
ಬೆಂಗಳೂರು, (ಆಗಸ್ಟ್ 26): ಮಾಜಿ ಸಚಿವ ಮುರುಗೇಶ್ ನಿರಾಣಿ (murugesh nirani )ಪುತ್ರ ವಿಜಯ್ ನಿರಾಣಿ ವಿರುದ್ಧದ ಶುಗರ್ ಕಾರ್ಖಾನೆ ಸ್ಫೋಟಕ ಪ್ರಕರಣಕ್ಕೆ (Nirani sugar factory Blast Case) ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (supreme court), ಹೈಕೋರ್ಟ್ ಆದೇಶವನ್ನು ತಳ್ಳಿಹಾಕಿದೆ. ಹೌದು…2018ರಲ್ಲಿ ಮುಧೋಳದ ಕುಳಲಿ ಗ್ರಾಮದಲ್ಲಿರುವ ನಿರಾಣಿ ಶುಗರ್ಸ್ ನಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸ್ಫೋಟ ಸಂಭವಿಸಿ ಆರು ಜನ ಕಾರ್ಮಿಕರು ಸಾವಿಗೀಡಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್ ನಿರಾಣಿ ವಿರುದ್ಧ ಕಾನೂನು ಪ್ರಕಾರ ತನಿಖೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
2018ರಲ್ಲಿ ಮುಧೋಳದ ಕುಳಲಿ ಗ್ರಾಮದಲ್ಲಿರುವ ನಿರಾಣಿ ಶುಗರ್ಸ್ ನಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸ್ಫೋಟ ಸಂಭವಿಸಿ ಆರು ಜನ ಕಾರ್ಮಿಕರು ಸಾವಿಗೀಡಾಗಿದ್ದರು. ಆ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ 2023ರಲ್ಲಿ ಬ್ರೇಕ್ ಹಾಕಿತ್ತು. ಆದರೆ, ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ, ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರಿಂಕೋರ್ಟ್, ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ ತನಿಖೆಗೆ ಆದೇಶಿಸಿದೆ.
ನಿರಾಣಿ ಶುಗರ್ಸ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾಗಿರುವ ವಿಜಯ್ ನಿರಾಣಿ, ಮುಧೋಳದ ಕುಳಲಿ ಗ್ರಾಮದಲ್ಲಿರುವ ನಿರಾಣಿ ಶುಗರ್ಸ್‌ನ ಡಿಸ್ಟಿಲರಿ ಫ್ಯಾಕ್ಟರಿಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕವೊಂದನ್ನು (ಇಟಿಪಿ) ಸ್ಥಾಪಿಸಿದ್ದರು. ಆ ಘಟಕಕ್ಕೆ ಅನುಮತಿ ಪಡೆದಿರಲಿಲ್ಲ. ಆ ಘಟಕದಲ್ಲಿ 2018ರ ಡಿಸೆಂಬರ್ 16ರಂದು ಬಾಯ್ಲರ್ ಸ್ಫೋಟಗೊಂಡಿದ್ದು. ಆ ದುರ್ಘಟನೆಯಲ್ಲಿ ಆರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಸಂಬಂಧ ಪ್ರಾಥಮಿಕ ತನಿಖೆ ನಡೆಸಿದ್ದ ಪೊಲೀಸರು, ವಿಜಯ್ ನಿರಾಣಿಯವರ ವಿರುದ್ಧ 2019ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಬಳಿಕ ವಿಜಯ್ ಹಾಗೂ ಅವರ ಕಾರ್ಖಾನೆಯ ಟೆಕ್ನಿಕಲ್ ನಿರ್ದೇಶಕರಾಗಿದ್ದ ಎಂ.ಎಸ್.ಹಟ್ಟಿಕಲ್ ಅವರನ್ನು ವಿಚಾರಣೆಗೊಳಪಡಿಸಿದ್ದರು. ಈ ಸಂಬಂಧ ವಿಜಯ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣ ಸಂಬಂಧ ವಿಜಯ್ ನಿರಾಣಿಯವರ ವಿರುದ್ಧ ಕಾನೂನು ಕ್ರಮಕ್ಕೆ ಹೈಕೋರ್ಟ್ ಬ್ರೇಕ್ ಹಾಕಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.