ನಡುರಸ್ತೆಯಲ್ಲೇ ಯುವಕನಿಂದ ಅಸಭ್ಯ ವರ್ತನೆ: ಯುವತಿ ರಕ್ಷಣೆಗೆ ಬಂದವರನ್ನೇ ಜೈಲಿಗಟ್ಟಿದ ಪೊಲೀಸ್ರು
ಬಾಗಲಕೋಟೆಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಸಹಾಯ ಮಾಡಿದ ಇಬ್ಬರು ಯುವಕರನ್ನು ನವನಗರ ಪೊಲೀಸರು ಬಂಧಿಸಿರುವಂತಹ ಘಟನೆ ನಡೆದಿದೆ. ಸದ್ಯ ಪೊಲೀಸರ ಈ ನಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸಹಾಯ ಮಾಡಿದ್ದೆ ನಮ್ಮ ಮಕ್ಕಳಿಗೆ ಮುಳುವಾಗಿದೆ ಎಂದು ಯುವಕರ ಪೋಷಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ, ಸೆಪ್ಟೆಂಬರ್ 19: ನಡುರಸ್ತೆಯಲ್ಲೇ ವಿದ್ಯಾರ್ಥಿನಿಗೆ ಖಾಸಗಿ ಅಂಗ ತೋರಿಸಿ ಯುವಕನೋರ್ವ ಅಸಭ್ಯವಾಗಿ ವರ್ತಿಸಿದ ಘಟನೆ ಬಾಗಲಕೋಟೆಯ ನವನಗರದ 51 ಸೆಕ್ಟರ್ನಲ್ಲಿ ಸೆ.17ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆ ವೇಳೆ ಯುವತಿ ಸೇರಿದಂತೆ ಸ್ಥಳೀಯರು ಯುವಕನಿಗೆ ಧರ್ಮದೇಟು ನೀಡಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಅದೇನೆಂದರೆ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದವನನ್ನ ಬಿಟ್ಟು ಯುವತಿ ರಕ್ಷಣೆಗೆ ಬಂದಿದ್ದ ಇಬ್ಬರನ್ನ ಪೊಲೀಸರು ಬಂಧಿಸಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ನಡೆದಿದ್ದೇನು?
ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 51ರಲ್ಲಿ ಸೆಪ್ಟೆಂಬರ್ 17ರ ಮಧ್ಯಾಹ್ನ 3ಗಂಟೆಗೆ ಬಿಕಾಂ ವಿದ್ಯಾರ್ಥಿನಿ ಕಾಲೇಜ್ ಮುಗಿಸಿ ವಾಪಸ್ ಸರ್ಕಾರಿ ಹಾಸ್ಟೆಲ್ಗೆ ತೆರಳುತ್ತಿದ್ದಳು. ಇದೇ ಮಾರ್ಗದಲ್ಲಿ ಸುದೀಪ್ ನಾಡಗೌಡ (26) ಎಂಬಾತನ ಮನೆ ಇದೆ. ವಿದ್ಯಾರ್ಥಿನಿ ಬರುತ್ತಿದ್ದಂತೆ ಇತ ತನ್ನ ಖಾಸಗಿ ಅಂಗಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.
ಇದನ್ನೂ ಓದಿ: ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ರೈಲ್ವೆ ಪೊಲೀಸರು ಸೇರಿ 6 ಜನರ ವಿರುದ್ಧ ಕೇಸ್
ವಿದ್ಯಾರ್ಥಿನಿ ಅಲ್ಲೇ ಇದ್ದ ಕೆಲ ಯುವಕರಿಗೆ ವಿಷಯ ತಿಳಿಸಿದ್ದಾಳೆ. ಆಗ ಚೇತನ್ ಕೊಡಬಾಗಿ, ರೋಹನ್ ಹಾದಿಮನಿ ಸೇರಿದಂತೆ ಇನ್ನೊಬ್ಬ ಯುವಕ ಸ್ಥಳಕ್ಕೆ ಬಂದು, ಸುದೀಪ್ನನ್ನ ಥಳಿಸಿದ್ದಾರೆ. ವಿದ್ಯಾರ್ಥಿನಿ ಕೂಡ ಚಪ್ಪಲಿ ಏಟು ನೀಡಿದ್ದಾಳೆ. ಇತ್ತ ಹಲ್ಲೆಗೊಳಗಾದ ಯುವಕನ ಕುಟುಂಬಸ್ಥರು ನವನಗರ ಠಾಣೆಗೆ ದೂರು ನೀಡಿದ್ದು, ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ ಯುವಕರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಸುದೀಪ್ನನ್ನ ವಶಕ್ಕೆ ಪಡೆಯುವ ಬದಲು ವಿದ್ಯಾರ್ಥಿನಿಯ ರಕ್ಷಿಸಿದ ಯುವಕರ ಬಂಧಿಸಿದ್ದು, ಯಾವ ನ್ಯಾಯ ಎಂದು ಕುಟುಂಬಸ್ಥರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪ್ರಭಾವಕ್ಕೆ ಮಣಿದು ರಕ್ಷಣೆ ನೀಡಿದವರ ಬಂಧನ ಆರೋಪ
ಇನ್ನು ಈ ಸುದೀಪ್ ನಾಡಗೌಡ ಪ್ರಭಾವಿ ಕುಟುಂಬಕ್ಕೆ ಸೇರಿದವನು ಎಂದು ತಿಳಿದುಬಂದಿದೆ. ಅವರ ಪ್ರಭಾವಕ್ಕೆ ಒಳಗಾಗಿ ನವನಗರ ಪೋಲಿಸರು ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಲ್ಲೆ ನಡೆಸಿದ ಯುವಕರನ್ನ ಬಂಧಿಸಿದ್ದಾರೆ. ಇಲ್ಲಿ ವಿದ್ಯಾರ್ಥಿನಿಗೆ ರಕ್ಷಣೆ ಕೊಡುವುದು ತಪ್ಪಲ್ಲ, ಹಾಗಂತ ಕಾನೂನು ಕೈಗೆ ತೆಗೆದುಕೊಳ್ಳುವುದು ಕೂಡ ಅಪರಾಧ. ಆತ ವಿದ್ಯಾರ್ಥಿನಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದರೆ, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕಾಗಿತ್ತು. ಆದರೆ ಹಲ್ಲೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಕೂಡ ಮೂಡುತ್ತದೆ.
ಸಹಾಯ ಮಾಡಿದ್ದೆ ನಮ್ಮ ಮಕ್ಕಳಿಗೆ ಮುಳುವಾಗಿದೆ ಎಂದ ಪೋಷಕರು
‘ವಿದ್ಯಾರ್ಥಿನಿ ಸಹಾಯ ಕೇಳಿದಳು ಅಂತ ಸಹಾಯ ಮಾಡಿದ್ದೆ ನಮ್ಮ ಮಕ್ಕಳಿಗೆ ಮುಳುವಾಗಿದೆ’ ಎಂದು ಪೋಷಕರು ಹೇಳುತ್ತಿದ್ದರೆ, ‘ನನಗೆ ಸಹಾಯ ಮಾಡುವುದಕ್ಕೆ ಅಂತ ಬಂದ ಯುವಕರು ಜೈಲು ಪಾಲಾಗಿದ್ದು ನಮಗೆ ಬೇಸರ ತರಿಸಿದೆ. ನನ್ನ ರಕ್ಷಣೆಗೆ ಬಂದ ಯುವಕರನ್ನು ಬಿಡುಗಡೆ ಮಾಡಬೇಕು ಮತ್ತು ಸುದೀಪ್ನನ್ನು ಬಂಧಿಸಬೇಕೆಂದು ಯುವತಿ’ ಆಗ್ರಹ ಮಾಡಿದ್ದಾಳೆ.
ಸುದೀಪ್ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತೇವೆ: ಎಸ್ಪಿ
ಇನ್ನು ಈ ಬಗ್ಗೆ ಮಾತನಾಡಿದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ್ ಗೋಯೆಲ್, ‘ಘಟನೆ ನಡೆದ ದಿನ ಹಲ್ಲೆಗೊಳಗಾದ ಯುವಕನ ಕುಟುಂಬಸ್ಥರು ನವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿ ಹಲ್ಲೆ ಮಾಡಿದವರನ್ನು ಬಂಧಿಸಲಾಗಿದೆ. ಆದರೆ ವಿದ್ಯಾರ್ಥಿನಿ ಅಂದು ದೂರನ್ನು ನೀಡಿಲ್ಲ. ಅವರು ಕಾಲಾವಕಾಶ ಕೇಳಿದ್ದರು. ಆದ ಕಾರಣ ಅಸಭ್ಯವಾಗಿ ನಡೆದುಕೊಂಡ ಯುವಕನನ್ನು ಬಂಧಿಸಿರಲಿಲ್ಲ. ಆದರೆ ವಶಕ್ಕೆ ಪಡೆದು ಆಸ್ಪತ್ರೆಗೆ ಕಳಿಸಲಾಗಿತ್ತು. ನಿನ್ನೆ ಅವರು ಅಟ್ರಾಸಿಟಿ ಕೇಸ್ ನೀಡಿದ್ದಾರೆ. ಆ ಪ್ರಕಾರ ಸುದೀಪ್ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತೇವೆ. ಮುಂದೆ ಈ ಕೇಸ್ ಸಿಆರ್ಸೆಲ್ಗೆ ವರ್ಗಾವಣೆಯಾಗಿ ಅಲ್ಲಿ ಇದರ ತನಿಖೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಯುವತಿಯ ಕಿಡ್ನಾಪ್ಗೆ ಯತ್ನ, ಪೊಲೀಸ್-ಜಡ್ಜ್ ಕಾರು ಸೇರಿ ನೂರಾರು ವಾಹನಗಳಿಗೆ ಡಿಕ್ಕಿ!
ಒಟಿನಲ್ಲಿ ಕಾನೂನು ಕೈಗೆತ್ತಿಕೊಂಡು ಹಲ್ಲೆ ಮಾಡಿದ್ದು ತಪ್ಪಾದರೂ, ಎಚ್ಚರಿಕೆ ನೀಡಿ ಬಿಡಬಹುದಾಗಿದ್ದ ಪ್ರಕರಣದಲ್ಲಿ ಪೊಲೀಸರು ತೋರಿದ ಅತಿ ಉತ್ಸಾಹ ಹಾಗೂ ರಕ್ಷಣೆಗೆ ಬಂದವರ ಬಂಧನ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟದಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




