AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ: ಗಜಪಯಣಕ್ಕೆ ವಿಧ್ಯುಕ್ತ ಚಾಲನೆ, ಸಾಂಸ್ಕೃತಿಕ ನಗರಿ ತಲುಪಿದ ಆನೆಗಳ ಮೊದಲ ತಂಡ

ವಿಶ್ವವಿಖ್ಯಾತ ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ದೊರೆತಿದೆ. ದಸರಾ ಗಜಪಯಣಕ್ಕೆ ನಾಗರಹೊಳೆ ಹೆಬ್ಬಾಗಿಲು ವೀರನ ಹೊಸಹಳ್ಳಿಯಲ್ಲಿ ಚಾಲನೆ ಸಿಕ್ಕಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಮೊದಲ ತಂಡದ ಆನೆಗಳಿಗೆ ಪೂಜೆ ಸಲ್ಲಿಸಿ ಸಾಂಸ್ಕೃತಿಕ ನಗರಿಗೆ ಬೀಳ್ಕೊಡಲಾಗಿದೆ. ಈ ಮೂಲಕ ಅರಮನೆ ನಗರಿಯಲ್ಲಿ ದಸರಾ ವೈಭವ ಆರಂಭವಾಗಿದೆ.

ಮೈಸೂರು ದಸರಾ: ಗಜಪಯಣಕ್ಕೆ ವಿಧ್ಯುಕ್ತ ಚಾಲನೆ, ಸಾಂಸ್ಕೃತಿಕ ನಗರಿ ತಲುಪಿದ ಆನೆಗಳ ಮೊದಲ ತಂಡ
ಗಜಪಯಣಕ್ಕೆ ಚಾಲನೆ
ರಾಮ್​, ಮೈಸೂರು
| Updated By: Ganapathi Sharma|

Updated on: Aug 05, 2025 | 10:08 AM

Share

ಮೈಸೂರು, ಆಗಸ್ಟ್ 5: ಮೈಸೂರು (Mysuru) ಜಿಲ್ಲೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಸೋಮವಾರ ಹಬ್ಬದ ವಾತಾವರಣ ಮನೆ ಮಾಡಿತ್ತು. ಸಾಂಪ್ರದಾಯಿಕವಾಗಿ ಗಜಪಯಣದ ಮೂಲಕ ವಿಶ್ವವಿಖ್ಯಾತ ನಾಡಹಬ್ಬ ದಸರಾ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಮಧ್ಯಾಹ್ನ 12:34 ರಿಂದ 12:59 ರ ಶುಭ ಲಗ್ನದಲ್ಲಿ ದಸರಾ ಗಜಪಡೆಯ ಮೊದಲ ಹಂತದ 9 ಆನೆಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಿದ್ದಾರೆ.

ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳೆಲ್ಲಾ ಭರ್ತಿಯಾಗಿರುವ ಸಂದರ್ಭ ಈ ಬಾರಿ ಅದ್ದೂರಿ ದಸರಾ ನಡೆಸಲು ಸರ್ಕಾರ ತೀರ್ಮಾನ ಮಾಡಿದೆ. ಇದೇ ಕಾರಣಕ್ಕೆ ಗಜಪಯಣಕ್ಕೆ ಸಹ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳನ್ನು ಕಾಡಿನಿಂದ ನಾಡಿಗೆ ಕಳುಹಿಸಲಾಯಿತು. ಈ ಬಾರಿ ದಸರೆಯಲ್ಲಿ ಒಟ್ಟು 14 ಆನೆಗಳು ಪಾಲ್ಗೊಳ್ಳಲಿವೆ.

ಮೊದಲ ತಂಡದ ದಸರಾ ಆನೆಗಳ ಪಟ್ಟಿ

  1. ಕ್ಯಾಪ್ಟನ್ ಅಭಿಮನ್ಯು, 59 ವರ್ಷ, ನಾಗರಹೊಳೆಯ ಮತ್ತಿಗೋಡು ಶಿಬಿರ, ದಸರಾ ಅನುಭವ: 20 ವರ್ಷ
  2. ಭೀಮ, 25 ವರ್ಷ, ಮತ್ತಿಗೋಡು ಶಿಬಿರ, ದಸರಾ ಅನುಭವ: 4 ವರ್ಷ
  3. ಪ್ರಶಾಂತ, 53 ವರ್ಷ, ದುಬಾರೆ ಶಿಬಿರ, ದಸರಾ ಅನುಭವ: 15 ವರ್ಷ
  4. ಮಹೇಂದ್ರ, 42 ವರ್ಷ, ಮತ್ತಿಗೋಡು ಶಿಬಿರ, ದಸರಾ ಅನುಭವ: 4 ವರ್ಷ
  5. ಧನಂಜಯ, 45 ವರ್ಷ, ದುಬಾರೆ ಶಿಬಿರ, ದಸರಾ ಅನುಭವ: 7 ವರ್ಷ
  6. ಕಂಜನ್, 26 ವರ್ಷ, ದುಬಾರೆ ಶಿಬಿರ, ದಸರಾ ಅನುಭವ: 2 ವರ್ಷ
  7. ಏಕಲವ್ಯ, 40 ವರ್ಷ, ಮತ್ತಿಗೋಡು, ದಸರಾ ಅನುಭವ: 2 ವರ್ಷ
  8. ಕಾವೇರಿ, 45 ವರ್ಷ, ದುಬಾರೆ ಶಿಬಿರ, ದಸರಾ ಅನುಭವ: 13 ವರ್ಷ
  9. ಲಕ್ಷ್ಮಿ, 54 ವರ್ಷ, ಬಳ್ಳೆ ಆನೆ ಶಿಬಿರ , ದಸರಾ ಅನುಭವ: 2 ವರ್ಷ

ಎರಡನೇ ಹಂತದಲ್ಲಿ 5 ಆನೆಗಳು ಆಗಮಿಸಲಿದ್ದು, ಹೆಚ್ಚುವರಿಯಾಗಿ 4 ಮೀಸಲು ಆನೆಗಳನ್ನು ಗುರುತು ಮಾಡಲಾಗಿದೆ. ದಸರಾ ಆಚರಣೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಕಳೆದ ಬಾರಿಯೂ ಅಭಿಮನ್ಯು ಅಂಬಾರಿ ಹೊರುವ ಜವಾಬ್ದಾರಿ ಹೊತ್ತಿದ್ದ. ಈ ಬಾರಿಯೂ ಕೂಡ ಅಂಬಾರಿಯನ್ನ ಅಭಿಮನ್ಯು ಹೊರಲಿದ್ದಾನೆ.

ಇದನ್ನೂ ಓದಿ: ಮೈಸೂರು ದಸರಾ ಜಂಬೂ ಸವಾರಿಗೆ 9 ಆನೆಗಳ ಆಯ್ಕೆ ಅಂತಿಮ: ಇಲ್ಲಿದೆ ಪಟ್ಟಿ

ಇನ್ನು ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಆನೆಗಳು ಲಾರಿಗಳ ಮೂಲಕ ತಲುಪಿದವು. ಆನೆಗಳಿಗೆ ಹಿರಿಯ ಅರಣ್ಯಾಧಿಕಾರಿಗಳು ಸ್ವಾಗತ ಕೋರಿದರು. ನಾಳೆಯೂ ಆನೆಗಳು ಅರಣ್ಯಭವನದಲ್ಲೇ ವಾಸ್ತವ್ಯ ಇರಲಿದ್ದು, ಆಗಸ್ಟ್ 7ರಂದು ಮೈಸೂರು ಅರಮನೆ ಆವರಣ ಪ್ರವೇಶಿಸಲಿವೆ. ದಸರಾ ಗಜಪಡೆ ಮೈಸೂರಿಗೆ ಎಂಟ್ರಿ ಕೊಟ್ಟಿದ್ದು ಇನ್ನುಮುಂದೆ ಸಾಂಸ್ಕೃತಿಕ ನಗರಿಯ ರಾಜಬೀದಿಗಳಲ್ಲಿ ಗಜಪಡೆಯ ಕಲರವ ಜೋರಾಗಿರಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ