ಬೆಂಗಳೂರು, ಜನವರಿ 16: ಕರ್ನಾಟಕ ಕಾಂಗ್ರೆಸ್ನಲ್ಲಿ ಪಟ್ಟದ ಆಟ ಜೋರಾಗಿರುವ ಬೆನ್ನಲ್ಲೇ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ಖಡಕ್ ಸಂದೇಶ ರವಾನೆ ಮಾಡಿದೆ. ಎಚ್ಚರಿಕೆ ನಡುವೆಯೂ ಬಹಿರಂಗ ಹೇಳಿಕೆ ನೀಡುತ್ತಿರುವ ಸಚಿವರ ವರದಿಯನ್ನು ಹೈಕಮಾಂಡ್ ಕೇಳಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದರ ಬೆನ್ನಲ್ಲೇ, ಸಚಿವ ಸತೀಶ್ ಜಾರಕಿಹೊಳಿ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬ ಸ್ಪಷ್ಟೀಕರಣ ನೀಡಿದ್ದಾರೆ.
ಹೈಕಮಾಂಡ್ ಆದೇಶ ಉಲ್ಲಂಘಸುವವರು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಗಳಲ್ಲ ಎಂದಿರುವ ಹೈಕಮಾಂಡ್ ಹೇಳಿರುವುದಾಗಿ ಮಂಜುನಾಥ್ ಭಂಡಾರಿ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಿಎಂ ಬದಲಾವಣೆ, ಸಚಿವರ ಬದಲಾವಣೆ ಎಲ್ಲವೂ ಹೈಕಮಾಂಡ್ ನಾಯಕರು ನಿರ್ಧಾರ ಮಾಡಲಿದ್ದಾರೆ. ಈ ಸಂಬಂಧ ಯಾವುದೇ ಸಚಿವರು ಹೇಳಿಕೆಯನ್ನು ಕೊಡಬಾರದು. ನಾಯಕತ್ವ ಬದಲಾವಣೆಯ ತೀರ್ಮಾನವನ್ನು ತೆಗೆದುಕೊಳ್ಳುವುದು ಮಾಧ್ಯಮಗಳಲ್ಲ, ಪಕ್ಷದ ಹೈಕಮಾಂಡ್. ಪಕ್ಷದ ನಾಯಕರು ಮೊದಲಿಗೆ ಹೈಕಮಾಂಡ್ ನಾಯಕರ ಗಮನಕ್ಕೆ ತರಬೇಕು. ಇಂತಹ ಹೇಳಿಕೆ ನೀಡಿರುವವರ ವರದಿಯನ್ನು ಹೈಕಮಾಂಡ್ ನಾಯಕರು ಕೇಳಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಳೆದ ಒಂದೂವರೆ ವರ್ಷದಿಂದ ಸಚಿವರು ತಮ್ಮ ಇಲಾಖೆಯಲ್ಲಿ ಯಾವ ರೀತಿ ಕಾರ್ಯನಿರ್ವಹಣೆ ಮಾಡಿದ್ದಾರೆ? ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ. ಆದರೆ ಅನೇಕ ಸಚಿವರು ಅನಗತ್ಯ ಗೊಂದಲ ಉಂಟು ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುವವರ ಸಂಪೂರ್ಣ ವರದಿ ನೀಡಿ ಎಂದು ಹೈಕಮಾಂಡ್ ಕೇಳಿದೆ. ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಪದೇ ಪದೆ ಮಾಧ್ಯಮಗಳಿಗೆ ಹೇಳಿಕೆ ಕೊಡುವ ಸಚಿವರ ಸಂಪೂರ್ಣ ವಿವರಗಳನ್ನು ಕೊಡುವಂತೆ ಹೈ ಕಮಾಂಡ್ ಸೂಚಿಸಿದೆ. ಕೆಲವು ಸಚಿವರು ಪದೇ ಪದೆ ಮಾತನಾಡುತ್ತಿದ್ದಾರೆ. ಇದು ಸರಿ ಅಲ್ಲವೇ ಅಲ್ಲ. ಸಚಿವರಾದ ತಿಮ್ಮಾಪುರ, ಸತೀಶ್ ಜಾರಕಿಹೊಳಿ ಹಾಗೂ ಹೆಚ್ಸಿ ಮಹದೇವಪ್ಪ ಅವರು ಪದೇ ಪದೇ ಮಾತನಾಡುತ್ತಿದ್ದು, ಹೈಕಮಾಂಡ್ ಗಂಭೀರವಾಗಿ ಎಲ್ಲವನ್ನೂ ಗಮನಿಸುತ್ತಿದೆ. ಎಲ್ಲ ಸಚಿವರ ರಿಪೋರ್ಟ್ ಕಾರ್ಡ್‌ಗಳನ್ನು ಸಹ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಪಕ್ಷದ ನಾಯಕತ್ವದ ಬಗ್ಗೆ ಮಾತನಾಡಬಾರದು ಎಂದು ಹೈಕಮಾಂಡ್ ಸೂಚನೆ ನೀಡಿದೆ. ಪಕ್ಷದ ಆದೇಶವನ್ನು ಉಲ್ಲಂಘನೆ ಮಾಡುವವರಿಗೆ ಮುಂದಿನ ದಿನಗಳಲ್ಲಿ ಪರಿಣಾಮ ತಟ್ಟಲಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಸಾಹುಕಾರ್ ಹೊಸ ಆಟ: ಸಿಎಂ ಕರ್ಚಿ ಮೇಲೆ ಕಣ್ಣಿಟ್ಟಿರುವ ಡಿಕೆಶಿಗೆ ಜಾರಕಿಹೊಳಿ ಶಾಕ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ