AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಗ ನಕಲಿ ದೇಶಭಕ್ತರೇ ಹೆಚ್ಚಾಗಿದ್ದಾರೆ -ಸಿದ್ದರಾಮಯ್ಯ ಡೈಲಾಗ್​ಗೆ ‘ಹೌದು ಹುಲಿಯಾ’ ಎಂದ ಅಭಿಮಾನಿ!

ಈಗ ನಕಲಿ ದೇಶಭಕ್ತರೇ ಹೆಚ್ಚಾಗಿದ್ದಾರೆ. ಯಾವುದೇ ತ್ಯಾಗ ಮಾಡದೇ ನಾನು ದೇಶಭಕ್ತ ಅಂತಾರೆ. ನಾನು ದೇಶಭಕ್ತ ಅಂತಾ ಅವರೇ ಹೇಳಿಕೊಳ್ಳುತ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಮಾತಿಗೆ ಅಲ್ಲೇ ನೆರೆದಿದ್ದ ಅಭಿಮಾನಿಯೊಬ್ಬ ಹೌದು ಹುಲಿಯಾ ಎಂದು ಡೈಲಾಗ್ ಹೊಡೆದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾನೆ.

ಈಗ ನಕಲಿ ದೇಶಭಕ್ತರೇ ಹೆಚ್ಚಾಗಿದ್ದಾರೆ -ಸಿದ್ದರಾಮಯ್ಯ ಡೈಲಾಗ್​ಗೆ ‘ಹೌದು ಹುಲಿಯಾ’ ಎಂದ ಅಭಿಮಾನಿ!
ಸಿದ್ದರಾಮಯ್ಯ ಡೈಲಾಗ್​ಗೆ ‘ಹೌದು ಹುಲಿಯಾ’ ಎಂದ ಅಭಿಮಾನಿ!
KUSHAL V
|

Updated on:Jan 30, 2021 | 11:28 PM

Share

ಬೆಂಗಳೂರು: ಈಗ ನಕಲಿ ದೇಶಭಕ್ತರೇ ಹೆಚ್ಚಾಗಿದ್ದಾರೆ. ಯಾವುದೇ ತ್ಯಾಗ ಮಾಡದೇ ನಾನು ದೇಶಭಕ್ತ ಅಂತಾರೆ. ನಾನು ದೇಶಭಕ್ತ ಅಂತಾ ಅವರೇ ಹೇಳಿಕೊಳ್ಳುತ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಮಾತಿಗೆ ಅಲ್ಲೇ ನೆರೆದಿದ್ದ ಅಭಿಮಾನಿಯೊಬ್ಬ ಹೌದು ಹುಲಿಯಾ ಎಂದು ಡೈಲಾಗ್ ಹೊಡೆದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾನೆ.

ಕಾಸಿಯಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಗೊಳ್ಳಿ ರಾಯಣ್ಣನ ಹುತಾತ್ಮ ದಿನಾಚರಣೆಯಲ್ಲಿ ಸಿದ್ದರಾಮುಯ್ಯ ಭಾಷಣ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ.ಸಿದ್ದರಾಮಯ್ಯ ದೇಶಭಕ್ತಿ ಬಗ್ಗೆ ಭಾಷಣ ಮಾಡ್ತಿದ್ದಾಗ ಹೌದು ಹುಲಿಯಾ ಎಂದು ಪ್ರೇಕ್ಷಕನೊಬ್ಬ ಅವರ ಮಾತಿಗೆ ದನಿಗೂಡಿಸಿದ್ದಾನೆ.

ಪ್ರೇಕ್ಷಕ ‘ಹೌದು ಹುಲಿಯಾ’ ಅಂತಾ ಹೇಳುತ್ತಿದ್ದಂತೆ ಇತರರು ಚಪ್ಪಾಳೆಯ ಸುರಿಮಳೆಗೈದರು. ಇದಕ್ಕೆ ಸಿದ್ದರಾಮಯ್ಯ ಒಂದು ಕ್ಷಣ ನಕ್ಕು ತಮ್ಮ ಭಾಷಣ ಮುಂದುವರಿಸಿದರು.

‘ರಾಷ್ಟ್ರಪಿತ ಗಾಂಧೀಜಿ ಪ್ರಧಾನಿಯಾಗಲು ಹೋರಾಡಿರಲಿಲ್ಲ’ ಪ್ರತಿ ವರ್ಷವೂ ರಾಯಣ್ಣ ದಿನಾಚರಣೆ ದೊಡ್ಡದಾಗಿ ಆಚರಿಸಿ ಎಂದು ಕಾಸಿಯಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ನಾಡಿಗಾಗಿ ಹೋರಾಡಿದ ಪ್ರತಿಯೊಬ್ಬರನ್ನೂ ನೆನಪಿಸಿಕೊಳ್ಳಬೇಕು. ಹುತಾತ್ಮರ ದಿನಾಚರಣೆ ದಿನ ಗಾಂಧಿಯನ್ನಷ್ಟೇ ನೆನಪಿಸಿಕೊಳ್ತಿಲ್ಲ. ನಾಡಿಗಾಗಿ ರಕ್ತ ಸುರಿಸಿದ ಎಲ್ಲರನ್ನೂ ನೆನಪಿಸಿಕೊಳ್ಳಬೇಕು. ಸ್ವಾರ್ಥಕ್ಕಾಗಿ ಇವರು ಯಾರೂ ಹೋರಾಟ ಮಾಡಿರಲಿಲ್ಲ. ರಾಷ್ಟ್ರಪಿತ ಗಾಂಧೀಜಿ ಪ್ರಧಾನಿಯಾಗಲು ಹೋರಾಡಿರಲಿಲ್ಲ. ಸಂಗೊಳ್ಳಿ ರಾಯಣ್ಣ ರಾಜನಾಗಲು ಹೋರಾಟ ಮಾಡಿರಲಿಲ್ಲ. ನೆಲ‌, ನಾಡನ್ನು ರಕ್ಷಣೆ ಮಾಡಲು ಹೋರಾಟ ಮಾಡಿದ್ದರು. ಎಂದು ಸಿದ್ದರಾಮಯ್ಯ ಹೇಳಿದರು.

‘ಮನುಷ್ಯರಾಗಿ ಹುಟ್ಟಿದ್ದೀವಿ, ಮನುಷ್ಯರಾಗಿಯೇ ಇರೋಣ’ ನಾನು ರಾಯಣ್ಣ ಸ್ಮಾರಕಕ್ಕೆ 262 ಕೋಟಿ ರೂ. ಕೊಟ್ಟಿದ್ದೆ. ಸಂಗೊಳ್ಳಿ ರಾಯಣ್ಣ ಕುರುಬನೆಂದು ನಾನು ಹಣ ನೀಡಿರಲಿಲ್ಲ. ರಾಯಣ್ಣ ಅಕಸ್ಮಿಕವಾಗಿ ಕುರುಬರ ಜಾತಿಯಲ್ಲಿ ಹುಟ್ಟಿದ್ದು. ನಾನು ಸಹ ಆಕಸ್ಮಿಕವಾಗಿ ಕುರುಬರ ಜಾತಿಯಲ್ಲಿ ಹುಟ್ಟಿದ್ದು. ಕುರುಬರ ಜಾತಿಯಲ್ಲೇ ಹುಟ್ಟಬೇಕೆಂದು ಅರ್ಜಿ ಹಾಕಿದ್ದನಾ? ಯಾರಾದರೂ ಅರ್ಜಿ ಹಾಕಿಕೊಂಡು ಹುಟ್ಟೋಕೆ ಆಗುತ್ತಾ? ಏನ್ ನೀವೇನಾದ್ರೂ ಅರ್ಜಿ ಹಾಕಿ ಹುಟ್ಟಿದ್ರಾ ಎಂದು ವೇದಿಕೆ ಮೇಲಿದ್ದ ಶಾಸಕ ಉದಯ್ ಗರುಡಾಚಾರ್‌ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಇದಕ್ಕೆ, ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಇಲ್ಲವೆಂದು ಕೈ ಆಡಿಸಿದರು. ಮನುಷ್ಯರಾಗಿ ಹುಟ್ಟಿದ್ದೀವಿ, ಮನುಷ್ಯರಾಗಿಯೇ ಇರೋಣ ಎಂದು ರಾಯಣ್ಣ ಹುತಾತ್ಮ ದಿನಾಚರಣೆಯಲ್ಲಿ ಸಿದ್ದರಾಮಯ್ಯ ಹೇಳಿದರು.

​ರಾಯಣ್ಣರನ್ನು ಹಿಡಿಯಲು ಮಲ್ಲಪ್ಪಶೆಟ್ಟಿ ಸಹಾಯ ಮಾಡಿದ್ರು. ಸಂಗೊಳ್ಳಿ ರಾಯಣ್ಣರನ್ನು ಹಿಡಿಯಲು ಸಹಾಯ ಮಾಡದಿದ್ರೆ. ಮತ್ತೆ ಚೆನ್ನಮ್ಮ ರಾಣಿ ಆಗ್ತಿದ್ದರೇನೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ರಾಯಣ್ಣ ಮಾಡಿದ್ದು ಸಾಮಾನ್ಯರು ಮಾಡುವ ಕೆಲಸ ಅಲ್ಲ ಎಂದು ಸಹ ಹೇಳಿದರು.

ನಾವು ಸಮಾಜ ನಮಗೇನು ಮಾಡ್ತು ಅಂತಾ ಕೇಳಬಾರದು. ನಾವು ಸಮಾಜಕ್ಕೆ ಏನು ಮಾಡಿದ್ವಿ ಅಂತಾ ಪ್ರಶ್ನಿಸಿಕೊಳ್ಳಬೇಕು. ಈ ಪ್ರಶ್ನೆಗೆ ಉತ್ತರ ಸಿಕ್ಕರೇ ನಾವು ಹುಟ್ಟಿದ್ದಕ್ಕೆ ಸಾರ್ಥಕತೆ ಸಿಗುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

‘ಇತಿಹಾಸವನ್ನ ನಮಗೆ ಬೇಕಾದಂಗೆ ಬರೆಯಬಾರದು’ ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ ಅಂತಾ ನಾನು ಹೇಳಿದ್ರೆ ನನ್ನ ಮೇಲೆ ಜನ ಬಿದ್ದು ಬಿಡ್ತಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಎಲ್ಲರೂ ದೇಶಭಕ್ತರು. ಬ್ರಿಟಿಷರ ವಿರುದ್ಧ ಹೈದರ್​ ಆಲಿ ಮತ್ತು ಟಿಪ್ಪು ಸಮರ ಸಾರಿ ಎರಡು ಯುದ್ಧ ಗೆಲ್ಲಲ್ಲಿವಾ? ಎಂದು ಸಿದ್ದರಾಮಯ್ಯ ನೆರೆದವರನ್ನು ಪ್ರಶ್ನಿಸಿದರು.

ಇತಿಹಾಸವನ್ನ ನಮಗೆ ಬೇಕಾದಂಗೆ ಬರೆಯಬಾರದು. ಆದರೆ, ಬೇಕಾದಂಗೆ ತಿರುಚಬಾರದು. ಇತಿಹಾಸದಿಂದ ನಾವು ಪಾಠ ಕಲಿಯಬೇಕು. ಯುದ್ಧ ಸೋತು ತನ್ನ ಮಕ್ಕಳನ್ನ ಅಡವಿಟ್ಟ ರಾಜರನ್ನ ತೋರಿಸಿ ನೋಡೋಣ ಎಂದು ಸಿದ್ದರಾಮಯ್ಯ ಕೇಳಿದರು. ಸುಮಾರು 600ರಾಜರು ಇದ್ದರು, ಎಷ್ಟು ಜನ ಟಿಪ್ಪು ಮಾಡಿದ ಹಾಗೆ ಮಾಡಿದ್ದಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ವೇಳೆ ಸಭಾಂಗಣಕ್ಕೆ ಎಂಟ್ರಿ ಕೊಟ್ಟ ಡಿಸಿಎಂ ಅಶ್ವತ್ಥ್​ನಾರಾಯಣ ಅವರನ್ನು ನೋಡಿ ಬಾಪ್ಪಾ, ಅಶ್ವತ್ಥ್ ನಾರಾಯಣ ಎಂದು ಸಿದ್ದರಾಮಯ್ಯ ವೇದಿಕೆಯಿಂದಲೇ ಸ್ವಾಗತಿಸಿದರು. ಈ ವೇಳೆ ಇಡೀ ಸಭಾಂಗಣದಲ್ಲಿ ನೆರೆದವರು ಜೋರಾಗಿ ನಕ್ಕುಬಿಟ್ಟರು.

ಬಳಿಕ ತಮ್ಮ ಭಾಷಣ ಮುಂದುವರಿಸಿದ ಸಿದ್ದರಾಮಯ್ಯ ಟಿಪ್ಪು ಆಗಲಿ, ರಾಯಣ್ಣ ಆಗಲಿ ನೂರಾರು ಜನ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಸಿಪಾಯಿ ದಂಗೆಗೆ ಮೊದಲೇ ಅನೇಕರು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

‘ಬೇರೆಯವರಿಗೆ ಕೆಡುಕು ಬಯಸದೇ ಒಳ್ಳೇದು ಮಾಡೋದೇ ಧರ್ಮ’ ನಾವು ಧರ್ಮದ ಬಗ್ಗೆ ಬೇರೆ ವ್ಯಾಖ್ಯಾನ ಮಾಡುವವರು. ಇಟ್ ಈಸ್ ಎ ವೇ ಆಫ್ ಲೈಫ್. ಬೇರೆಯವರಿಗೆ ಕೆಡುಕು ಬಯಸದೇ ಒಳ್ಳೇದು ಮಾಡೋದೇ ಧರ್ಮ. ಎಷ್ಟು ಸರಳವಾಗಿ ಇದೆ ನೋಡಿ. ಅದನ್ನ ಬಿಟ್ಟು ಏನೇನೋ ವ್ಯಾಖ್ಯಾನ ಮಾಡಿ ಬಿಟ್ ಬಿಡೋದು ಎಂದು ಡಿಸಿಎಂ ಅಶ್ವತ್ಥ್​ನಾರಾಯಣರನ್ನು ನೋಡುತ್ತಲೇ ಸಿದ್ದರಾಮಯ್ಯ ಹೇಳಿದರು. ವಿಪಕ್ಷ ನಾಯಕರ ಮಾತನ್ನು ಆಲಿಸಿದ ಡಿಸಿಎಂ ನಕ್ಕು ಸುಮ್ಮನಾದರು.

ನಾವು ಬಸವಣ್ಣನ ವಚನ ನೆನಪಿನ್ನಲ್ಲಿ ಇಟ್ಟುಕೊಳ್ಳಬೇಕು. ಇವನಾರವ ಇವನಾರವ. ಇವ ನಮ್ಮ ಇವನಮ್ಮವ. ಇಷ್ಟು ಹೇಳೋಕೆ ಏನ್ ಬಾಯಿ ತಿರುಗಲ್ವಾ? ಇಲ್ಲಾ.. ಕೇವಲ ಬಾಯಿ ಮಾತಿಗೆ ಈ ವಚನ ಇದೆಯಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘​ಕನ್ನಡದ ಅನಿವಾರ್ಯತೆಯನ್ನು ನಾವು ಸೃಷ್ಟಿ ಮಾಡಬೇಕು.. ಆಗ ಕನ್ನಡೇತರರು ಕೂಡ ನಮ್ಮ ಭಾಷೆ ಕಲೀತಾರೆ’

Published On - 10:03 pm, Sat, 30 January 21