ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಲೋಕಾಯುಕ್ತ ಗ್ರಿಲ್: 14 ಸೈಟ್ ಮಂಜೂರು ಮಾಡಿದ್ದ ಆರೋಪದಡಿ ವಿಚಾರಣೆ

| Updated By: Ganapathi Sharma

Updated on: Nov 19, 2024 | 2:27 PM

ಮುಡಾ ಹಗರಣದ ಲೋಕಾಯುಕ್ತ ತನಿಖೆಯು ಪ್ರಮುಖ ಘಟ್ಟಕ್ಕೆ ತಲುಪಿದೆ. ಮುಡಾ ಮಾಜಿ ಆಯುಕ್ತ ನಟೇಶ್ ಅವರನ್ನು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ 14 ಬದಲಿ ನಿವೇಶನಗಳನ್ನು ನೀಡಿದ ಆರೋಪದ ಮೇಲೆ ವಿಚಾರಣೆಗೆ ಒಳಪಡಿಸಲಾಗಿದೆ. ಮಾಜಿ ಅಧ್ಯಕ್ಷ ಧೃವಕುಮಾರ್ ಮತ್ತು ಇತರ ಆರೋಪಿಗಳ ವಿಚಾರಣೆಯೂ ನಡೆಯುತ್ತಿದೆ.

ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಲೋಕಾಯುಕ್ತ ಗ್ರಿಲ್: 14 ಸೈಟ್ ಮಂಜೂರು ಮಾಡಿದ್ದ ಆರೋಪದಡಿ ವಿಚಾರಣೆ
ಲೋಕಾಯುಕ್ತ ಕಚೇರಿಯಲ್ಲಿ ನಟೇಶ್
Follow us on

ಮೈಸೂರು, ನವೆಂಬರ್ 19: ಮುಡಾ ಹಗರಣ ಸಂಬಂದ ಲೋಕಾಯುಕ್ತ ತನಿಖೆ ಪ್ರಮುಖ ಘಟ್ಟಕ್ಕೆ ತಲುಪಿದೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ 14 ಬದಲಿ ನಿವೇಶನಕ್ಕೆ ಆದೇಶ ನೀಡಿದ್ದ ಆರೋಪದಡಿ ಮುಡಾ ಮಾಜಿ ಆಯುಕ್ತ ನಟೇಶ್‌ರನ್ನ ಲೋಕಾಯುಕ್ತ ಪೊಲೀಸರು ಮಂಗಳವಾರ ವಿಚಾರಣೆಗೆ ಒಳಪಡಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅನುಮತಿ ಪಡೆದು, ಲೋಕಾಯುಕ್ತ ಎಸ್​ಪಿ ಉದೇಶ್ ವಿಚಾರಣೆ ನಡೆಸಿದ್ದಾರೆ.

ಮಾಧ್ಯಮಗಳ ವಿರುದ್ಧ ಹೌಹಾರಿದ ನಟೇಶ್

ಲೋಕಾಯುಕ್ತ ಕಚೇರಿಗೆ ಆಗಮಿಸಿದ ಸಂದರ್ಭ ನಟೇಶ್, ಮಾಧ್ಯಮ ಪ್ರತಿನಿಧಿಗಳನ್ನು ಕಂಡು ಹೌಹಾರಿದ್ದಾರೆ. ಆಟೋರಿಕ್ಷಾದಲ್ಲಿ ಲೋಕಾಯುಕ್ತ ಕಚೇರಿಗೆ ಆಗಮಿಸಿದ ನಟೇಶ್‌ ಗಾಬರಿಯಾಗಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳನ್ನು ಕಂಡು, ‘ನನ್ನನ್ನು ಯಾಕೆ ವಿಡಿಯೋ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ.

ಏತನ್ಮಧ್ಯೆ, ಮುಡಾ ಮಾಜಿ ಆಯುಕ್ತ ನಟೇಶ್ ವಿಚಾರಣೆ ಕುರಿತು ದೂರುದಾರ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯಿಸಿದ್ದಾರೆ. ಇಂದಿನ ವಿಚಾರಣೆ ಪ್ರಮುಖವಾಗಿದ್ದು, ಸರಿಯಾಗಿ ನಡೆದರೆ ಎಲ್ಲವೂ ಹೊರಬರುತ್ತದೆ ಎಂದಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಸಿ ಸಿಎಂ ಕುಟುಂಬಕ್ಕೆ ನಟೇಶ್ ಅನುಕೂಲ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಮಧ್ಯೆ ಹಗರಣದ ನಾಲ್ಕನೇ ಆರೋಪಿ ದೇವರಾಜುಗೆ ಲೋಕಾಯುಕ್ತ ಪೊಲೀಸರು ಮತ್ತೆ ನೋಟಿಸ್ ನೀಡಿದ್ದಾರೆ. ಜಮೀನು ಮಾಲೀಕರಾಗಿರುವ ದೇವರಾಜುರನ್ನು ಒಂದು ಬಾರಿ ವಿಚಾರಣೆ ಮಾಡಲಾಗಿದೆ. ಇದೀಗ ನಾಳೆ ವಿಚಾರಣೆಗೆ ಬರುವಂತೆ ಎರಡನೇ ಬಾರಿಗೆ ನೋಟಿಸ್ ನೀಡಲಾಗಿದೆ.

ಮುಡಾ ಮಾಜಿ ಅಧ್ಯಕ್ಷ ಧೃವಕುಮಾರ್‌ಗೂ ನೋಟಿಸ್

ಸಿದ್ದರಾಮಯ್ಯ ಪತ್ನಿಗೆ ಸೈಟು ನೀಡಿದ ವೇಳೆ ಮುಡಾ ಅಧ್ಯಕ್ಷರಾಗಿದ್ದ ಧೃವ ಕುಮಾರ್‌ಗೂ ನೋಟಿಸ್ ನೀಡಲಾಗಿದೆ. ನಾಳೆ ವಿಚಾರಣೆಗೆ ಧೃವಕುಮಾರ್ ಹಾಜರಾಗಬೇಕಿದೆ. ಈ ಕುರಿತು ಪ್ರತಿಕ್ರಿಯಿಸಿದ ದೃವಕುಮಾರ್, ನನ್ನ ಅವಧಿಯಲ್ಲಿ ಬದಲಿ ನಿವೇಶನ ನೀಡಲು ತೀರ್ಮಾನಿಸಿದ್ದು ನಿಜ. ಈ ಕುರಿತು ನಾನೇ ಸಿದ್ದರಾಮಯ್ಯರ ಬಳಿ ಮಾತನಾಡಿದ್ದೆ. ಸಿಎಂ ಭೂಮಿಯನ್ನು ತಿರಸ್ಕರಿಸಿದ್ದರು. ಸಿದ್ದರಾಮಯ್ಯ ಭೂಮಿ ಕೇಳಿರಲಿಲ್ಲ ಎಂದು ಹೇಳಿದ್ದಾರೆ.

ಸಿಎಂ ಕುಟುಂಬ ರಕ್ಷಣೆಗೆ ಮುಂದಾದ್ರಾ ಧೃವಕುಮಾರ್?

ಮುಡಾ ಮಾಜಿ ಅಧ್ಯಕ್ಷ ಧೃವಕುಮಾರ್ ಈ ಹಿಂದೆ ಪ್ರಾಧಿಕಾರದ ಸಭೆಯಲ್ಲಿ ವ್ಯತಿರಿಕ್ತ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಸಿಎಂ ಪತ್ನಿ ಮಾರುಕಟ್ಟೆ ದರದ ಪರಿಹಾರದ ಹಣಕ್ಕೆ ಒಪ್ಪುತ್ತಿಲ್ಲ. 60-40 ಅನುಪಾತದಲ್ಲಿ ಬದಲಿ ಜಾಗ ಪಡೆಯಲೂ ಒಪ್ಪುತ್ತಿಲ್ಲ. ಬದಲಿ ಜಮೀನಬೇಕೆಂದು ಒತ್ತಾಯಿಸಿದ್ದಾಗಿ ಇದೇ ಧೃವಕುಮಾರ್ ತಿಳಿಸಿದ್ದರು. ಧೃವಕುಮಾರ್ ಸಹಿಯೊಂದಿಗೆ ಸಭೆಗೆ ತಿಳಿಸಿದ್ದ ದಾಖಲೆ ಟಿವಿ9ಗೆ ಲಭ್ಯವಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ, ಸೋಮಣ್ಣ ಮುಖಾಮುಖಿ: ಮುಡಾ ಬಗ್ಗೆ ನಡೀತು ಸ್ವಾರಸ್ಯಕರ ಚರ್ಚೆ!

ಸಿಎಂ ಬಾಮೈದ ಮಲ್ಲಿಕಾರ್ಜುನಸ್ವಾಮಿಯನ್ನು ಸೋಮವಾರ ಇಡಿ ವಿಚಾರಣೆ ನಡೆಸಿತ್ತು. ಭೂಮಿ ಮಾರಾಟದ ವೇಳೆ ಮಲ್ಲಿಕಾರ್ಜುನಸ್ವಾಮಿಗೆ ಸಹಾಯ ಮಾಡಿದ್ದ ಶಿವಣ್ಣ ಎಂಬುವವರನ್ನು ಇಂದು ಇಡಿ ವಿಚಾರಣೆ ನಡೆಸಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ