ಅಶ್ಲೀಲ ವಿಡಿಯೋ ಪ್ರಕರಣ: ಸಿಎಂ ಪತ್ರ ಬೆನ್ನಲ್ಲೇ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ಕೊಟ್ಟ ವಿದೇಶಾಂಗ ಸಚಿವಾಲಯ

ಅಶ್ಲೀಲ ವಿಡಿಯೋ ಪ್ರಕರಣ ದಾಖಲಾಗುತ್ತಿದ್ದಂತೆಯೇ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್​ಪೋರ್ಟ್​ ರದ್ದುಗೊಳಿಸುವಂತೆ ಮುಖ್ಯಮಂತ್ರಿ, ಎಸ್​ಐಟಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಇದರ ಬೆನ್ನಲ್ಲೆ ಇದೀಗ ವಿದೇಶಾಂಗ ಸಚಿವಾಲಯವು ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ಕೊಟ್ಟಿದೆ.

ಅಶ್ಲೀಲ ವಿಡಿಯೋ ಪ್ರಕರಣ: ಸಿಎಂ ಪತ್ರ ಬೆನ್ನಲ್ಲೇ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ಕೊಟ್ಟ ವಿದೇಶಾಂಗ ಸಚಿವಾಲಯ
ಪ್ರಜ್ವಲ್ ರೇವಣ್ಣ
Updated By: ರಮೇಶ್ ಬಿ. ಜವಳಗೇರಾ

Updated on: May 24, 2024 | 4:08 PM

ನವದೆಹಲಿ, (ಮೇ 24): ಅಶ್ಲೀಲ ವಿಡಿಯೋ ಪೆನ್​ಡ್ರೈವ್​ ಪ್ರಕರಣದಲ್ಲಿ(Hassan Pen drive Case)  ಸಿಲುಕಿಕೊಂಡು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ  (Prajwal revanna)ವಿದೇಶಾಂಗ ಸಚಿವಾಲಯ  (external affairs minister of India) ಮೊದಲ ಬಾರಿಗೆ ಬಿಗ್ ಶಾಕ್ ಕೊಟ್ಟಿದೆ. ಪ್ರಜ್ವಲ್ ರೇವಣ್ಣ ಅವರ ಪಾಸ್​ಪೋರ್ಟ್ ರದ್ದುಗೊಳಿಸುವಂತೆ ಎಸ್​ಐಟಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸೆರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದರ ಬೆನ್ನಲೇ ಇದೀಗ ವಿದೇಶಾಂಗ ಸಚಿವಾಲಯವು, ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ವಿದೇಶಕ್ಕೆ‌ ಯಾವ ಕೆಲಸದ ಮೇಲೆ‌ ವಿದೇಶಕ್ಕೆ‌ ಹೋಗಲಾಗಿದೆ. ಹಾಗೇ ವಿದೇಶದಿಂದ ವಾಪಾಸ್ ಬರುವ ಬಗ್ಗೆಯೂ ಮಾಹಿತಿ ನೀಡಬೇಕಿದೆ. ಅಲ್ಲದೇ ಯಾಕೆ ಪಾಸ್ ಪೋರ್ಟ್ ರದ್ದು ಮಾಡಬಾರದು ಎಂಬುದಕ್ಕೆ ಸಮಜಾಯಿಸಿ ನೀಡಬೇಕಿದೆ. ಈ ಎಲ್ಲಾ ಮಾಹಿತಿಯನ್ನು ವಿದೇಶಾಂಗ ಸಚಿವಾಲಯಕ್ಕೆ 10 ದಿನಗಳ ಒಳಗೆ ಮಾಹಿತಿ ನೀಡಬೇಕಿದೆ. ಇದರಿಂದ ಪ್ರಜ್ವಲ್​​ಗೆ ಹಂತ ಹಂತವಾಗಿ ಸಂಕಷ್ಟು ಶುರುವಾದಂತಾಗಿದೆ.

ಇದನ್ನೂ ಓದಿ: Prajwal Revanna: ಪ್ರಜ್ವಲ್ ರೇವಣ್ಣ ಪಾಸ್​ಪೋರ್ಟ್​ ರದ್ದು ಮಾಡುವವರ್ಯಾರು? ನಿಯಮಗಳೇನು? ಇಲ್ಲಿದೆ ವಿವರ

ಕಳೆದ ಏಪ್ರಿಲ್ 26ರಂದೇ ಪ್ರಜ್ವಲ್​ ರೇವಣ್ಣ ದೇಶ ಬಿಟ್ಟು ಜರ್ಮನಿಗೆ ಓಡಿ ಹೋಗಿದ್ದಾರೆ. ಯಾವುದೇ ನೋಟಿಸ್ ಜಾರಿ ಮಾಡಿದರೂ ಸಹ ಪ್ರಜ್ವಲ್ ಕ್ಯಾರೇ ಎನ್ನುತ್ತಿಲ್ಲ. ಈ ಸಂಬಂಧ ಅವರ ರಾಜತಾಂತ್ರಿಕ ಪಾಸ್​ಪೋರ್ಟ್​ ರದ್ದುಗೊಳಿಸುವಂತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಆದ್ರೆ, ಪತ್ರಕ್ಕೆ ಸ್ಪಂದನೆ ಸಿಗದ ಕಾರಣ ಮೊನ್ನೇ ಅಷ್ಟೇ ಸಿದ್ದರಾಮಯ್ಯ ಮತ್ತೊಂದು ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ಇದೀಗ ವಿದೇಶಾಂಗ ಸಚಿವಾಲಯ ಪ್ರಜ್ವಲ್​ಗೆ ಶೋಕಾಸ್ ನೋಟಿಸ್ ನೀಡಿದೆ. ಈ ನೋಟಿಸ್ ಮೂಲಕ ಪಾಸ್​ಪೋರ್ಟ್​ ರದ್ದುಗೊಳಿಸುವ ಬಗ್ಗೆ ಪ್ರಜ್ವಲ್​ಗೆ ಉತ್ತರ ಕೇಳಿದೆ. ಇದರಿಂದ ಪ್ರಜ್ವಲ್​ಗೆ ಮತ್ತಷ್ಟು ಸಂಕಷ್ಟ ಎದುರಾದಂತಾಗಿದೆ.

ಅಶ್ಲೀಲ ಪೆನ್​ಡ್ರೈವ್​ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್​ಐಟಿ ವಹಿಸಿದ್ದು, ಎಸ್​ಐಟಿ ಅಧಿಕಾರಿಗಳು ಈ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿದ್ದಾರೆ. ಆದ್ರೆ, ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಮಾತ್ರ ಇದುವರೆಗೂ ಪತ್ತೆಯಾಗಿಲ್ಲ. ಈಗಾಗಲೇ ಎಸ್​ಐಟಿ ಅಧಿಕಾರಿಗಳು ವಿಚಾರಣೆಗೆ ಬರುವಂತೆ ಪ್ರಜ್ವಲ್​​ಗೆ ನೋಟಿಸ್ ಜಾರಿ ಮಾಡಿದ್ದಾರೆ. ಆದ್ರೆ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್​ ವಿದೇಶದಲ್ಲಿದ್ದುಕೊಂಡೇ ತಮ್ಮ ವಕೀಲರ ಮೂಲಕ ವಿಚಾರಣೆಗೆ ಹಾಜರಾಗಲು ಕೆಲ ದಿನ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಆದರೆ ಕಾಲಾವಕಾಶ ಮುಗಿದರೂ ಸಹ ಪ್ರಜ್ವಲ್​ ವಿಚಾರಣೆಗೆ ಹಾಜರಾಗದೇ ವಿದೇಶದಲ್ಲಿ ಕುಳಿತುಕೊಂಡಿದ್ದಾರೆ.

ಜರ್ಮನಿಯಿಂದ ಬೆಂಗಳೂರಿಗೆ ಬರಲು ವಿಮಾನ ಟಿಕೆಟ್ ಬುಕ್ ಮಾಡುತ್ತಾರೆ. ಆದ್ರೆ, ಕೊನೆ ಕ್ಷಣದಲ್ಲಿ ಟಿಕೆಟ್​ ರದ್ದು ಮಾಡುತ್ತಿದ್ದಾರೆ. ಒಟ್ಟು ಮೂರು ಬಾರಿ ಟಿಕೆಟ್​ ಬುಕ್ ಮಾಡುವುದು ಬಳಿಕ ರದ್ದು ಮಾಡಿದ್ದಾರೆ. ಇದರೊಂದಿಗೆ ವಿದೇಶದಲ್ಲಿದ್ದುಕೊಂಡು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:09 pm, Fri, 24 May 24