
ನವದೆಹಲಿ/ಬೆಂಗಳೂರು, (ಆಗಸ್ಟ್ 30): ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಆಗಸ್ಟ್ 30) ತಮ್ಮ 137ನೇ ಮನ್ ಕಿ ಬಾತ್ (137th Mann Ki Baat) ಕಾರ್ಯಕ್ರಮದಲ್ಲಿ ಭಾರತದ ಪ್ರಗತಿಯ ವಿವಿಧ ಮುಖಗಳನ್ನು ಅನಾವರಣಗೊಳಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಪಿಎಂ ಸ್ವನಿಧಿ ಯೋಜನೆಯಡಿ ಬೆಂಗಳೂರಿನ ನಿಂಗಮ್ಮ (Bengaluru’s Ningamma )ಅವರ ಸಬಲೀಕರಣ ಬಗ್ಗೆ ಉಲ್ಲೇಖಿಸಿ ಪ್ರಶಂಸಿಸಿದ್ದಾರೆ. ಹೌದು…ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ಬಲ ನೀಡುವ ‘ಪಿಎಂ ಸ್ವನಿಧಿ’ ಯೋಜನೆಯಡಿ ಸಾಲ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಂಡ ಬೆಂಗಳೂರಿನ ನಿಂಗಮ್ಮ ಅವರ ಸಾಧನೆಯನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ. ಜತೆಗೆ ತಾನು ದುಡಿದಿರುವ ಹಣದಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವಾಗಿದ್ದಾರೆ. ಈ ಯೋಜನೆಯ ಒಟ್ಟು ಫಲಾನುಭವಿಗಳಲ್ಲಿ ಸುಮಾರು ಶೇಕಡಾ 46 ರಷ್ಟು ಮಹಿಳೆಯರಿದ್ದು, ಮಹಿಳಾ ಸಬಲೀಕರಣಕ್ಕೆ ಇದು ದೊಡ್ಡ ಸಾಕ್ಷಿ ಎಂದು ಪ್ರಧಾನಿ ಮೋದಿ, ಬೆಂಗಳೂರಿನ ನಿಂಗಮ್ಮನವರ ಸ್ವಾವಲಂಬಿ ಬದುಕನ್ನು ಉದಾಹರಣೆಯಾಗಿ ನೀಡಿದ್ದಾರೆ.
ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ಬಲ ನೀಡುವ ‘ಪಿಎಂ ಸ್ವನಿಧಿ’ ಯೋಜನೆಯಡಿ ಯಶಸ್ವಿಯಾಗಿ ಸದುಉಪಯೋಗ ಮಾಡಿಕೊಂಡಿರುವ ಬೆಂಗಳೂರಿನ ನಿಂಗಮ್ಮ ಮಹಿಳಾ ಸಬಲೀಕರಣಕ್ಕೆ ಸಾಕ್ಷಿಯಾಗಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ ಬೆಂಗಳೂರಿನ ನಿಂಗಮ್ಮ ಯಾರು ಎನ್ನುವುದನ್ನು ನೋಡುವುದಾದರೆ, ಹಾಸನ ಮೂಲದ ನಿಂಗಮ್ಮ ಬೆಂಗಳೂರಿನಲ್ಲಿ ಬೀದಿಬದಿ ವ್ಯಾಪಾರಿಯಾಗಿದ್ದು, ಕೇಂದ್ರ ಸರ್ಕಾರದ ಸ್ವಾನಿಧಿ ಯೋಜನೆ ಉಪಯೋಗದೊಂದಿಗೆ ಮಾಗಡಿ ರಸ್ತೆಯ ಹೊಸಹಳ್ಳಿ ಮೇಟ್ರೋ ನಿಲ್ದಾಣ ಬಳಿ ಬೀದಿಬದಿ ಹೋಟೆಲ್ ನಡೆಸಿ ಜೀವನ ಸಾಗಿಸುತ್ತಿದ್ದಾರೆ. ಇದರಿಂದ ಬರುವ ಲಾಭದಿಂದ ತಮ್ಮ ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಈ ಸ್ವಾನಿಧಿ ಯೋಜನೆಯನ್ನು ಜಾರಿಗೆ ತರಲಾಗಿದ್ದು. ಯಾವುದೇ ತೊಂದರೆ ಇಲ್ಲದೆ ಮಹಿಳೆಯರು, ಕೇಂದ್ರ ಸರ್ಕಾರದ ಸ್ವಾನಿಧಿ ಯೋಜನೆಯಡಿಯಲ್ಲಿ ನೀಡಲಾಗುವ ಕಡಿಮೆ ಬಡ್ಡಿಯಲ್ಲಿ ಲೋನ್ ಪಡೆದುಕೊಂಡು ಸಂತ್ವ ವ್ಯಾಪಾರ ಮಾಡಬಹುದು. ಅದರಂತೆ ನಿಂಗಮ್ಮ ಸಹ ಕಡಿಮೆ ಬಡ್ಡಿಯಲ್ಲಿ ಸ್ವಾನಿಧಿ ಯೋಜನೆ ಅಡಿ 50 ಸಾವಿರ ಲೋನ್ ಪಡೆದುಕೊಂಡು ಬೆಂಗಳೂರಿನ ಮಾಗಡಿ ರಸ್ತೆಯ ಹೊಸಹಳ್ಳಿ ಮೇಟ್ರೋ ನಿಲ್ದಾಣ ಬಳಿ ಬೀದಿಬದಿ ಹೋಟೆಲ್ ನಡೆಸುತ್ತಿದ್ದಾರೆ. ಈ ಹೋಟೆಲ್ನಿಂದ ಬರುವ ಲಾಭದಿಂದಲೇ ಜೀವನ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಿಂಗಮ್ಮಳ ಸ್ವಾಲಂಬಿ ಬದುಕನ್ನು ತಮ್ಮ ಮನ್ ಕೀ ಬಾತ್ನಲ್ಲಿ ಉದಾಹರಣೆಯಾಗಿ ನೀಡಿದ್ದಾರೆ.
Published On - 3:18 pm, Sun, 30 August 26