
ಬೆಂಗಳೂರು, ಜುಲೈ 21: ಕರ್ನಾಟಕದಲ್ಲಿ ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಸರ್ಕಾರದ ನಿರ್ಧಾರಕ್ಕೆ, ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ಪೈಕಿ ಫೋನ್ ಪೇ (Phonepe) ಕಂಪನಿ ಸಿಇಒ ಸಮೀರ್ ನಿಗಮ್ (Sameer Nigam) ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಕರ್ನಾಟಕ, ಕನ್ನಡಿಗರ ಬಗ್ಗೆ ಕುಹುಕವಾಡಿದ್ದರು. ಹೀಗಾಗಿ ಬಾಯ್ಕಾಟ್ ಬಿಸಿ ಮುಟ್ಟಿಸಿದ್ದರು. ಇದೀಗ ಸಮಸ್ತ ಕರುನಾಡಿನ ಜನರಲ್ಲಿ ಕ್ಷಮೆಯಾಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಫೋನ್ ಪೇ ಸಿಇಒ ಸಮೀರ್ ನಿಗಮ್, ಕರ್ನಾಟಕ, ಕನ್ನಡಿಗರನ್ನು ಅವಮಾನಿಸುವ ಉದ್ದೇಶವಿರಲಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ಯಾರದ್ದಾದರೂ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆಯಾಚಿಸುವೆ. ಸಮಸ್ತ ಕರುನಾಡಿನ ಜನರಲ್ಲಿ ಕ್ಷಮೆಯಾಚಿಸುತ್ತೇನೆಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಕಳೆದ ವಾರ ನಾನು ನೀಡಿದ ವೈಯಕ್ತಿಕ ಹೇಳಿಕೆಗೆ ಸಂಬಂಧಿಸಿದಂತೆ ತೀವ್ರ ವಿರೋಧ ವ್ಯಕ್ತವಾಗಿರುವುದನ್ನು ಮಾಧ್ಯಮ ವರದಿಗಳನ್ನು ಓದಿದ್ದೇನೆ. ಕರ್ನಾಟಕವನ್ನು ಮತ್ತು ಕನ್ನಡಿಗರನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ ಎಂಬುವುದನ್ನು ಪ್ರಮುಖವಾಗಿ ಸ್ಪಷ್ಟಪಡಿಸಲು ಬಯಸುತ್ತೇನೆ.
ನನ್ನ ಹೇಳಿಕೆಯಿಂದ ಯಾರದ್ದಾದರೂ ಭಾವನೆಗಳಿಗೆ ನೋವುಂಟುಮಾಡಿದರೆ, ನಾನು ನಿಜವಾಗಿಯೂ ಕ್ಷಮೆಯಾಚಿಸುತ್ತೇನೆ ಮತ್ತು ನಿಮಗೆ ಬೇಷರತ್ ಕ್ಷಮೆಯನ್ನು ನೀಡಲು ಬಯಸುತ್ತೇನೆ. ಕನ್ನಡ ಮತ್ತು ಇತರೆ ಎಲ್ಲಾ ಭಾರತೀಯ ಭಾಷೆಗಳ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ವಾಸ್ತವವಾಗಿ, ಭಾಷಾ ವೈವಿಧ್ಯತೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯು ಎಲ್ಲಾ ಭಾರತೀಯರು ಹೆಮ್ಮೆಪಡಬೇಕಾದ ರಾಷ್ಟ್ರೀಯ ಆಸ್ತಿಯಾಗಿದೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಎಲ್ಲಾ ಭಾರತೀಯರು ಸ್ಥಳೀಯ ಮತ್ತು ಸಾಂಸ್ಕೃತಿಕ ಮಾನದಂಡಗಳನ್ನು ಗೌರವಿಸಬೇಕು ಮತ್ತು ಆಚರಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಫೋನ್ ಪೇ ವಿರುದ್ಧ ಸಿಡಿದೆದ್ದ ಕನ್ನಡಿಗರು; ರಾಜ್ಯದಲ್ಲಿ #Boycott PhonePe ಅಭಿಯಾನ
ರಾಜ್ಯದ ನೀರು ಕುಡಿದು, ಕನ್ನಡಿಗರನ್ನೇ ಅಪಮಾನ ಮಾಡುವಂತೆ ಸಮೀರ್ ನಿಗಮ್ ಅವರು ಟ್ವೀಟ್ ಮಾಡಿದ್ದು ರಾಜ್ಯದಲ್ಲಿ ಕಿಡಿ ಹೊತ್ತಿಸಿತ್ತು. ಹಾಗಾಗಿ ಬಾಯ್ಕಾಟ್ ಅಭಿಯಾನ ಶುರುವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:31 pm, Sun, 21 July 24