Yogathon: ಮೈಸೂರು ಕಾರ್ಯಕ್ರಮದಲ್ಲಿ ಯೋಗ ಮಾಡುವಾಗ ಕುಸಿದು ಬಿದ್ದ 3 ವಿದ್ಯಾರ್ಥಿಗಳು
ರಾಜ್ಯಾದ್ಯಂತ ಇಂದು (ಜ.15) ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗಾಗಿ ಯೋಗಥಾನ್ ಆಯೋಜಿಸಿದ್ದು ಮೈಸೂರಿನಲ್ಲಿ ಯೋಗ ಮಾಡುವಾಗ ಈ ಅವಘಡ ಸಂಭವಿಸಿದೆ.
ಮೈಸೂರು: ರಾಜ್ಯಾದ್ಯಂತ ಇಂದು (ಜ.15) ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗಾಗಿ ಯೋಗಥಾನ್ ಆಯೋಜಿಸಲಾಗಿದ್ದು, ನಗರದ ರೇಸ್ ಕೋರ್ಸ್ ಆವರಣದಲ್ಲಿ ನಡೆಯುತ್ತಿರುವ ಯೋಗಥಾನ್ ಕಾರ್ಯಕ್ರಮದಲ್ಲಿ ಯೋಗ ಮಾಡುವಾಗ ಚಳಿಗೆ ಮೂವರು ವಿದ್ಯಾರ್ಥಿಗಳು ಕುಸಿದು ಬಿದ್ದಿದ್ದಾರೆ. ಕೂಡಲೇ ಯೋಗಪಟುಗಳು ಕಾಲು, ಕೈ ಉಜ್ಜಿ ದೇಹದ ಉಷ್ಣತೆಯನ್ನ ಹೆಚ್ಚಿಸಿದ್ದು, ಬಳಿಕ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ನಗರದ ರೇಸ್ ಕೋರ್ಸ್ ಆವರಣದಲ್ಲಿ ನಡೆಯುತ್ತಿರುವ ಯೋಗಥಾನ್ ಕಾರ್ಯಕ್ರಮದಲ್ಲಿ ಮುಂದಿನ ವರ್ಷ ಯೋಗ ದಿನಾಚರಣೆಗೆ ಬಾಬಾ ರಾಮ್‌ದೇವ್‌ಗೆ ಆಹ್ವಾನ ನೀಡಲಾಗುವುದು ಎಂದು ಯೋಗಥಾನ್‌ನಲ್ಲಿ ಒಮ್ಮತದ ನಿರ್ಧಾರ ಮಾಡಲಾಗಿದ್ದು, ಒಂದೂವರೆ ಲಕ್ಷ ಜನರನ್ನು ಸೇರಿಸಿ ಏಕ ಕಾಲಕ್ಕೆ ಯೋಗ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಸಿದ್ದತೆ ಮಾಡಲಾಗುವುದು ಹಾಗೂ ಬಾಬಾ ರಾಮ್ ದೇವ್ ಭಾರತದ ಯೋಗಾ ಐಕಾನ್ ಆಗಿದ್ದು ಅವರ ಆಗಮನದಿಂದ ಮೈಸೂರಿನ ಯೋಗಕ್ಕೆ ಮತ್ತಷ್ಟು ಶಕ್ತಿ ಬರಲಿದೆ. ಬಾಬಾ ರಾಮ್ ದೇವ್ ಅವರನ್ನು ಟಿವಿಯಲ್ಲಿ ನೋಡಿದ್ದು, ನಮ್ಮ ಕಣ್ಣ ಮುಂದೆ ಬಂದು ಯೋಗ ಮಾಡುವುದು ನೋಡುವುದೇ ಸಂತೋಷ ಎಂದು ಶಿಕ್ಷಣ ತಜ್ಞ ಶ್ರೀಹರಿ ಹೇಳಿದರು.
ದಾವಣಗೆರೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಯೋಗಾಥಾನ್ಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ
ದಾವಣಗೆರೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಯೋಗಾಥಾನ್ಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಚಾಲನೆ ನೀಡಿದ್ದು, ಪಂಚಮಸಾಲಿ ಗುರುಪೀಠದ ಶ್ವಾಸ ಗುರು ವಚನಾನಂದ ಸ್ವಾಮೀಜಿಗಳ ನೇತ್ರತ್ವದಲ್ಲಿ ಯೋಗ ಮಾಡಲಾಯಿತು. 45 ನಿಮಿಷ ನಿರಂತರವಾಗಿ ನಡೆದ ಯೋಗಾಥಾನ್ನಲ್ಲಿ ವಿವಿಧ ಶಾಲಾ ಕಾಲೇಜ್ಗಳ ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಸೇರಿ 8 ಸಾವಿರ ಜನರು ಭಾಗಿಯಾಗಿದ್ದರು.
ಧಾರವಾಡ ಸೇರಿ ರಾಜ್ಯದ ವಿವಿಧೆಡೆ ನಡೆದ ಯೋಗಾಥಾನ್
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಮೈದಾನದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಯೋಗಾಥಾನ್ ಕಾರ್ಯಕ್ರಮ ಆಯೋಜಿಸಿದ್ದು, ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಭಾಗಿಯಾಗಿದ್ದರು. ಇನ್ನು ಯೋಗ ಪೋರ್ಟ್ಲ್ ಮೂಲಕ ಈವರೆಗೆ ರಾಜ್ಯದಲ್ಲಿ 13 ಲಕ್ಷ ವಿದ್ಯಾರ್ಥಿಗಳು, 12 ಸಾವಿರ ಬೋಧಕರು ಮತ್ತು 8 ಸಾವಿರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ನೋಂದಣಿಯಾಗಿವೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಇವರೆಗೆ 90 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೋಲಾರದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಯೋಗಥಾನ್
ಕೋಲಾರ: ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಯೋಗಥಾನ್ ಕಾರ್ಯಕ್ರಮ ನಡೆಯುತ್ತಿದ್ದು, ಕೋಲಾರ ಸಂಸದ ಮುನಿಸ್ವಾಮಿ, ಜಿಲ್ಲಾಧಿಕಾರಿ, ಸಿಇಓ ಸೇರಿದಂತೆ ಹಲವರು ಇದ್ದರು. ಮೂರು ದಿನಗಳಿಂದ ನಡೆಯುತ್ತಿರುವ ಯೋಗಥಾನ್‌ನಲ್ಲಿ ಅಧಿಕಾರಿಗಳು ದೈಹಿಕ ಶಿಕ್ಷಕರು ಸೇರಿ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.
ರಾಷ್ಟ್ರೀಯ ಯುವಜನತ್ಸೋವ ಕಾರ್ಯಕ್ರಮ ಹಿನ್ನೆಲೆ ಕಳೆಗಟ್ಟಿದ ಯೋಗ ಪ್ರದರ್ಶನ
ರಾಯಚೂರು: ಜಿಲ್ಲೆಯ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೈಕೊರೆಯುವ ಚಳಿಯಲ್ಲೂ ಸಾವಿರಾರು ಮಂದಿ ಯೋಗಾಪಟುಗಳಿಂದ ಯೋಗ ಪ್ರದರ್ಶನ ನಡೆಯಿತು.
ಕೋಟೆನಾಡಿನಲ್ಲಿ ಗಿನ್ನಿಸ್ ದಾಖಲೆಗಾಗಿ ಯೋಗಾಥಾನ್ ಕಾರ್ಯಕ್ರಮ
ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಯೋಗಾಥಾನ್ ಕಾರ್ಯಕ್ರಮ ಆಯೋಜಿಸಲಾಗಿದ್ದು, 8ಸಾವಿರ ಜನ ಯೋಗಪಟುಗಳು, ವಿದ್ಯಾರ್ಥಿಗಳು ಯೋಗಭ್ಯಾಸ ಮಾಡಿದರು. ಯೋಗಾಥಾನ್ನಲ್ಲಿ ಡಿಸಿ ದಿವ್ಯಪ್ರಭು, ಜಿಲ್ಲಾ ಪಂಚಾಯತ್ ಸಿಇಓ ದಿವಾಕರ್, ಚಿತ್ರದುರ್ಗ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ಸೇರಿ ಜಿಲ್ಲೆಯ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ