ಮೈಸೂರು, ನವೆಂಬರ್ 23: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ರಾಜ್ಯ ಮಟ್ಟದ ನಾಯಕರೆಲ್ಲರೂ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇತ್ತೀಚೆಗೆ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಮಾತ್ರ ಸಿದ್ದರಾಮಯ್ಯರನ್ನು ಬೆಂಬಲಿಸಿ ಮಾತನಾಡಿದ್ದರು. ಜೊತೆಗೆ ಸ್ವಪಕ್ಷ ಜೆಡಿಎಸ್ಗೆ ಟಾಂಗ್ ನೀಡಿದ್ದರು. ಇದು ಹೆಚ್ಡಿ ಕುಮಾರಸ್ವಾಮಿ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಜಿ.ಟಿ.ದೇವೇಗೌಡರನ್ನು ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರವಿಡಲಾಗಿತ್ತು. ಇದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಬಳಿಕ ಕಾಂಗ್ರೆಸ್ ಸೇರುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಪ್ರತಿಕ್ರಿಯಿಸಿರುವ ಅವರು ಕಾಂಗ್ರೆಸ್ ಸೇರುವುದನ್ನು ಅಲ್ಲಗಳೆದಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ಯಾವತ್ತೂ ಸಿಎಂ ಸಿದ್ದರಾಮಯ್ಯ ಖುದ್ದಾಗಿ ಕಾಂಗ್ರೆಸ್ಗೆ ಆಹ್ವಾನಿಸಿಲ್ಲ. ನಾನು ದಸರಾದಲ್ಲಿ ಅವರ ಜೊತೆ ವೇದಿಕೆ ಹಂಚಿಕೆ ಕೊಂಡಿದ್ದು ಬಿಟ್ಟರೆ ಮತ್ತೆ ಅವರನ್ನು ಭೇಟಿ ಮಾಡಿಲ್ಲ. ಅವರು ಯಾವತ್ತಿಗೂ ಪಕ್ಷಕ್ಕೆ ಬಾ ಎಂದು ವೈಯಕ್ತಿಕವಾಗಿ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಯಾವುದೊ ಸಭೆಯಲ್ಲಿ ಹೇಳಿರಬಹುದು. ಅದು ನನಗೆ ಗೊತ್ತಿಲ್ಲ. ಸಾರ್ವತ್ರಿಕ ಚುನಾವಣೆಗೂ ಮುನ್ನ ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಆಪ್ತ ಕಾರ್ಯದರ್ಶಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಆಗಲೇ ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿ ರಾಜೀನಾಮೆ ಕೊಡುತ್ತಾರಾ, ಸಿದ್ದರಾಮಯ್ಯ ಯಾಕೆ ಕೊಡಬೇಕು? ದಸರಾ ವೇದಿಕೆಯಲ್ಲಿ ಸಿದ್ದು ಬೆನ್ನಿಗೆ ನಿಂತ ಜಿಟಿಡಿ
ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಸೋಲಿಗೆ ಕಾರಣ ಗೊತ್ತಿಲ್ಲ. ಆ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಿಲ್ಲ, ಏನಾಗಿದೆ ತಿಳಿದು ಮಾತಾಡುತ್ತೇನೆ. ಮೂರು ಬಾರಿ ಸೋತವರು ಗೆದ್ದು ಉನ್ನತ ಸ್ಥಾನಕ್ಕೆ ಹೋಗಿದ್ದಾರೆ. ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು. ಧೈರ್ಯವಾಗಿ ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದ್ದಾರೆ.
ಚನ್ನಪಟ್ಟಣ ಪ್ರಚಾರಕ್ಕೆ ನನ್ನನ್ನು ಯಾರು ಕರೆದಿದ್ದರು ಹೇಳಿ. ಅಭ್ಯರ್ಥಿ ಕರೆಯಲಿಲ್ಲ, ದೊಡ್ಡವರು ಕೂಡ ಪ್ರಚಾರಕ್ಕೆ ಕರೆದಿಲ್ಲ. ಅವರಿಗೆ ನನ್ನ ಅವಶ್ಯಕತೆ ಇದ್ದಂತೆ ಕಾಣುತ್ತಿಲ್ಲ. ಜಿ.ಟಿ.ದೇವೇಗೌಡಗೆ ವಯಸ್ಸಾಗಿದೆ, ರಾಜಕೀಯದಿಂದ ನಿವೃತ್ತಿಯಾಗಲಿ, ನಮಗೆ ಅವರ ಮಗ ಹರೀಶ್‌ಗೌಡ ಸಾಕು ಎಂಬ ಆದೇಶ ಅವರಿಂದ ಆಗಿದೆ. ನನಗೆ ರಾಜಕೀಯದಿಂದ ನಿವೃತ್ತಿಕೊಡಿಸಲು ಅವರು ತಯಾರಿದ್ದಾರೆ. ಅವರಿಗೆ ಗೊತ್ತು ಕಾಂಗ್ರೆಸ್ ಫುಲ್ ಆಗಿದೆ, JDS, ಬಿಜೆಪಿ ಒಂದಾಗಿದೆ. ಹೀಗಾಗಿ ಜಿಟಿಡಿ ನಿವೃತ್ತಿ ತೆಗೆದುಕೊಳ್ಳಲಿ ಎಂಬ ಭಾವನೆಯಲ್ಲಿದ್ದಾರೆ. ನನಗೂ, ಹೆಚ್.ಡಿ.ಕುಮಾರಸ್ವಾಮಿ ನಡುವೆ ಯಾವ ಮುನಿಸೂ ಇಲ್ಲ. ಅವರು ಆ ರೀತಿ ಬಿಂಬಿಸಿ ಬಿಡುತ್ತಾರೆ, ನಾನೇನು ಮಾಡಲಿ ಹೇಳಿ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.