AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ ಹಾವಳಿ ನಿಯಂತ್ರಣದಲ್ಲಿ ಸಿಸಿಬಿ ಫೇಲ್; ಸಿಬ್ಬಂದಿಗೆ ಬಿಗ್ ಶಾಕ್ ಕೊಟ್ಟ ಮೈಸೂರು ಕಮಿಷನರ್ !

ಮೈಸೂರಿನಲ್ಲಿ ಹೆಚ್ಚಿದ ಮಾದಕ ವಸ್ತು ಜಾಲ ನಿಯಂತ್ರಿಸುವಲ್ಲಿ ಸಿಸಿಬಿ ಪೊಲೀಸರ ವೈಫಲ್ಯದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು ಗಂಭೀರ ಕ್ರಮ ಕೈಗೊಂಡಿದ್ದಾರೆ. ಹೆಬ್ಬಾಳ ಡ್ರಗ್ಸ್ ಘಟಕ ಪ್ರಕರಣದ ನಂತರ, ಸೀಮಾ ಲಾಟ್ಕರ್ ಸಿಸಿಬಿಯ 10 ಸಿಬ್ಬಂದಿಯನ್ನು ವರ್ಗಾಯಿಸಿ ಮೇಜರ್ ಸರ್ಜರಿ ನಡೆಸಿದ್ದಾರೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಡ್ರಗ್ ಹಾವಳಿ ನಿಯಂತ್ರಣದಲ್ಲಿ ಸಿಸಿಬಿ ಫೇಲ್; ಸಿಬ್ಬಂದಿಗೆ ಬಿಗ್ ಶಾಕ್ ಕೊಟ್ಟ ಮೈಸೂರು ಕಮಿಷನರ್ !
ಡ್ರಗ್ ಹಾವಳಿ ನಿಯಂತ್ರಣದಲ್ಲಿ ಸಿಸಿಬಿ ಫೇಲ್; ಅಧಿಕಾರಿ, ಸಿಬ್ಬಂದಿಗೆ ಬಿಗ್ ಶಾಕ್ ಕೊಟ್ಟ ಮೈಸೂರು ಕಮಿಷನರ್ !
ರಾಮ್​, ಮೈಸೂರು
| Edited By: |

Updated on: Feb 06, 2026 | 11:23 AM

Share

ಮೈಸೂರು, ಫೆಬ್ರುವರಿ 06: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚೆಗೆ ಡ್ರಗ್ ತಯಾರಿಕೆ (Mysuru Drug Lab Bust) ಮತ್ತು ಮಾರಾಟದ ಜಾಲ ಹೆಚ್ಚುತ್ತಿದೆ. ಆದರೆ ನಗರದ ಸಿಸಿಬಿ ಪೊಲೀಸರು ಮಾತ್ರ ಮಾದಕ ವಸ್ತು ಹಾವಳಿ ನಿಯಂತ್ರಿಸುವಲ್ಲಿ ವೈಫಲ್ಯ ತೋರಿದ್ದಾರೆ. ಪೊಲೀಸರ ಈ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಮೈಸೂರು ಸಿಸಿಬಿ ಪೊಲೀಸ್ ವಿಂಗ್‌ಗೆ ಮೇಜರ್ ಸರ್ಜರಿ ನಡೆಸಿದ್ದಾರೆ.

ಒಂದೇ ಬಾರಿಗೆ 10 ಸಿಬ್ಬಂದಿಯ ವರ್ಗಾವಣೆ

ಇತ್ತೀಚೆಗಷ್ಟೇ ನಗರದ ಹೆಬ್ಬಾಳದಲ್ಲಿ ಫಿನಾಯಿಲ್ ಫ್ಯಾಕ್ಟರಿಯ ಸೋಗಿನಲ್ಲಿ ನಡೆಸುತ್ತಿದ್ದ ಡ್ರಗ್ಸ್ ತಯಾರಕ ಘಟಕವನ್ನು ದೆಹಲಿಯ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಭೇದಿಸಿತ್ತು. ಮೊದಲಿಗೆ ಯಾವುದೇ ಮಾದಕ ವಸ್ತು ಸಿಕ್ಕಿಲ್ಲವೆಂಬ ಸುದ್ದಿ ಹರಿದಾಡಿದರೂ, ಎನ್​ಸಿಬಿ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ ನಂತರ ಡ್ರಗ್ಸ್ ಪತ್ತೆಯಾಗಿರುವುದನ್ನು ಖಚಿತಪಡಿಸಿತ್ತು. ಈ ಪ್ರಕರಣ ಸಿಸಿಬಿಯ ನಿರ್ಲಕ್ಷ್ಯವನ್ನು ತೋರಿಸಿದ್ದು, ಇದರಿಂದ ಮುಖಬಂಗವಾದ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಒಂದೇ ಬಾರಿಗೆ ಸಿಸಿಬಿಯ ಸುಮಾರು 10 ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳದ ಅಧಿಕಾರಿಗಳು

ಸಾಕಷ್ಟು ವರ್ಷಗಳಿಂದ ಸಿಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್ಸ್‌ಟೇಬಲ್ ಹಾಗೂ ಹೆಡ್‌ ಕಾನ್ಸ್‌ಟೇಬಲ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಅವರನ್ನು ಮೂಲ ಠಾಣೆಗಳಿಗೆ ಕಳುಹಿಸುವಂತೆ ಆದೇಶ ಹೊರಡಿಸಲಾಗಿದೆ. ಈ ಅಧಿಕಾರಿಗಳು ಮಾದಕ ವಸ್ತು ಮಾರಾಟ ಹಾಗೂ ಪೂರೈಕೆ ಜಾಲವನ್ನು ನಿಯಂತ್ರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ, ಡ್ರಗ್ ಮಾರಾಟಗಾರರ ಕುರಿತಾಗಿ ಲಭ್ಯವಾಗಿದ್ದ ಸುಳಿವುಗಳ ಮೇಲೂ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿ ಅವರನ್ನು ಟ್ರಾನ್ಸ್ಫರ್ ಮಾಡಲಾಗಿದೆ ಎನ್ನಲಾಗಿದೆ.

ಸಿಸಿಬಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ನಗರದಲ್ಲಿ ಡ್ರಗ್ ಜಾಲ ಸಂಪೂರ್ಣ ನಿರ್ಮೂಲನೆಗೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಜರುಗಲಿದೆ ಎನ್ನಲಾಗಿದೆ.

ಇದನ್ನೂ ಓದಿ ಮೈಸೂರಿನಲ್ಲಿ ಡ್ರಗ್ಸ್ ಲ್ಯಾಬ್​ ಶಂಕೆ? ಎನ್​ಸಿಬಿ ದಿಢೀರ್​ ದಾಳಿ

ನಗರದ ಕೆಫೆ ಬಳಿ ಡ್ರಗ್ಸ್ ಮಾರುತ್ತಿದ್ದ ಮೂವರ ಬಂಧನ

ಮೈಸೂರು ನಗರ ಸಿಸಿಬಿ ಪೊಲೀಸರು ನಿನ್ನೆ (ಫೆ.05) ನಡೆಸಿದ ಕಾರ್ಯಾಚರಣೆಯಲ್ಲಿ ಸಾತಗಳ್ಳಿಯ ಮೂನ್ ಬಕ್ಸ್ ಕೆಫೆ ಬಳಿ ಮೂವರು ಮಾದಕ ದ್ರವ್ಯ ಮಾರಾಟಗಾರರನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಮೀರ್ ಖಾನ್, ಸೈಯದ್ ಇಮ್ರಾನ್ ಹಾಗೂ ಮಹಮ್ಮದ್ ನಬೀಲ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 1,20,000 ರೂ ಮೌಲ್ಯದ 11 ಗ್ರಾಂ 90 ಮಿಲಿಗ್ರಾಂ ಎಂ.ಡಿ.ಎಂ.ಎ ಮಾದಕ ದ್ರವ್ಯವನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.