ಗೃಹ ಸಚಿವರ ಆಪ್ತ ವಲಯದಲ್ಲೇ ಪೊಲೀಸ್ ವರ್ಗಾವಣೆ ಆಟಾಟೋಪ ನಡೆಸಿದ್ದ ಸ್ಯಾಂಟ್ರೋ ರವಿಗೆ ಕಾಡುತ್ತಿದೆ ಎನ್ಕೌಂಟರ್ ಭೀತಿ, ಪಿಕ್ಚರ್ ಅಭಿ ಬಾಕಿ ಹೈ!
Santro Ravi: ಇದು ಕೇವಲ ಸ್ಯಾಂಪಲ್ ಮಾತ್ರ ಪಿಕ್ಚರ್ ಅಭಿ ಬಾಕಿ ಹೈ ಎಂಬಂತೆ ದಿನಕ್ಕೊಂದು ಕಹಾನಿಗಳು ಹೊರಗೆ ಬರುತ್ತಿವೆ. ಇನ್ನು ಈತ ಸಿಕ್ಕ ನಂತರ ಮತ್ತೆ ಇನ್ಯಾವ ಹೊರ ಸ್ಟೋರಿ ಹೊರಗೆ ಬರುತ್ತೋ ಕಾದು ನೋಡಬೇಕಿದೆ.
ಸ್ಯಾಂಟ್ರೋ ರವಿ (Santro Ravi) ಮಾಂಸದಂಧೆಯ ಕಿಂಗ್ ಪಿನ್. ದಶಕಗಳ ಕಾಲ ವೇಶ್ಯಾವಾಟಿಕೆ ನಡೆಸುತ್ತಿದ್ದವನು ಇದ್ದಕ್ಕಿದ್ದಂತೆ ಪೊಲೀಸ್ ಇಲಾಖೆಯ ವರ್ಗಾವಣೆ ದಂಧೆಗೆ (police transfers) ಎಂಟ್ರಿ ಕೊಟ್ಟಿದ್ದ. ಈ ಬಗ್ಗೆ ಆಡಿಯೋ ವೈರಲ್ ಆಗಿದ್ದರು ಸಹಾ ಸಾಕಷ್ಟು ಅನುಮಾನಗಳಿದ್ದವು. ಆದ್ರೆ ಟಿವಿ9 ಈತನ ವರ್ಗಾವಣೆ ದಂದೆ ಸಂಬಂಧ ಮಹತ್ವದ ದಾಖಲೆಯನ್ನು ಬಿಚ್ಚಿಟ್ಟಿದೆ. ಅಸಲಿಗೆ ಸ್ಯಾಂಟ್ರೋ ರವಿ ಹೇಳ್ತಾ ಇರೋ 25 ರೂಪಾಯಿ 50 ರೂಪಾಯಿ ವರ್ಗಾವಣೆಗಾಗಿ ಪಡೆದ 25 ಲಕ್ಷ ಅಡ್ವಾನ್ಸ್ ಹಾಗೂ 50 ಲಕ್ಷ ನಿಗದಿ ಮಾಡಿದ ಹಣ. ಮಾಂಸದಂಧೆಯ ಕಿಂಗ್ ಪಿನ್ ಕೆಲ ವರ್ಷಗಳ ಹಿಂದೆ ವರ್ಗಾವಣೆಗೆ ಕೈ ಹಾಕಿದ್ದ. ಕೋಟಿ ಕೋಟಿ ಹಣ ಲೂಟಿ ಮಾಡಿದ್ದ. ಈ ಸಂಬಂಧ ಹಲವು ಆಡಿಯೋಗಳು ಲಭ್ಯವಾಗಿದ್ದವು. ಕಂತೆ ಕಂತೆ ನೋಟುಗಳ ಮಧ್ಯೆ, ಚಿನ್ನದ ಬಿಸ್ಕೆಟ್ ಗಳು ಇರುವ ಫೋಟೋ. ರಾಜಕಾರಣಿಗಳು, ಪ್ರಭಾವಿಗಳ ಜೊತೆಗಿನ ಫೋಟೋ ವೈರಲ್ ಆಗಿತ್ತು. ಆದ್ರೆ ಅದನ್ನು ನಂಬಲು ಯಾರೂ ಸಿದ್ದವಿರಲಿಲ್ಲ. ಅನೇಕರು ಈ ಆರೋಪವನ್ನು ತಳ್ಳಿ ಹಾಕಿದ್ದರು (Mysore Police).
ಆದ್ರೆ ಟಿವಿ9 ವರ್ಗಾವಣೆ ದಂಧೆಯಲ್ಲಿ ಈತ ಭಾಗಿಯಾಗಿದ್ದರ ಪಿನ್ ಟು ಪಿನ್ ಮಾಹಿತಿಯನ್ನು ಬಯಲು ಮಾಡಿದೆ. ಅದು ಸ್ವತಃ ಆತನೇ ತಾನು ಮಾಡಿದ ವರ್ಗಾವಣೆಯ ಮಾಹಿತಿಯನ್ನು ನೀಡಿದ್ದ ದಾಖಲೆಯನ್ನು ಜನರ ಮುಂದಿಟ್ಟಿದೆ.
ಹೌದು 2022ರಲ್ಲಿ ಆರ್ ಆರ್ ಪೊಲೀಸ್ ಠಾಣೆಗೆ ಆತ ಲಿಖಿತ ರೂಪದಲ್ಲಿ ತಾನು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು ಮತ್ತು ಯಾರು ಯಾರನ್ನು ಎಲ್ಲಿಗೆ ಯಾವಾಗ ವರ್ಗಾವಣೆ ಮಾಡಿಸಿದ್ದೆ ಅನ್ನೋದನ್ನ ಬರೆದು ಕೊಟ್ಟಿದ್ದಾನೆ. ಆ ವಿವರಗಳನ್ನು ನೋಡುವುದಾದರೆ.
1 – ಒಂದು ವರ್ಷದ ಹಿಂದೆ ಗುಪ್ತವಾರ್ತೆಯಲ್ಲಿದ್ದ ಪೊಲೀಸ್ ಇನ್ಸಪೆಕ್ಟರ್ ಜಿ ಕೆ ಸುಬ್ರಹ್ಮಣ್ಯ ಅವರನ್ನು ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ವರ್ಗಾವಣೆ
2 – ಒಂದು ತಿಂಗಳ ಹಿಂದೆ ಹಲಗೂರು ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ರವಿಕುಮಾರ್ ಅವರನ್ನು ಮಳವಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆ
3 -ಗೃಹ ಸಚಿವರ ಕಚೇರಿಯ ಪಿಎ ವಿಕ್ರಮ್ ಅವರಿಗೆ ಬೆಂಗಳೂರು ನಗರ ಅಶೋಕನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಅವರ ವರ್ಗಾವಣೆ ಬಗ್ಗೆ ಸಂದೇಶ (19/01/22)
4 – ಶಿವಮೊಗ್ಗದ ಇನ್ಸಪೆಕ್ಟರ್ ರಾಜೇಂದ್ರ ಅವರ ವರ್ಗಾವಣೆ ವಿಚಾರವಾಗಿ ಸಂದೇಶ ( 21/01/2022)
5 – ಗೃಹ ಸಚಿವರ ಆತ್ಮೀಯ ಸ್ನೇಹಿತ ಶಿವಮೊಗ್ಗದ ಬಿಜೆಪಿ ಪಕ್ಷದ ಬಸವರಾಜ್ ಒಡ್ಡಾಳ ಇವರಿಗೆ ಇನ್ಸಪೆಕ್ಟರ್ ಬಿಬಿ ಗಿರೀಶ್ ಅವರನ್ನು ಅಶೋಕ ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡುವ ವಿಚಾರವಾಗಿ ಸಂದೇಶ (15/01/2022)
6 – ಗೃಹ ಮಂತ್ರಿಗಳ ಸ್ನೇಹಿತರಾದ ಶ್ರೀನಾಥ್ ಅವರಿಗೆ ಇನ್ಸಪೆಕ್ಟರ್ ಬಿ ಬಿ ಗಿರೀಶ್ ವರ್ಗವಣೆ ವಿಚಾರವಾಗಿ ಗೃಹ ಸಚಿವರಿಗೆ ಮಾತನಾಡಲು ಸಂದೇಶ (13/01/2022)
7 – ಪೊಲೀಸ್ ಇನ್ಸಪೆಕ್ಟರ್ ರಾಜೀವ್ ಅವರಿಗೆ ಕುಂಬಳಗೋಡು ಪೊಲೀಸ್ ಠಾಣೆಗೆ ವರ್ಗಾವಣೆ ವಿಚಾರವಾಗಿ ಸಂದೇಶ (13/01/2022)
8 – ಡಿಜಿ ಐಜಿಪಿ ಕಚೇರಿಯ ಕಿರಣ್ ಅವರ ಪೋನ್ ನಂಬರ್‌ಗೆ ಪೊಲೀಸ್ ಇನ್ಸಪೆಕ್ಟರ್ ಹುದ್ದೆ ಖಾಲಿ ಇರುವ ಬಗ್ಗೆ ಮಾಹಿತಿ ಕೇಳಿದ್ದ (11/01/2022 )
9 – ಬೆಂಗಳೂರು ನಗರ ಬಿಡಿಎಯ ಕೆಎಎಸ್ ಅಧಿಕಾರಿ ಆನಂದಗೆ ಮೈಸೂರು ಮುಡಾಗೆ ವರ್ಗಾವಣೆ ಮಾಡಿಸುವ ಬಗ್ಗೆ ಸಂದೇಶ (09/01/2022)
10 -ಮೈಸೂರು ಬಿಜೆಪಿ ಕಚೇರಿಯಲ್ಲಿ ಪಿಎಸ್ ಆಗಿರುವ ಮಹೇಶ್ ಅವರ ದೂರವಾಣಿಗೆ ಹಲಗೂರು ಪೊಲೀಸ್ ಸಬ್ ಇನ್ಸಪೆಕ್ಟರ್ ವರ್ಗಾವಣೆ ವಿಚಾರವಾಗಿ ಮಾಹಿತಿ ( 07/11/22)
ಇದು ಸ್ವತಃ ಸ್ಯಾಂಟ್ರೋ ರವಿ ಒಪ್ಪಿಕೊಂಡಿರುವ ವರ್ಗಾವಣೆ ವಿಚಾರಗಳು. ಇದಲ್ಲದೆ ಇನ್ನೂ ಅದೆಷ್ಟೆಷ್ಟೋ ದಂಧೆಯಲ್ಲಿ ಈತ ಸಕ್ರಿಯವಾಗಿರೋದಂತು ಸತ್ಯ.
ಇದು ಈತನ ವರ್ಗಾವಣೆಯ ದಾಖಲೆಗಳಾದರೆ. ಮತ್ತೊಂದು ಕಡೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ದಾಖಲಿಸಿರುವ ವಂಚಿಸಿ ಮದುವೆ, ಅತ್ಯಾಚಾರ ಜಾತಿ ನಿಂದನೆ ವರದಕ್ಷಿಣೆ ಪ್ರಕರಣದಲ್ಲಿ ಸ್ಯಾಂಟ್ರೋ ರವಿ ಎಸ್ಕೇಪ್ ಆಗಿ ಇವತ್ತಿಗೆ 9 ದಿನ. ಇನ್ನು ಆತ ಪತ್ತೆಯಾಗಿಲ್ಲ. ಈ ನಡುವೆ ಸ್ಯಾಂಟ್ರೋ ರವಿಗೆ ಪ್ರಾಣಭೀತಿ ಕಾಡುತ್ತಿದೆಯಾ ಅನ್ನೋ ಅನುಮಾನ ವ್ಯಕ್ತವಾಗಿದೆ.
ಒಂದು ಕಡೆ ಅನಾರೋಗ್ಯ ಮತ್ತೊಂದು ಕಡೆ ಪೊಲೀಸರು ಶೂಟ್ ಮಾಡುವ ಬಗ್ಗೆ ಆತನಿಗೆ ಆತಂಕವುಂಟಾಗಿದೆ. ಇನ್ನು ನಾಪತ್ತೆಯಾಗಿರುವ ಸ್ಯಾಂಟ್ರೋ ರವಿ ಬಗ್ಗೆ ಮೈಸೂರು ಪೊಲೀಸರಿಗೆ ಸುಳಿವು ಸಿಕ್ಕಿದೆ ಎನ್ನಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮೈಸೂರು ಭೇಟಿ ನಂತರ ಮೈಸೂರು ಪೊಲೀಸರು ಪುಲ್ ಅಲರ್ಟ್ ಅಗಿದ್ದದಾರೆ. ಸ್ಯಾಂಟ್ರೋ ರವಿ ಬೇಟೆಗೆ ಸಜ್ಜಾಗಿದ್ದಾರೆ.
ಹೀಗಾಗಿ ಪೊಲೀಸರಿಗೆ ಸಿಗುವ ಮುನ್ನ ಶರಣಾಗಲು ಸ್ಯಾಂಟ್ರೋ ರವಿ ಮುಂದಾಗಿದ್ದಾನೆ ಎನ್ನಲಾಗುತ್ತಿದೆ. ನ್ಯಾಯಾಲಯದ ಮೂಲಕ ಶರಣಾಗದಿದ್ದರೆ ಪೊಲೀಸರು ಶೂಟ್ ಮಾಡುತ್ತಾರೆ ಅನ್ನೋ ಢವ ಢವ ಶುರುವಾಗಿದೆ. ಮೈಸೂರಿಗೆ ಬಂದಿದ್ದ ಎಡಿಜಿಪಿ ಅಲೋಕ್ ಕುಮಾರ್ ಸ್ಯಾಂಟ್ರೋ ರವಿ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ರು. ಪೊಲೀಸರು, ಒಡನಾಡಿಯಿಂದ ಪಿನ್ ಟೂ ಪಿನ್ ಮಾಹಿತಿ ಸಂಗ್ರಹಿಸಿದ್ದು ಮಾತ್ರವಲ್ಲ, ಸಂತ್ರಸ್ಥೆ ಹಾಗೂ ಸಂತ್ರಸ್ಥೆ ಸಹೋದರಿಯ ನೋವಿನ ಕಥೆ ಕೇಳಿದ್ದರು. ಇದೆಲ್ಲಾ ಕೇಳಿ ಸ್ವತಃ ಅಲೋಕ್ ಕುಮಾರ್ ಬೆಚ್ಚಿ ಬಿದ್ದಿದ್ರು. ಇದೆಲ್ಲಾ ಕಾರಣದಿಂದ ಪ್ರಾಣ ಭೀತಿಯಿಂದ ಶರಣಾಗಲು ಸ್ಯಾಂಟ್ರೋ ರವಿ ಮುಂದಾಗಿದ್ದಾನೆ ಎನ್ನಲಾಗುತ್ತಿದೆ. ಇಂದು ಅಥವಾ ನಾಳೆ ವಕೀಲರ ಮೂಲಕ ನ್ಯಾಯಾಲಯಕ್ಕೆ ಶರಣಾಗುವ ಸಾಧ್ಯತೆಯಿದೆ.
ಒಟ್ಟಾರೆ ಸ್ಯಾಂಟ್ರೋ ರವಿ ಎಂಬ ಕ್ರಿಮಿಯ ಈ ಎಲ್ಲಾ ಖತರ್ನಾಕ್ ಕೃತ್ಯಗಳು ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ ಮತ್ತೊಂದು ಕಡೆ ಈತನ ವರ್ಗಾವಣೆ ದಂಧೆ ಬಟಾ ಬಯಲಾಗಿರೋದು ಸಾಕಷ್ಟು ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಿದ್ದೆ ಕೆಡಿಸಿದೆ.
ಸ್ಯಾಂಟ್ರೋ ರವಿ ಈ ಹೆಸರು ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಕಳೆದ 9 ದಿನಗಳಿಂದಲೂ ಮೈಸೂರು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸ್ತಾ ಇರೋ ಸ್ಯಾಂಟ್ರೋ ರವಿಯ ಒಂದೊಂದೆ ಮುಖಗಳು ಅನಾವರಣಗೊಳ್ಳುತ್ತಿದೆ. ಮಾಂಸ ದಂಧೆಯ ಕಿಂಗ್ ಪಿನ್‌ನ ಮತ್ತಷ್ಟು ಕ್ರಿಮಿನಲ್ ಇತಿಹಾಸವನ್ನು ಟಿವಿ9 ಬಿಚ್ಚಿಟ್ಟಿದೆ. ಸ್ಯಾಂಟ್ರೋ ರವಿ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾ ? ತನ್ನ ಅಕ್ರಮಗಳಿಗೆ ಬಿಜೆಪಿಯ ಪ್ರಭಾವಿಗಳನ್ನು ಬಳಸಿಕೊಂಡನಾ ?
ಈ ಎಲ್ಲಾ ಪ್ರಶ್ನೆಗಳಿಗೂ ಸ್ವತಃ ಸ್ಯಾಂಟ್ರೋ ರವಿಯೇ ಪೊಲೀಸರ ಮುಂದೆ ಉತ್ತರ ನೀಡಿದ್ದಾನೆ. ಅಷ್ಟೇ ಅಲ್ಲ ಅದನ್ನು ಲಿಖಿತ ರೂಪದಲ್ಲಿ ಬರೆದು ಸಹಿ ಮಾಡಿದ್ದಾನೆ. ಹೌದು 2022ರಲ್ಲಿ ಸ್ಯಾಂಟ್ರೋ ರವಿ ವಿರುದ್ದ ಬೆಂಗಳೂರಿನ ಆರ್ ಆರ್ ನಗರದ ನಿವಾಸಿ ಜಗದೀಶ್ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಗಣ್ಯ ವ್ಯಕ್ತಿಗಳಿಗೆ ಹುಡುಗಿಯರನ್ನು ಸಪ್ಲೈ ಮಾಡುತ್ತಾನೆ.
ಯುವತಿಯರಿಗೆ ಕೆಲಸ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ ವೃತ್ತಿಗೆ ದೂಡುತ್ತಿದ್ದಾನೆ. ಪತ್ನಿ ಬೈಕೋರ್ಟ್ ವಕೀಲೆ ಅಂತಾ ಹೇಳಿ ಹಲವರಿಗೆ ವಂಚಿಸಿದ್ದಾನೆ. ಅನೈತಿಕ ಚಟುವಟಿಕೆಯಿಂದ ಕೋಟ್ಯಾಂತರ ರೂಪಾಯಿ ದುಡ್ಡು ಮಾಡಿದ್ದಾನೆ. ಅನೈತಿಕ ಚಟುವಟಿಕೆಯಿಂದ ಹಲವು ಮುಖಂಡರ ಗೌರವಕ್ಕೆ ಧಕ್ಕೆ ತರುತ್ತಿದ್ದಾನೆ. 2000ರಿಂದ 2005ರವರೆಗೆ ಮಂಡ್ಯ ಮೈಸೂರಿನಲ್ಲಿ ಅನೈತಿಕ ವೃತ್ತಿ ಮಾಡುತ್ತಿದ್ದ. ಶೋಕಿಗಾಗಿ ಮೂರರಿಂದ ನಾಲ್ಕು ಕಾರುಗಳನ್ನು ಇಟ್ಟುಕೊಂಡಿದ್ದಾನೆ. ಈ ಬಗ್ಗೆ ತನಿಖೆ ಮಾಡುವಂತೆ ಜಗದೀಶ್ ಎಂಬುವವರು ದೂರು ನೀಡಿದ್ರು.
ಯಾವಾಗ ಜಗದೀಶ್ ದೂರು ನೀಡಿದ್ರೂ ಪೊಲೀಸರು ಸ್ಯಾಂಟ್ರೋ ರವಿಯನ್ನು ಠಾಣೆಗೆ ಬರುವಂತೆ ಕರೆದಿದ್ರು. ಆದ್ರೆ ಸ್ಯಾಂಟ್ರೋ ಅಲ್ಲೂ ನಖರ ಮಾಡಿದ್ದ. ಕೇವಿಯಟ್ ಹಾಕಿ ಪೊಲೀಸರಿಗೆ ಸತಾಯಿಸಿದ್ದ. ಆದ್ರೆ ಪೊಲೀಸರು ಬಿಡದೆ ಆತನನ್ನು ಠಾಣೆಗೆ ಕರೆತಂದಿದ್ರು. ಆತನಿಂದ ಲಿಖಿತ ಹೇಳಿಕೆ ಪಡೆದಿದ್ರು. ಈ ವೇಳೆ ಸ್ವತಃ ರವಿಯೇ ತನ್ನ ಘನಂದಾರಿ ಕೆಲಸವನ್ನು ಬಿಚ್ಚಿಟ್ಟಿದ್ದ.
ನಾನು ಮೂರು ನಾಲ್ಕು ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡಿದರುತ್ತೇನೆ. ನನಗೆ ಬಿಜೆಪಿ ಪಕ್ಷದ ಸಂಸದರು, ಶಾಸಕರುಗಳು ಮತ್ತು ರಾಜಕೀಯ ವ್ಯಕ್ತಿಗಳು ಪರಿಚಯವಾಗಿರುತ್ತಾರೆ. ನಾನು ಸುಮಾರು ಮೂರು ನಾಲ್ಕು ವರ್ಷಗಳಿಂದ ರಾಜಕೀಯದಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡುವ ಜೊತೆಗೆ ನನ್ನ ಸ್ನೇಹಿತರಾದ ಮೈಸೂರು ಮೂಲದವರ ಜೊತೆ ಹಣಕಾಸಿನ ವ್ಯವಹಾರ ಸಹಾ ಮಾಡಿರುತ್ತೇನೆ. ಈ ಸಮಯದಲ್ಲಿ ನಾನು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿರುತ್ತೇನೆ.
ಎಸ್ ಯಾವಾಗ ಸ್ಯಾಂಟ್ರೋ ರವಿಯ ಈ ದಾಖಲೆಯನ್ನು ಟಿವಿ9 ಬಿಚ್ಚಿಟ್ಟಿತೋ ಆಗಲೇ ಕಾಂಗ್ರೆಸ್ ನೇರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನೇ ಕುಟುಕಿದೆ. ಇಲಾಖೆಯೇ ಸ್ಯಾಂಟ್ರೋ ರವಿ ಕೈಯೊಳಗಿದೆ ಬಹುತೇಕ ಪೊಲೀಸರು ಆತನ ವರ್ಗಾವಣೆ ಋಣದಲ್ಲಿದ್ದಾರೆ. ಸಿಎಂ, ಸಿಎಂ ಪುತ್ರ, ಗೃಹಸಚಿವರೇ ಆತನ ಜೇಬಲ್ಲಿದ್ದಾರೆ. ಆತನನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ. ಸಿಎಂಗಿಂತಲೂ ಪ್ರಭಾವಿ ಆದವನ ತನಿಖೆ ಸಾಧ್ಯವೇ.?ಪೊಲೀಸರಿಂದ ಅವನ ತನಿಖೆ ಸಾಧ್ಯವೇ ? ಎಂದು ಟ್ವೀಟ್ ಮೂಲಕ ಬೊಮ್ಮಾಯಿಗೆ ರಾಜ್ಯ ಕಾಂಗ್ರೆಸ್ ಕುಟುಕಿದೆ.
ಇನ್ನು ಇದು ಕೇವಲ ಸ್ಯಾಂಪಲ್ ಮಾತ್ರ ಪಿಕ್ಚರ್ ಅಭಿ ಬಾಕಿ ಹೈ ಎಂಬಂತೆ ದಿನಕ್ಕೊಂದು ಕಹಾನಿಗಳು ಹೊರಗೆ ಬರುತ್ತಿವೆ. ಇನ್ನು ಈತ ಸಿಕ್ಕ ನಂತರ ಮತ್ತೆ ಇನ್ಯಾವ ಹೊರ ಸ್ಟೋರಿ ಹೊರಗೆ ಬರುತ್ತೋ ಕಾದು ನೋಡಬೇಕಿದೆ.
ವರದಿ: ರಾಮ್, ಟಿವಿ9, ಮೈಸೂರು
Published On - 10:59 am, Thu, 12 January 23