ಸೈಟ್​ನಲ್ಲಿದ್ದ ಕಸ ಸ್ವಚ್ಚಗೊಳಿಸದೇ ಇದ್ದರೆ ದಂಡ ಹಾಕಿ: ಬಿಡಿಎಗೆ ನಿರ್ದೇಶನ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 09, 2024 | 9:13 PM

ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಖಾಲಿ ಸೈಟ್‌ನಲ್ಲಿ ಕಸ‌ ವಿಲೇವಾರಿ ಮಾಡದ ವಿಚಾರವಾಗಿ ಬಿಬಿಎಂಪಿಯ ಆರ್.ಆರ್.ನಗರ ವಲಯದ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ಹಾಗಾಗಿ ಇಂದು ಸ್ವಯಂಪ್ರೇರಿತ ಕೇಸ್ ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾ. ಬಿಎಸ್​ ಪಾಟೀಲ್​, ಸೈಟ್​ನಲ್ಲಿದ್ದ ಕಸ ಸ್ವಚ್ಚಗೊಳಿಸದೇ ಇದ್ದರೆ ದಂಡ ವಿಧಿಸುವಂತೆ ಬಿಡಿಎಗೆ ನಿರ್ದೇಶನ ನೀಡಿದೆ.

ಸೈಟ್​ನಲ್ಲಿದ್ದ ಕಸ ಸ್ವಚ್ಚಗೊಳಿಸದೇ ಇದ್ದರೆ ದಂಡ ಹಾಕಿ: ಬಿಡಿಎಗೆ ನಿರ್ದೇಶನ
ಸೈಟ್​ನಲ್ಲಿದ್ದ ಕಸ ಸ್ವಚ್ಚಗೊಳಿಸದೇ ಇದ್ದರೆ ದಂಡ ಹಾಕಿ: ಬಿಡಿಎಗೆ ನಿರ್ದೇಶನ
Follow us on

ಬೆಂಗಳೂರು, ಅಕ್ಟೋಬರ್​ 09: ಬೆಂಗಳೂರಿನಲ್ಲಿ ಘನತ್ಯಾಜ್ಯ ವಿಲೇವಾರಿ ಲೋಪ ಪ್ರಕರಣದ ಬಗ್ಗೆ ಸ್ವಯಂಪ್ರೇರಿತ ಕೇಸ್ ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾ. ಬಿ.ಎಸ್​. ಪಾಟೀಲ್​, ಮಾಲೀಕರು ತಮ್ಮ ಸೈಟ್​ನಲ್ಲಿದ್ದ ಕಸ ಸ್ವಚ್ಚಗೊಳಿಸದೇ ಇದ್ದರೆ ದಂಡ ಹಾಕಿ ಎಂದು ಬಿಡಿಎಗೆ (BDA) ನಿರ್ದೇಶನ ನೀಡಿದ್ದಾರೆ. ಸ್ವಚ್ಚಗೊಳಿಸುವ ವೆಚ್ಚ ವಸೂಲಿ ಮಾಡಿ ಬಿಬಿಎಂಪಿಗೆ ಪಾವತಿಸುವಂತೆ ಸೂಚನೆ ನೀಡಲಾಗಿದೆ.

ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಖಾಲಿ ಸೈಟ್‌ನಲ್ಲಿ ಕಸ‌ ವಿಲೇವಾರಿ ಮಾಡದ ವಿಚಾರವಾಗಿ ಬಿಬಿಎಂಪಿಯ ಆರ್.ಆರ್.ನಗರ ವಲಯದ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ಹೀಗಾಗಿ ವಲಯ ಆಯುಕ್ತರು, ಜಂಟಿ ಆಯುಕ್ತರು, ಘನ ತ್ಯಾಜ್ಯ ನಿರ್ವಹಣೆ ಲಿ.,‌ ಮಾಲಿನ್ಯ ನಿಯಂತ್ರಣ ಮಂಡಳಿ, BWSSB ಅಧಿಕಾರಿಗಳು
ಬಿಡಿಎ ಪಶ್ಚಿಮ ವಿಭಾಗದ ಇಇ ಹಾಗೂ ಎಇ ಇಂದು ವಿಚಾರಣೆಗೆ ಹಾಜರಾಗಿದ್ದರು.

ಬೀದಿ ದೀಪಗಳ ಅಳವಡಿಕೆಗೆ ಸೂಚನೆ

ಸದ್ಯ ಮಾಲೀಕರಿಗೆ ನೊಟೀಸ್‌ ನೀಡುವಂತೆ ಬಿಡಿಎ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಖಾಲಿ ಸೈಟ್ ಅಕ್ಕ-ಪಕ್ಕದಲ್ಲಿರುವವರಿಗೆ ವಾಸಯೋಗ್ಯ ವಾತಾವರಣ ಸೃಷ್ಟಿಸಬೇಕು. ಲೇಔಟ್‌ನಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು. ಆ ಮೂಲಕ ಕತ್ತಲಲ್ಲಿ ಕಸ ಬಿಸಾಡುವುದನ್ನು ನಿಲ್ಲಿಸುತ್ತಾರೆ. ಬ್ಲಾಕ್ ಸ್ಪಾಟ್‌ಗಳು ಕಡಿಮೆಯಾಗುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಟೆಂಡರ್​ ಗೋಲ್ ಮಾಲ್: ಬಿಬಿಎಂಪಿ ಆರೋಗ್ಯಾಧಿಕಾರಿ ವಿರುದ್ಧ ಲಕ್ಷಾಂತರ ರೂ. ವಂಚನೆ ಆರೋಪ

ಬೆಂಗಳೂರು ವಿವಿ ಆವರಣದಲ್ಲಿ ವಾಯು ವಿಹಾರಕ್ಕೆ ಬರುವವರು ಕಸ ಬಿಸಾಡುತ್ತಿದ್ದಾರೆ. ಹೀಗಾಗಿ ಕಸ ಆಗುತ್ತಿದೆ ಎಂದು ನ್ಯಾಯಮೂರ್ತಿಗಳಿಗೆ ಆರ್.ಆರ್ ನಗರ ವಲಯ ಆಯುಕ್ತರು ದೂರು ನೀಡಿದ್ದಾರೆ. ಜನರಿಗೆ ಜಾಗೃತಿ ಮೂಡಿಸಲು ವಿವಿ ಉಪ ಕುಲಸಚಿವರಿಗೆ ಲೋಕಾಯುಕ್ತ ಸಂಸ್ಥೆಯಿಂದ ಪತ್ರ ಬರೆಯುವಂತೆ ನ್ಯಾಯಮೂರ್ತಿಗಳು ಸೂಚಿಸಿದ್ದು, ನಾಲ್ಕು ವಾರದೊಳಗೆ ವರದಿ ಪಡೆಯುವಂತೆ ನಿರ್ದೇಶಿಸಲಾಗಿದೆ.

ವಿಶ್ವೇಶ್ವರಯ್ಯ ಲೇಔಟ್‌ನಲ್ಲಿನ ಕೆಲವು ಭಾಗವು ಪಂಚಾಯತಿ ವ್ಯಾಪ್ತಿಗೆ ಬರುತ್ತೆ. ಸ್ವಚ್ಛತೆ ಕಾಪಾಡಲು ಕಷ್ಟವಾಗುತ್ತಿದೆ ಎಂದು ವಲಯ ಆಯುಕ್ತರು ತಿಳಿಸಿದ್ದು, ಆಗ ಯಾವುದೇ ನೆಪ ಹೇಳದಂತೆ ನ್ಯಾಯಮೂರ್ತಿಗಳು ಗರಂ ಆದರು. ಹೆಚ್ಚುವರಿ ಪೌರಕಾರ್ಮಿಕರು, ಸ್ವಚ್ಚತಾ ಸಿಬ್ಬಂದಿ ಹಾಗೂ ಆಟೋ ಟಿಪ್ಪರ್‌ ಬಳಸಿಕೊಂಡು ಸ್ವಚ್ಛತೆ ಕಾಪಾಡುವಂತೆ ತಾಕೀತು ಮಾಡಿದ್ದಾರೆ. ಲೋಕಾಯುಕ್ತದಿಂದ ಅನಿರೀಕ್ಷಿತ ತಪಾಸಣೆ ನಡೆಸುವ ಎಚ್ಚರಿಕೆ ಕೂಡ ನೀಡಿದ್ದಾರೆ. ತಪಾಸಣೆ ವೇಳೆ ಸ್ವಚ್ಚತೆ ವಿಷಯದಲ್ಲಿ ಲೋಪದೋಷ ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಜನವರಿ 2022ರಿಂದ ಬಿಡಿಎ ನಮಗೆ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಘನ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. 10 ಲಕ್ಷ ರೂ. ಬಿಡುಗಡೆ ಮಾಡಿದ್ದು, ಉಳಿದ 51 ಲಕ್ಷ ರೂ. ಬಿಡುಗಡೆ ಮಾಡಬೇಕು ಎಂದು ಬಿಡಿಎ ತಿಳಿಸಿದೆ. ಬಾಕಿ ಹಣ ಲೆಡ್ಜರ್ ಅಡ್ಜೆಸ್ಟ್‌ಮೆಂಟ್‌ ಮೂಲಕ ಬಿಡುಗಡೆ ಮಾಡ್ತೀವಿ ಅಂತಾ ಉತ್ತರ ನೀಡಲಾಗಿದೆ. ಇನ್ನು ಅನೇಕ ವೆಚ್ಚ ಬಿಡಿಎ ಪಾವತಿಸಬೇಕೆಂದು ವಲಯ ಆಯುಕ್ತರಿಂದ ಮಾಹಿತಿ ನೀಡಿದ್ದು, ಬಾಕಿ ವೆಚ್ಚದ ಬಗ್ಗೆ ಗಮನ ಹರಿಸುವಂತೆ ಬಿಡಿಎ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.‌ಪಾಟೀಲ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಇ-ಖಾತಾ ಪಡೆಯುವುದು ಬಲು ಸುಲಭ: ಇಲ್ಲಿದೆ ಹಂತ ಹಂತದ ಮಾಹಿತಿ

ಬಿಡಿಎ ವಿಶ್ವೇಶ್ವರಯ್ಯ ಲೇಔಟ್‌ನ್ನು ನಮಗೆ ಪೂರ್ಣವಾಗಿ ಹಸ್ತಾಂತರ ಮಾಡಿಲ್ಲ. ಕಸ ವಿಲೇವಾರಿ ಸಮರ್ಪಕವಾಗಿ ಮಾಡಲಾಗುತ್ತಿಲ್ಲವೆಂದು ವಲಯ ಆಯುಕ್ತರು ಹೇಳಿದ್ದು, ಹಸ್ತಾಂತರಿಸದೇ ಇರುವ ಕಾರಣಕ್ಕೆ ಕಸ ವಿಲೇವಾರಿ ಸಮರ್ಪಕವಾಗಿ ಮಾಡದೇ ಇದ್ದರೆ ತೊಂದರೆ ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳು ಹೇಳಿದ್ದಾರೆ. ಕೇವಲ ಆ ಭಾಗಕ್ಕೆ ತೊಂದರೆಯಾಗದೇ ಇಡೀ ಬೆಂಗಳೂರಿಗೆ ವ್ಯಾಪಿಸುತ್ತದೆ. ಹೀಗಾಗಿ ಸಮರ್ಪಕ ಕಸ ವಿಲೇವಾರಿ ಕಾರ್ಯ ಕೈಗೊಳ್ಳಲು ಬಿಬಿಎಂಪಿ ಸೂಚಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.