ಪೋಷಕರೇ ಎಚ್ಚರ: ಕರ್ನಾಟಕದಲ್ಲಿ ಮಕ್ಕಳನ್ನೇ ಹೆಚ್ಚು ಬಾಧಿಸುತ್ತಿದೆ ಡೆಂಗ್ಯೂ!

ಕಳೆದ ಒಂದು ತಿಂಗಳಿನಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಡೆಂಗ್ಯೂ ಹೆಚ್ಚಾಗುತ್ತಿದ್ದು, ಜನವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 8658 ಪ್ರಕರಣಗಳು ದಾಖಲಾಗಿವೆ. ಏಳು ಜನ ಮೃತಪಟ್ಟಿದ್ದಾರೆ. ಆದರೆ ಈಗ ಆತಂಕಕ್ಕೆ ಕಾರಣವಾಗಿರುವುದು ಡೆಂಗ್ಯೂಗೆ ಮಕ್ಕಳಲ್ಲೇ ಹೆಚ್ಚು ಭಾದಿತರಾಗುತ್ತಿರುವುದು. ಈ ಕುರಿತು ವರದಿ ಇಲ್ಲಿದೆ.

ಪೋಷಕರೇ ಎಚ್ಚರ: ಕರ್ನಾಟಕದಲ್ಲಿ ಮಕ್ಕಳನ್ನೇ ಹೆಚ್ಚು ಬಾಧಿಸುತ್ತಿದೆ ಡೆಂಗ್ಯೂ!
ಡೆಂಗ್ಯೂಯಿಂದ ದಾಖಲಾದ ಮಕ್ಕಳು
Follow us
Vinay Kashappanavar
| Updated By: ವಿವೇಕ ಬಿರಾದಾರ

Updated on: Jul 14, 2024 | 8:45 AM

ಬೆಂಗಳೂರು, ಜುಲೈ 14: ರಾಜಧಾನಿ ಬೆಂಗಳೂರು (Bengaluru) ಸೇರಿದ್ದಂತೆ ರಾಜ್ಯದಲ್ಲಿ 1 ರಿಂದ 18 ವರ್ಷದವರಲ್ಲಿ ಹೆಚ್ಚಾಗಿ ಡೆಂಗ್ಯೂ (Dengue) ಪತ್ತೆಯಾಗುತ್ತಿದ್ದು ಪೋಷಕರು ಎಚ್ಚರವಹಿಸಬೇಕು ಎಂದು ಕರ್ನಾಟಕ ಆರೋಗ್ಯ ಇಲಾಖೆ (Health Department) ಸೂಚನೆ ನೀಡಿದೆ. ಕಳೆದ ಒಂದು ತಿಂಗಳಿನಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಡೆಂಗ್ಯೂ ಹೆಚ್ಚಾಗುತ್ತಿದ್ದು, ಜನವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 8658 ಪ್ರಕರಣಗಳು ದಾಖಲಾಗಿವೆ. ಏಳು ಜನ ಮೃತಪಟ್ಟಿದ್ದಾರೆ. ಆದರೆ ಈಗ ಆತಂಕಕ್ಕೆ ಕಾರಣವಾಗಿರುವುದು ಡೆಂಗ್ಯೂಗೆ ಮಕ್ಕಳಲ್ಲೇ ಹೆಚ್ಚು ಭಾದಿತರಾಗುತ್ತಿರುವುದು.

ಕಳೆದ 24 ಗಂಟೆಯಲ್ಲಿ 1 ರಿಂದ 18 ವರ್ಷ ಒಳಗಿನ 154 ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಒಟ್ಟು ಜನವರಿಯಿಂದ ಇಲ್ಲಿಯವರೆಗೆ 1 ರಿಂದ 18 ವರ್ಷ ವಯಸ್ಸಿನ 2395 ಮಕ್ಕಳಿಗೆ ಡೆಂಗ್ಯೂ ಬಾಧಿಸಿದೆ. ಹೀಗಾಗಿ ಪೋಷಕರು ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವೈದ್ಯರು ಸೂಚಿಸಿದ್ದಾರೆ.

ಕಳೆದ 24 ಗಂಟೆಯಲ್ಲಿ 1 ವರ್ಷದೊಳಗಿನ ಏಳು ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಒಂದು ವಾರದ ಹಿಂದೆ ನಾಲ್ಕು ಮಕ್ಕಳಲ್ಲಿ ಕಾಣಿಸಿಕೊಂಡಿತ್ತು. ಜನೆವರಿಯಿಂದ ಒಟ್ಟು 150 ಮಕ್ಕಳಿಗೆ ಡೆಂಗ್ಯೂ ಪಾಸಿಟಿವ್ ಬಂದಿಸಿದೆ.

ಕಳೆದ 24 ಗಂಟೆಯಲ್ಲಿ 1 ವರ್ಷದಿಂದ 18 ವರ್ಷದೊಳಗಿನ 154 ಮಕ್ಕಳಿಗೆ ಡೆಂಗ್ಯೂ ಬಂದಿದೆ. ಒಂದು ವಾರದ ಹಿಂದೆ 1 ವರ್ಷದಿಂದ 18 ವರ್ಷದೊಳಗಿನ 44 ಮಕ್ಕಳಿಗೆ ಡೆಂಗ್ಯೂ ಬಾಧಿಸಿತ್ತು. ಜನವರಿಯಿಂದ ಇಲ್ಲಿಯವರೆಗೆ ಒಟ್ಟು 2395 ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ದಿನೇದಿನೆ ಡೆಂಗ್ಯೂ ಕೇಸ್​ಗಳು ಹೆಚ್ಚಳ: ಒಂದೇ ದಿನದಲ್ಲಿ 424 ಪ್ರಕರಣ ದಾಖಲು

ಈ ಬಗ್ಗೆ ಕೆಸಿ ಜನರಲ್ ಆಸ್ಪತ್ರೆ ವೈದ್ಯೆ ರೆಶ್ಮಿ ಮಾತನಾಡಿ ಮನೆ, ಶಾಲೆ ಸುತ್ತಮುತ್ತ ಸ್ವಚ್ಛವಾಗಿಡಬೇಕು. ಸೊಳ್ಳೆ ಉತ್ಪತ್ತಿಯನ್ನು ತಡೆಯಬೇಕು. ಸೊಳ್ಳೆ ಕಚ್ಚದಂತೆ ಮನೆಯಲ್ಲಿ ಸೊಳ್ಳೆ ಪರದೆ ಹಾಕಬೇಕು. ಮಗುವಿನ ಬಳಿ ಸೊಳ್ಳೆ ಸುಳಿಯದಂತೆ ಎಚ್ಚರ ವಹಿಸಬೇಕು. ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ನಗರದಲ್ಲಿ ವೈರಲ್ ಫೀವರ್ ಹೆಚ್ಚಾಗಿದೆ. ಜ್ವರ, ಶೀತ, ಪ್ರಕರಣಗಳ ಜತೆ ಡೆಂಗ್ಯೂ ಪ್ರಕರಣಗಳು ಕೂಡ ಹೆಚ್ಚಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಗ್ಯೂ ಲಕ್ಷಣಗಳು ಬದಲಾಗಿವೆ. ಜ್ವರ ಬಿಟ್ಟು ಬಿಟ್ಟು ಬರುತ್ತಿದೆ ಎಂದು ಹೇಳಿದರು.

ಆರಂಭದಲ್ಲಿ ಮಕ್ಕಳಿಗೆ ಸಣ್ಣ ಪ್ರಮಾಣದಲ್ಲಿ ಜ್ವರದ ರೂಪದಲ್ಲಿ ಕಾಣಿಸಿಕೊಂಡು ನಂತರ ತೀವ್ರ ಸ್ವರೂಪಕ್ಕೆ ತಿರುಗುತ್ತಿದೆ. ಪೋಷಕರು ನಿರ್ಲಕ್ಷ್ಯ ವಹಿಸಿದರೆ ಮಕ್ಕಳು ಡೆಂಗ್ಯೂ ವಾರಗಟ್ಟಲೇ ತೀವ್ರ ಜ್ವರ, ವಿಪರೀತ ತಲೆನೋವು, ಮೈ-ಕೈ ನೋವು, ಗಂಟುಗಳಲ್ಲಿ ನೋವು, ಒಸಡು ಹಾಗೂ ಮೂಗಿನಿಂದಲೂ ರಕ್ತಸ್ರಾವ ಆಗುವ ಸಾಧ್ಯತೆ ಇರುತ್ತದೆ. ಡೆಂಗ್ಯೂನಿಂದ ಮಕ್ಕಳಲ್ಲಿ ತೀವ್ರ ಧೀರ್ಘಕಾಲಿಕ ಜ್ವರ, ಉಸಿರಾಟದ ಸಮಸ್ಯೆ, ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದ್ದು ಯಾವುದೇ ಕಾರಣಕ್ಕೂ ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ ಒಂದು ವರ್ಷದ ಮಕ್ಕಳಲ್ಲೂ ಡೆಂಘಿ ಕಾಣಿಸಿಕೊಳ್ಳುತ್ತಿದ್ದು, ಆತಂಕ ಹೆಚ್ಚಿಸಿದೆ. ಪೋಷಕರು ಕೂಡಲೇ ಎಚ್ಚೆತ್ತು ತಮ್ಮ ಮನೆಗಳಲ್ಲಿ ಚಿಕ್ಕ ಮಕ್ಕಳು ಇದ್ದರೆ ಕೂಡಲೇ ಮುಂಜಾಗ್ರತೆ ವಹಿಸುವುದು ಒಳ್ಳೆಯದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ