ನಿಮ್ಮದು ಸಾರ್ವಭೌಮ ಸರ್ಕಾರ, ಬಿಸಿಯೂಟ ಆರಂಭಿಸಲು ಕೇಂದ್ರ ಸರ್ಕಾರದ ಸೂಚನೆಗೆ ಕಾಯುವ ಅಗತ್ಯವಿಲ್ಲ; ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಕೋರ್ಟ್
Midday Meal: ವಿದ್ಯಾರ್ಥಿಗಳಿಗೆ ಆಹಾರದ ವ್ಯವಸ್ಥೆಯನ್ನು ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಏಕೆಂದರೆ, ಹಸಿದ ಹೊಟ್ಟೆಯಲ್ಲಿ ಓದಲು ಸಾಧ್ಯವಾಗುವುದಿಲ್ಲ ಅಲ್ಲವೇ..? ಎಂದು ಕೋರ್ಟ್ ಪ್ರಶ್ನಿಸಿತು.

ಬೆಂಗಳೂರು: ಶಾಲೆಗಳಲ್ಲಿ ಬಿಸಿಯೂಟ ಮತ್ತು ಅಂಗನವಾಡಿಗಳಲ್ಲಿ ಬೇಯಿಸಿದ ಆಹಾರವನ್ನು ಕೊರೊನಾ ಪೂರ್ವದಂತೆ ಒದಗಿಸುವ ಕುರಿತು ಮಾರ್ಚ್ 30ರ ಒಳಗೆ ಪ್ರತಿಕ್ರಿಯಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಉಚ್ಛ ನ್ಯಾಯಾಲಯ ನಿರ್ದೇಶನ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಏಪ್ರಿಲ್ 10ರವರೆಗೆ ಒಣ ಆಹಾರಗಳನ್ನು ಅಂಗನವಾಡಿಗಳಲ್ಲಿ ಒದಗಿಸಲಾಗುತ್ತದೆ. ಮತ್ತು ಬಿಸಿಯೂಟವನ್ನು ಮರು ಆರಂಭಿಸಲು ಕೇಂದ್ರ ಸರ್ಕಾರ ನೀಡುವ ಸೂಚನೆಗಾಗಿ ಕಾಯುತ್ತಿದ್ದೇವೆ ಎಂದು ಸರ್ಕಾರ ತಿಳಿಸಿತ್ತು. ಸರ್ಕಾರದ ಈ ಪ್ರತಿಕ್ರಿಯೆಯನ್ನು ಆಲಿಸಿದ ಕೋರ್ಟ್ ಇಂದು ಇನ್ನೊಂದು ಸೂಚನೆ ನೀಡಿದೆ.
ಕೊರೊನಾ ಲಾಕ್ಡೌನ್ನಿಂದ ಅಂಗನವಾಡಿ ಮತ್ತು ಶಾಲೆಗಳು ಸ್ಥಗಿತಗೊಂಡಿದ್ದವು. ಆದರೆ ಇದೀಗ ಇವೆರಡೂ ಮರು ಆರಂಭಗೊಂಡಿದ್ದು, ವಿದ್ಯಾರ್ಥಿಗಳಿಗೆ ಆಹಾರದ ವ್ಯವಸ್ಥೆಯನ್ನು ಕೊರೊನಾ ಪೂರ್ವದಂತೆಯೇ ಮರು ಆರಂಭಿಸಲಾಗಿದೆಯೇ ಎಂದು ಸ್ಪಷ್ಟನೆ ನೀಡುವಂತೆ ಕೋರ್ಟ್ ತಿಳಿಸಿದೆ.
ಹಸಿದ ಹೊಟ್ಟೆಯಲ್ಲಿ ಓದಲು ಸಾಧ್ಯವಾಗುವುದಿಲ್ಲ ಅಲ್ಲವೇ..? ಸಂವಿಧಾನದ ಆರ್ಟಿಕಲ್ 21A ಪ್ರಕಾರ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕಾಗಿದೆ. ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಆಹಾರ ಒದಗಿಸುವುದು ಸಹ ಮೂಲಭೂತ ಹಕ್ಕಿನ ವ್ಯಾಪ್ತಿಗೆ ಸೇರ್ಪಡೆಗೊಳ್ಳುತ್ತದೆ. ಅದು ಯಾವುದೇ ರೂಪದಲ್ಲಿದ್ದರೂ ಸಹ, ವಿದ್ಯಾರ್ಥಿಗಳಿಗೆ ಆಹಾರದ ವ್ಯವಸ್ಥೆಯನ್ನು ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಏಕೆಂದರೆ, ಹಸಿದ ಹೊಟ್ಟೆಯಲ್ಲಿ ಓದಲು ಸಾಧ್ಯವಾಗುವುದಿಲ್ಲ ಅಲ್ಲವೇ..? ಎಂದು ಕೋರ್ಟ್ ಪ್ರಶ್ನಿಸಿತು.
ಇದಕ್ಕೂ ಮುನ್ನ, ವಿಚಾರಣೆಯ ಆರಂಭದಲ್ಲಿ ರಾಜ್ಯ ಸರ್ಕಾರ, ‘ಕೊರೊನಾ ಕಾರಣದಿಂದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಅಥವಾ ಆಹಾರದ ವ್ಯವಸ್ಥೆಯನ್ನು ಮಾಡಲು ಸಾಧ್ಯವಾಗಿಲ್ಲ. ಕೇರಳದ ಗಡಿಯಂಚಿನ ಕೆಲ ಶಾಲಾ ವ್ಯಾಪ್ತಿಯಲ್ಲಿ ಈಗಲೂ ಕೊರೊನಾ ಸೋಂಕಿನ ಭೀತಿ ಅಧಿಕವಾಗಿದೆ. ಇದು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೊಳಿಸಲು ತೊಡಕಾಗಿದೆ’ ಎಂದು ತಿಳಿಸಿತ್ತು.
ಆದರೆ, ಸರ್ಕಾರದ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕೋರ್ಟ್, ‘ನೀವು ಶಾಲೆಗಳನ್ನು ಮರು ತೆರೆಯುತ್ತೀರಿ ಎಂದಾದಲ್ಲಿ, ಬಿಸಿಯೂಟದಂತಹ ಆಹಾರ ಒದಗಿಸುವ ವ್ಯವಸ್ಥೆಯನ್ನೂ ಒದಗಿಸಬೇಕಿತ್ತು. ಶಾಲೆ ತೆರೆಯಲು ಯೋಜನೆ ರೂಪಿಸುವವರಿಗೆ ಮಕ್ಕಳಿಗೆ ಆಹಾರ ಒದಗಿಸಲು ಯೋಜನೆ ರೂಪಿಸಲು ಕಷ್ಟವಾಗದು ಅಲ್ಲವೇ..? ಎಂದು ಸರ್ಕಾರಕ್ಕೆ ಚಾಟಿ ಬೀಸಿತ್ತು.
ಶಾಲೆಗಳ ಜತೆ ಬಿಸಿಯೂಟವನ್ನು ಪುನಃ ಆರಂಭಿಸಿದ್ದರೆ ಮಕ್ಕಳು ಶಾಲೆಗಳತ್ತ ಆಕರ್ಷಿತರಾಗುತ್ತಿದ್ದರು. ಈ ಚಿಂತನೆ ನಿಮಗೆ ಹೊಳೆಯಲಿಲ್ಲವೇ ? ಎಂದು ಪ್ರಶ್ನಿಸಿತು. ಅಲ್ಲದೆ, ‘ಬಿಸಿಯೂಟ ಆರಂಭಿಸಲು ನೀವು ಕೇಂದ್ರದ ಸೂಚನೆಗಾಗಿ ಕಾಯುವ ಪ್ರಮೇಯವೇ ಉದ್ಭವಿಸುವುದಿಲ್ಲ. ಏಕೆಂದರೆ, ನೀವೊಂದು ಸಾರ್ವಭೌಮ ಸರ್ಕಾರವಾಗಿದ್ದೀರಿ‘ ಎಂದು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿತು.
ರಾಜ್ಯ ಸರ್ಕಾರ ಅಂಗನವಾಡಿ ಮತ್ತು ಶಾಲೆಗಳಲ್ಲಿ ಆಹಾರ ಸೌಲಭ್ಯವನ್ನು ಪುನಃ ವ್ಯವಸ್ಥಿತವಾಗಿ ಆರಂಭಿಸುವ ಕುರಿತು ಮಾರ್ಚ್ 30ರ ಮಧ್ಯಾಹ್ನ 2:30ರ ಒಳಗೆ ಪ್ರತಿಕ್ರಿಯೆ ನೀಡಲು ಸೂಚಿಸಿದೆ.
ಇದನ್ನೂ ಓದಿ:



