Covid New Guidelines: ಕೊವಿಡ್ ಪರೀಕ್ಷೆ ಮಾರ್ಗಸೂಚಿಗೆ ಪರಿಷ್ಕಾರ: ಇಂಥವರಿಗೆ ಟೆಸ್ಟ್ ಅಗತ್ಯ ಎಂದು ಸ್ಪಷ್ಟಪಡಿಸಿದ ಸರ್ಕಾರ

ಶಸ್ತ್ರಚಿಕಿತ್ಸೆ, ಹೆರಿಗೆ ಸಂದರ್ಭದಲ್ಲಿ ತುರ್ತುಸ್ಥಿತಿ ಇದ್ದರೆ ಕೊವಿಡ್ ಟೆಸ್ಟ್ ಕಾರಣಕ್ಕೆ ರೋಗಿಗೆ ಚಿಕಿತ್ಸೆ ನೀಡುವಲ್ಲಿ ವಿಳಂಬ ಮಾಡಬಾರದು ಎಂದು ಸ್ಪಷ್ಟಪಡಿಸಲಾಗಿದೆ.

Covid New Guidelines: ಕೊವಿಡ್ ಪರೀಕ್ಷೆ ಮಾರ್ಗಸೂಚಿಗೆ ಪರಿಷ್ಕಾರ: ಇಂಥವರಿಗೆ ಟೆಸ್ಟ್ ಅಗತ್ಯ ಎಂದು ಸ್ಪಷ್ಟಪಡಿಸಿದ ಸರ್ಕಾರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 27, 2022 | 10:53 PM

ಬೆಂಗಳೂರು: ಕರ್ನಾಟಕ ಸರ್ಕಾರವು ಕೊರೊನಾ ವೈರಸ್ ಸೋಂಕು ಪತ್ತೆಗೆ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಪರಿಷ್ಕರಿಸಿದೆ. ರಾಜ್ಯ ತಾಂತ್ರಿಕ ಸಲಹಾ ಸಮಿತಿಯ 150ನೇ ಸಭೆಯಲ್ಲಿ ಕೋವಿಡ್ ಟೆಸ್ಟ್ ನಿಯಮಗಳನ್ನು ಪರಿಷ್ಕರಿಸಲು ತೀರ್ಮಾನಿಸಲಾಯಿತು. ಕೋವಿಡ್ ಸೋಂಕನ್ನು ತ್ವರಿತವಾಗಿ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ನೀಡಲು ಯಾರನ್ನೆಲ್ಲಾ ತಪಾಸಣೆಗೆ ಒಳಪಡಿಸಬೇಕು ಎನ್ನುವ ಬಗ್ಗೆ ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಅದರಂತೆ ಕೊರೊನಾ ಲಕ್ಷಣಗಳಿರುವವರಿಗೆ, ವಿದೇಶಕ್ಕೆ ತೆರಳುತ್ತಿರುವವರಿಗೆ, ವಿದೇಶದಿಂದ ಬಂದವರಿಗೆ ಟೆಸ್ಟ್ ಕಡ್ಡಾಯ ಎಂದು ಸೂಚಿಸಲಾಯಿತು. ಯಾರಿಗೆ ಸೋಂಕು ತಪಾಸಣೆಯನ್ನು ಕಡ್ಡಾಯ ಮಾಡಬಾರದು ಎಂಬ ಬಗ್ಗೆಯೂ ಮಾರ್ಗದರ್ಶಿ ಸೂತ್ರಗಳು ಸ್ಪಷ್ಟನೆ ನೀಡಿವೆ. ಅದರಂತೆ ಶಸ್ತ್ರಚಿಕಿತ್ಸೆ, ಹೆರಿಗೆ ಸಂದರ್ಭದಲ್ಲಿ ತುರ್ತುಸ್ಥಿತಿ ಇದ್ದರೆ ಕೊವಿಡ್ ಟೆಸ್ಟ್ ಕಾರಣಕ್ಕೆ ರೋಗಿಗೆ ಚಿಕಿತ್ಸೆ ನೀಡುವಲ್ಲಿ ವಿಳಂಬ ಮಾಡಬಾರದು ಎಂದು ಸ್ಪಷ್ಟಪಡಿಸಲಾಗಿದೆ.

ಯಾವುದೇ ಆಸ್ಪತ್ರೆಯಲ್ಲಿ ಕೊವಿಡ್ ಪರೀಕ್ಷಾ ವ್ಯವಸ್ಥೆ ಇಲ್ಲದಿದ್ದರೆ ರೋಗಿಗಳನ್ನು ಬೇರೆ ಆರೋಗ್ಯ ಸಂಸ್ಥೆಗಳಿಗೆ ಶಿಫಾರಸು ಮಾಡಬಾರದು. ಶಸ್ತ್ರಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೇತರ ನೋವು ರಹಿತ ಚಿಕಿತ್ಸಾ ಪ್ರಕ್ರಿಯೆಗಳಿಗೆ ಒಳಪಡುವವರಿಗೆ ರೋಗ ಲಕ್ಷಣಗಳು ಇಲ್ಲದಿದ್ದರೆ ಟೆಸ್ಟ್ ಅಗತ್ಯವಿಲ್ಲ. ಒಳರೋಗಿಗಳಾಗಿ ದಾಖಲಾಗಿರುವ ರೋಗಿಗಳನ್ನು ವಾರಕ್ಕೆ ಒಂದಕ್ಕಿಂತ ಹೆಚ್ಚು ಸಲ ಪರೀಕ್ಷಿಸುವಂತಿಲ್ಲ ಎಂದು ತಿಳಿಸಲಾಗಿದೆ.

ಯಾರಿಗೆಲ್ಲ ಪರೀಕ್ಷೆಯಿಂದ ವಿನಾಯಿತಿ?

ಸಮುದಾಯ ಮಟ್ಟದಲ್ಲಿ ರೋಗ ಲಕ್ಷಣ ಇಲ್ಲದಿರುವ ವ್ಯಕ್ತಿಗಳಿಗೆ ಟೆಸ್ಟ್ ಬೇಕಿಲ್ಲ. ಪಾಸಿಟಿವ್ ವ್ಯಕ್ತಿಗಳ ಸಂಪರ್ಕದಲ್ಲಿದ್ದು, ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದಲ್ಲಿ ಟೆಸ್ಟ್ ಅಗತ್ಯವಿಲ್ಲ. ಸರ್ಕಾರ ಸೂಚಿಸಿರುವ ರಾಜ್ಯಗಳು ಹೊರತುಪಡಿಸಿ ಇತರೆ ರಾಜ್ಯಗಳಿಗೆ ಪ್ರಯಾಣ ಬೆಳಸುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಿಲ್ಲ ಎಂದು ತಿಳಿಸಲಾಗಿದೆ.

ಐಸಿಎಂಅರ್ ಸಲಹೆಯನ್ವಯ ಪರಿಷ್ಕರಣೆ

ಟೆಸ್ಟಿಂಗ್ ವಿಧಾನ ಬದಲಿಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Council of Medical Research – ICMR) ಕರ್ನಾಟಕ ಸರ್ಕಾರಕ್ಕೆ ಸಲಹೆ ಮಾಡಿತ್ತು. ಸಿಕ್ಕಸಿಕ್ಕವರಿಗೆಲ್ಲಾ ಟೆಸ್ಟಿಂಗ್ ಮಾಡುವ ಅಗತ್ಯ ಇಲ್ಲ. ಬದಲಾದ ಕೊರೋನಾ ಸನ್ನಿವೇಶಕ್ಕೆ ತಕ್ಕಂತೆ ಟೆಸ್ಟಿಂಗ್ ಪ್ಲಾನ್ ಬದಲಿಸಬೇಕೆಂದು ಸಲಹೆ ಮಾಡಿತ್ತು. ಇದೀಗ ಐಸಿಎಂಆರ್ ನೀಡಿದ ಸಲಹೆಗಳಿಗೆ ಅನುಗುಣವಾಗಿ ಮಾರ್ಗಸೂಚಿ ಪರಿಷ್ಕರಿಸಲಾಗಿದೆ.

ಇದನ್ನೂ ಓದಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 2,86,384 ಕೊರೊನಾ ಪ್ರಕರಣ ಪತ್ತೆ, 573 ಜನರು ಸೋಂಕಿನಿಂದ ಸಾವು ಇದನ್ನೂ ಓದಿ: Covid 19 Karnataka Update: ಕರ್ನಾಟಕದಲ್ಲಿ 48,905 ಮಂದಿಗೆ ಕೊರೊನಾ ಸೋಂಕು, ಕೊವಿಡ್​ನಿಂದ 39 ಮಂದಿ ಸಾವು

Published On - 10:31 pm, Thu, 27 January 22