Santro Ravi: ಸ್ಯಾಂಟ್ರೋ ರವಿಗೆ ಸದ್ಯಕ್ಕಿಲ್ಲ ಜಾಮೀನು, ಕಾರು ಚಾಲಕ ಪೊಲೀಸರ ವಶಕ್ಕೆ
ರಾಜ್ಯದ ಹಲವೆಡೆ ಸ್ಯಾಂಟ್ರೋ ರವಿಗಾಗಿ ಕರ್ನಾಟಕ-ಕೇರಳ ಗಡಿಯಲ್ಲೂ ತೀವ್ರ ಹುಡುಕಾಟ ನಡೆಸುತ್ತಿರುವ ಪೊಲೀಸರು, ಹೈಫೈ ರೆಸಾರ್ಟ್ಗಳಲ್ಲೂ ಶೋಧ ನಡೆಸುತ್ತಿದ್ದಾರೆ. ಸ್ಯಾಂಟ್ರೋ ಮಿತ್ರರ ಬಳಗವನ್ನೆಲ್ಲ ಸಂಪರ್ಕಿಸಿರುವ ಪೊಲೀಸರು, ಪ್ರತಿ ಜಿಲ್ಲೆಯಲ್ಲೂ ಶೋಧ ನಡೆಸುತ್ತಿದ್ದಾರೆ.
ಮೈಸೂರು: ವಿವಿಧ ಪ್ರಕರಣಗಳಲ್ಲಿ ತಗಲಾಕ್ಕೊಂಡು ತಲೆಮರೆಸಿಕೊಂಡಿರುವ ಉದ್ಯಮಿ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ (Santro Ravi) ಸಲ್ಲಿಸಿದ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪೊಲೀಸರು ಕಾಲಾವಕಾಶ ಕೇಳಿದ ಹಿನ್ನಲೆ ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆಕ್ಷೇಪಣೆ ಸಲ್ಲಿಕೆಗೆ ಜನವರಿ 17ರವರೆಗೆ ಅವಕಾಶ ನೀಡಿದೆ. ಹೀಗಾಗಿ ಸ್ಯಾಂಟ್ರೋ ರವಿಗೆ ಸದ್ಯಕ್ಕಿಲ್ಲ ಜಾಮೀನು. ಈ ಹಿಂದಿನ ವಿಚಾರಣೆ ವೇಳೆ ಇಂದು ತಕರಾರು ಅರ್ಜಿ ಸಲ್ಲಿಸಲು ಕೋರ್ಟ್ ಅವಕಾಶ ನೀಡಿತ್ತು. ಆದರೆ ಪೊಲೀಸರು ಇಂದು ಮತ್ತೆ ಅವಕಾಶ ಕೇಳಿದ ಹಿನ್ನಲೆ ಮನವಿಯನ್ನು ಕೋರ್ಟ್ ಪುರಸ್ಕರಿಸಿ ಸಮಯಾವಕಾಶ ನೀಡಿತು.
ಇನ್ನೊಂದೆಡೆ ಸ್ಯಾಂಟ್ರೋ ರವಿ ಬಂಧನಕ್ಕೆ ತೀವ್ರ ಶೋಧ ನಡೆಸುತ್ತಿರುವ ಪೊಲೀಸರು ರವಿ ಆಪ್ತರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಸ್ಯಾಂಟ್ರೋ ರವಿ ಕಾರು ಚಾಲಕ ಗಿರೀಶ್ನನ್ನು ರಾಮನಗರ ಎಸ್ಪಿ ಸಂತೋಷ್ ಬಾಬು ನೇತೃತ್ವದ ತಂಡ ವಶಕ್ಕೆ ಪಡೆದಿದೆ. ರಾಮನಗರ ಜಿಲ್ಲೆಯ ರೆಸಾರ್ಟ್, ಹೋಮ್ಸ್ಟೇಗಳಲ್ಲಿ ಶೋಧ ನಡೆಸುತ್ತಿದ್ದಾಗ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ರಾಮನಗರದಲ್ಲಿ 2 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಬಂಧಿಸಲು ಮೈಸೂರಿನಿಂದ ಆಗಮಿಸಿದ್ದ ಪೊಲೀಸರು ಶೋಧ ನಡೆಸುತ್ತಿದ್ದರು. ಈ ವಿಚಾರ ತಿಳಿದ ಸ್ಯಾಂಟ್ರೋ ರವಿ ಪರಾರಿಯಾಗಿದ್ದಾನೆ.
ಕರ್ನಾಟಕ-ಕೇರಳ ಗಡಿಯಲ್ಲೂ ಸ್ಯಾಂಟ್ರೋ ರವಿಗಾಗಿ ಹುಡುಕಾಟ
ರಾಜ್ಯದ ಹಲವೆಡೆ ಸ್ಯಾಂಟ್ರೋ ರವಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದ್ದು, ಕರ್ನಾಟಕ-ಕೇರಳ ಗಡಿ ಭಾಗದಲ್ಲೂ ಶೋಧ ನಡೆಸಲಾಗುತ್ತಿದೆ. ಸ್ಯಾಂಟ್ರೋ ಮಿತ್ರರ ಬಳಗವನ್ನೆಲ್ಲ ಸಂಪರ್ಕಿಸಿರುವ ಪೊಲೀಸರು, ಪ್ರತಿ ಜಿಲ್ಲೆಯಲ್ಲೂ ಸ್ಯಾಂಟ್ರೋಗಾಗಿ ಒಂದೊಂದು ತಂಡ ರಚನೆ ಮಾಡಲಾಗಿದೆ. ಸದ್ಯ ಮೂರ್ನಾಲ್ಕು ಜಾಗಗಳಲ್ಲಿ ರವಿ ತಲೆಮರೆಸಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಸುಳಿವು ಇರುವ ಜಿಲ್ಲೆಗಳಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. 7-8 ಜಿಲ್ಲೆಗಳಲ್ಲಿ ಪೊಲೀಸರಿಗೆ ಅಲರ್ಟ್ ಇರುವಂತೆ ಸೂಚನೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:13 pm, Thu, 12 January 23