ಮೈಸೂರು ಪ್ರವಾಸಿಗರೇ ಗಮನಿಸಿ: ರೈಲ್ವೆ ಲೆವೆಲ್ ಕ್ರಾಸಿಂಗ್ ಕಾಮಗಾರಿಗಾಗಿ ಮೈಸೂರು ಕೆಆರ್‌ಎಸ್ ರಸ್ತೆ ಬಂದ್
ನೈರುತ್ಯ ರೈಲ್ವೆ ಇಲಾಖೆಯು ನಿರ್ವಹಣಾ ಕಾಮಗಾರಿಗಳನ್ನು ಕೈಗೊಂಡಿರುವುದರಿಂದ ಹೋಟೆಲ್ ರಾಯಲ್ ಇನ್ ಜಂಕ್ಷನ್ ಬಳಿ ಮೈಸೂರು ಕೆಆರ್‌ಎಸ್ ರಸ್ತೆಯಲ್ಲಿ ಸಂಚಾರಕ್ಕೆ ತಾತ್ಕಾಲಿಕ ತಡೆಯೊಡ್ಡಲಾಗಿದೆ. ಸಂಚಾರ ಭಾಗಶಃ ಬಂದಾಗಿರುವ ಕಾರಣ, ಸಂಚಾರ ಪೊಲೀಸರು ಪರ್ಯಾಯ ರಸ್ತೆಗಳ ಮಾಹಿತಿ ನೀಡಿದ್ದಾರೆ. ಪರ್ಯಾಯ ರಸ್ತೆಗಳ ವಿವರ ಇಲ್ಲಿದೆ.
ಮೈಸೂರು, ಮಾರ್ಚ್ 19: ನೈಋತ್ಯ ರೈಲ್ವೆಯು (South Western Railways) ಮೈಸೂರು ವಿಭಾಗದಲ್ಲಿ ನಿರ್ವಹಣಾ ಕಾರ್ಯಗಳನ್ನು ಕೈಗೊಂಡ ಕಾರಣ, ಮೈಸೂರು ಕೆಆರ್‌ಎಸ್ ರಸ್ತೆಯನ್ನು (Mysuru KRS Road) ಹೋಟೆಲ್ ರಾಯಲ್ ಇನ್ ಜಂಕ್ಷನ್ನಿಂದ ಮುಂದೆ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಭಾಗಶಃ ಬಂದ್ ಮಾಡಲಾಗಿದೆ. ಸೋಮವಾರ ಬೆಳಗ್ಗೆ 8 ಗಂಟೆಗೆ ಕಾಮಗಾರಿ ಆರಂಭವಾಗಿದ್ದು, ಇಂದು ಮುಕ್ತಾಯವಾಗುವ ನಿರೀಕ್ಷೆ ಇದೆ. ಕಾಮಗಾರಿ ಮುಕ್ತಾಯಗೊಂಡ ಬಳಿಕ ರಸ್ತೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭವಾಗಲಿದೆ.
ವಾಹನ ಸವಾರರು ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಲೆವೆಲ್ ಕ್ರಾಸಿಂಗ್‌ನ ಎರಡೂ ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.
ಪರ್ಯಾಯ ಮಾರ್ಗ ವಿವರ
ಆದರೆ, ಅವ್ಯವಸ್ಥೆ ಮತ್ತು ಸಂಚಾರ ದಟ್ಟಣೆ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮವಾಗಿ ವಿವಿ ಪುರಂ ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಸವಾರರಿಗೆ ಸೂಚನೆ ನೀಡುತ್ತಿದ್ದಾರೆ. ಮೈಸೂರು ಕಡೆಯಿಂದ, ಹೆಬ್ಬಾಳ ಹೊರ ವರ್ತುಲ ರಸ್ತೆ (ಒಆರ್‌ಆರ್) ಕಡೆಯಿಂದ, ಕೆಆರ್‌ಎಸ್ ರಸ್ತೆ ಮತ್ತು ಮೈಸೂರು-ಬೆಂಗಳೂರು ಓಆರ್‌ಆರ್ ಕಡೆಯಿಂದ ಬರುವ ವಾಹನಗಳನ್ನು ಪರ್ಯಾಯ ಮಾರ್ಗಗಳ ಕಡೆಗೆ ಕಳುಹಿಸಲಾಗುತ್ತಿದೆ.
ಮೈಸೂರು ಕಡೆಯಿಂದ ಬರುವ ವಾಹನಗಳು ಹೋಟೆಲ್ ರಾಯಲ್ ಇನ್ ಜಂಕ್ಷನ್‌ನಲ್ಲಿ ಎಡಕ್ಕೆ ಸಾಗಿ ಜೆಕೆ ಟೈರ್ ಫ್ಯಾಕ್ಟರಿಯ ಹಿಂದಿನ ಗೇಟ್ ಬಳಿ ಬಲಕ್ಕೆ ತಿರುಗಿ ಮುಂದೆ ಸಾಗಿದ ನಂತರ ಬಲಕ್ಕೆ ಸುನಂದಾ ಅಗರಬತ್ತಿ ಫ್ಯಾಕ್ಟರಿ ಕಡೆಗೆ ಕೆಆರ್‌ಎಸ್ ರಸ್ತೆಯನ್ನು ತಲುಪಬೇಕು. ಮೈಸೂರು-ಬೆಂಗಳೂರು ಒಆರ್‌ಆರ್ ಕಡೆಯಿಂದ ಬರುವವರು ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಜಂಕ್ಷನ್‌ಗಿಂತ ಮೊದಲು ಬಲಕ್ಕೆ ತಿರುಗಿ ಎಡಕ್ಕೆ ತಿರುಗುವ ಮೊದಲು ಮುಂದೆ ಸಾಗಬೇಕು ಮತ್ತು ಜೆಕೆ ಫ್ಯಾಕ್ಟರಿ ಮುಖ್ಯ ಗೇಟ್ ಬಳಿಯಿರುವ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಕೆಆರ್‌ಎಸ್ ರಸ್ತೆಯನ್ನು ತಲುಪಿ ಮುಂದೆ ಸಾಗಬೇಕು.
ಇದನ್ನೂ ಓದಿ: ಯದುವೀರ್ ಒಡೆಯರ್ ವಿರುದ್ಧ ಟೀಕಿಸದಂತೆ ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ ಸಿಎಂ ಸಿದ್ದರಾಮಯ್ಯ
ಅದೇ ರೀತಿ ಹೆಬ್ಬಾಳ ಒಆರ್‌ಆರ್ ಕಡೆಯಿಂದ ಬರುವವರು ಜೆಕೆ ಟೈರ್ ಹಿಂಬದಿ ಗೇಟ್ ಬಳಿ ಎಡಕ್ಕೆ ತಿರುಗಿ ಸುನಂದಾ ಫ್ಯಾಕ್ಟರಿ ಜಂಕ್ಷನ್ ಕಡೆಗೆ ಸಾಗಿ ಕೆಆರ್‌ಎಸ್ ರಸ್ತೆ ತಲುಪಿ ಮುಂದೆ ಸಾಗಬೇಕು. ಕೆಆರ್‌ಎಸ್ ರಸ್ತೆಯಲ್ಲಿ ಬೆಳಗೊಳ ಕಡೆಯಿಂದ ಬರುವವರು ಪೆಟ್ರೋಲ್ ಬಂಕ್ ಜಂಕ್ಷನ್ ಬಳಿ ಎಡಕ್ಕೆ ಸಾಗಿ ಜಿಆರ್‌ಎಸ್ ಬಳಿಯ ಒಆರ್‌ಆರ್ ತಲುಪಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ