ಇಂದಿನಿಂದ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, 2 ಗಂಟೆ 12 ನಿಮಿಷಕ್ಕೆ ಗರ್ಭಗುಡಿ ಗೆ ಹಾಕಿದ್ದ ಬೀಗ ತೆರೆದ ಅರ್ಚಕರು ಗರ್ಭಗುಡಿ ಬಾಗಿಲಿಗೆ ಮಹಾ ಮಂಗಳಾರತಿ ನೆರವೇರಿಸಿದರು. ಸತತ ಒಂದು ಗಂಟೆ ಕಾಲ ಗರ್ಭಗುಡಿ ಬಾಗಿಲ ಸಮೀಪ ಪೂಜೆ ಮಾಡಿದರು. ಒಟ್ಟು 12 ದಿನ ಸಾರ್ವಜನಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.
12 ನೇ ಶತಮಾನ, ಹಾಸನದ ಚನ್ನಪಟ್ಟಣ ಪಾಳೆಯಗಾರ ಶ್ರೀ ಕೃಷ್ಣಪ್ಪ ನಾಯಕನ ಕಾಲ. ಕೃಷ್ಣಪ್ಪನಾಯಕ ಕಾರ್ಯನಿಮಿತ್ತ ಪ್ರಯಾಣ ಹೊರಟಾಗ ಮೊಲವೊಂದು ಅಡ್ಡ ಬಂದಿತು. ಆಗ ಅದನ್ನು ಅಪಶಕುನವೆಂದು ಭಾವಿಸುತ್ತಾನೆ. ಈ ವೇಳೆ ಪ್ರತ್ಯಕ್ಷಳಾದ ಆದಿಶಕ್ತಿ ಸ್ವರೂಪಿಣಿ-ಈ ಸ್ಥಳದಲ್ಲಿ ದೇಗುಲ ಕಟ್ಟು, ನಾನು ಹಾಸನಾಂಬೆ ಎಂದೇ ಹೆಸರಾಗಿ ಇಲ್ಲಿ ನೆಲೆಸುವೆ ಎಂದಳಂತೆ. (ಕುದುರು ಗಂಡಿಯಲ್ಲಿ ಇರುವ ಕ್ರಿ.ಶ.114 ವೀರಗಲ್ಲಿನ ಶಾಸನದ ಪ್ರಕಾರ)
ಕಾಶಿ, ವಾರಣಾಸಿಯಿಂದ ದಕ್ಷಿಣಾಭಿಮುಖವಾಗಿ ವಾಯುವಿಹಾರಕ್ಕೆಂದು ಬಂದ ಸಪ್ತ ಮಾತೃಕೆಯರು ಅಂದರೆ, ಬ್ರಾಹ್ಮೀದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ದುರ್ಗೆ, ಚಾಮುಂಡಿ ಇವರು ಇಲ್ಲಿಗೆ ಬಂದರೆಂದು ಪ್ರತೀತಿ. ಅವರಲ್ಲಿ, ವೈಷ್ಣವಿ, ವಾರಾಹಿ ಮತ್ತು ಇಂದ್ರಾಣಿ ಈ ಮೂವರು ದೇವತೆಗಳು ಹುತ್ತದಲ್ಲಿ ನೆಲೆಸಿದ ಸ್ಥಳವೇ ಹಾಸನಾಂಬೆಯ ದೇಗುಲ. (ದೇವನೊಬ್ಬನೇ ಆದರೂ ಆದಿ ಮಹರ್ಷಿಗಳು ಪುರುಷ ಮತ್ತು ಸ್ತ್ರೀ ಎರಡೂ ಶಕ್ತಿರೂಪಗಳನ್ನು ಒಂದಾಗಿ ಕಂಡಿದ್ದಾರೆ. ಹಾಗೆ ಕಂಡ ಸ್ತ್ರೀ ರೂಪಗಳೆ ಸಪ್ತಮಾತೃಕೆಯರು). ಹಾಸನ ನಗರದ ಹೃದಯಭಾಗದಲ್ಲಿರುವ ದೇವಿಕೆರೆಯಲ್ಲಿ, ಬ್ರಾಹ್ಮಿದೇವಿ, ಕೆಂಚಮ್ಮ ದೇವಿ ಹೊಸಕೋಟೆಯಲ್ಲಿ ನೆಲೆಸಿದ್ದಾರೆ. ಆದಿಶಕ್ತಿ ಸ್ವರೂಪಿಣಿ ಮಾತೃ ಸ್ವರೂಪಿಣಿಯಾಗಿರುವ ಹಾಸನಾಂಬೆ ಸಿಂಹಾಸನಾಪುರಿಯ ಅಧಿದೇವತೆ- ಭವತಾರಿಣಿ, ಅಸುರ ಸಂಹಾರಿಣಿ. ಬೇಡಿದ ವರಕೊಡುವ ಶಕ್ತಿದೇವತೆಯಾಗಿ ಜನಮಾನಸದಲ್ಲಿ ಕಾಣಿಸಿ ಕೊಂಡಿದ್ದಾಳೆ.
ಕೃಷ್ಣಪ್ಪ ನಾಯಕನ ಕಾಲದಿಂದಲೂ ಆಶ್ವೀಜ ಮಾಸ ಪೌರ್ಣಮಿಯ ನಂತರ ಬರುವ ಗುರುವಾರದಂದು ಹಾಸನಾಂಬೆಯ ದೇವಾಲಯ ತೆರೆಯಲ್ಪಡುತ್ತದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಅಂದು ದರ್ಶನಾಕಾಂಕ್ಷಿಗಳಾಗಿ ಬಂದು ದೇವಿಯ ದರ್ಶನ ಪಡೆಯುತ್ತಾರೆ. ಗರ್ಭಗುಡಿಯಲ್ಲಿ ಹುತ್ತದೋಪಾದಿಯಲ್ಲಿರುವ ಆದಿಶಕ್ತಿಸ್ವರೂಪಿಣಿ ಹಾಸನಾಂಬೆಗೆ ಹಿಂದಿನ ವರುಷ ಹಚ್ಚಿಟ್ಟಿದ್ದ ದೀಪವು ಆರದೇ, ಮುಡಿಸಿದ ಹೂ ಬಾಡದೇ ಹಾಗೂ ನೈವೇದ್ಯಕ್ಕಿಟ್ಟ ಅಕ್ಕಿಯು ಅನ್ನವಾಗಿರುವ ವಿಸ್ಮಯ ದೃಶ್ಯವನ್ನು ಕಣ್ತುಂಬಿಕೊಳ್ತುವ ಭಕ್ತರು ಪುನೀತರಾಗುತ್ತಾರೆ.
ಹೀಗೆ ವರ್ಷಕ್ಕೊಮ್ಮೆ ದೇಗುಲದ ಬಾಗಿಲ ಪುರ ಪ್ರಮುಖರಾದ ತಹಸಿಲ್ದಾರರು/ ಕಮೀಷನರ್ ಶಾಸಕರು ಮುಂತಾದವರ ಸಮ್ಮುಖದಲ್ಲಿ ತೆರೆಯಲಾಗುತ್ತದೆಯಲ್ಲದೇ, ಬಲಿಪಾಡ್ಯಮಿಯ ಮಾರನೇ ದಿನ ಅವರೆಲ್ಲರ ಸಮ್ಮುಖದಲ್ಲಿ ದೇವಿಗೆ ದೀಪ, ಅಕ್ಕಿ ನೈವೇದ್ಯ ಇಟ್ಟು ಅಲಂಕಾರವನ್ನು ಮಾಡಿ ಮುಚ್ಚಲಾಗುತ್ತದೆ.
ಸೊಸೆಯೊಬ್ಬಳು ಮನೆಗೆಲಸ ಬಿಟ್ಟು ದೇವಿಯನ್ನು ಕುರಿತು ಧ್ಯಾನಮಗ್ನಳಾಗಿರುವಾಗ ಆಕೆಯ ಅತ್ತೆ ದೇವಿಯ ಎದುರಿಗೆ ಇದ್ದ ಚಂದನ ಬಟ್ಟಲನ್ನು ತೆಗೆದು ಸೊಸೆಯ ತಲೆಗೆ ಕುಟ್ಟಿದಳಂತೆ. ಸೊಸೆ ಆರ್ತಳಾಗಿ “ ಅಮ್ಮಾ ಹಾಸನಾಂಬೆ. ಕಾಪಾಡು ತಾಯೆ” ಎಂದು ಕೂಗಿ ಕೊಂಡಳು. ದೇವಿಯು ತನ್ನ ಭಕ್ತೆಯ ಮೊರೆ ಕೇಳಿ ತನ್ನ ಸನ್ನಿಧಿಯಲ್ಲಿ ಕಲ್ಲಾಗಿರು. ಇಲ್ಲಿಗೆ ಬರುವವರೆಲ್ಲರ ಭಕ್ತಿಭಾವಕ್ಕೆ ನೀನು ಸಾಕ್ಷಿಯಾಗಿರು ಎಂದು ಹರಸಿದಳಂತೆ.
ಹಾಸನಾಂಬೆ ದೇವಿ ಮಡಿವಂತಿಕೆ- ನೈರ್ಮಲ್ಯ, ನೇಮ ನಿಷ್ಠೆಗೆ ಒಲಿವಳೆಂಬದು ಆಚಾರ ವಿಚಾರಗಳಿಂದ ತಿಳಿದು ಬಂದಿದೆ. ವರ್ಷಕ್ಕೊಮ್ಮೆ ಮಾತ್ರ ಭಕ್ತಾದಿಗಳು ಭಯಭಕ್ತಿಯಿಂದ ದೇವಿಯ ದರ್ಶನ ಪಡೆಯಲು ಇಲ್ಲಿಗೆ ಬರುತ್ತಾರೆ. ಅಂದು ಹಾಸನದಲ್ಲಿ ಹಾಸನಾಂಬೆಯ ಜಾತ್ರೆ ನಡೆಯುತ್ತದೆ. ಆಸ್ತಿಕರಿಗೆ ನೋಡಲು ನಯನ ಮನೋಹರವಾಗಿರುತ್ತದೆ.
Published On - 4:29 pm, Thu, 13 October 22