ಮೈಸೂರು ಹುಲಿ ದಾಳಿ ಪ್ರಕರಣ: ಶೀಘ್ರದಲ್ಲೇ ಕೂಂಬಿಂಗ್ ಆಪರೇಷನ್ ಮಾಡಿಸುವುದಾಗಿ ಭರವಸೆ ಕೊಟ್ಟ ಶಾಸಕ ದರ್ಶನ್ ಧ್ರುವನಾರಾಯಣ್
ಮಹದೇವರನಗರ ಗ್ರಾಮದಲ್ಲಿ ರೈತನ ಮೇಲೆ ಹುಲಿ ದಾಳಿ ನಡೆಸಿತ್ತು. ರೈತ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹುಲಿ ಸೆರೆಗೆ ಶೀಘ್ರದಲ್ಲೇ ಕೂಂಬಿಂಗ್ ಆಪರೇಷನ್ ಆರಂಭಿಸಲಾಗುತ್ತೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಮಾಹಿತಿ ನೀಡಿದ್ದಾರೆ. ಹಾಗೂ ಹುಲಿ ದಾಳಿಯಲ್ಲಿ ಗಾಯಗೊಂಡ ರೈತ ವೀರಭದ್ರ ಭೋವಿ ಅವರ ಖರ್ಚು ವೆಚ್ಚಗಳನ್ನು ಸರ್ಕಾರ ಮತ್ತು ಅರಣ್ಯ ಇಲಾಖೆ ಭರಿಸುತ್ತದೆ ಎಂದು ತಿಳಿಸಿದ್ದಾರೆ.
ಮೈಸೂರು, ನ.02: ಮೈಸೂರಿನಲ್ಲಿ ದನ ಮೇಯಿಸುತ್ತಿದ್ದ ರೈತನ ಮೇಲೆ ಹುಲಿ ದಾಳಿ (Tiger Attack) ಮಾಡಿ ಗಾಯಗೊಳಿಸಿದೆ. ಈ ಘಟನೆ ಸಂಬಂಧ ಹುಲಿ ಸೆರೆಗೆ ಶೀಘ್ರದಲ್ಲೇ ಕಾರ್ಯಾಚರಣೆ ಪ್ರಾರಂಭಿಸುವುದಾಗಿ ಶಾಸಕ ದರ್ಶನ್ ಧ್ರುವನಾರಾಯಣ್ (Darshan Dhruvanarayan) ಭರವಸೆ ನೀಡಿದ್ದಾರೆ. ನಂಜನಗೂಡು ತಾಲೂಕಿನ ಮಹದೇವರನಗರ ಗ್ರಾಮದಲ್ಲಿ ರೈತನ ಮೇಲೆ ಹುಲಿ ದಾಳಿ ನಡೆಸಿತ್ತು. ರೈತ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹುಲಿ ಸೆರೆಗೆ ಶೀಘ್ರದಲ್ಲೇ ಕೂಂಬಿಂಗ್ ಆಪರೇಷನ್ ಆರಂಭಿಸಲಾಗುತ್ತೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಮಾಹಿತಿ ನೀಡಿದ್ದಾರೆ.
ಹುಲಿ ದಾಳಿಯಲ್ಲಿ ಗಾಯಗೊಂಡ ರೈತ ವೀರಭದ್ರ ಭೋವಿ ಅವರ ಖರ್ಚು ವೆಚ್ಚಗಳನ್ನು ಸರ್ಕಾರ ಮತ್ತು ಅರಣ್ಯ ಇಲಾಖೆ ಭರಿಸುತ್ತದೆ. ನಾನು ಕೂಡ ವೈಯಕ್ತಿಕವಾಗಿ ಪರಿಹಾರ ನೀಡಿ ಆತ್ಮಸ್ಥೈರ್ಯ ತುಂಬಿದ್ದೇನೆ. ಕಳೆದ ವರ್ಷ ಹಾದನೂರು, ಒಡೆಯನಪುರ ಗ್ರಾಮದ ದನಗಾಹಿ ಒಬ್ಬರನ್ನು ಹುಲಿ ಬಲಿ ಪಡೆದುಕೊಂಡಿತ್ತು. ಒಂದು ವರ್ಷ ಕಳೆದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿದಿಲ್ಲ. ಈ ವಿಚಾರವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಸ್ಪಷ್ಟ ಮಾಹಿತಿಯನ್ನು ಕೂಡ ನಮ್ಮ ಗಮನಕ್ಕೆ ತಂದಿಲ್ಲ. ಹುಲಿಯನ್ನು ಸೆರೆ ಹಿಡಿಯಲು ಆನೆಗಳನ್ನ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಕಾಡಂಚಿನ ನಿವಾಸಿಗಳಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಕುರಿತಂತೆ ನವೆಂಬರ್ 5 ರಂದು ಹೆಡಿಯಾಲ ಭಾಗದಲ್ಲಿ ಸಭೆ ಮಾಡುತ್ತೇವೆ ಎಂದು ನಂಜನಗೂಡಿನಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.
ಇದನ್ನೂ ಓದಿ: ಮೈಸೂರು: ಹುಲಿ ದಾಳಿಗೆ ಬೇಸತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ಥಳಿಸಿದ ಗ್ರಾಮಸ್ಥರು
ಘಟನೆ ಹಿನ್ನೆಲೆ
ವೀರಭದ್ರ ಭೋವಿ ಎಂಬ ರೈತ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಸಮೀಪದ, ನಂಜನಗೂಡು ತಾಲೂಕಿನ ಮಹದೇವ ನಗರ ಗ್ರಾಮದ ಮತ್ತಿ ಮರದ ಜೇನುಕಟ್ಟೆಯ ಬಳಿ ದನ ಮೇಯಿಸುತ್ತಿದ್ದಾಗ ಹಸು ಹಾಗೂ ಕರುವಿನ ಮೇಲೆ ಹುಲಿ ದಾಳಿ ನಡೆಸಿತ್ತು. ಆಗ ಹಸುವನ್ನು ರಕ್ಷಿಸಲು ಮುಂದಾದ ವೀರಭದ್ರ ಮೇಲೂ ಹುಲಿ ದಾಳಿ ಮಾಡಿತ್ತು. ಸದ್ಯ ರೈತನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ನಿನ್ನೆ ಶಾಸಕ ದರ್ಶನ್ ಧ್ರುವನಾರಾಯಣ್, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದರು.
ಮತ್ತೊಂದೆಡೆ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಕೊಟ್ಟಿದ್ದು ಈ ವೇಳೆ ರೊಚ್ಚಿಗೆದ್ದ ಗ್ರಾಮಸ್ಥರು ಸಿಬ್ಬಂದಿಗೆ ಥಳಿಸಿದ ಘಟನೆ ನಡೆಯಿತು. ನಿರಂತರ ಹುಲಿ ದಾಳಿಗೆ ಬೇಸತ್ತ ಗ್ರಾಮಸ್ಥರು ಸಿಬ್ಬಂದಿ ಮಹಾಂತೇಶ್ ಮೇಲೆ ಹಲ್ಲೆ ನಡೆಸಿದ್ದರು. ಸ್ಥಳೀಯರ ಮೊಬೈಲ್ನಲ್ಲಿ ಹುಲಿ ಓಡಾಟದ ದೃಶ್ಯ ಸೆರೆಯಾಗಿದ್ದು, ಭಾರೀ ಆತಂಕ ಸೃಷ್ಟಿಸಿದೆ.
ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ