ಮೈಸೂರು: ನಗರಸಭೆ ಕಮಿಷನರ್ ಖುರ್ಚಿಗೆ ಇಬ್ಬರು ಅಧಿಕಾರಿಗಳ ಜಟಾಪಟಿ; ಠಾಣೆ ಮೆಟ್ಟಿಲೇರಿದ ಗಲಾಟೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 09, 2024 | 2:42 PM

ಇತ್ತೀಚೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳು ಕಿತ್ತಾಟ ನಡೆಸಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಅದರಂತೆ ಇದೀಗ ಮೈಸೂರಿನ ಹೂಟಗಳ್ಳಿ (Hootagalli) ನಗರಸಭೆಯ ಕಮಿಷನರ್ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ಬಿದ್ದಿದ್ದರೆ, ಇತ್ತ ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಹುದ್ದೆಗಾಗಿ ಇಬ್ಬರು ಆಧಿಕಾರಿಗಳು ಕಾದಾಟ ನಡೆಸಿದ್ದಾರೆ.

ಮೈಸೂರು: ನಗರಸಭೆ ಕಮಿಷನರ್ ಖುರ್ಚಿಗೆ ಇಬ್ಬರು ಅಧಿಕಾರಿಗಳ ಜಟಾಪಟಿ; ಠಾಣೆ ಮೆಟ್ಟಿಲೇರಿದ ಗಲಾಟೆ
ಹೂಟಗಳ್ಳಿ ನಗರಸಭೆ ಕಮಿಷನರ್ ಖುರ್ಚಿಗೆ ಇಬ್ಬರು ಅಧಿಕಾರಿಗಳ ಜಟಾಪಟಿ
Follow us on

ಮೈಸೂರು, ಫೆ.09: ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಜಟಾಪಟಿ ನಡೆಸಿದ ಘಟನೆ ಮೈಸೂರಿನ ಹೂಟಗಳ್ಳಿ ನಗರಸಭೆಯಲ್ಲಿ ನಡೆದಿದೆ. ಹೂಟಗಳ್ಳಿ (Hootagalli) ನಗರಸಭೆಯ ಕಮಿಷನರ್ ಹುದ್ದೆಗಾಗಿ ಹಾಲಿ ಕಮಿಷನರ್ ಸಂದೀಪ್ ಮತ್ತು ಈ ಹಿಂದೆ ಇದೇ ನಗರಸಭೆ ಕಮಿಷನರ್ ಆಗಿದ್ದ ನರಸಿಂಹಮೂರ್ತಿ ಎಂಬುವವರ ನಡುವೆ ಕಿತ್ತಾಟ ಶುರುವಾಗಿದೆ. ಈ ಹಿಂದೆ ಇಬ್ಬರು ಅಧಿಕಾರಿಗಳು ಕೋರ್ಟ್ ಮೆಟ್ಟಿಲೇರಿದ್ದರು. ನಿನ್ನೆ(ಫೆ.08) ಏಕಾಏಕಿ ನಗರಸಭೆಗೆ ಆಗಮಿಸಿದ ನರಸಿಂಹಮೂರ್ತಿ ಅವರು, ಕಮಿಷನರ್ ಕೊಠಡಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.

ಹಾಲಿ ನಗರಸಭೆ ಕಮಿಷನರ್​ಯಿಂದ ಠಾಣೆಗೆ ದೂರು

ಬೆಳಿಗ್ಗೆ ಎಂದಿನಂತ ಕರ್ತವ್ಯಕ್ಕೆ ಬಂದ ಕಮಿಷನರ್​ ಸಂದೀಪ್​ಗೆ ಶಾಕ್ ಆಗಿದೆ. ಕೊಡಲೇ ಕಮಿಷನರ್ ಕೊಠಡಿ ಆಚೆಯೇ ಟೇಬಲ್ ಹಾಕಿ ಕುಳಿತು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಂದಂತಹ ಜನರ ಸಮಸ್ಯೆಯನ್ನ ಆಲಿಸುತ್ತಿದ್ದಾರೆ. ಜೊತೆಗೆ ಘಟನೆ ಸಂಬಂಧ ಹಾಲಿ ನಗರಸಭೆ ಕಮಿಷನರ್ ಸಂದೀಪ್ ಅವರು ನರಸಿಂಹಮೂರ್ತಿ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.  ಇಬ್ಬರು ಅಧಿಕಾರಿಗಳ ಗಲಾಟೆಯಿಂದ ಸಾರ್ವಜನಿಕರು ಹೈರಾಣಾಗುವಂತಾಗಿದೆ.

ಇದನ್ನೂ ಓದಿ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಹುದ್ದೆಗೆ ಇಬ್ಬರು ಅಧಿಕಾರಿಗಳ ಜಟಾಪಟಿ.. ನೀ ಕೊಡೆ-ನಾ ಬಿಡೆ..!

ವಿಜಯಪುರದಲ್ಲೂ ಶಿಕ್ಷಣ ಇಲಾಖೆ ಉಪನಿರ್ದೇಶಕರ ಹುದ್ದೆಗಾಗಿ ಇಬ್ಬರು ಆಧಿಕಾರಿಗಳ ಕಾದಾಟ

ವಿಜಯಪುರ: ಮೈಸೂರು ಜಿಲ್ಲೆಯಲ್ಲಷ್ಟೇ ಅಲ್ಲ, ಅಂತಹುದೇ ಘಟನೆ ವಿಜಯಪುರದಲ್ಲೂ ನಡೆದಿದೆ. ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಹುದ್ದೆಗಾಗಿ ಇಬ್ಬರು ಆಧಿಕಾರಿಗಳು ಕಾದಾಟ ನಡೆಸಿದ್ದಾರೆ. ಅಮಾನತ್ತಾಗಿದ್ದ ಎನ್ ಎಚ್ ನಾಗೂರು ಹಾಗೂ ಪ್ರಭಾರಿ ಡಿಡಿಪಿಐ ಉಮಾದೇವಿ ಸೊನ್ನವರ ಮಧ್ಯೆ ಡಿಡಿಪಿಐ ಕುರ್ಚಿಗಾಗಿ ಸಮರ ಶುರುವಾಗಿದೆ.
ಕಳೆದ ಜನೇವರಿ 30 ರಂದು ಹಣಕಾಸು ದುರುಪಯೋಗದ ಆರೋಪದ ಮೇಲೆ ಎನ್ ಎಚ್ ನಾಗೂರು ಅಮಾನತ್ತಾಗಿದ್ದರು. ಬಳಿಕ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶದಂತೆ ಫೆಬ್ರವರಿ 2 ರಂದು ಪ್ರಭಾರಿ ಡಿಡಿಪಿಐ ಆಗಿ ಉಮಾದೇವಿ ಸೊನ್ನವರ ಆಧಿಕಾರ ಸ್ವೀಕಾರ ಮಾಡಿದ್ದರು.

ಈ ಮಧ್ಯೆ ಅಮಾನತ್ತು ಪ್ರಶ್ನಿಸಿ ಕಲಬುರಗಿಯ ಕೆಎಟಿಗೆ ಹೋಗಿದ್ದ ಹಿಂದಿನ ಡಿಡಿಪಿಐ ಎನ್ ಎಚ್ ನಾಗೂರ, ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಕಲಬುರಗಿ ಪೀಠದಿಂದ ಅಮಾನತ್ತು ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು. ಇದೀಗ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಕಡತಗಳಿಗೆ ನನ್ನಿಂದ ಸಹಿ ಪಡೆಯೇಕೆಂದು ಎನ್ ಎಚ್ ನಾಗೂರ ಹೇಳುತ್ತಿದ್ದಾರೆ. ಜಿಲ್ಲಾ ಪಂಚಾಯತಿ ಸಿಇಓ ಆದೇಶದಂತೆ ನಾನು ಡಿಡಿಪಿಐ ಆಗಿದ್ದೇನೆ. ನಾನೇ ಕಡತಗಳಿಗೆ ಸಹಿ ಹಾಕುತ್ತೇನೆಂದು ಪ್ರಭಾರಿ ಡಿಡಿಪಿಐ ಉಮಾದೇವಿ ಹೇಳುತ್ತಿದ್ದಾರೆ. ಇಬ್ಬರ ಆಧಿಕಾರದ ಕಿತ್ತಾಟದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸಮಸ್ಯೆ ಉಂಟಾಗಿದ್ದು, ನಾವು ಯಾರಿಂದ ಕಡತಗಳಿಗೆ ಸಹಿ ಪಡೆಯಬೇಕೆಂಬ ಗೊಂದಲದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಜಿಪಂ ಸಿಇಓ ಹಾಗೂ ಜಿಲ್ಲಾಧಿಕಾರಿಗಳು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ