ಪಹಲ್ಗಾಮ್​ ದಾಳಿ: ಪಾಕ್​ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ, ಅಷ್ಟಕ್ಕೂ ಸುದ್ದಿಯಲ್ಲೇನಿದೆ?

Pahalgam terror attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಭೀಕರ ದಾಳಿ ಬಳಿಕ ಪ್ರತೀಕಾರದ ಕೂಗು ಭಾರತದಲ್ಲಿ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲೇ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಪಾಕಿಸ್ತಾನದ ಟಿವಿಗಳಲ್ಲಿ ಪ್ರಸಾರವಾಗಿದೆ. ಪಾಕ್ ಟಿವಿಗಳಲ್ಲಿ ಸಿಎಂ ಸಿದ್ದರಾಮಯ್ಯ ಬ್ರೇಕಿಂಗ್ ನ್ಯೂಸ್ ಆಗಿರುವುದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಲ್ಲದೇ ವಿಪಕ್ಷ ಬಿಜೆಪಿ ಕಿಡಿಕಾಎಇದೆ. ಅಷ್ಟಕ್ಕೂ ಪಾಕ್​ ಮಾಧ್ಯಮಗಳಲ್ಲಿ ಸುದ್ದಿಯಾಗುವಷ್ಟು ಸಿದ್ದರಾಮಯ್ಯ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ಪಹಲ್ಗಾಮ್​ ದಾಳಿ: ಪಾಕ್​ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ, ಅಷ್ಟಕ್ಕೂ ಸುದ್ದಿಯಲ್ಲೇನಿದೆ?
Siddaramaiah

Updated on: Apr 27, 2025 | 11:08 AM

ಬೆಂಗಳೂರು, (ಏಪ್ರಿಲ್ 27): ಪಹಲ್ಗಾಮ್ ಉಗ್ರರ ದಾಳಿ (pahalgam terror attack) ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪಾಕಿಸ್ತಾನ ಮಾಧ್ಯಮಗಳಲ್ಲೂ (Pakistan Media) ಸುದ್ದಿಯಾಗಿದ್ದಾರೆ. ಪಾಕಿಸ್ತಾನದ (Pakistan) ಮೇಲೆ ಭಾರತ ಯುದ್ಧ ಮಾಡಬಾರದು ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ. ಇದನ್ನು ಅತ್ತ ಪಾಕಿಸ್ತಾನ ಮೀಡಯಾಗಳು ಸುದ್ದಿ ಪ್ರಸಾರ ಮಾಡಿವೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ಇದನ್ನೇ ಅಸ್ತ್ರವಾಗಿಸಿಕೊಂಡ ವಿರೋಧ ಪಕ್ಷ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ.

ಅಸಲಿಗೆ ಸಿದ್ದರಾಮಯ್ಯ ಹೇಳಿದ್ದೇನು?

ನಿನ್ನೆ (ಏಪ್ರಿಲ್ 26) ಮೈಸೂರಲ್ಲಿ ಪಹಲ್ಗಾಮ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಅಗತ್ಯತೆ ಇಲ್ಲ. ಆದರೆ, ಅನಿವಾರ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪಹಲ್ಗಾಮ್ ಅದೊಂದು ಯಾತ್ರಾರ್ಥಿಗಳ ಸ್ಥಳ. ಅಲ್ಲಿ ಭದ್ರತೆಯನ್ನು ಕೈಗೊಳ್ಳಬೇಕಿತ್ತು. ಈ ಹಿಂದೆ ಪುಲ್ವಾಮಾ ದಾಳಿಯಲ್ಲೂ ಘೋರ ದುರಂತ ಸಂಭವಿಸಿತ್ತು. ಕೇಂದ್ರ ಸರ್ಕಾರವೇ ಭದ್ರತಾ ವೈಫಲ್ಯ ಆಗಿದೆ. ಅದೊಂದು ಇಂಟಲಿಜೆನ್ಸ್ ಹಾಗೂ ಸೆಕ್ಯೂರಿಟಿ ಫೇಲ್ಯೂರ್​. ಕೇಂದ್ರ ಸರ್ಕಾರಕ್ಕೆ ಭದ್ರತಾ ಕ್ರಮ ತೆಗೆದುಕೊಂಡಿಲ್ಲ. ಈಗ ಯಾವುದೇ ಕ್ರಮ ತೆಗೆದುಕೊಂಡರೂ 26 ಜನ ವಾಪಸ್ ಬರುವುದಿಲ್ಲ ಎಂದಿದ್ದರು.

ಇದನ್ನೂ ಓದಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!

ಇದನ್ನೂ ಓದಿ: ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಅನಿವಾರ್ಯತೆ ಇಲ್ಲ, ನಾನು ಯುದ್ಧದ ಪರ ಅಲ್ಲ: ಸಿದ್ದರಾಮಯ್ಯ

ಇನ್ನು ಒದೇ ವೇಳೆ ಪಾಕಿಸ್ತಾನದ ಮೇಲೆ ಯುದ್ಧ ಸಾರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯುದ್ಧದ ಅಗತ್ಯತೆ ಇಲ್ಲ. ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಅಷ್ಟೇ. ಭದ್ರತಾ ವ್ಯಸಸ್ಥೆ ಮಾಡಬೇಕು. ಯುದ್ಧದ ಪರ ನಾವು ಇಲ್ಲ. ಶಾಂತಿ ಇರಬೇಕು. ಜನರಿಗೆ ಭದ್ರತೆ ಇರಬೇಕು. ಕೇಂದ್ರ ಸರ್ಕಾರ ಭದ್ರತಾ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಈ ಹೇಳಿಕೆಯನ್ನು ಪಾಕ್ ಟಿವಿ ಮಾಧ್ಯಮಗಳು ಬ್ರೇಕ್​ ನ್ಯೂಸ್​ ಆಗಿ ಪ್ರಸಾರ ಮಾಡಿವೆ.

ಬಿಜೆಪಿ ನಾಯಕರು ಕಿಡಿ

ಸಿದ್ದರಾಮಯ್ಯ ಪಾಕ್ ಮಾಧ್ಯಮಗಳಲ್ಲಿ ಸುದ್ದಿಯಾಗುವಂತೆ ಹೇಳಿಕೆ ನೀಡಿದ ಬೆನ್ನಲ್ಲೇ ಇತ್ತ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್, ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಪಾಕ್ ಟಿವಿ ಪ್ರಸಾರ ಮಾಡಿರುವ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

ವಿಪಕ್ಷ ನಾಯಕ ಅಶೋಕ್ ಟ್ವೀಟ್

ಪಾಕಿಸ್ತಾನ ರತ್ನ ಸಿಎಂ ಸಿದ್ದರಾಮಯ್ಯನವರೇ, ತಮ್ಮ ಬಾಲಿಶ, ಅಸಂಬದ್ಧ ಹೇಳಿಕೆಗಳಿಂದ ಈಗ ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದೀರಿ. ತಮಗೆ ಅಭಿನಂದನೆಗಳು. ಮುಂದೆಂದಾದರೂ ತಾವು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ತಮಗೆ ರಾಜಾತಿಥ್ಯ ಗ್ಯಾರೆಂಟಿ. ಪಾಕಿಸ್ತಾನದ ಪರ ವಕಾಲತ್ತು ವಹಿಸಿದ ಮಹಾನ್ ಶಾಂತಿದೂತ ಎಂದು ಪಾಕಿಸ್ತಾನ ಸರ್ಕಾರ ತಮಗೆ ಅಲ್ಲಿನ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ನಿಶಾನ್-ಎ-ಪಾಕಿಸ್ತಾನ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ.


ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಎದುರಿಸುತ್ತಿರುವಾಗ, ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವಾಗ ಈ ರೀತಿ ಶತ್ರುರಾಷ್ಟ್ರದ ಕೈಗೊಂಬೆಯಂತೆ ವರ್ತಿಸುತ್ತದ್ದೀರಲ್ಲ, ನಿಮ್ಮಂತಹವರು ಸಾರ್ವಜನಿಕ ಬದುಕಿನಲ್ಲಿ ಇರುವುದೇ ನಮ್ಮ ದೇಶದ ಅತ್ಯಂತ ದೊಡ್ಡ ದುರಂತ ಎಂದು ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.