ಮೈಸೂರು, (ಮಾರ್ಚ್ 27): ಲೋಕಸಭಾ ಚುನಾವಣೆ (Loksabha Elections 2024) ಸಂದರ್ಭದಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಅದರಲ್ಲೂ ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಪಕ್ಷಗಳ ಪ್ರಮುಖ ನಾಯಕರಿಗೆ ಗಾಳ ಹಾಕಿದ್ದಾರೆ. ಆದ್ರೆ, ಈ ಗಾಳಕ್ಕೆ ಬಿಎಸ್ ಯಡಿಯೂರಪ್ಪನವರ ಆಪ್ತ ಹೆಚ್.ವಿ.ರಾಜೀವ್ ಬಿದ್ದಿದ್ದರೆ, ಬಿವೈ ವಿಜಯೇಂದ್ರ ಆಪ್ತ ಕೊನೆ ಕ್ಷಣದಲ್ಲಿ ಮಿಸ್ ಆಗಿದ್ದಾರೆ. ಹೌದು… ಮೈಸೂರಿನ ಜೆಡಿಎಸ್ ಮತ್ತು ಬಿಜೆಪಿಯ ಪ್ರಮುಖ ಮುಖಂಡರು ಇಂದು (ಮಾರ್ಚ್ 27) ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸಿದ್ದರಾಮಯ್ಯನವರ ಆಪ್ತ ಹೆಚ್.ವಿ.ರಾಜೀವ್, ಬಿ.ಎಲ್.ಭೈರಪ್ಪ, ಕೆ.ವಿ.ಮಲ್ಲೇಶ್ ಅವರು ಸಿಎಂ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಆದ್ರೆ, ಕಾಂಗ್ರೆಸ್ ಸೇರ್ಪಡೆ ಲಿಸ್ಟ್ನಲ್ಲಿದ್ದ ನಂದೇಶ್ ಅವರನ್ನು ಕೊನೆ ಕ್ಷಣದಲ್ಲಿ ವಿಜಯೇಂದ್ರ ಬದಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಬಿಎಸ್ ಯಡಿಯೂರಪ್ಪನವರ ಆಪ್ತ ಹೆಚ್.ವಿ ರಾಜೀವ್ , ಮೂರು ದಶಕಗಳಿಂದ ನಾನು ಬಿಜೆಪಿಯಲ್ಲಿ ಕೆಲಸ ಮಾಡಿದೆ. ನಾನಿದ್ದ ಪಕ್ಷದಲ್ಲಿ ನಾನು ಮಾಡಿದ ಕೆಲಸಕ್ಕೆ ಗೌರವ ಸಿಗಲಿಲ್ಲ. ನಾನು ಕಾಂಗ್ರೆಸ್ ಸೇರಲಿಕ್ಕೆ ಪ್ರಮುಖ ಕಾರಣ ಸಿದ್ದರಾಮಯ್ಯನವರು. ಅವರ ಜನಪರ ಗ್ಯಾರಂಟಿಗಳನ್ನ ನಾನು ಮೆಚ್ಚಿ ಪಕ್ಷ ಸೇರಿದ್ದೇನೆ. ಚುನಾವಣೆಗೆ ಮುಂಚೆ ಪಂಚ ಗ್ಯಾರಂಟಿಗಳ ಟೀಕೆ ಮಾಡಿದ್ರು. ಆದ್ರೆ ಸಿದ್ದರಾಮಯ್ಯನವರು ಎಲ್ಲಾ ಗ್ಯಾರಂಟಿಗಳನ್ನ ಈಡೇರಿಸಿದ್ರು. ಕೊಟ್ಟ ಮಾತು ಉಳಿಸಿಕೊಳ್ಳುವ ಏಕೈಕ ವ್ಯಕ್ತಿ ಸಿದ್ದರಾಮಯ್ಯ. ಅವರು ನಮ್ಮ ಜಿಲ್ಲೆಯವರು ಎಂಬುದು ನಮಗೆ ಗೌರವ ಎಂದರು.
ಮೈಸೂರಿನಲ್ಲಿ ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬಿಜೆಪಿಯ ಹೆಚ್.ವಿ ರಾಜೀವ್ ಮತ್ತು ಮಾಜಿ ಮೇಯರ್ ಆರ್. ಲಿಂಗಪ್ಪ ಹಾಗೂ ಕೃಷ್ಣರಾಜ ಕ್ಷೇತ್ರದ ಜೆಡಿಎಸ್ ಮುಖಂಡ ಕೆ. ವಿ ಮಲ್ಲೇಶ್ ಅವರು ತಮ್ಮ ಅಪಾರ ಬೆಂಬಲಿಗರ ಜತೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ವೇಳೆ ಹಾಜರಿದ್ದು, ಅವರೆಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡು, ಶುಭ… pic.twitter.com/yqrWoIqysD
— Siddaramaiah (@siddaramaiah) March 27, 2024
ನಾನು ಯಾವುದೇ ಸ್ಥಾನಮಾನಕ್ಕಾಗಿ ಪಕ್ಷಕ್ಕೆ ಬಂದಿಲ್ಲ. ಜನಪರ ಕೆಲಸಗಳನ್ನ ನೋಡಿ ಪಕ್ಷ ಸೇರಿದ್ದೇನೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಶ್ರಮಸೋಣ. ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಗೆಲ್ಲಿಸಲು ಎಲ್ಲರು ಕೆಲಸ ಮಾಡೋಣ ಎಂದು ಹೇಳಿದರು.
ಇನ್ನು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜೀವ್ ಕಾಂಗ್ರೆಸ್ ಸೇರಲು ಎಸ್.ಟಿ.ಸೋಮಶೇಖರ್ ಕಾರಣ. ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ಗೆ ಬನ್ನಿ ಎಂದು ಹೇಳಿದ್ದೆ. ಆಗ ಬಿಜೆಪಿಯಲ್ಲೇ ಇರುತ್ತೇನೆ ಎಂದು H.V.ರಾಜೀವ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾನು ಒತ್ತಾಯ ಮಾಡಲಿಲ್ಲ, ಅವರು ಬರುವ ಪ್ರಯತ್ನ ಮಾಡಲಿಲ್ಲ. ಆ ನಂತರ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ನನಗೆ ಹೇಳಿದ್ರು. ರಾಜೀವ್ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಅಂತಾ ಮನವಿ ಮಾಡಿದ್ರು. ಆಗ ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಎಂದಿದ್ದೆ. ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್, ರಾಜೀವ್ ಸ್ನೇಹಿತರು. ಜೆಡಿಎಸ್ ತೊರೆದು ಕೆ.ವಿ.ಮಲ್ಲೇಶ್ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಮಾಜಿ ಮೇಯರ್ ಭೈರಪ್ಪ, ಓಂಕಾರ್ ಸಹ ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿ, ಜೆಡಿಎಸ್ ಮೈತ್ರಿ ವಿರೋಧಿಸಿ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಹೇಳಿದರು.
ರಾಜೀವ್ ಅವರ ಸ್ನೇಹಿತರು ಕಾಂಗ್ರೆಸ್ ಬಂದಿದ್ದಾರೆ. ಇದರಿಂದ ಕೃಷ್ಷರಾಜ ಕ್ಷೇತ್ರದಲ್ಲಿ ಹೆಚ್ಚಿನ ಶಕ್ತಿ ಬಂದಿದೆ. ನಮ್ಮ ಅಭ್ಯರ್ಥಿ ಎಂ ಲಕ್ಷ್ಮಣ್ ಗೆಲ್ಲಲು ಸಹಕಾರಿಯಾಗಿದೆ. ನಮ್ಮ ಪಕ್ಷ ಅಭಿವೃದ್ಧಿಯನ್ನ ಮಾತ್ರ ನೋಡುವ ಪಕ್ಷ. ನಮ್ಮ ಯೋಜನೆಗಳು ಎಲ್ಲಾ ಪಕ್ಷಗಳ ಜನರಿಗೂ ತಲುಪಿದೆ. ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ