ಮೈಸೂರು: ಕರ್ನಾಟಕದಲ್ಲಿ ‘ಭಾರತ್ ಜೋಡೊ ಯಾತ್ರೆ’ಯ ಮೂಲಕ ಸದ್ದು ಮಾಡಿರುವ ರಾಹುಲ್ ಗಾಂಧಿ ಇದೀಗ ವಿವಾದದಲ್ಲಿ ಸಿಲುಕಿದ್ದಾರೆ. ರಾಹುಲ್ ಗಾಂಧಿ ಅವರ ಭಾವಚಿತ್ರವಿದ್ದ ಕನ್ನಡ ಧ್ವಜವು ಭಾನುವಾರ (ಅ 2) ಅಲ್ಲಲ್ಲಿ ಕಂಡು ಬಂದಿದ್ದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯ ಬಗ್ಗೆ ಕರ್ನಾಟಕ ನವ ನಿರ್ಮಾಣ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದ್ದು, ‘ಕನ್ನಡ ಧ್ವಜಗಳನ್ನು ರಾಜಕಾರಣಕ್ಕೆ ಬಳಸುವುದು ಸರಿಯಲ್ಲ. ವಯನಾಡು ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ ಅವರು ಕರ್ನಾಟಕದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಏನು? ಈ ಬಗ್ಗೆ ರಾಹುಲ್ ಗಾಂಧಿ ಅವರು ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ ಎಂದು ‘ರಿಪಬ್ಲಿಕ್ ವರ್ಲ್ಡ್’ ಜಾಲತಾಣ ವರದಿ ಮಾಡಿದೆ.
ಬಾವುಟದ ಮೇಲೆ ರಾಹುಲ್ ಗಾಂಧಿ ಚಿತ್ರ ಬಳಕೆ ಮಾಡಿರುವುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ‘ಈ ಬಗ್ಗೆ ನಾನು ಕ್ಷಮೆ ಕೇಳುವುದಿಲ್ಲ. ಬಾವುಟದ ಮೇಲೆ ಚಿತ್ರ ಬಳಸುವ ನಿರ್ಧಾರ ತೆಗೆದುಕೊಂಡಿದ್ದು ನಾನು’ ಎಂದು ಪ್ರತಿಕ್ರಿಯಿಸಿದ್ದಾರೆ. ‘ನಿಜವಾದ ಕನ್ನಡಪರ ಸಂಘಟನೆಗಳು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಬಿಜೆಪಿ ಬೆಂಬಲಿಗರ ಆಕ್ರೋಶದ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಬಿಜೆಪಿ ನಾಯಕ ವಿವೇಕ್ ರೆಡ್ಡಿ ಖಂಡಿಸಿದ್ದಾರೆ. ‘ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರ ಪಾದಯಾತ್ರೆಯನ್ನು ಯಾರೂ ವಿರೋಧಿಸುತ್ತಿಲ್ಲ. ಆದರೆ ಒಬ್ಬ ವ್ಯಕ್ತಿಯ ಚಿತ್ರವನ್ನು ಇಡೀ ರಾಜ್ಯದ ಜನರು ಗೌರವಿಸುವ ಧ್ವಜದ ಮೇಲೆ ಮುದ್ರಿಸಿದ್ದು ಸರಿ ಕಾಣುತ್ತಿಲ್ಲ’ ಎಂದಿದ್ದಾರೆ.
ಭಾರತ್ ಜೋಡೋ ಯಾತ್ರೆಗಾಗಿ ಮೈಸೂರು ಜಿಲ್ಲೆಯ ವಿವಿಧೆಡೆ ಹಾಕಿದ್ದ ಹಿಂದಿ ಅಕ್ಷರಗಳಿರುವ ಫ್ಲೆಕ್ಸ್ ಬ್ಯಾನರ್ಗಳಿಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಪ್ಪು ಬಣ್ಣ ಬಳಿದಿದ್ದರು. ಮೈಸೂರು-ಗುಂಡ್ಲುಪೇಟೆ ರಸ್ತೆ ಹಾಗೂ ನಂಜನಗೂಡು ಬಳಿ ಹಿಂದಿ ಅಕ್ಷರಗಳಿಗೆ ಮಸಿ ಬಳಿದು ಕನ್ನಡ ಬಳಸಿ ಎಂಬ ಸಂದೇಶ ಬರೆಯಲಾಗಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್ನ 4ನೇ ದಿನದ ಪಾದಯಾತ್ರೆಯ ಪ್ರಯುಕ್ತ ರಾಹುಲ್ ಗಾಂಧಿ ಮೈಸೂರಿನ ಪ್ರಸಿದ್ಧ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು. ನಂತರ ದೇಗುಲದ ಎದುರು ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ಈಡುಗಾಯಿ ಹೊಡೆದರು. ಮೈಸೂರು ನಗರದ ವಿವಿಧೆಡೆ ಮಸೀದಿ, ಚರ್ಚ್ಗಳಿಗೂ ರಾಹುಲ್ ಭೇಟಿ ನೀಡಿದರು. ಆಜಂ ಮಸೀದಿ, ಸೇಂಟ್ ಫಿಲೋಮಿನಾ ಚರ್ಚ್ಗೆ ಭೇಟಿ ನೀಡಿದ್ದ ರಾಹುಲ್ ಅವರೊಂದಿಗೆ ಶಾಸಕ ತನ್ವೀರ್ ಸೇಠ್ ಇದ್ದರು.
Published On - 2:24 pm, Mon, 3 October 22