ಹಾವೇರಿ ಚಿತ್ರಕಲಾ ಶಿಕ್ಷಕ ಪರಮೇಶ್ವರ ಹುಲಮನಿ ಕೈಚಳಕ; ಮಕ್ಕಳನ್ನು ಶಾಲೆಯತ್ತ ಸೆಳೆಯಲು ವಿನೂತನ ಪ್ರಯತ್ನ
ಸರಕಾರಿ ಶಾಲೆಗಳು ಅಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಜಿಲ್ಲೆಯ ಸರಕಾರಿ ಪ್ರೌಢಶಾಲೆಗೆ ಭೇಟಿ ಕೊಟ್ಟು ನೋಡಿದರೆ.. ಮಕ್ಕಳನ್ನ ಓದಿಸಿದ್ರೆ ಇಂಥಾ ಶಾಲೆಗಳಲ್ಲೇ ಓದಿಸಬೇಕು ಅನಿಸುತ್ತದೆ. ಹಾಗಾದರೆ ಈ ಶಾಲೆ ಇರುವುದೆಲ್ಲಿ?
ಹಾವೇರಿ: ಸರಕಾರಿ ಶಾಲೆಗಳು ಅಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಯಡಗೋಡ ಗ್ರಾಮದಲ್ಲಿರೋ ಸರಕಾರಿ ಪ್ರೌಢಶಾಲೆಗೆ ಭೇಟಿ ಕೊಟ್ಟು ನೋಡಿದರೆ.. ಮಕ್ಕಳನ್ನ ಓದಿಸಿದ್ರೆ ಇಂಥಾ ಶಾಲೆಗಳಲ್ಲೇ ಓದಿಸಬೇಕು ಅನಿಸುತ್ತದೆ. ಏಕೆಂದರೆ, ಶಾಲೆಯ ಶಿಕ್ಷಕರ ಪ್ರಯತ್ನದಿಂದ ಶಾಲೆ ಕಲರ್ ಫುಲ್ ಆಗಿ ಮಕ್ಕಳನ್ನ ತನ್ನತ್ತ ಕೈಬೀಸಿ ಕರೆಯುತ್ತದೆ. ಇದಕ್ಕೆ ಕಾರಣರು ಚಿತ್ರಕಲಾ ಶಿಕ್ಷಕ ಪರಮೇಶ್ವರ ಹುಲಮನಿ ಹಾಗೂ ಶಾಲೆಯ ಶಿಕ್ಷಕರ ತಂಡ.
ಶಾಲೆಯ ಗೋಡೆಗಳ ಮೇಲೆ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಮಕ್ಕಳಿಗೆ ಆಕರ್ಷಣೆಯಾಗುವ, ಕಣ್ಮನ ಸೆಳೆಯುವ ಶಾಲೆಯಲ್ಲಿ ಕುಳಿತು ಅಕ್ಷರಭ್ಯಾಸ ಮಾಡುವ ಸಯೋಗ ಹೊಂದಿದ್ದಾರೆ. ಈ ಗ್ರಾಮದಲ್ಲಿ ಸುಮಾರು ವರ್ಷಗಳ ಹಿಂದೆ ಸರಕಾರಿ ಪ್ರೌಢಶಾಲೆ ಆರಂಭವಾಗಿದೆ. ಆರಂಭದಲ್ಲಿ ಶಾಲಾ ಮಕ್ಕಳ ಸಂಖ್ಯೆ ಹೇಳಿಕೊಳ್ಳುವಷ್ಟು ಇರಲಿಲ್ಲ. ಆದರೆ, ಈಗ ಶಾಲೆಯಲ್ಲಿ ಇನ್ನೂರಾ ಮೂವತ್ತಕ್ಕೂ ಅಧಿಕ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಎಂಟರಿಂದ ಹತ್ತನೆ ತರಗತಿವರೆಗಿನ ಮಕ್ಕಳು ಶಾಲೆಯಲ್ಲಿ ಅಭ್ಯಾಸ ಮಾಡ್ತಿದ್ದಾರೆ.
ಕೊರೊನಾ ಲಾಕ್ ಡೌನ್ ಸಮಯದಲ್ಲಿ ಚಿತ್ರಕಲಾ ಶಿಕ್ಷಕ ಪರಮೇಶ್ವರ ಹುಲಮನಿ ಕೈಚಳಕ: ಈ ಮೊದಲು ಶಾಲಾ ಗೋಡೆಗಳು ಅಷ್ಟೊಂದು ಸುಂದರವಾಗಿ ಇರಲಿಲ್ಲ. ಆದರೆ, ಕೊರೊನಾ ಲಾಕ್ ಡೌನ್ ಸಮಯದಲ್ಲಿ ಶಾಲೆಯಲ್ಲಿರೋ ಚಿತ್ರಕಲಾ ಶಿಕ್ಷಕ ಪರಮೇಶ್ವರ ಹುಲಮನಿ ಹಾಗೂ ಶಾಲೆಯ ಶಿಕ್ಷಕರ ತಂಡ ಶಾಲೆಗೆ ಕಲರ್ ಫುಲ್ ಟಚ್ ನೀಡಲು ನಿರ್ಧಾರ ಮಾಡಿದರು. ಅದರಂತೆ, ಶಿಕ್ಷಕರು ಸರಕಾರಿ ಅನುದಾನದ ಜೊತೆಗೆ ತಮ್ಮ ಸ್ವಂತ ಹಣ ಸೇರಿಸಿ ಶಾಲಾ ಗೋಡೆಗಳ ಮೇಲೆ, ಮಕ್ಕಳಿಗೆ ಇಷ್ಟವಾಗುವಂತೆ, ಒಂದೊಂದು ಕತೆಗಳನ್ನ ಹೇಳುವ ಜಾನಪದ ಕಲೆಗಳ ಚಿತ್ರಗಳು ಹಾಗೂ ವಿವಿಧ ಬಗೆಯ ಚಿತ್ರಗಳನ್ನ ಬಿಡಿಸಿದ್ದಾರೆ. ಇದರಿಂದ ಶಾಲೆಯತ್ತ ಮಕ್ಕಳು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
ಹಸಿರಿನಿಂದ ಕಂಗೊಳಿಸುವ ಶಾಲಾ ಆವರಣ: ಶಾಲೆಗಳ ಗೋಡೆಗಳ ಮೇಲೆ ಶಿಕ್ಷಕರು ಬಣ್ಣಬಣ್ಣದ ಚಿತ್ರಗಳನ್ನ ಬಿಡಿಸಿದ್ದಾರೆ. ವರ್ಲಿ ಕಲೆಯ ಜೊತೆಗೆ ಮಕ್ಕಳಿಗೆ ಜಾನಪದ ಕಲೆಗಳ ಮಹತ್ವ ಪರಿಚಯಿಸೋ ಕಲೆಗಳನ್ನ ಬಿಡಿಸಿದ್ದಾರೆ. ಮಕ್ಕಳು ಕೂಡ ಶಾಲೆಯ ಗೋಡೆಗಳ ಮೇಲಿನ ಕಲರ್‌ಫುಲ್ ಚಿತ್ರಗಳನ್ನ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಶಾಲೆಯಲ್ಲಿ ಯಡಗೋಡ ಗ್ರಾಮದ ಮಕ್ಕಳು ಮಾತ್ರವಲ್ಲ ಹತ್ತಿರದ ಕುಡುಪಲಿ, ಮಾದಾಪುರ ಸೇರಿದಂತೆ ನಾಲ್ಕೈದು ಗ್ರಾಮಗಳ ಮಕ್ಕಳು ಬರುತ್ತಿದ್ದಾರೆ. ಶಾಲಾ ಗೋಡೆಗಳಲ್ಲದೆ ಶಾಲಾ ಆವರಣವೂ ಸಹ ಹಸಿರಿನಿಂದ ಕಂಗೊಳಿಸುತ್ತಿದೆ.
ಇನ್ನು ಶಾಲೆಯ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಅನೇಕ ರೀತಿಯ ಕಾರ್ಯಕ್ರಮಗಳನ್ನ ರೂಪಿಸಿದ್ದಾರೆ. ಇದರಿಂದ ಶಾಲೆಯ ಮಕ್ಕಳ ಶೈಕ್ಷಣಿಕ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಸಾಗುತ್ತಿದೆ. ಇದರಿಂದ ಮಕ್ಕಳ ಸಂಖ್ಯೆ ಕೂಡ ಶಾಲೆಯಲ್ಲಿ ಹೆಚ್ಚಾಗುತ್ತಿದೆ. ಕಲರ್ ಫುಲ್ ಆಗಿರೋ ಶಾಲಾ ಗೋಡೆಗಳ ಜೊತೆಗೆ ಶಾಲೆಯಲ್ಲಿ ಸಿಗುತ್ತಿರುವ ಗುಣಮಟ್ಟದ ಶಿಕ್ಷಣದಿಂದ ಪೋಷಕರು ತಮ್ಮ ಮಕ್ಕಳನ್ನ ಈ ಶಾಲೆಗೆ ಸೇರಿಸುತ್ತಿದ್ದಾರೆ. ಶಾಲೆಗೆ ಬರುವ ಮಕ್ಕಳ ಶೈಕ್ಷಣಿಕ ಪ್ರಗತಿ ಹೆಚ್ಚಾಗುತ್ತಿದ್ದು, ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ ಅನ್ನೋ ಹಾಗೆ ಸರಕಾರಿ ಶಾಲೆ ರೂಪುಗೊಂಡಿದೆ.
ಇತ್ತೀಚೆಗೆ ಅದೆಷ್ಟೋ ಜನ ಪೋಷಕರು ತಮ್ಮ ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ಸೇರಿಸೋಕೆ ಬಯಸುತ್ತಾರೆ. ಹಾಗಾಗಿ, ಯಡಗೋಡ ಗ್ರಾಮದಲ್ಲಿರೋ ಸರಕಾರಿ ಪ್ರೌಢಶಾಲೆ ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ ಅನ್ನೋ ಹಾಗೆ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಪೋಷಕರಂತೂ ನಾ ಮುಂದು ತಾ ಮುಂದು ಅಂತಾ ಎಲ್ಲದರಲ್ಲೂ ಸುಂದರವಾಗಿರೋ ಈ ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನ ಸೇರಿಸಿ ಗುಣಮಟ್ಟದ ಶಿಕ್ಷಣ ಕೊಡಿಸುತ್ತಿದ್ದಾರೆ.
ಇದನ್ನೂ ಓದಿ: ಚಹಾ ಅಂಗಡಿ ಯುವಕ ಕಲಾವಿದ ಸಹ: ಅವಕಾಶದಿಂದ ವಂಚಿತರಾದರೂ ಚಿತ್ರಕಲೆ ಮಾತ್ರ ಬಿಟ್ಟಿಲ್ಲ!