ಕೃಷ್ಣೆಯ ರುದ್ರನರ್ತನಕ್ಕೆ ಕೊಚ್ಚಿ ಹೋಯ್ತು ಬದುಕಿನ ‘ಸೇತುವೆ’!

ಕೃಷ್ಣೆಯ ರುದ್ರನರ್ತನಕ್ಕೆ ಕೊಚ್ಚಿ ಹೋಯ್ತು ಬದುಕಿನ ‘ಸೇತುವೆ’!

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮದ ಸೇತುವೆ ಪ್ರವಾಹದ ರುದ್ರ ನರ್ತನಕ್ಕೆ ಕೊಚ್ಚಿ ಹೋಗಿದೆ. ಕೃಷ್ಣ ನದಿ ತುಂಬಿಹರಿಯುತ್ತಿದ್ದು, ನದಿಯಲ್ಲಿ ಪಾತ್ರೆ, ಕುಂಬಳಕಾಯಿಗಳನ್ನು ಕಟ್ಟಿಕೊಂಡು ಗ್ರಾಮಸ್ಥರು ಈಜಾಡಿ ಊರು ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಉಂಟಾದ ಪ್ರವಾಹ ನೀಲಕಂಠರಾಯನಗಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನ ನುಂಗಿಕೊಂಡು ಹೋಗಿದೆ. ಹೀಗಾಗಿ ಕಳೆದ ಎರಡು ತಿಂಗಳಿನಿಂದ ನೀಲಕಂಠರಾಯನಗಡ್ಡಿ ಗ್ರಾಮಸ್ಥರು ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದ್ದಾರೆ. ಹೈಡ್ರೋ ಪವರ್ ಕಂಪನಿ ನಿರ್ಮಿಸಿದ ಸುಮಾರು 150 ಅಡಿ ಉದ್ದದಷ್ಟು ಸೇತುವೆ ಪ್ರವಾಹದ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದರಿಂದ ನದಿ ದಾಟಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ. ಅಗತ್ಯ ವಸ್ತುಗಳು ಬೇಕಾದ್ರೆ ಪ್ರಾಣದ ಹಂಗು ತೊರೆದು ಬೆನ್ನಿಗೆ ಕುಂಬಳ ಕಾಯಿ, ಪಾತ್ರೆಗಳನ್ನು ಹಿಡಿದು ನದಿಯಲ್ಲಿ ಈಜಿಕೊಂಡು ಪಟ್ಟಣಕ್ಕೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹೊಸ ಸೇತುವೆ ನಿರ್ಮಿಸ್ತೀವಿ ಎಂದಿದ್ದ ಸರ್ಕಾರ ಕೂಡ ಮಾತು ಮರೆತುಹೋಗಿದೆ. ಸರ್ಕಾರ ಮಾಡಿದ ಎಡವಟ್ಟಿಗೆ ಸೇತುವೆ ಇಲ್ಲದೆ ಗ್ರಾಮಸ್ಥರು ಪ್ರಾಣದ ಹಂಗು ತೊರೆದು ನದಿಯಲ್ಲಿ ಈಜಿಕೊಂಡು ದಡ ಸೇರಬೇಕಾಗಿದೆ. ಆದಷ್ಟು ಬೇಗ ಕಣ್ಣು ಮುಚ್ಚಿ ಕುಳಿತಿರುವ ಸರ್ಕಾರ ಮತ್ತು ಅಧಿಕಾರಿಗಳು ಈ ಗ್ರಾಮದತ್ತ ಕಣ್ಣು ಬಿಟ್ಟು ನೋಡಬೇಕಾಗಿದೆ.


Click on your DTH Provider to Add TV9 Kannada