೆಗಳನ್ನು ಕೋರಿತ್ತು. ಇದೀಗ ಅದಕ್ಕೆ ಸ್ನೇಹಮಯಿಕೃಷ್ಣ ಕೃಷ್ಣ ಆಕ್ಷೇಪಣೆ ಸಲ್ಲಿಸಿದ್ದಾರೆ.
ಲೋಕಾಯುಕ್ತ ಪ್ರಕರಣದಲ್ಲಿ ಎ1 ಆಗಿರುವವರ ಹೆಸರನ್ನು ರಸ್ತೆಗೆ ಇಡಬಾರದು ಎಂದು ಸ್ನೇಹಮಯಿ ಕೃಷ್ಣ ಆಕ್ಷೇಪ ಸಲ್ಲಿಸಿದ್ದಾರೆ. ಮತ್ತೊಂದೆಡೆ ಮೈಸೂರಿನ ಪರಿಸರ ಹೋರಾಟಗಾರ್ತಿ ಭಾನು ಮೋಹನ್ ಸಹ ಆಕ್ಷೇಪ ಸಲ್ಲಿಸಿದ್ದಾರೆ.
ಆ ರಸ್ತೆ ಮೈಸೂರು ಅಭಿವೃದ್ಧಿ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹೋದರಿ ಪ್ರಿನ್ಸಸ್ ಕೃಷ್ಣಜ್ಜಮ್ಮಣಿ ಹೆಸರಿನಲ್ಲಿದೆ. ಈ ರಸ್ತೆಯಲ್ಲಿ ಆಕೆಯ ಹೆಸರಲ್ಲಿ ಕೃಷ್ಣದತ್ತ ಒಡೆಯರ್ ಆಸ್ಪತ್ರೆ ಕಟ್ಟಿಸಿದ್ದರು. ಅವರ ಹೆಸರಲ್ಲಿ ರಸ್ತೆ ಇದೆ. ಅದನ್ನು ಬದಲಾಯಿಸಬಾರದು ಎಂದು ಭಾನು ಮೋಹನ್ ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಮೈಸೂರಿನ ಸುಪುತ್ರ. ಎರಡು ಬಾರಿ ಸಿಎಂ ಆಗಿದ್ದಾರೆ. ಮೈಸೂರಿಗೆ ಶಾಶ್ವತ ಕೊಡುಗೆ ನೀಡಿದ್ದಾರೆ. ಅವರ ಹೆಸರಿಡುವುದು ತಪ್ಪಲ್ಲ ಎಂದು ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೀಮಿತ ಮಾಡಬಾರದು. ಇದಕ್ಕೆ ವಿರೋಧ ಮಾಡುವುದು ಮೊಸರಲ್ಲಿ ಕಲ್ಲು ಹುಡುಕಿದಂತೆ ಎಂದಿದ್ದಾರೆ.
ಇದನ್ನೂ ಓದಿ: ಸಿ.ಟಿ.ರವಿ ಬಂಧನ ಪ್ರಕರಣ: ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕಿಳಿದ ಬಿಜೆಪಿ..!
ಸಿದ್ದರಾಮಯ್ಯ ಹೆಸರಿಡುವ ಪ್ರಸ್ತಾವನೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನವರು ಯಾರೂ ವಿರೋಧ ಮಾಡಬಾರದು. ಕವಿಗಳು, ಸಾಧಕರ ಹೆಸರು ಇಡುವುದು ವಾಡಿಕೆ. ಮೈಸೂರಿಗೆ ಆಶ್ರಯಧಾತರಾಗಿ ಬಂದವರು ಚಾಮರಾಜ ಒಡೆಯರ್, ಕೃಷ್ಣರಾಜ ಒಡೆಯರ್ ಅವರ ಹೆಸರು ಇಟ್ಟಿದ್ದರು. ದಿವಾನರ ಹೆಸರುಗಳನ್ನು ಇಟ್ಟಿದ್ದಾರೆ. ನಾನು ಸೈದ್ಧಾಂತಿಕವಾಗಿ ಇವತ್ತು ಸಿದ್ದರಾಮಯ್ಯ ಅವರನ್ನು ವಿರೋಧಿಸುತ್ತೇನೆ. ಆದರೆ, ಮೈಸೂರಿಗೆ ಸಿದ್ದರಾಮಯ್ಯನವರ ಕೊಡುಗೆ ಇದೆ. ಜಯದೇವ ಅಸ್ಪತ್ರೆ ಕಟ್ಟಲು ಮಾಜಿ ಶಾಸಕ ವಾಸಣ್ಣ ಹಾಗೂ ಸಿದ್ದರಾಮಯ್ಯ ನವರ ಕೊಡುಗೆ ದೊಡ್ಡದು. ನಲ್ವತ್ತು ವರ್ಷದಿಂದ ರಾಜಕಾರಣದಲ್ಲಿ ಇದ್ದಾರೆ. ಸಾಧಕರನ್ನು ಗುರುತಿಸುವ ವಿಚಾರದಲ್ಲಿ ಪಕ್ಷ ಭೇದ ಬೇಡ. ಸಾಧನೆಗೆ ಪಕ್ಷ ತರಬೇಡಿ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಒಟ್ಟಿನಲ್ಲಿ ಸದ್ಯ ಸಿದ್ದರಾಮಯ್ಯ ಹೆಸರಿನ ರಸ್ತೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು, ಮುಂದೆ ಇದು ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ