
ಮೈಸೂರು, ಫೆಬ್ರವರಿ 04: ಬೇನಾಮಿ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಕುಟುಂಬಸ್ಥರು ಜಮೀನು ಖರೀದಿ ಮಾಡಿದ್ದಾರೆ ಆರೋಪ ಮಾಡಿರುವ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿ, ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಭೂಪರಿವರ್ತನೆ ಆದೇಶದ ಬಳಿಕ ಗೇಣಿ ಮತ್ತು ಪಹಣಿ (RTC) ಯಲ್ಲಿ ಮಾಲೀಕರ ಹೆಸರು ಬರುವಂತಿಲ್ಲ. ಬದಲಿಗೆ, ಎಮ್.ಎ.ಖರಾಬು ಅಥವಾ ಅನ್ಯಕ್ರಾಂತ (ಭೂ ಪರಿವರ್ತನೆ) ಎಂದು ಉಲ್ಲೇಖಿಸಬೇಕು.
ಆದರೆ 2006 ಅನ್ಯಕ್ರಾಂತ ಆದೇಶವಾಗಿದ್ದರೂ ಮಾಲೀಕರ ಹೆಸರು ಪಹಣಿಯಲ್ಲಿ ಉಲ್ಲೇಖಿಸಲಾಗಿದೆ. ಈಗಲೂ ಕೃಷಿ ಭೂಮಿ ಎಂದು ಮಲ್ಲಿಕಾರ್ಜುನ ಸ್ವಾಮಿ ಹೆಸರು ಪಹಣಿಯಲ್ಲಿದೆ. ಕೃಷಿಭೂಮಿ ಎಂದು ದಾಖಲೆಗಳನ್ನು ನೋಂದಣಿ ಮಾಡಲಾಗಿದೆ. 2009-10ರಲ್ಲಿ ಭೂಸ್ವಾಧೀನದಿಂದ ಕೈಬಿಡಲಾಗಿದೆ ಎಂಬ ಉಲ್ಲೇಖವಿದೆ.
ಆದರೆ, ಅಂತಿಮ ಅಧಿಸೂಚನೆ ಹೊರಡಿಸಿದ 13 ವರ್ಷಗಳ ನಂತರ ಕೈಬಿಡಲಾಗಿದೆ. ಇದು ಹೇಗೆ ಸಾಧ್ಯವಾಗುತ್ತದೆ? ದೂರುದಾರ ಸ್ನೇಹಮಯಿ ಕೃಷ್ಣ ಸಾಮಾಜಿಕ ಜಾಲತಾಣದ ಮೂಲಕ ಪ್ರಶ್ನಿಸಿದ್ದಾರೆ.
ಮೈಸೂರು ತಾಲೂಕು ಆಲನಹಳ್ಳಿ ಗ್ರಾಮದ ಸರ್ವೆ ನಂ 113/4ರಲ್ಲಿ 1 ಎಕರೆ ಭೂಮಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 1983ರ ಡಿಸೆಂಬರ್ 15 ರಂದು ಆಲನಹಳ್ಳಿಯ ಹನುಮೇಗೌಡ, ಹನುಮಯ್ಯ, ಕರಿಯಪ್ಪ ಹಾಗೂ ಕೆಂಪಮ್ಮ ಎಂಬುವರಿಂದ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಭೂಮಿ ಖರೀದಿ ಮಾಡಿದ್ದಾರೆ.
ಇದನ್ನೂ ಓದಿ: ಸುಗ್ರೀವಾಜ್ಞೆ ಹೊಸ್ತಿಲಲ್ಲೇ ಸಿದ್ದರಾಮಯ್ಯ ಸರ್ಕಾರಕ್ಕೆ ಸೆಡ್ಡು ಹೊಡೆದ ಮೈಕ್ರೋಫೈನಾನ್ಸ್ ಕಂಪನಿಗಳು
1996ರಲ್ಲಿ ಅಂತಿಮ ಅಧಿಸೂಚನೆ ಆಗಿರುವ ಭೂಮಿಯನ್ನು ಮಲ್ಲಿಕಾರ್ಜುನ ಸ್ವಾಮಿ ಡಿನೋಟಿಫೈ ಮಾಡಿಸಿದ್ದು, 2006ರಲ್ಲಿ ಮಲ್ಲಿಕಾರ್ಜುನ್ ಸ್ವಾಮಿಯಿಂದ ಕೃಷಿ ಭೂಮಿಯನ್ನು ಅನ್ಯಕ್ರಾಂತ ಮಾಡಿಸಿ ಆದೇಶ ಹೊರಡಿಸಲಾಗಿದೆ.
ಅದೇ ಭೂಮಿಯನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ 2010 ಅಕ್ಟೋಬರ್ 20ರಲ್ಲಿ ಮಲ್ಲಿಕಾರ್ಜುನ್ ಸ್ವಾಮಿ ದಾನ ಮಾಡಿದ್ದಾರೆ. ಪಾರ್ವತಿ ಕೂಡ 2010ರ ನವೆಂಬರ್ 11ರಂದು ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯಗೆ ದಾನ ಮಾಡಿದ್ದಾರೆ. ತಮ್ಮ ಹೆಸರಿಗೆ ಭೂಮಿ ಬಂದ ಒಂದೇ ತಿಂಗಳಲ್ಲಿ ದಾನ ಮಾಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ತಮಗೆ ಬಂದ ಭೂಮಿಯನ್ನ 2011ರ ಮಾರ್ಚ್ 23 ರಂದು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಒಂದು ಕಪ್ಪು ಚುಕ್ಕೆ ಇಲ್ಲದೇ ರಾಜಕಾರಣಿ ಎನ್ನುತ್ತಿದ್ದ ಸಿದ್ದರಾಮಯ್ಯಗೆ ಮುಡಾ ಹಗರಣ ಕಂಟಕವಾಗಿದೆ. ಈ ಪ್ರಕರಣ ತನಿಖೆ ಹಂತದಲ್ಲಿರುವಾಗೇ ಇದೀಗ ಬೇನಾಮಿ ಆಸ್ತಿ ಆರೋಪ ಕೇಳಿಬಂದಿದೆ.