ಕರ್ನಾಟಕ ರಾಜ್ಯಾದ್ಯಂತ ಮೇ 4ರವರೆಗೆ ಪರಿಷ್ಕೃತ ಮಾರ್ಗಸೂಚಿ ಜಾರಿ; ನಿಯಮ ಸಡಿಲಕ್ಕೆ ಅವಕಾಶವಿಲ್ಲವೆಂದ ಸರ್ಕಾರ

ಜರನ ಒತ್ತಡಕ್ಕೆ ಮಣಿದು ನಿಯಮ ಸಡಿಲಿಸಿದರೆ ಸೋಂಕು ಹೆಚ್ಚಾಗಬಹುದು ಎಂಬ ಆತಂಕ ಸರ್ಕಾರದ ವಲಯದಲ್ಲಿ ವ್ಯಕ್ತವಾಗಿದೆ. ಹೀಗಾಗಿ ನಿನ್ನೆಯ ಮಾರ್ಗಸೂಚಿಗೆ ಬದ್ಧರಿರಲು ಉನ್ನತ ಅಧಿಕಾರಿಗಳೂ ತೀರ್ಮಾನಿಸಿದ್ದಾರೆ.

  • TV9 Web Team
  • Published On - 20:14 PM, 22 Apr 2021
ಕರ್ನಾಟಕ ರಾಜ್ಯಾದ್ಯಂತ ಮೇ 4ರವರೆಗೆ ಪರಿಷ್ಕೃತ ಮಾರ್ಗಸೂಚಿ ಜಾರಿ; ನಿಯಮ ಸಡಿಲಕ್ಕೆ ಅವಕಾಶವಿಲ್ಲವೆಂದ ಸರ್ಕಾರ
ಲಾಕ್​ಡೌನ್ (ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಮಾರ್ಗಸೂಚಿ ಜಾರಿಗೊಳಿಸಿರುವ ಸರ್ಕಾರವು ಯಾವುದೇ ಕಾರಣಕ್ಕೂ ನಿಯಮಗಳಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಬುಧವಾರ (ಏಪ್ರಿಲ್ 21) ಹೊರಡಿಸಿರುವ ಮಾರ್ಗಸೂಚಿಗೆ ಬದ್ಧವಾಗಿರಲು ಸರ್ಕಾರ ನಿರ್ಧರಿಸಿದೆ. ಮಾರ್ಗಸೂಚಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲು ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.

ಜರನ ಒತ್ತಡಕ್ಕೆ ಮಣಿದು ನಿಯಮ ಸಡಿಲಿಸಿದರೆ ಸೋಂಕು ಹೆಚ್ಚಾಗಬಹುದು ಎಂಬ ಆತಂಕ ಸರ್ಕಾರದ ವಲಯದಲ್ಲಿ ವ್ಯಕ್ತವಾಗಿದೆ. ಹೀಗಾಗಿ ನಿನ್ನೆಯ ಮಾರ್ಗಸೂಚಿಗೆ ಬದ್ಧರಿರಲು ಉನ್ನತ ಅಧಿಕಾರಿಗಳೂ ತೀರ್ಮಾನಿಸಿದ್ದಾರೆ. ನಿಯಮ ಸಡಿಲಿಸುವ ಕುರಿತು ಮುಖ್ಯಮಂತ್ರಿ ಅಧಿಕೃತ ನಿವಾಸದಲ್ಲಿ ಇಂದು ಸುಮಾರು ಒಂದು ತಾಸು ಚರ್ಚೆ ನಡೆಯಿತು. ಕೊನೆಗೆ ನಿಯಮ ಸಡಿಲಿಸದಿರಲು ಸರ್ಕಾರ ತೀರ್ಮಾನ ಕೈಗೊಂಡಿತು.

ಕೊವಿಡ್​ ಪರಿಷ್ಕೃತ ಮಾರ್ಗಸೂಚಿ ಜಾರಿ ಕುರಿತು ಬಿಜೆಪಿ ಶಾಸಕ ಅಭಯ್ ಪಾಟೀಲ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ಬೇಕಾಬಿಟ್ಟಿಯಾಗಿ ಮಾರ್ಗಸೂಚಿ ಜಾರಿ ಮಾಡಬಾರದು. ಬೆಳಗ್ಗೆಯೊಂದು ಸಂಜೆಯೊಂದು ಮಾರ್ಗಸೂಚಿ ಜಾರಿ ಮಾಡಿದರೆ ಜನರಿಗೆ ಕಷ್ಟವಾಗುತ್ತದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದಿಢೀರ್ ಎಂದು ಹೊಸ ಮಾರ್ಗಸೂಚಿ ಜಾರಿಗೊಳಿಸಿದರೆ ಬೀದಿ ವ್ಯಾಪಾರಿಗಳು, ವ್ಯಾಪಾರಸ್ಥರು, ಜನರಿಗೆ ಸಮಸ್ಯೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬಿಎಂಟಿಸಿ ಬಸ್ ಸಂಚಾರ ಬಗ್ಗೆ ಸಂಸ್ಥೆಯು ಮಾರ್ಗಸೂಚಿ ಪ್ರಕಟಿಸಿದೆ. ಬಿಎಂಟಿಸಿ ಬಸ್​ಗಳಲ್ಲಿ ಶೇ 50ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ವೀಕೆಂಡ್ ಕರ್ಫ್ಯೂ ವೇಳೆ ಪರಿಸ್ಥಿತಿ ಮತ್ತು ಪ್ರಯಾಣಿಕರ ಲಭ್ಯತೆ ನೋಡಿಕೊಂಡು ಬಸ್​ ಸಂಚಾರದ ಬಗ್ಗೆ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಪ್ರಯಾಣಿಕರ ಲಭ್ಯತೆ ಆಧರಿಸಿ ಬಸ್​ ಸಂಚಾರದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಬಸ್​ಗಳಲ್ಲಿ ಕೊರೊನಾ ಮಾರ್ಗಸೂಚಿ ಅನುಸರಿಸುವುದು ಕಡ್ಡಾಯ ಎಂದು ಸಂಸ್ಥೆಯು ತಿಳಿಸಿದೆ.

(No changes in New Guidelines Implemented in Karnataka says govt)

ಇದನ್ನೂ ಓದಿ: Explainer: ಮಕ್ಕಳನ್ನೂ ಬಾಧಿಸುತ್ತಿದೆ ಕೊರೊನಾ; ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಈ ಸ್ಟೋರಿ‌ ಮಿಸ್ ಮಾಡದೇ ಓದಿ

ಇದನ್ನೂ ಓದಿ: Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ