ಬೆಂಗಳೂರು, ಸೆಪ್ಟೆಂಬರ್ 02: ನಾನಾಗಲಿ, ನಮ್ಮ ಕುಟುಂಬದವರಾಗಲಿ ಸರ್ಕಾರದಿಂದ ಒಂದೇ ಒಂದು ಸೈಟ್ ಪಡೆದುಕೊಂಡಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (MB Patil) ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಜಿ-ಕೆಟಗರಿ, ಕೆಹೆಚ್ಬಿ, ಕೆಐಎಡಿಬಿಯ ಸೈಟ್ ಪಡೆದಿಲ್ಲ. ನಮ್ಮ ಕುಟುಂಬಕ್ಕೂ ಬಾಗ್ಮನೆ ಕುಟುಂಬಕ್ಕೂ ಸುಮಾರು 25-30 ವರ್ಷಗಳಿಂದ ಪರಸ್ಪರ ಒಡನಾಟವಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಅಭಿವೃದ್ಧಿಗೆ ಪ್ರೆಸ್ಟೀಜ್, ಬ್ರಿಗೇಡ್, ಎಂಬೆಸಿ ಮಂತ್ರಿ, ಬಾಗ್ಮನೆ ಸಮೂಹಗಳು ಅಪಾರ ಕೊಡುಗೆ ನೀಡಿವೆ. ಎಲ್ಲ ಸರ್ಕಾರಗಳ ಆಡಳಿತಾವಧಿಯಲ್ಲೂ ಸೈಟ್ ಪಡೆದಿವೆ. ಈ ಸಂಸ್ಥೆಗಳು ಅಭಿವೃದ್ಧಿಗೆ ಕೊಡುಗೆ ನೀಡಿರುವುದನ್ನು ವಿಧಾನಪರಿಷತ್ತ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಇದನ್ನೂ ಓದಿ: ನಾನೇ ಸ್ವತಃ ಬಾಗಲಕೋಟೆಗೆ ಬಂದು ಸತ್ಯಾಂಶ ಬಿಚ್ಚಿಡುತ್ತೇನೆ: ನಿರಾಣಿಗೆ ಟಾಂಗ್ ಕೊಟ್ಟ ಎಂಬಿ ಪಾಟೀಲ್
ಬಾಗ್ಮನೆ ವ್ಯವಹಾರಕ್ಕೂ ನಮ್ಮ ಕುಟುಂಬಕ್ಕೂ ಸಂಬಂಧವಿಲ್ಲ. ಸರ್ಕಾರದ ಮಟ್ಟದಲ್ಲಿ ಆಗುವ ನಿರ್ಧಾರಗಳಿಗೂ ಸಂಬಂಧವಿಲ್ಲ. ಬಾಗ್ಮನೆ ಸಂಸ್ಥೆಯವರು ಬೆಂಗಳೂರಿನ ಏರೋಸ್ಪೇಸ್ ಪಾರ್ಕಿನಲ್ಲಿ ಕೈಗಾರಿಕಾ ನಿವೇಶನ ಕೋರಿ ಸರ್ಕಾರಕ್ಕೆ ಅರ್ಜಿ ಹಾಕಿದ್ದರು. ನಾವು ಸಂಸ್ಥೆಯ ಅರ್ಹತೆ, ಸಾಧನೆ ಪರಿಗಣಿಸುತ್ತೇವೆ ಅಷ್ಟೇ. ಇಂತಹ ಸರಳ ಸತ್ಯ ಗೊತ್ತಾಗದೆ ಇರುವುದು ಆಶ್ಚರ್ಯಕರ ಎಂದು ಛಲವಾದಿ ನಾರಾಯಣಸ್ವಾಮಿಗೆ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಸರ್ಕಾರಕ್ಕೆ ಕೊವಿಡ್ ಹಗರಣ ಸಂಬಂಧ ವರದಿ ಸಲ್ಲಿಕೆ ವಿಚಾರವಾಗಿ ಮಾತನಾಡಿದ್ದು, ಕೊವಿಡ್ ವೇಳೆ ಮಾನವೀಯ ದೃಷ್ಟಿಯಿಂದ ಕೆಲಸ ಮಾಡಬೇಕು. ಆದರೆ ಸಾವಿರಾರು ಕೋಟಿ ರೂ. ಲೂಟಿ ಮಾಡಿದ್ದಾರೆ. ನಮ್ಮ ವೈದ್ಯಕೀಯ ಕಾಲೇಜಿನಲ್ಲಿ ನಾವು ಮಾದರಿ ಕೆಲಸ ಮಾಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಪ್ರಾಸಿಕ್ಯೂಷನ್ಗೆ ಆಗ್ರಹ: ಕಾಂಗ್ರೆಸ್ ಆರೋಪಕ್ಕೆ ಎಳೆಎಳೆಯಾಗಿ ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ
ನಮ್ಮ ಮೆಡಿಕಲ್ ಕಾಲೇಜಿನಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ಕೊಡಲಾಗಿದೆ. ಆದರೆ ಇವರು ಕಳಪೆ ಮಟ್ಟದ ಉಪಕರಣಗಳ ಬಳಕೆ ಮಾಡಿದ್ದಾರೆ. ಕೆಲಸ ಮಾಡಬೇಕು ನಿಜ, ಲೂಟಿ ಮಾಡಬೇಕು ಎಂದು ಹೇಳಿಲ್ಲ. ಸಾವು-ಬದುಕಿನ ಸಂದರ್ಭದಲ್ಲಿ ಲೂಟಿ ಮಾಡಿದ್ದಾರೆ. ಕೊವಿಡ್ ಹಗರಣದಲ್ಲಿ ಡಾ.ಕೆ.ಸುಧಾಕರ್ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.