ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರು ಮಂಗಳಸೂತ್ರ ಕಳೆದುಕೊಳ್ಳುತ್ತಾರೆ: ಸಿಎಂ ಪುತ್ರ ಡಾ ಯತೀಂದ್ರ ವಿವಾದಾತ್ಮಕ ಹೇಳಿಕೆ

| Updated By: ಗಣಪತಿ ಶರ್ಮ

Updated on: Apr 22, 2024 | 2:08 PM

ಲೋಕಸಭೆ ಚುನಾವಣೆಯ ಕಾವು ತೀವ್ರಗೊಂಡಿದ್ದು, ಪ್ರಚಾರ ಕಣದಲ್ಲಿ ಆರೋಪ ಪ್ರತ್ಯಾರೋಪಗಳು, ವಿವಾದಾತ್ಮಕ ಹೇಳಿಕೆಗಳು ಜೋರಾಗಿವೆ. ಈ ಮಧ್ಯೆ, ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಮೈಸೂರಿನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಜನರು ಪರಸ್ಪರ ಬಡಿದಾಡಿಕೊಳ್ಳುವಂತೆ ಮಾಡುವುದಲ್ಲದೆ, ಮಹಿಳೆಯರ ಮಾಂಗಲ್ಯ ಕಿತ್ತುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರು ಮಂಗಳಸೂತ್ರ ಕಳೆದುಕೊಳ್ಳುತ್ತಾರೆ: ಸಿಎಂ ಪುತ್ರ ಡಾ ಯತೀಂದ್ರ ವಿವಾದಾತ್ಮಕ ಹೇಳಿಕೆ
ಡಾ. ಯತೀಂದ್ರ
Follow us on

ಮೈಸೂರು, ಏಪ್ರಿಲ್ 22: ಬಿಜೆಪಿ ಅಧಿಕಾರಕ್ಕೆ ಬಂದರೆ, ಎಲ್ಲ ಮಹಿಳೆಯರು ಮಂಗಳಸೂತ್ರ ಕಳೆದುಕೊಳ್ಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ (Yathindra Siddaramaiah) ಹೇಳಿದ್ದಾರೆ. ರಾಜಸ್ಥಾನದ ಬನ್ಸ್​ವಾರಾದಲ್ಲಿ ಭಾನುವಾರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿ ಮೈಸೂರಿನಲ್ಲಿ (Mysuru) ಮಾತನಾಡಿದ ಅವರು, ಬಿಜೆಪಿ (BJP) ಅಧಿಕಾರಕ್ಕೆ ಬಂದರೆ ಎಲ್ಲ ಮಹಿಳೆಯರು ತಮ್ಮ ಗಂಡಂದಿರು, ಮಕ್ಕಳನ್ನು ಸಹ ಕಳೆದುಕೊಳ್ಳುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕೋಮುಗಲಭೆ, ದೊಂಬಿ ಮಾಡುತ್ತಾರೆ. ಗಲಾಟೆ ಮಾಡಿ ಮಕ್ಕಳನ್ನು ಸಾಯುವಂತೆ ಮಾಡುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಒಬ್ಬರನ್ನೊಬ್ಬರು ಬಡಿದಾಡಿಕೊಳ್ಳುವಂತೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ 70 ವರ್ಷಗಳಿಂದ ವಿವಿಧ ಪಕ್ಷಗಳು ಆಡಳಿತ ನಡೆಸಿವೆ. ಹಿಂದುಗಳಿಗೆ ಈವರೆಗೆ ಯಾವುದೇ ಅನ್ಯಾಯ ಆಗಿಲ್ಲ. ಬಿಜೆಪಿಯವರು ಸಮಾಜವನ್ನು ಅಧಃಪತನಕ್ಕೆ ಹೋಗುವಂತೆ ಮಾಡುತ್ತಾರೆ. ಮಕ್ಕಳನ್ನು ಕೋಮುಗಲಭೆಯಲ್ಲಿ ತೊಡಗಿಸಿ ನಿರುದ್ಯೋಗಿಗಳನ್ನಾಗಿ ಮಾಡುತ್ತಾರೆ. ಮತೀಯ ಭಾವನೆ ಕೆರಳಿಸುವ ರೀತಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಚುನಾವಣಾ ಆಯೋಗ ಯಾಕೆ ಕಣ್ಮುಚ್ಚಿ ಕುಳಿತಿದೆಯೋ ಗೊತ್ತಿಲ್ಲ ಎಂದು ಯತೀಂದ್ರ ಹೇಳಿದರು.

ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಯತೀಂದ್ರ, ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಈ ರೀತಿ ಮಾತನಾಡುವುದಿಲ್ಲ. ಮೋದಿ ಅವರು ತುಚ್ಛವಾಗಿ ಮಾತನಾಡಿದ್ದಾರೆ. ಮತೀಯ ಭಾವನೆ ಕೆರಳಿಸುವ ರೀತಿ ಮೋದಿ ಮಾತನಾಡಿದ್ದಾರೆ ಎಂದು ಯತೀಂದ್ರ ವಾಗ್ದಾಳಿ ನಡೆಸಿದರು.

ಜನ ಯಾವತ್ತೂ ಇಂಥ ವಿಚಾರಗಳಿಗೆ ಪ್ರಾಧಾನ್ಯತೆ ನೀಡಬಾರದು. ನಮ್ಮ ನಿಜವಾದ ಸಮಸ್ಯೆ ಏನಿದೆಯೋ ಅದರ ಬಗ್ಗೆ ಜನರು ಮಾತನಾಡಬೇಕು, ಧ್ವನಿಯೆತ್ತಬೇಕು ಎಂದು ಯತೀಂದ್ರ ಕರೆ ನೀಡಿದರು.

ಏನು ಹೇಳಿದ್ದರು ಪ್ರಧಾನಿ ಮೋದಿ?

ರಾಜಸ್ಥಾನದ ಬನ್ಸ್​ವಾರಾದಲ್ಲಿ ಭಾನುವಾರ ಲೋಕಸಭಾ ಚುನಾವಣಾ ಪ್ರಚಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರು ಹಂಚಿಕೆ ಮಾಡಲಿದೆ ಎಂದಿದ್ದರು. ದೇಶದ ಸಂಪನ್ಮೂಲಗಳ ಮೇಲೆ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಇದೆ ಎಂಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಮೋದಿ, ಕಾಂಗ್ರೆಸ್ ಮಹಿಳೆಯರಿಂದ ಮಂಗಳಸೂತ್ರಗಳನ್ನು ಕಸಿದುಕೊಂಡು ನುಸುಳುಕೋರರಿಗೆ ನೀಡಲಿದೆ ಎಂದು ಟೀಕಿಸಿದ್ದರು.

ಇದನ್ನೂ ಓದಿ: ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರ ಆಸ್ತಿ ಸಮೀಕ್ಷೆ ಮಾಡುವುದಾಗಿ ಹೇಳಿದ್ದಾರಂತೆ. ನಮ್ಮ ಸಹೋದರಿಯರ ಬಳಿ ಎಷ್ಟು ಚಿನ್ನವಿದೆ ಎಂದು ಅವರು ತನಿಖೆ ಮಾಡುತ್ತಾರೆ. ನಮ್ಮ ಆದಿವಾಸಿ ಕುಟುಂಬಗಳ ಬಳಿ ಬೆಳ್ಳಿ ಇವೆ. ಅವರ ಬಳಿ ಎಷ್ಟು ಬೆಳ್ಳಿ ಇದೆ ಎಂಬುದನ್ನು ಗುರುತು ಮಾಡಲಾಗುತ್ತದೆ. ಸರ್ಕಾರಿ ನೌಕರರು ಎಷ್ಟು ಆಸ್ತಿ ಮತ್ತು ಹಣ ಹೊಂದಿದ್ದಾರೆ ಎಂಬುದನ್ನು ಅವರು ಪರಿಶೀಲಿಸುತ್ತಾರೆ. ಇಷ್ಟೇ ಅಲ್ಲದೆ, ನಮ್ಮ ಸಹೋದರಿಯರ ಒಡೆತನದಲ್ಲಿರುವ ಚಿನ್ನ ಮತ್ತು ಅವರ ಇತರ ಆಸ್ತಿಗಳನ್ನು ಸಮಾನವಾಗಿ ಮರುಹಂಚಿಕೆ ಮಾಡಲಾಗುತ್ತದೆ ಎಂದು ಮೋದಿ ಪ್ರತಿಪಾದಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:19 pm, Mon, 22 April 24