ಪುಡಿಗಾಸಿಗಾಗಿ ಯುವಕನನ್ನು ಕಿಡ್ನ್ಯಾಪ್ ಮಾಡಿ ಕೊಲೆ: ಬರೊಬ್ಬರಿ 40 ದಿನಗಳ ಬಳಿಕ ಆರೋಪಿಗಳು ಅಂದರ್
ನೆಲಮಂಗಲದಲ್ಲಿ ಪುಡಿಗಾಸಿಗಾಗಿ ನಡೆದ ಯುವಕನ ಅಪಹರಣ ಹತ್ಯೆಯ ಪ್ರಕರಣದಲ್ಲಿ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ. 40 ದಿನಗಳ ಬಳಿಕ ಬಂಧಿಸಿದ್ದಾರೆ. ಮೂರುವರೆ ಸಾವಿರ ರೂಪಾಯಿ ಸಾಲಕ್ಕಾಗಿ ಯುವಕನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಲಾಗಿತ್ತು. ಆರೋಪಿಗಳು ಶವವನ್ನು ಅರಣ್ಯ ಪ್ರದೇಶದಲ್ಲಿ ಎಸೆದಿದ್ದರು. ಫೋನ್ ಕಾಲ್ ಸಿಡಿಆರ್ ಮೂಲಕ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ನೆಲಮಂಗಲ, ಡಿಸೆಂಬರ್ 04: ಪುಡಿಗಾಸಿಗಾಗಿ ಯುವಕನನ್ನು ಕಿಡ್ನ್ಯಾಪ್ ಮಾಡಿ, ಕೊಲೆ (kill) ಮಾಡಿರುವಂತಹ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಬರೊಬ್ಬರಿ ನಲವತ್ತು ದಿನಗಳ ಬಳಿಕ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಖಿಲೇಶ್ ಯಾದವ್ ಕೊಲೆಯಾದ ಯುವಕ. ಮಾಚೋಹಳ್ಳಿಯ ಮಹಮ್ಮದ್ ಏಸನ್(23), ತಿಗಳರಪಾಳ್ಯದ ರೋಷನ್ ಜಮೀರ್(23), ಗಣೇಶ್ (24), ನಂದಕುಮಾರ್(20), ಹೆಸರಘಟ್ಟದ ವಿಶ್ವ(24), ಯಲಹಂಕದ ನಾಗೇಶ್ (30), ಮನುಕುಮಾರ್(26) ಮತ್ತು 17 ವರ್ಷದ ಅಪ್ರಾಪ್ತರು ಬಂಧಿತರು.
ಮೂರುವರೆ ಸಾವಿರ ರೂ ಸಾಲ
ಹೌದು… ಪುಡಿಗಾಸಿನಗಾಗಿ ಈ ಎಂಟು ಜನ ಒಂದು ಕಿಡ್ನ್ಯಾಪ್ ಮಾಡಿ, ಮನೆಯೊಂದರಲ್ಲಿ ಕೊಲೆ ಮಾಡಿದ್ದಾರೆ. ಯಾರಿಗೂ ಗೊತ್ತಾಗಬಾರದು ಅಂತ ನೂರಾರು ಕಿಲೋಮೀಟರ್ ದೂರದಲ್ಲಿರುವ ಅರಣ್ಯ ಪ್ರದೇಶದಲ್ಲಿ ಶವವನ್ನು ಬಿಸಾಡಿದ್ದಾರೆ. ಬಿಹಾರ ಮೂಲದ 24 ವರ್ಷದ ಅಖಿಲೇಶ್ ನೆಲಮಂಗಲದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಾಚೋಹಳ್ಳಿಯ ಮಹಮ್ಮದ್ ಏಸನ್ ಬಳಿ ಕೇವಲ ಮೂರುವರೆ ಸಾವಿರ ರೂ. ಹಣವನ್ನು ಸಾಲವಾಗಿ ಪಡೆದುಕೊಂಡಿದ್ದ. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್: ತಾಯಿ ಸಾವು, ಮಗುವಿನ ಸ್ಥಿತಿ ಗಂಭೀರ
ಅಕ್ಟೋಬರ್ 19ರ ಸಂಜೆ ಕಾಚೋಹಳ್ಳಿಯ ಬಳಿ ಆರೋಪಿಗಳು ಅಖಿಲೇಶ್ನನ್ನು ಕಾರ್ನಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ರಾಮಗೊಂಡಹಳ್ಳಿಯ ಆರೋಪಿ ಮನೆಗೆ ಕರೆತಂದು ಕೊಲೆ ಮಾಡಿದ್ದಾರೆ. ಯಾವುದೇ ಸುಳಿವು ಸಿಗಬಾರದು ಎಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಬಳಿಯ ಬನವಿಕಲ್ ಅರಣ್ಯಪ್ರದೇಶದಲ್ಲಿ ಶವ ಎಸೆದು ವಾಪಸ್ಸ್ ಆಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದೆ ಎಂದು ನೆಮ್ಮದಿಯ ಬಿಟ್ಟುಸಿರು ಬಿಟ್ಟು ಎಂದಿನಂತೆ ತಮ್ಮ ಕೆಲಸದಲ್ಲಿ ಆರೋಪಿಗಳು ತೊಡಗಿದ್ದರು.
ಫೋನ್ ಕಾಲ್ ಸಿಡಿಆರ್ ಮೂಲಕ ಆರೋಪಿಗಳು ಬಲೆಗೆ
ಅಕ್ಟೋಬರ್ 23 ರಂದು ಕುರಿಗಾಹಿಗಳಿಗೆ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವ ನೋಡಿ ಕೂಡಲೇ ವಿಜಯನಗರದ ಹೊಸಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಶವದ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನಲೆ ಅಕ್ಟೋಬರ್ 26 ರಂದು ಪೊಲೀಸರೇ ಅಂತ್ಯಕ್ರಿಯೆ ನಡೆಸಿದ್ದಾರೆ. ಇತ್ತ ಅಕ್ಟೋಬರ್ 21 ರಂದು ಅಖಿಲೇಶ್ ಪೋಷಕರು ತಮ್ಮ ಮಗ ನಾಪತ್ತೆಯಾಗಿರುವುದಾಗಿ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಫೋನ್ ಕಾಲ್ ಸಿಡಿಆರ್ ಮೂಲಕ ಆರೋಪಿಗಳು ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ನಿವೃತ್ತ ಶಿಕ್ಷಕನ ಹತ್ಯೆ
ಬರೊಬ್ಬರಿ ಎಂಟು ಜನ ಕಿಡ್ನ್ಯಾಪ್, ಕೊಲೆ, ಶವ ಸಾಗಣೆಯಲ್ಲಿ ಭಾಗಿಯಾಗಿರುವುದು ತನಿಖೆಯ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಇನ್ನು ಕೊಳೆತ ಸ್ಥಿತಿಯಲ್ಲಿ ಸಿಕ್ಕ ಶವದ ಬಲಗೈನಲ್ಲಿ ಟ್ಯಾಟೂ ನೋಡಿದ ಕುಟುಂಬಸ್ಥರು ಅಖಿಲೇಶ್ ಚಹರೆ ಪತ್ತೆ ಹಚ್ಚಿದ್ದಾರೆ. ಗೂಳಿ ಟ್ಯಾಟೂ ನೋಡಿದ ಬಳಿಕ ಅಖಿಲೇಶ್ ಸಾವು ಖಚಿತ ಪಡಿಸಿ, ಕೊಲೆಯ ಆರೋಪಿಗಳ ತಂತ್ರವನ್ನು ಪೊಲೀಸರು ಭೇದಿಸಿದ್ದಾರೆ.
ಕೊಲೆ ಬಳಿಕ ಬರೊಬ್ಬರಿ 40 ದಿನಗಳ ಕಾಲ ತಾವು ಮಾಡಿದ್ದು ಯಾರಿಗೂ ತಿಳಿದಿಲ್ಲ ಅಂತಾ ರಾಜಾರೋಷದಲ್ಲಿ ಮೆರೆಯುತ್ತಿದ್ದರು. ಇದೀಗ ಎಲ್ಲರನ್ನು ಬಂಧಿಸಲಾಗಿದೆ. ಒಂದೆಡೆ ಅಖಿಲೇಶ್ ಕುಟುಂಬ ಕಣ್ಣಿರಿನಲ್ಲಿ ಮುಳುಗಿದೆ. ಮೂರುವರೆ ಸಾವಿರ ರೂ. ಸಾಲ ದುರುಂತ ಅಂತ್ಯಕ್ಕೆ ಸಾಕ್ಷಿಯಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.