ಪಂಚಮಸಾಲಿ ಮೀಸಲಾತಿ: ಸರ್ಕಾರಕ್ಕೆ ಲೈಫ್ಲೈನ್ ನೀಡಿದ್ದೇವೆ ಎಂದ ವಚನಾನಂದ ಸ್ವಾಮೀಜಿ
ವಿಳಂಬವಾದರೂ ಪರವಾಗಿಲ್ಲ. ಸಮರ್ಪಕ ರೀತಿಯಲ್ಲಿ ಮೀಸಲಾತಿ ದೊರೆಯಬೇಕು ಎಂದು ವಚನಾನಂದ ಸ್ವಾಮೀಜಿ ಹೇಳಿದರು.
ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ಸರ್ಕಾರಕ್ಕೆ ತುಸು ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಹರಿಹರದಲ್ಲಿ ವಚನಾನಂದ ಸ್ವಾಮೀಜಿ ಹೇಳಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವುದು ತುಸು ತಡವಾಗಬಹುದು. ಆದರೆ ಸರಿಯಾದ ರೀತಿಯಲ್ಲಿ ಈ ಕೆಲಸ ಆಗಬೇಕಿದೆ. ಸರ್ಕಾರ ಒಂದು ವೇಳೆ ತರಾತುರಿಯಲ್ಲಿ ಮೀಸಲಾತಿ ಘೋಷಿಸಿದರೆ ಸಮಸ್ಯೆಯಾಗಬಹುದು. ಯಾರಾದರೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೂ ಮೀಸಲಾತಿ ನಿರ್ಧಾರ ಊರ್ಜಿತವಾಗುವಂತಿರಬೇಕು. ಹೀಗಾಗಿ, ವಿಳಂಬವಾದರೂ ಪರವಾಗಿಲ್ಲ. ಸಮರ್ಪಕ ರೀತಿಯಲ್ಲಿ ಮೀಸಲಾತಿ ದೊರೆಯಬೇಕು ಎಂದು ಅವರು ಹೇಳಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಹೋರಾಟ ನಡೆಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮೀಸಲಾತಿ ಒದಗಿಸಲು ಸರ್ಕಾರಕ್ಕೆ ನಾವು ಗಡುವು ನೀಡುವುದಿಲ್ಲ. ಬದಲಿಗೆ ಲೈಫ್ಲೈನ್ ನೀಡುತ್ತೇವೆ. ರಾಜ್ಯದಲ್ಲಿ ಪಂಚಮಸಾಲಿ ಸಮಾಜದ ಸಮೀಕ್ಷೆ ಆರಂಭವಾಗಿದೆ. ಸ್ವಲ್ಪ ವಿಳಂಬವಾದರೂ ಪರವಾಗಿಲ್ಲ. ಸಮಾಜಕ್ಕೆ ಮೀಸಲಾತಿ ಸಿಗಬೇಕು ಎಂದು ನುಡಿದರು.
ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೆಲ ಜಾತಿಗಳಿಗೆ ಮೀಸಲಾತಿ ಘೋಷಿಸಲಾಗಿದೆ. ಆದರೆ ಅಲ್ಲಿನ ಜನರು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಮರಾಠಿಗರಿಗೆ ಸರ್ಕಾರ ಘೋಷಣೆ ಮಾಡಿದ ಮೀಸಲಾತಿ ನಿಂತು ಹೋಗಿದೆ. ಅದೇ ರೀತಿ ಪಂಚಮಸಾಲಿ ಸಮುದಾಯದ ಪರಿಸ್ಥಿತಿ ಆಗಬಾರದು. ಕುಲಾಧ್ಯಯನ ಆಗಬೇಕು. ನಾವು ಕೂಡಾ ಸರ್ಕಾರ ನೇಮಕಮಾಡಿದ ನ್ಯಾಯಮೂರ್ತಿ ಸುಭಾಷ್ ಅಡಿ ಅವರ ಸಮಿತಿಗೆ ದಾಖಲೆ ನೀಡಿದ್ದೇವೆ ಎಂದರು. ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರ ನೇತೃತ್ವದಲ್ಲಿ ಸದಸ್ಯರು ರಾಜ್ಯದಲ್ಲಿ ಪಂಚಮಸಾಲಿ ಸಮಾಜದ ಸಮೀಕ್ಷೆ ಆರಂಭಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸಭೆ: ಸರ್ಕಾರದ ಮೇಲೆ ಒತ್ತಡ ಹೇರಲು ಮೂರು ನಿರ್ಣಯ ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರ: ಅತಿ ಹಿಂದುಳಿದ ವರ್ಗಗಳ ಅಧಿಕಾರಿಗಳ ಸಭೆಯಲ್ಲಿ ವಿರೋಧ
Published On - 6:14 pm, Sat, 25 December 21