ಮಲೆನಾಡಿನಲ್ಲಿ ಹೆಚ್ಚಾಗ್ತಿದೆ ಕಲ್ಲು ಗಣಿಗಾರಿಕೆ: ಕಾರ್ಮಿಕರು ಬಲಿಯಾಗುತ್ತಿದ್ದರೂ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಸೈಲೆಂಟ್

ಶಿವಮೊಗ್ಗ ತಾಲೂಕಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಿರಂತರವಾಗಿ ನಡೀತಿದೆ. ಮೊನ್ನೆ ಅಕ್ರಮ ಕಲ್ಲು ಗಣಿಗಾರಿಕೆಗೆ ಇಬ್ಬರು ಯುವಕರು ಬಲಿಯಾಗಿದ್ರು. ಅಕ್ರಮ ಗಣಿ ದಂಧೆಕೋರರು ಈ ಪ್ರಕರಣವನ್ನ ಮುಚ್ಚಿ ಹಾಕಿದ್ದಾರೆ. ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೀತಿದ್ರೂ ಯಾರು ಗಮನ ಹರಿಸುತ್ತಿಲ್ಲ. ಅದ್ರ ಡಿಟೇಲ್ಸ್ ಇಲ್ಲಿದೆ.

ಮಲೆನಾಡಿನಲ್ಲಿ ಹೆಚ್ಚಾಗ್ತಿದೆ ಕಲ್ಲು ಗಣಿಗಾರಿಕೆ: ಕಾರ್ಮಿಕರು ಬಲಿಯಾಗುತ್ತಿದ್ದರೂ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಸೈಲೆಂಟ್
ಕಲ್ಲು ಗಣಿಗಾರಿಕೆ
Follow us
ಆಯೇಷಾ ಬಾನು
|

Updated on: Dec 27, 2020 | 9:01 AM

ಶಿವಮೊಗ್ಗ ತಾಲೂಕಿನ ಗೆಜ್ಜೆನಹಳ್ಳಿ, ಕೋಟೆ ಗಂಗೂರು, ಕಲ್ಲುಗಂಗೂರು, ಜಕಾತಿಕೊಪ್ಪ, ದೇವಕಾತಿಕೊಪ್ಪ, ಅಬ್ಬಲಗೇರಿ ಮುಂತಾದ ಗ್ರಾಮಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ, ಕ್ರಶರ್ ದಂಧೆ ಜೋರಾಗಿದೆ. ಈ ಭಾಗದಲ್ಲಿ ಅಕ್ರಮ ಗಣಿಗಾರಿಕೆಗೆ ನಿರಂತರವಾಗಿ ಕಾರ್ಮಿಕರು ಬಲಿ ಆಗ್ತಿದ್ದಾರೆ. ಮೊನ್ನೆ ಬೆಳ್ಳಂಬೆಳಗ್ಗೆ ಗೆಜ್ಜೆನಹಳ್ಳಿ ಗ್ರಾಮದಲ್ಲಿ 18 ವರ್ಷದ ಮೋಹನ ಮತ್ತು ರಘು ಅನ್ನೋರು ಬಂಡೆಗೆ ಕುಳಿ ಒಡೀತಿದ್ರಂತೆ. ಈ ವೇಳೆ ಕಲ್ಲು ಸ್ಫೋಟಗೊಂಡು ಸುಮಾರು 50 ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿದ್ದರು.

ಯುವಕರು ಮೃತಪಡ್ತಿದ್ದಂತೆ ಗಣಿ ದಂಧೆಕೋರರು ತಮ್ಮ ಪ್ರಭಾವ ಬೀರಿ ಮೃತ ಕುಟುಂಬಸ್ಥರಿಗೆ ಅಂತ್ಯಕ್ರಿಯೆಗೆ ತಲಾ 25 ಸಾವಿರ ಹಣ ನೀಡಿದ್ದಾರೆ. ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರದ ಭರವಸೆ ನೀಡಿದ್ದಾರೆ. ಇದಕ್ಕೂ ಮೊದಲು ಇಬ್ಬರು ಉತ್ತರ ಭಾರತದ ಕಾರ್ಮಿಕರು, ತಾಯಿ-ಮಗಳು ಅಕ್ರಮ ಗಣಿಗಾರಿಕೆಗೆ ಬಲಿಯಾಗಿದ್ರೂ. ಯಾವುದೇ ಕ್ರಮ ಕೈಗೊಂಡಿಲ್ಲ ಅಂತಾ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತೋರೇ ಇಲ್ಲ ಶಿವಮೊಗ್ಗ ನಗರದಿಂದ ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಕಲ್ಲಿನ ಕ್ವಾರಿಗಳಿವೆ. ಇದರಲ್ಲಿ ಕೇವಲ 7 ಕ್ವಾರಿಗಳಿಗೆ ಮಾತ್ರ ಸರ್ಕಾರ ಅನುಮತಿ ನೀಡಿದೆ. ಉಳಿದ ಕ್ವಾರಿಗಳಿಗೆ ಅನುಮತಿ ಇಲ್ಲ. ಕ್ವಾರಿ ಮತ್ತು ಕ್ರಷರ್ ರಾಜಕಾರಣಿಗಳದ್ದಾಗಿವೆ. ಹೀಗಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಯಾರು ಧ್ವನಿ ಎತ್ತೋರೇ ಇಲ್ಲದಂತಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಅಕ್ರಮ ಗಣಿಗಾರಿಕೆಯಿಂದ ಮಾಮೂಲು ಹೋಗುತ್ತದೆ ಅನ್ನೋ ಆರೋಪ ಕೇಳಿ ಬಂದಿದೆ.

ಸಿಎಂ ತವರು ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೀತಿದೆ. ನೂರಾರು ಕಾರ್ಮಿಕರು ಯಾವುದೇ ಸುರಕ್ಷತೆಗಳಿಲ್ಲದೇ ಗಣಿಗಳಲ್ಲಿ ಕೆಲಸ ಮಾಡ್ತಿದ್ದಾರೆ. ಬಡವರ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು, ಕಾನೂನು ಬಾಹಿರವಾಗಿ ದುಡಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಪ್ರಾಣ ಕಳೆದುಕೊಂಡರೆ ಕುಟುಂಬಗಳಿಗೆ ಪರಿಹಾರ ನೀಡಿ ಪ್ರಕರಣಗಳನ್ನ ಮುಚ್ಚಿಹಾಕ್ತಿದ್ದಾರೆ. ಗಾಢನಿದ್ರೆಯಲ್ಲಿರುವ ಅಧಿಕಾರಿಗಳು ಇನ್ನೂ ದೊಡ್ಡ ಅನಾಹುತ ಆಗುವ ಮೊದಲೇ ಎಚ್ಚೆತ್ತು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವತ್ತ ಗಮನ ಹರಿಸಬೇಕಿದೆ.

ಕಲ್ಲು ಗಣಿಗಾರಿಕೆ ಮಾಫಿಯಾ ವಿರುದ್ಧ ತೊಡೆ ತಟ್ಟಿದ್ದ KAS ಅಧಿಕಾರಿ ಟ್ರಾನ್ಸ್​ಫರ್​!