ಬೆಂಗಳೂರು: ಎಸ್ಸಿ ಹಾಗೂ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲು ತೀರ್ಮಾನಿಸಿದ ಬೆನ್ನಲ್ಲೇ ಇದೀಗ ಪಂಚಮಸಾಲಿಗೆ 2ಎ ಮೀಸಲಾತಿ ನೀಡಲೇಬೇಕೆಂದು ಬಸವ ಜಯಮೃತ್ಯುಂಜಯಶ್ರೀ ಸರ್ಕಾರಕ್ಕೆ ಮತ್ತೆ ಗಡುವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಅಕ್ಟೋಬರ್ 13) ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಅ.21ರೊಳಗೆ 2ಎ ಮೀಸಲಾತಿ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಅ.21ರಂದು ಹುಕ್ಕೇರಿಯಲ್ಲಿ ಪಂಚಮಸಾಲಿ ಸಮುದಾಯದಿಂದ ಬೃಹತ್ ಸಮಾವೇಶ ನಡೆಸಲಾಗುತ್ತೆ ಎಂದು ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮೃತ್ಯುಂಜಯ ಸ್ವಾಮೀಜಿ ಹಾಗೂ ಭಕ್ತರಿಂದ ಜೀವ ಬೆದರಿಕೆ: ಬಹಿರಂಗ ಕ್ಷಮೆಯಾಚಿಸಿದ ಮಾಜಿ MLC
2ಎ ಮೀಸಲಾತಿಗೆ ಕಳೆದ 2 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ಈವರೆಗೆ ನಮ್ಮ ಹೋರಾಟಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಸೆ.15ರೊಳಗೆ ಮೀಸಲಾತಿ ಘೋಷಿಸಲಾಗುತ್ತೆ ಅಂತ ಬಿಎಸ್ವೈ ಹೇಳಿದ್ರು. ಆದ್ರೆ ಈ ಸಮಯದವರೆಗೆ ಯಡಿಯೂರಪ್ಪನವರು ಇರಲಿಲ್ಲ. ಅದಾದ ಬಳಿಕ ಬೊಮ್ಮಾಯಿಯವರಿಗೆ ಹಲವು ಭಾರೀ ಮನವಿ ನೀಡಿದ್ದೇವೆ. ಆದರೆ ಯಾವುದೇ ಪ್ರತಿಕ್ರಿಯೆ ಬೊಮ್ಮಾಯಿ ಸರ್ಕಾರದಿಂದ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಷ್ಟರೊಳಗೆ ಸರ್ಕಾರ ಸರ್ವಪಕ್ಷಗಳ ಸಭೆ ನಡೆಸಿ ಮೀಸಲಾತಿ ಬಗ್ಗೆ ಘೋಷಣೆ ಮಾಡಲಿ. ಹುಕ್ಕೇರಿಯಲ್ಲಿ 2ಎ ಮೀಸಲಾತಿಗಾಗಿ ಆಗ್ರಹಿಸಿ ಬೃಹತ್ ಹೋರಾಟ ಮಾಡಲಾಗುತ್ತೆ. ರಾಜ್ಯದ ಮೂಲೆಮೂಲೆಗಳಿಂದ ಅ.21ರಂದು ಸುಮಾರು 3 ಲಕ್ಷ ಜನ ಭಾಗಿಯಾಗಲಿದ್ದಾರೆ ಎಂದರು.
ಸರ್ವ ಪಕ್ಷಗಳ ಸಭೆ ಕರೆದು ಹೋರಾಟಕ್ಕೆ ನ್ಯಾಯ ಕೊಡಿಸಿ. ಮೀಸಲಾತಿ ಕೊಡ್ತೀನಿ ಅಂದ್ರೆ ಯಾವಾಗ ಕೊಡ್ತೀರಿ ಅಂತ ಹೇಳಿ ಕೊಡೊಲ್ಲ ಅಂದ್ರೆ ಅದನ್ನಾದ್ರೂ ಸ್ಪಷ್ಟವಾಗಿ ತಿಳಿಸಿ ಎಂದು ಹೇಳಿದರು.
ಪಂಚಮಸಾಲಿ ಸಮುದಾಯದ ನಿರಂತರ ಹೋರಾಟಕ್ಕೆ ಸ್ಪಂದಿಸಿ. ಅಕ್ಟೋಬರ್ 21ರೊಳಗೆ ಸ್ಪಷ್ಟವಾದ ನಿಲುವನ್ನ ತಿಳಿಸಿ. ಇಲ್ಲವಾದ್ರೆ 25 ಲಕ್ಷಕ್ಕೂ ಹೆಚ್ಚು ಸಮುದಾಯದ ಜನ ಬೃಹತ್ ಹೋರಾಟ ಮಾಡ್ತೀವಿ. ಅಂತಿಮ ಹೋರಾಟವಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಹೋರಾಟದ ದಿನಾಂಕವನ್ನ ಅ.21ರಂದೇ ತಿಳಿಸುತ್ತೇವೆ. ನಾವು ಹೋರಾಟದ ದಿನಾಂಕ ಘೋಷಣೆ ಮಾಡಿದ್ರೆ ಯಾವುದೇ ಕಾರಣಕ್ಕೂ ಬದಲಿಸೋದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಹರಿಹರ ಮಾಜಿ ಶಾಸಕ ಎಚ್.ಎಸ್ ಶಿವಶಂಕರ, ಗೌಡ ಲಿಂಗಾಯತ ಪಂಚಮಸಾಲಿ ರಾಜ್ಯ ಸಂಚಾಲಕ ಅಂಮನಪುರ ಮಲ್ಲೇಶ್ ಉಪಸ್ಥಿತರಿದ್ದರು.
Published On - 3:22 pm, Thu, 13 October 22