ಐತಿಹಾಸಿಕ ಮಾವಿನ ಕೆರೆಯಲ್ಲಿ ಅಕ್ರಮ; ಅತಿಕ್ರಮಣ ತೆರವುಗೊಳಿಸದೆ ಹೂಳೆತ್ತಲು ನಿರ್ಧಾರ ಮಾಡಿದವರ ವಿರುದ್ಧ ಜನರ ಆಕ್ರೋಶ
ಸುಮಾರು 139 ಎಕರೆ ಪ್ರದೇಶದ ಈ ಕೆರೆಯನ್ನು ನಿತ್ಯವೂ ಭೂಗಳ್ಳರು ಅತಿಕ್ರಮಿಸುತ್ತಲೇ ಇದ್ದಾರೆ. ಈಗಾಗಲೇ ಈ ಕೆರೆಯ 70 ಎಕರೆ ಭೂಮಿಯನ್ನು ಭೂಗಳ್ಳರು ಕಬಳಿಸಿದ್ದಾರೆ ಎನ್ನುವ ವಿಚಾರ ದಾಖಲೆ ಸಮೇತ ಬಯಲಾಗಿದೆ.
ರಾಯಚೂರು: ಮಾವಿನ ಕೆರೆ ರಾಯಚೂರು ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಕೆರೆ. ಸ್ವಾತಂತ್ರ ಪೂರ್ವದಲ್ಲಿ ಆಮ್ತಲಾಬ್ ಎಂದೆ ಹೆಸರಾಗಿದ್ದ ಈ ಕೆರೆ ಸದ್ಯ ರಾಯಚೂರಿನ ಜನರಿಗೆ ಜೀವಾಳ. ಮಾವಿನ ಕೆರೆಯ ನೀರಿನ ಅಂತರ್ಜಲ ಇಲ್ಲಿನ ಬಡಾವಣೆಗಳ ಕೊಳವೆ ಬಾವಿಗಳ ನೀರಿನ ಮೂಲವಾಗಿದೆ. ಆದರೆ ಈ ಕೆರೆಯ ವಿಶಾಲವಾದ ಪ್ರದೇಶವನ್ನು ನಿತ್ಯವೂ ಭೂಗಳ್ಳರು ಅತಿಕ್ರಮಿಸುತ್ತಿದ್ದಾರೆ. ಈ ನಡುವೆ ಈ ಕೆರೆಯ ಅತಿಕ್ರಮಣ ತೆರವುಗೊಳಿಸಿ ಗಡಿ ಗುರುತಿಸದೇ ಕೆರೆಯ ಹೂಳೆತ್ತುವ ನೆಪದಲ್ಲಿ ಕೋಟಿ ಕೋಟಿ ಹಣ ಲೂಟಿಗೆ ಅಧಿಕಾರಿಗಳು ಮುಂದಾಗಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ.
ಸುಮಾರು 139 ಎಕರೆ ಪ್ರದೇಶದ ಈ ಕೆರೆಯನ್ನು ನಿತ್ಯವೂ ಭೂಗಳ್ಳರು ಅತಿಕ್ರಮಿಸುತ್ತಲೇ ಇದ್ದಾರೆ. ಈಗಾಗಲೇ ಈ ಕೆರೆಯ 70 ಎಕರೆ ಭೂಮಿಯನ್ನು ಭೂಗಳ್ಳರು ಕಬಳಿಸಿದ್ದಾರೆ ಎನ್ನುವ ವಿಚಾರ ದಾಖಲೆ ಸಮೇತ ಬಯಲಾಗಿದೆ. ಸ್ವಾತಂತ್ರ ಪೂರ್ವದಲ್ಲಿ ಹೈದರಾಬಾದ್ನ ನಿಜಾಮನ ಕಾಲದಲ್ಲಿ ಆಮ್ತಲಾಬ್ ಎಂದೆ ಹೆಸರಾಗಿದ್ದ ಈ ಮಾವಿನ ಕೆರೆಯ ಸುತ್ತಲೂ ಐಡಿಎಸ್ಎಂಟಿ ಬಡಾವಣೆ ನಿರ್ಮಿಸಿ ನೂರಾರು ಮನೆಗಳನ್ನು ಕಟ್ಟಲಾಗಿದೆ. ಅಲ್ಲದೇ ಈ ಕೆರೆಯ ಅಂಗಳದಲ್ಲೆ ಮೂರು ದೇವಸ್ಥಾನಗಳನ್ನು ಸಹ ನಿರ್ಮಿಸಲಾಗಿದೆ.
120 ಜನ ಈ ಕೆರೆಯ ಸುತ್ತಲೂ ಒಡ್ಡು ನಿರ್ಮಿಸಿ ಚಿಕ್ಕ ಚಿಕ್ಕ ಮನೆಗಳನ್ನು ನಿರ್ಮಿಸಿದ್ದಾರೆ. ಇನ್ನು ಕಳೆದ ಹತ್ತು ವರ್ಷದಿಂದಲೂ ನಿರಂತರವಾಗಿ ಈ ಕೆರೆಯ ಭೂಮಿ ನುಂಗಣ್ಣರ ಪಾಲಾಗುತ್ತಲೇ ಇದೆ. ಇನ್ನು ಕೆರೆ ಭೂಮಿ ದೋಚಿದ ಭೂಗಳ್ಳರ ವಿರುದ್ಧಈ ಹಿಂದೆಯೇ ಕ್ರಿಮಿನಲ್ ಕೇಸ್ ದಾಲಿಸಲು ಜಿಲ್ಲಾಡಳಿತ ಸೂಚಿಸಿದ್ದರೂ ನಗರಸಭೆ ಈ ಬಗ್ಗೆ ಗಮನಹರಿಸಿಲ್ಲ ಎಂದು ರಾಯಚೂರು ಜಿಲ್ಲಾಧ್ಯಕ್ಷೆ ಜೆಡಿಎಸ್ ಎಂ. ವಿರೂಪಾಕ್ಷಿ ಹೇಳಿದ್ದಾರೆ.
ಇಷ್ಟೊಂದು ಪ್ರಮಾಣದಲ್ಲಿ ಕೆರೆ ಭೂಮಿ ಒತ್ತುವರಿಯಾಗಿದ್ದು ಗೊತ್ತಿದ್ದರೂ, ಸದ್ಯ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೆರೆ ಹೂಳೆತ್ತುವ ಕೆಲಸಕ್ಕೆ ಮುಂದಾಗಿರೋದು ಸ್ಥಳೀಯರನ್ನು ರೊಚ್ಚಿಗೆಬ್ಬಿಸಿದೆ. ಇನ್ನು ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಕೆರೆಯ ಅರ್ಧ ಭಾಗದ ಪ್ರದೇಶದಲ್ಲಿ ಈಗಾಗಲೇ ನೀರು ತುಂಬಿಕೊಂಡಿದೆ. ಇಂತಹ ಸಂದರ್ಭದಲ್ಲಿ ಕೆರೆಯ ಸೌಂದರ್ಯಿಕರಣ ಮಾಡುವ ಸೋಗಿನಲ್ಲಿ ಹೂಳೆತ್ತುವ ನೆಪದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು 10 ಕೋಟಿಗೂ ಅಧಿಕ ಹಣ ದೋಚಲು ವ್ಯವಸ್ಥಿತ ಯೋಜನೆ ಮಾಡಿದ್ದಾರೆ ಆರೋಪ ಕೇಳಿ ಬಂದಿದೆ.
ಈಗಾಗಲೇ ಕೆರೆಯ ಸುತ್ತಲೂ ಅತಿಕ್ರಮವಾಗಿರುವ ಪ್ರದೇಶವನ್ನು ಗುರುತಿಸಿ ಗಡಿ ಗುರುತಿಸಿ ಸಂಪೂರ್ಣ ಹೂಳೆತ್ತುವ ಕೆಲಸ ಮಾಡಬೇಕಿತ್ತು. ಆದರೆ ಕೆರೆಯ ಮಧ್ಯ ಭಾಗದಲ್ಲಿ ನೆಪಮಾತ್ರಕ್ಕೆ ಮಣ್ಣು ತೋಡಿ ಹೊರ ಹಾಕುತ್ತಿರುವುದು ಹತ್ತಾರು ಅನುಮಾನಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ರಾಯಚೂರು ಪೌರಾಯುಕ್ತ ನಗರಸಭೆ ಅಧಿಕಾರಿ ವೆಂಕಟೇಶ್ ಅವರನ್ನು ಕೇಳಿದರೆ, ಕೆರೆ ಒತ್ತುವರಿ ಬಗ್ಗೆ ಅತಿ ಶೀಘ್ರದಲ್ಲೆ ತೆರವು ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ರಾಯಚೂರು ನಗರದ ಬಹುತೇಕ ಬಡಾವಣೆಗಳ ಜನರಿಗೆ ಅಂರ್ತಜಲ ಒದಗಿಸುತ್ತಿರುವ ಮಾವಿನ ಕೆರೆ ನಿತ್ಯವೂ ಭೂಗಳ್ಳರ ಪಾಲಾಗುತ್ತಲೇ ಇದೆ. ಅಧಿಕಾರಿಗಳಿಗೆ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕೆರೆ ಲೂಟಿಕೋರರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಲ್ಲಿ ಮುಂದಾಗಬೇಕಿದೆ.
ಇದನ್ನೂ ಓದಿ:
ಬೆಳ್ಳಂದೂರು, ವರ್ತೂರು ಕೆರೆಗಳ ಹೂಳೆತ್ತುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಿಎಂ ಯಡಿಯೂರಪ್ಪ ಸೂಚನೆ
ಕೋಲಾರ ಜಿಲ್ಲೆಯ ಅಂತರ್ಜಲ ಹೆಚ್ಚಿಸಲು ಕ್ಯಾಚ್ ದಿ ರೈನ್ ಯೋಜನೆ; ಕೆರೆಗಳ ಅಭಿವೃದ್ಧಿಗೆ ನೂರು ದಿನಗಳ ಗಡುವು