ಮೈಸೂರು: ಹುಲಿ ಸೆರೆಗಾಗಿ ಕಾರ್ಯಾಚರಣೆಗಿಳಿದ ವಿಶೇಷ ತಂಡ: 6 ಸಿಸಿ ಕ್ಯಾಮರಾ ಅಳವಡಿಸಿದ ಅರಣ್ಯ ಇಲಾಖೆ
ಕೇವಲ ನಂಜನಗೂಡು ಭಾಗದ ಕಥೆಯಲ್ಲ. ಹೆಚ್ ಡಿ ಕೋಟೆ, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ ಹಲವು ಭಾಗಗಳಲ್ಲಿ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಕೇವಲ ಹುಲಿ ಮಾತ್ರವಲ್ಲ ಚಿರತೆ ಆನೆಗಳು ನಾಡಿಗೆ ಬರುವುದು ಹೆಚ್ಚಾಗುತ್ತಿದೆ. ಒಂದು ಕಡೆ ಬೆಳೆ ನಾಶದಿಂದ ಲಕ್ಷಾಂತರ ರೂಪಾಯಿ ನಷ್ಟವುಂಟಾದರೆ ಮತ್ತೊಂದು ಕಡೆ ಜೀವವೇ ಹೋಗುವ ಭಯ ಕಾಡಂಚಿನ ಗ್ರಾಮದ ಜನರನ್ನು ಕಾಡುತ್ತಿದೆ.

ಮೈಸೂರು, ನ.02: ಪ್ರವಾಸಿಗರ ನೆಚ್ಚಿನ ತಾಣವಾದ ಮೈಸೂರು, ಕಾಡು ಪ್ರಾಣಿಗಳಿಗೂ ಅಚ್ಚು ಮೆಚ್ಚಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರತಿ ನಿತ್ಯ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿದೆ. ಹೌದು, ಮೈಸೂರು(Mysore) ಜಿಲ್ಲೆಯ ಹುಣಸೂರು, ಹೆಚ್ಡಿ ಕೋಟೆ, ಪಿರಿಯಾಪಟ್ಟಣ ಹಾಗೂ ನಂಜನಗೂಡು ಭಾಗದಲ್ಲಿ ಕಾಡು ಪ್ರಾಣಿಗಳ(Wild Animals) ಹಾವಳಿ ಮಿತಿ ಮೀರಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುವ ಕಾಡು ಪ್ರಾಣಿಗಳು, ರೈತರ ನಿದ್ದೆಗೆಡಿಸಿವೆ. ಅಷ್ಟೇ ಅಲ್ಲ, ಕಾಡಂಚಿನ ಗ್ರಾಮದ ಜನರು ಮನೆಯಿಂದ ಹೊರ ಬರಲು ಹೆದರುವಂತ ವಾತಾವರಣ ನಿರ್ಮಾಣವಾಗಿದೆ.
ನಂಜನಗೂಡಿನಲ್ಲಿ ಹುಲಿ
ನಂಜನಗೂಡು ತಾಲ್ಲೂಕು ಮಹದೇವ ನಗರ ಗ್ರಾಮದಲ್ಲಿ ಹುಲಿಯೊಂದು ಆತಂಕ ಸೃಷ್ಟಿಸಿದೆ. ಕಾಡಂಚಿನಲ್ಲಿ ಹಸು ಮೇಯಿಸುವಾಗ ಹುಲಿಯೊಂದು ಹಸು ಮತ್ತು ಕರುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಅಷ್ಟೇ ಅಲ್ಲ, ಈ ವೇಳೆ ಹಸು ಮೇಯಿಸುತ್ತಿದ್ದ ಮಹದೇವ ನಗರದ ವೀರಭದ್ರ ಬೋವಿ ಎಂಬುವವನ ಮೇಲೂ ದಾಳಿ ಮಾಡಿದೆ. ಅದೃಷ್ಟವಶಾತ್ ಅಕ್ಕ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಓಡಿ ಬಂದ ಹಿನ್ನೆಲೆ ಹುಲಿ ವೀರಭದ್ರ ಬೋವಿಯನ್ನು ಬಿಟ್ಟು, ಓಡಿ ಹೋಗಿದೆ. ಸದ್ಯ ಹುಲಿ ದಾಳಿಯಿಂದ ಗಾಯಗೊಂಡಿರುವ ವೀರಭದ್ರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ವೀರಭದ್ರನ ಬೆನ್ನು, ಮುಖ ಹಾಗೂ ಕೈ ಭಾಗಕ್ಕೆ ಗಂಭೀರವಾದ ಗಾಯವಾಗಿದೆ.
ಇದನ್ನೂ ಓದಿ:ಮೈಸೂರು: ರಸ್ತೆಗಿಳಿದ ಕಾಡುಪ್ರಾಣಿಗಳು; ಕಾಡೆಮ್ಮೆ, ಜಿಂಕೆ, ಕರಡಿಗಳನ್ನು ಕಂಡು ಪುಳಕಿತರಾದ ಜನ
ಹುಲಿ ಓಡಾಟ ಆತಂಕದಲ್ಲಿ ಜನರು – ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಆಕ್ರೋಶ
ಇನ್ನು ವೀರಭದ್ರ ಬೋವಿ ಮೇಲೆ ದಾಳಿ ಮಾಡಿದ ಹುಲಿ, ಅಲ್ಲಿಯೇ ಅಕ್ಕ-ಪಕ್ಕದ ಜಮೀನಿನಲ್ಲಿ ಓಡಾಡುತ್ತಿದೆ. ಹುಲಿ ಓಡಾಡುತ್ತಿರುವ ದೃಶ್ಯ ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಸ್ಥಳೀಯರ ಆತಂಕಕ್ಕೆ ಕೂಡ ಕಾರಣವಾಗಿದೆ. ಇದರಿಂದ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ತಮ್ಮ ಬೆಳೆಗಳ ಬಗ್ಗೆ ಗಮನಹರಿಸಲು ಆಗುತ್ತಿಲ್ಲ. ದೈನಂದಿನ ಕೆಲಸಗಳಿಗೆ ಹೋಗಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರ ಈ ಆತಂಕ ಆಕ್ರೋಶವಾಗಿ ಬದಲಾಗಿದೆ. ಇದರ ಪ್ರತಿಫಲವಾಗಿ ಹುಲಿ ದಾಳಿ ಸ್ಥಳ ಪರಿಶೀಲನೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿ, ಅರಣ್ಯ ಇಲಾಖೆ ವಾಹನವನ್ನು ಪಲ್ಟಿ ಮಾಡಲು ಯತ್ನಿಸಿದ್ದರು. ಕೊನೆಗೆ ಕೆಲ ಸ್ಥಳೀಯರೇ ಸಮಾಧಾನಪಡಿಸಿ ಸಿಬ್ಬಂದಿಯ ರಕ್ಷಣೆ ಮಾಡಿದ್ದರು.
ಹುಲಿ ಸೆರೆಗೆ ಕಾರ್ಯಾಚರಣೆ
ಇನ್ನು ಈ ಭಾಗದಲ್ಲಿ ಹುಲಿ ದಾಳಿ ಇದೇ ಮೊದಲೇನಲ್ಲ, ಕಳೆದ ವರ್ಷ ಹಾದನೂರು, ಒಡೆಯನಪುರ ಗ್ರಾಮದ ದನಗಾಹಿ ಒಬ್ಬರನ್ನು ಹುಲಿ ಬಲಿ ಪಡೆದುಕೊಂಡಿತ್ತು. ಅದೇ ಹುಲಿ ಈಗ ಮತ್ತೆ ದಾಳಿ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಒಂದು ವರ್ಷ ಕಳೆದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿದಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೊದಲ ಹಂತವಾಗಿ ಹುಲಿ ದಾಳಿ ಮಾಡಿದ ಹತ್ತಿರ ಪ್ರದೇಶದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಟ್ಟು 6 ಕ್ಯಾಮೆರಾಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಅಳವಡಿಸಿದ್ದಾರೆ. ಜೊತೆಗೆ ಹುಲಿ ಸಂರಕ್ಷಣಾ ವಿಶೇಷ ಪಡೆಯಿಂದ ಹುಲಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಹುಲಿಯ ಹೆಜ್ಜೆ ಗುರುತು ಹುಲಿಯ ಪಿಕ್ಕೆಗಳ ಹುಡುಕಾಟದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ. ಹುಲಿಯಿರುವ ಬಗ್ಗೆ ಮಾಹಿತಿ ಲಭ್ಯವಾದರೆ, ಹುಲಿ ಸೆರೆ ಕಾರ್ಯಾಚರಣೆಗೆ ಸಾಕಾನೆಗಳ ಬಳಕೆಗೆ ಅರಣ್ಯ ಇಲಾಖೆ ನಿರ್ಧಾರ ಮಾಡಿದೆ.
ಕಾಡು ಪ್ರಾಣಿ ಮಾನವ ಸಂಘರ್ಷ
ಇನ್ನು ಇದು ಕೇವಲ ನಂಜನಗೂಡು ಭಾಗದ ಕಥೆಯಲ್ಲ. ಹೆಚ್ ಡಿ ಕೋಟೆ ಹುಣಸೂರು ಪಿರಿಯಾಪಟ್ಟಣ ಸೇರಿದಂತೆ ಹಲವು ಭಾಗಗಳಲ್ಲಿ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಕೇವಲ ಹುಲಿ ಮಾತ್ರವಲ್ಲ ಚಿರತೆ ಆನೆಗಳು ನಾಡಿಗೆ ಬರುವುದು ಹೆಚ್ಚಾಗುತ್ತಿದೆ. ಒಂದು ಕಡೆ ಬೆಳೆ ನಾಶದಿಂದ ಲಕ್ಷಾಂತರ ರೂಪಾಯಿ ನಷ್ಟವುಂಟಾದರೆ ಮತ್ತೊಂದು ಕಡೆ ಜೀವವೇ ಹೋಗುವ ಭಯ ಕಾಡಂಚಿನ ಗ್ರಾಮದ ಜನರನ್ನು ಕಾಡುತ್ತಿದೆ. ಒಟ್ಟಾರೆ ಅರಣ್ಯ ಇಲಾಖೆ ಇದಕ್ಕೊಂದು ಶಾಶ್ವತ ಪರಿಹಾರ ನೀಡದಿದ್ದರೆ ಮಾನವ ಪ್ರಾಣಿ ಸಂಘರ್ಷದಿಂದ ಮತ್ತಷ್ಟು ಅಮೂಲ್ಯ ಜೀವಗಳು ಬಲಿಯಾಗುವ ಸಂಭವವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ