ಜೆಡಿಎಸ್ ಬಿಟ್ಟು ಬಿಜೆಪಿ ಟಿಕೆಟ್ ಬಯಸಿದ್ದ ಸಂದೇಶ್ ನಾಗರಾಜ್ ಮತ್ತೆ ಜೆಡಿಎಸ್ ಕದ ತಟ್ಟಿದರು, ಕೊನೆಗೆ ಏಕಾಂಗಿಯಾದರು!
ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎನ್ನುವ ಅತಂತ್ರ ಸ್ಥಿತಿಗೆ ಸಂದೇಶ್ ನಾಗರಾಜ್ ಸಿಲುಕಿದ್ದಾರೆ. ಅತ್ತ ಬಿಜೆಪಿಯಲ್ಲೂ ಟಿಕೆಟ್ ಸಿಗದೆ ಪಕ್ಷ ಸೇರ್ಪಡೆಯಾಗಿಲ್ಲ. ಇತ್ತ ಜೆಡಿಎಸ್ ನಲ್ಲೂ ಟಿಕೆಟ್ ಸಿಕ್ಕಿಲ್ಲ. ಇದರಿಂದ ಸಂದೇಶ್ ನಾಗರಾಜ್ ಸ್ಥಿತಿ ಅತಂತ್ರವಾಗಿದೆ.
ಮೈಸೂರು: ಮೈಸೂರು ಚಾಮರಾಜನಗರ ದ್ವಿಸದಸ್ಯ ಸ್ಥಾನ ಸ್ಪರ್ಧೆಗೆ ಮೂರು ಪಕ್ಷಗಳು ಅಂತಿಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ನಡುವೆ ಹಾಲಿ ವಿಧಾನಪರಿಷತ್ ಸದಸ್ಯರಾದ ಕಾಂಗ್ರೆಸ್ ಧರ್ಮಸೇನಾ, ಜೆ.ಡಿ.ಎಸ್ನ ಸಂದೇಶ್ ನಾಗರಾಜ್ಗೆ ಟಿಕೆಟ್ ತಪ್ಪಿದ್ದು ಟಿಕೆಟ್ ನಿರೀಕ್ಷೆಯಲ್ಲಿದ್ದ ಇಬ್ಬರಿಗೂ ಬಾರಿ ನಿರಾಸೆಯಾಗಿದೆ.
ಈ ಬಾರಿ ಧರ್ಮಸೇನಾ ಕಾಂಗ್ರೆಸ್ನಿಂದ ಮತ್ತೊಮ್ಮೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಟಿಕೆಟ್ ಗಾಗಿ ಸಾಕಷ್ಟು ಲಾಭಿಯನ್ನು ಸಹ ಮಾಡಿದ್ದರು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಡಾ.ತಿಮ್ಮಯ್ಯ ಅಂತಿಮವಾಗಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಈ ನಡುವೆ ಜೆ.ಡಿ.ಎಸ್ ಬದಲಿಗೆ ಬಿಜೆಪಿಯಿಂದ ಟಿಕೆಟ್ ಬಯಸಿದ್ದ ಸಂದೇಶ್ ನಾಗರಾಜ್ ಗೆ ಎರಡು ಪಕ್ಷಗಳು ಟಿಕೆಟ್ ನೀಡದೆ ಕೈಕೊಟ್ಟಿದ್ದು ಸದ್ಯ ಅಂತಂತ್ರವಾಗಿದ್ದಾರೆ.
ಕಳೆದ ವಿಧಾನಪರಿಷತ್ ಚುನಾವಣೆ ಫಲಿತಾಂಶದ ದಿನ ಸಂದೇಶ್ ನಾಗರಾಜ್ ಜೆಡಿಎಸ್ ಮುಖಂಡರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಂದಿನಿಂದ ಜೆಡಿಎಸ್ ಪಕ್ಷದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದರು. ಈ ಮೂಲಕ ವಿಧಾನ ಪರಿಷತ್ ಅವಧಿ ಮುಗಿದ ಬಳಿಕ ಬಿಜೆಪಿ ಸೇರಿ ಅಲ್ಲಿಂದ ಟಿಕೆಟ್ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಬಿಜೆಪಿಯಿಂದ ಟಿಕೆಟ್ ಪಡೆಯಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಈ ಬಗ್ಗೆ ವಾರದ ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರುವ ಬಗ್ಗೆ ಮಾಧ್ಯಮಗಳಿಗೂ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಸಂದೇಶ್ ನಾಗರಾಜ್ ಬದಲು ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತಗೊಂಡಿದ್ದ ಕೌಟಿಲ್ಯ ರಘು ರಿಗೆ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಮಾಡಲು ಅವಕಾಶ ನೀಡಿತು.
ಕೊನೆ ಕ್ಷಣದಲ್ಲಿ ಮತ್ತೆ ಜೆಡಿಎಸ್ ಕದ ತಟ್ಟಿದ್ದ ನಾಗರಾಜ್ ಯಾವಾಗ ಬಿಜೆಪಿಯಲ್ಲಿ ಟಿಕೆಟ್ ಕೈ ತಪ್ಪಿತ್ತು ಇದರಿಂದ ಸಂದೇಶ್ ನಾಗರಾಜ್ ನೇರವಾಗಿ ಮತ್ತೆ ಟಿಕೆಟ್ ಗಾಗಿ ಜೆಡಿಎಸ್ ಕದ ತಟ್ಟಿದ್ದಾರೆ. ಸಂದೇಶ್ ನಾಗರಾಜ್ ಪಕ್ಷ ಬಿಡುವುದಾಗಿ ಹೇಳಿದ್ದರಿಂದ ಜೊತೆಗೆ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರಿಂದ ಜೆಡಿಎಸ್ ಬೇರೆಯವರಿಗೆ ಮಣೆ ಹಾಕಲು ಮುಂದಾಗಿತ್ತು. ಸಿದ್ದರಾಮಯ್ಯ ಆಪ್ತರಾಗಿದ್ದ ಸಿ.ಎನ್. ಮಂಜೆಗೌಡರನ್ನ ಪಕ್ಷಕ್ಕೆ ಸೇರಿಸಿಕೊಂಡು ಅವರಿಗೆ ಟಿಕೆಟ್ ನೀಡುವುದಾಗಿ ತೀರ್ಮಾನವಾಗಿತ್ತು. ನಿನ್ನೆ ಮಂಜೆಗೌಡರವರು ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೂ ಮುನ್ನ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿಯಾದ ಸಂದೇಶ್ ನಾಗರಾಜ್ ಜೆಡಿಎಸ್ ನಿಂದ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡರು. ಈ ವೇಳೆ ಪಕ್ಷದ ಮುಖಂಡರ ಸಭೆ ಕರೆದು ಟಿಕೆಟ್ ಬಗ್ಗೆ ಅಂತಿಮ ನಿರ್ಧಾರ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದೀಗಾ ಕೊನೆ ಕ್ಷಣದ ಪ್ರಯತ್ನ ವಿಫಲವಾಗಿದ್ದು ಸಂದೇಶ್ ನಾಗರಾಜ್ ಬದಲಿಗೆ ಮಂಜೆಗೌಡರಿಗೆ ಜೆಡಿಎಸ್ ಮಣೆ ಹಾಕಿ ಅವರಿಗೆ ಟಿಕೆಟ್ ನೀಡುವುದಾಗಿ ಪ್ರಕಟಿಸಿದ್ದಾರೆ.
ಅತಂತ್ರವಾದ ಸಂದೇಶ್ ನಾಗರಾಜ್ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎನ್ನುವ ಅತಂತ್ರ ಸ್ಥಿತಿಗೆ ಸಂದೇಶ್ ನಾಗರಾಜ್ ಸಿಲುಕಿದ್ದಾರೆ. ಅತ್ತ ಬಿಜೆಪಿಯಲ್ಲೂ ಟಿಕೆಟ್ ಸಿಗದೆ ಪಕ್ಷ ಸೇರ್ಪಡೆಯಾಗಿಲ್ಲ. ಇತ್ತ ಜೆಡಿಎಸ್ ನಲ್ಲೂ ಟಿಕೆಟ್ ಸಿಕ್ಕಿಲ್ಲ. ಇದರಿಂದ ಸಂದೇಶ್ ನಾಗರಾಜ್ ಸ್ಥಿತಿ ಅತಂತ್ರವಾಗಿದೆ. ಮೊದಲೆ ಜೆಡಿಎಸ್ ನಾಯಕರ ಜೊತೆ ಮುನಿಸಿದ್ದ ಕಾರಣ ಜೆಡಿಎಸ್ ನಲ್ಲಿ ಮುಂದುವರೆದು ಪಕ್ಷದಲ್ಲಿ ಮುಂದೆ ಸ್ಥಾನಮಾನ ಗಿಟ್ಟಿಸಿಕೊಳ್ಳುತ್ತೇನೆ ಎನ್ನಲು ಸಾಧ್ಯವಿಲ್ಲದಂತಾಗಿದೆ. ಇತ್ತ ಬಿಜೆಪಿಯನ್ನೂ ಸೇರದೆ ಕೊನೆ ಕ್ಷಣದಲ್ಲಿ ಜೆಡಿಎಸ್ ಬಳಿಯೇ ಹೋಗಿದ್ದ ಕಾರಣ ಬಿಜೆಪಿಯಲ್ಲೂ ಮುಂದುವರೆಯಲು ಸಾಧ್ಯವಿಲ್ಲ ಎಂದೆ ಹೇಳಲಾಗುತ್ತಿದೆ. ಜೊತೆಗೆ ವಯಸ್ಸಿನ ಕಾರಣದಿಂದ ಮುಂದೆಯು ಸಹ ಬಿಜೆಪಿಯವರು ಮುಂದಿನ ಚುನಾವಣೆಯಲ್ಲೂ ಇವರಿಗೆ ಮಣೆ ಹಾಕುವುದಿಲ್ಲ ಎಂದು ಹೇಳಲಾಗುತ್ತಿದೆ.
ಅಭಿಮಾನಿಗಳು, ಬೆಂಬಲಿಗರಿಗೆ ಪತ್ರ ಬರೆದ ಸಂದೇಶ್ ನಾಗರಾಜ್ ಇನ್ನು ಎರಡು ಪಕ್ಷಗಳಲ್ಲೂ ಯಾವಾಗ ಟಿಕೆಟ್ ಕೈ ತಪ್ಪಿದೆ ಅಂತ ಗೊತ್ತಾಯಿತು. ಆಗ ಸ್ವತಂತ್ರವಾಗಿ ಸ್ಪರ್ಧೆ ಮಾಡಬಹುದು ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿತ್ತು. ಆದರೆ ಇದೀಗಾ ತಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಅಂತ ಬೆಂಬಲಿಗರಿಗೆ ಬಹಿರಂಗ ಪತ್ರ ಬರೆದಿದ್ದಾರೆ. 12 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯನಾಗಿ ಜನಪರವಾಗಿ ಕೆಲಸಗಳನ್ನು ಮಾಡಿದ ತೃಪ್ತಿ ನನಗಿದೆ. ಈ ಮೂಲಕ ಮತದಾರರು ಹಾಗೂ ಪಕ್ಷದ ಋಣ ತೀರಿಸಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದೆ. ಆದರೆ ಪಕ್ಷದ ನಿಯಮದಂತೆ ವಯೋಮಿತಿಯ ಕಾರಣಕ್ಕೆ ನನಗೆ ಟಿಕೆಟ್ ಕೈ ತಪ್ಪಿದೆ. ಆದರೂ ನನಗೆ ಒತ್ತಾಸೆಯಾಗಿ ಶ್ರಮಿಸಿದ ಬಿಜೆಪಿಯ ಎಲ್ಲಾ ಮುಖಂಡರುಗಳಿಗೆ ವಂದನೆಗಳನ್ನು ಸಲ್ಲಿಸುತ್ತೇನೆ.
ಬಿಜೆಪಿಯ ರಾಜ್ಯಾಧ್ಯಕ್ಷರಾದ ನಟಿನ್‌ಕುಮಾರ್ ಕಟೀಲ್, ಮೈಸೂರು ನಗರಾಧ್ಯಕ್ಷರಾದ ಶ್ರೀವತ್ಸ, ರವಿಶಂಕರ್, ಹೇಮಂತ್‌ಕುಮಾರ್, ಫಣೀಶ್ ಸೇರಿದಂತೆ ಎಲ್ಲಾ ಮುಖಂಡರು, ಕಾರ್ಯಕರ್ತರಿಗೂ ಧನ್ಯವಾದಗಳು. ನನ್ನ ಚುನಾವಣೆ ಸ್ಪರ್ಧೆಗೆ ಜಾ.ದಳದಿಂದಲೂ ಒಲವು ತೋರಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ.ರೇವಣ್ಣ ಅವರಿಗೂ ಧನ್ಯವಾದಗಳು. ಎಲ್ಲಾ ಅಭಿಮಾನಿ ದೇವರುಗಳಿಗೆ ಕೃತಜ್ಞತೆಗಳು. ನನ್ನ ಜನ ಸೇವೆ ಹೀಗೆಯೇ ಮುಂದುವರೆಯುವುದು ಎಂದು ಪತ್ರ ಬರೆದು ಚುನಾವಣೆ ಸ್ಪರ್ಧೆ ಬಗ್ಗೆ ಸಂದೇಶ್ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.
ವರದಿ: ದಿಲೀಪ್ ಚೌಡಹಳ್ಳಿ, ಟಿವಿ9 ಮೈಸೂರು
ಇದನ್ನೂ ಓದಿ: Karnataka Congress: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
Published On - 1:05 pm, Tue, 23 November 21