Leopard: ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ: ನಿಟ್ಟುಸಿರು ಬಿಟ್ಟ ಟಿ.ನರಸೀಪುರ ತಾಲೂಕಿನ ಜನರು

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆ ಸದ್ಯ ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ಚಿರತೆಯನ್ನು ಕೊಲ್ಲುವಂತೆ ಹೊರಳಹಳ್ಳಿ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

Leopard: ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ: ನಿಟ್ಟುಸಿರು ಬಿಟ್ಟ ಟಿ.ನರಸೀಪುರ ತಾಲೂಕಿನ ಜನರು
ಸೆರೆಯಾದ ಚಿರತೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jan 26, 2023 | 2:59 PM

ಮೈಸೂರು: ಜಿಲ್ಲೆಯ ಟಿ.ನರಸೀಪುರ (T.Narasipura) ತಾಲೂಕಿನಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆ (Leopard) ಸದ್ಯ ಸೆರೆ ಆಗಿದೆ. ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯಲಾಗಿದ್ದು, ಸೆರೆ ಹಿಡಿದ ಚಿರತೆಯನ್ನು ಕೊಲ್ಲುವಂತೆ ಹೊರಳಹಳ್ಳಿ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಈ ವಿಚಾರವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಅರಣ್ಯ ಇಲಾಖೆ ವಾಹನಕ್ಕೆ ಅಡ್ಡಲಾಗಿ ಮಲಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸೆರೆ ಸಿಕ್ಕಿರುವ ಚಿರತೆಗಳನ್ನು ಕಾಡಿಗೆ ಬಿಡಲಾಗಿತ್ತು. ಇದೀಗ ಕಾಡಿಗೆ ಬಿಟ್ಟರೆ ಮತ್ತೆ ವಾಪಸ್​​ ಬರುವ ಸಾಧ್ಯತೆ ಇದೆ. ಹಾಗಾಗಿ ಸೆರೆ ಸಿಕ್ಕ ಚಿರತೆಯನ್ನು ಬನ್ನೇರುಘಟ್ಟ ಮೃಗಾಲಯಕ್ಕೆ ಬಿಡಲಾಗುತ್ತೆ. ಟಿ.ನರಸೀಪುರ ತಾಲೂಕಿನ ಕಾರ್ಯಾಚರಣೆ ಮುಂದುವರಿಸುತ್ತೇವೆ. ತಾಲೂಕಿನಲ್ಲಿ ಚಿರತೆ ಸೆರೆಗೆ 150ಕ್ಕೂ ಹೆಚ್ಚು ಬೋನ್​ ಇಡಲಾಗಿದೆ. ಡ್ರೋಣ್ ಮೂಲಕ ಚಿರತೆ ಚಲನವಲನ ಕಂಡು ಹಿಡಿಯಲಾಗುತ್ತದೆ ಎಂದು ಮೈಸೂರು ಉಪವಿಭಾಗಾಧಿಕಾರಿ ಕಮಲಾಬಾಯಿ ಹೇಳಿದರು.

ಚಿರತೆಗಳ ಸೆರೆಗೆ ಟಾಸ್ಕ್​ ಫೋರ್ಸ್​ ರಚನೆ ಮಾಡುವಂತೆ ಸಿಎಂ ಬೊಮ್ಮಾಯಿ  ಸೂಚನೆ

ಇನ್ನು ಇತ್ತೀಚೆಗೆ ಚಿರತೆಗಳ ಸೆರೆಗೆ ಟಾಸ್ಕ್​ ಫೋರ್ಸ್​ ರಚನೆ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದ್ದರು. ಚಿರತೆ ದಾಳಿ ಪ್ರಕರಣಗಳ ಕುರಿತಂತೆ ಅರಣ್ಯ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತದೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಿಎಂ ಬೊಮ್ಮಾಯಿ ಅವರು ಚಿರತೆ ದಾಳಿಯಲ್ಲಿ ಸಂಭವಿಸಿದ ಸಾವು ನೋವಿನ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ನಂತರ ಚಿರತೆಯನ್ನು ಕೂಡಲೇ ಸೆರೆ ಹಿಡಿಯಲು ಎಲ್ಲ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಇದನ್ನೂ ಓದಿ: Tiger Attack: ನಾಗರಹೊಳೆ ಸಮೀಪ ಹುಲಿ ದಾಳಿಗೆ ಸೌದೆ ತರಲು ಹೋಗಿದ್ದ 18 ವರ್ಷದ ಯುವಕ ಸಾವು

3-4 ಕಿ.ಮೀ. ಸುತ್ತಳತೆಯಲ್ಲಿ ಕೋಂಬಿಂಗ್ ಕಾರ್ಯಾಚರಣೆ

ಪ್ರಸ್ತುತ ತಾಲೂಕಿನಲ್ಲಿ ಚಿರತೆ ಸೆರೆ ಹಿಡಿಯಲು 158 ಮಂದಿ ಕೆಲಸ ಮಾಡುತ್ತಿದ್ದಾರೆ. ಕೋಂಬಿಂಗ್ ಆಪರೇಷನ್ ಪ್ರಾರಂಭವಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸಿಎಂ ಬೊಮ್ಮಾಯಿ, ಪ್ರಕರಣ ಸಂಭವಿಸಿದ 3-4 ಕಿ.ಮೀ. ಸುತ್ತಳತೆಯಲ್ಲಿ ಕೋಂಬಿಂಗ್ ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದ್ದರು. ಚಿರತೆ ದಾಳಿಯಿಂದಾಗಿ ಟಿ. ನರಸೀಪುರ ತಾಲ್ಲೂಕಿನ 21 ಹಳ್ಳಿಗಳು ಬಾಧಿತವಾಗಿದ್ದು, ಈ ಹಳ್ಳಿಗಳಲ್ಲಿ ಚಿರತೆ ಸೆರೆ ಹಿಡಿಯಲು ಸ್ಥಳೀಯರ ನೆರವು ಪಡೆಯಲಾಗಿತ್ತು. ಅಗತ್ಯವಿದ್ದಲ್ಲಿ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳ ನೆರವು ಪಡೆಯಲು ಮುಖ್ಯಮಂತ್ರಿಯವರು ಸೂಚಿಸಿದ್ದರು.

ಇದನ್ನೂ ಓದಿ: Mysore News: ಟಿ.ನರಸೀಪುರ ತಾಲೂಕಿನಲ್ಲಿ ನಿರಂತರವಾಗಿ ಚಿರತೆ ದಾಳಿ, 15 ದಿನಗಳಲ್ಲಿ ಕಬ್ಬು ಕಟಾವಿಗೆ ಆದೇಶ

ರಾಮನಗರ ಜಿಲ್ಲೆಯಲ್ಲಿ ಮತ್ತಷ್ಟು ಹೆಚ್ಚಿದ ಚಿರತೆ ದಾಳಿ ಭೀತಿ

ರಾಮನಗರ: ಜಿಲ್ಲೆಯಲ್ಲಿ ಮತ್ತಷ್ಟು ಚಿರತೆ ದಾಳಿ ಭೀತಿ ಹೆಚ್ಚಿದ್ದು, ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಕುರಿ ಕಾಯುತ್ತಿದ್ದ ಯುವತಿ ಮರವೇರಿರುವಂತಹ ಘಟನೆ ನಡೆದಿದೆ. ಗಡಿಬಿಡಿಯಲ್ಲಿ ಮರ ಏರುವಾಗ ಕೆಳಗೆಬಿದ್ದು ಯುವತಿಗೆ ಗಾಯವಾಗಿದ್ದು ಸ್ಥಿತಿ ಗಂಭೀರವಾಗಿದೆ. ಮರಳುದೇವನಪುರ ಗ್ರಾಮದ ವಿಜಯಲಕ್ಷ್ಮೀ ಚಿರತೆಯಿಂದ ಪಾರಾದ ಯುವತಿ. ಗಾಯಾಳು ವಿಜಯಲಕ್ಷ್ಮೀಯನ್ನು ಮಾಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿರತೆ ಸೆರೆ ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:56 pm, Thu, 26 January 23