ಪ್ರಧಾನಿ ನರೇಂದ್ರ ಮೋದಿ ತಮ್ಮ ಸಚಿವ ಸಂಪುಟವನ್ನು ಪುನರ್ ರಚಿಸಿದ್ದಾರೆ. ಈ ಫುನರ್ ರಚನೆಯೂ ಬಿಜೆಪಿ ನಾಯಕರು ಹಾಗೂ ಮೈತ್ರಿ ಪಕ್ಷಗಳಿಗೆ ತನ್ನದೇ ಆದ ಸಂದೇಶ ರವಾನಿಸಿದೆ. ಕೆಲಸ ಮಾಡದವರಿಗೆ ಗೇಟ್ ಪಾಸ್, ಉತ್ತಮ ಸಾಧನೆ ತೋರಿದವರಿಗೆ ಬಡ್ತಿ ಎಂಬ ನಿಯಮವನ್ನು ಮೋದಿ ಪಾಲಿಸಿದ್ದಾರೆ. ಜೊತೆಗೆ ಸಚಿವ ಸಂಪುಟ ಪುನರ್ ರಚನೆಯ ಹಿಂದೆ ರಾಜಕೀಯ ಲೆಕ್ಕಾಚಾರಗಳು ಇವೆ.
ಸಚಿವ ಸಂಪುಟ ಪುನರ್ ರಚನೆಯಲ್ಲಿ ಮೋದಿ ಸಂದೇಶವೇನು?
ಪ್ರಧಾನಿ ನರೇಂದ್ರ ಮೋದಿ(ಜುಲೈ 7ರ ಬುಧವಾರ) ಕೇಂದ್ರ ಸಚಿವ ಸಂಪುಟವನ್ನು ಪುನರ್ ರಚನೆ ಮಾಡಿದ್ದಾರೆ. ಈ ಫುನರ್ ರಚನೆಯು ಅನೇಕ ಸಂದೇಶಗಳನ್ನು ಏಕ ಕಾಲಕ್ಕೆ ರವಾನಿಸಿದೆ. ದೇಶದ ಜನರು, ಬಿಜೆಪಿ ನಾಯಕರು, ಮಿತ್ರಪಕ್ಷ ಹಾಗೂ ವಿರೋಧ ಪಕ್ಷಗಳಿಗೂ ತನ್ನದೇ ಆದ ಸಂದೇಶವನ್ನು ರವಾನಿಸಿದೆ. ಎಲ್ಲ ಸಚಿವ ಸಂಪುಟ ಪುನರ್ ರಚನೆಯಲ್ಲೂ ರಾಜಕೀಯ ಲೆಕ್ಕಾಚಾರ ಸಹಜ. ಮೋದಿ ಸಚಿವ ಸಂಪುಟ ಪುನರ್ ರಚನೆಯ ಹಿಂದೆಯೂ ರಾಜಕೀಯ ಲೆಕ್ಕಾಚಾರ ಇರುವುದು ಗುಟ್ಟಾಗಿಯೇನೂ ಉಳಿದಿಲ್ಲ.
ಮೋದಿ ಸಂಪುಟದಲ್ಲಿ ಪ್ರಭಾವಿಗಳೆಸಿಕೊಂಡಿದ್ದವರಿಗೆ ಗೇಟ್ ಪಾಸ್ ನೀಡಿರುವುದು ದೇಶದ ಅಚ್ಚರಿಗೆ ಕಾರಣವಾಗಿದೆ. ಕಿರಿಯರಿಗೆ ಬಡ್ತಿ ನೀಡಿ ಪೋತ್ಸಾಹಿಸುವ, ಭವಿಷ್ಯದ ನಾಯಕರಾಗಿ ಬೆಳೆಸುವ ಜಾಣ್ಮೆಯನ್ನು ಮೋದಿ, ಶಾ, ನಡ್ಡಾ ತ್ರಿಮೂರ್ತಿಗಳು ತೋರಿದ್ದಾರೆ. ಮೋದಿ ಕ್ಯಾಬಿನೆಟ್ ಪುನರ್ ರಚನೆಯ ಮಾಡುವಾಗ ಬಿಜೆಪಿಯ ಮಾತೃಸಂಘಟನೆ ಆರ್‌ಎಸ್‌ಎಸ್ ಸಚಿವರ ಬಗ್ಗೆ ನೀಡಿದ್ದ ಫೀಡ್ ಬ್ಯಾಕ್ ಅನ್ನು ಮೋದಿ ಪರಿಗಣಿಸಿದ್ದಾರೆ.
ಮೈತ್ರಿಪಕ್ಷಗಳಿಗೆ ಕ್ಯಾಬಿನೆಟ್ ನಲ್ಲಿ ಸ್ಥಾನ
2019ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಭರ್ಜರಿ ಬಹುಮತ ಗಳಿಸಿದ ಬಳಿಕ ನಡೆದ ಸಚಿವ ಸಂಪುಟ ರಚನೆ ವೇಳೆ ಮೈತ್ರಿ ಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು. ಇದನ್ನು ವಿರೋಧಿಸಿ ಆಗ ಜೆಡಿಯು ಪಕ್ಷದ ಸಂಸದರಾರು ಸಚಿವ ಸಂಪುಟ ಸೇರಿರಲಿಲ್ಲ. ಬಳಿಕ ಮಹಾರಾಷ್ಟ್ರ ರಾಜಕಾರಣದ ಕಾರಣಕ್ಕಾಗಿ ಶಿವಸೇನೆ, ಎನ್‌ಡಿಎ ಗುಡ್ ಬೈ ಹೇಳಿತು. ಕೃಷಿ ತಿದ್ದುಪಡಿ ಕಾಯಿದೆ ವಿರೋಧಿಸಿ ಶಿರೋಮಣಿ ಅಕಾಲಿದಳ ಕೂಡ ಎನ್‌ಡಿಎ ಗೆ ಗುಡ್ ಬೈ ಹೇಳಿತು. ರಾಮವಿಲಾಸ್ ಪಾಸ್ವಾನ್ ನಿಧನದಿಂದ ಕೇಂದ್ರದ ಕ್ಯಾಬಿನೆಟ್ ನಲ್ಲಿ ಎಲ್‌ಜೆಪಿ ಪಕ್ಷದಿಂದ ಯಾರೊಬ್ಬರು ಪ್ರತಿನಿಧಿಗಳಿರಲಿಲ್ಲ.
ಮಹಾರಾಷ್ಟ್ರದ ರಿಪಬ್ಲಿಕನ್ ಪಕ್ಷದ ರಾಮದಾಸ್ ಅಠಾವಳೆ ಮಾತ್ರ ಏಕೈಕ ಬಿಜೆಪಿ ಮಿತ್ರಪಕ್ಷದ ಸಚಿವರಾಗಿ ಕ್ಯಾಬಿನೆಟ್ ನಲ್ಲಿ ಉಳಿದಿದ್ದರು. ಇದರಿಂದಾಗಿ ಬಿಜೆಪಿ ಪಕ್ಷವು ತನ್ನ ಮಿತ್ರಪಕ್ಷಗಳನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ ಎಂಬ ಅಸಮಾಧಾನ ಇತ್ತು. ಈ ಅಸಮಾಧಾನ ಹೋಗಲಾಡಿಸಲು ಈ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಿತ್ರಪಕ್ಷಗಳಿಗೆ ಸ್ಥಾನ ನೀಡಲಾಗಿದೆ. ಅಪ್ನಾ ದಳದ ಅನುಪ್ರಿಯಾ ಪಟೇಲ್ ಗೆ ಕೇಂದ್ರದ ರಾಜ್ಯ ಖಾತೆ ನೀಡಲಾಗಿದೆ.
(ಲೇಖನ: ಎಸ್. ಚಂದ್ರಮೋಹನ್, ಹಿರಿಯ ವರದಿಗಾರ, ಟಿವಿ9)
ಅನುಪ್ರಿಯಾ ಕ್ಯಾಬಿನೆಟ್ ಸೇರ್ಪಡೆಯಿಂದ ಉತ್ತರ ಪ್ರದೇಶದಲ್ಲಿ ಓಬಿಸಿ ಸಮುದಾಯದ ಕುರ್ಮಿ ಮತಗಳನ್ನು ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯತ್ತ ಸೆಳೆಯುವ ಪ್ಲ್ಯಾನ್ ಇದೆ. ಅನುಪ್ರಿಯಾ ತಂದೆ ಸೋನೆಲಾಲ್ ಪಟೇಲ್ ಪ್ರಭಾವಿ ಕುರ್ಮಿ ಸಮುದಾಯದ ನಾಯಕರಾಗಿದ್ದರು. ಮಿರ್ಜಾಪುರ, ವಾರಣಾಸಿ, ಪ್ರತಾಪ್ ಗಢ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಅಪ್ನಾದಳ ಪಕ್ಷಕ್ಕೆ ತನ್ನದೇ ಆದ ವೋಟ್ ಬ್ಯಾಂಕ್ ಇದೆ.
ಇನ್ನೂ ಬಿಹಾರದ ಜೆಡಿಯು ಧುರೀಣ, ಸಿಎಂ ನೀತೀಶ್ ಕುಮಾರ್ ಈ ಬಾರಿಯೂ ಕೇಂದ್ರದಲ್ಲಿ ಮೂರರಿಂದ ನಾಲ್ಕು ಸಚಿವ ಸ್ಥಾನವನ್ನು ತಮ್ಮ ಪಕ್ಷಕ್ಕೆ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದರೇ, ಮೈತ್ರಿಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನ ಮಾತ್ರ ನೀಡುವ ನಿಯಮಕ್ಕೆ ಮೋದಿ ಅಂಟಿಕೊಂಡಿದ್ದರು. ಹೀಗಾಗಿ ಜೆಡಿಯುಗೆ ಈ ಬಾರಿ ಒಂದೇ ಸಚಿವ ಸ್ಥಾನ ಸಿಕ್ಕಿದೆ. ಜೆಡಿಯು ಪಕ್ಷದ ಆರ್‌ಸಿಪಿ ಸಿಂಗ್ ಕೇಂದ್ರ ಕ್ಯಾಬಿನೆಟ್ ಸೇರಿದ್ದಾರೆ. ಲೋಕಜನಶಕ್ತಿ ಪಾರ್ಟಿ ಕೋಟಾದಲ್ಲಿ ಅಣ್ಣನಿಂದ ತೆರವಾದ ಸಚಿವ ಸ್ಥಾನವನ್ನು ಸೋದರ ಪಶುಪತಿ ಕುಮಾರ್ ಪಾರಸ್ ಆಲಂಕರಿಸಿದ್ದಾರೆ.
ಸಾಧನೆಗೆ ಬಡ್ತಿಯ ಪುರಸ್ಕಾರ
ಕೇಂದ್ರದ ಕ್ಯಾಬಿನೆಟ್ ನಲ್ಲಿ ಕಳೆದ 2 ವರ್ಷದಿಂದ ಉತ್ತಮ ಸಾಧನೆ ಮಾಡಿದವರಿಗೆ ಬಡ್ತಿಯ ಪುರಸ್ಕಾರ ನೀಡಲಾಗಿದೆ. ಕಿರಣ್ ರಿಜಿಜು, ಅನುರಾಗ್ ಠಾಕೂರ್, ಮನಸುಖ್ ಮಾಂಡವೀಯಾ, ಕಿಶನ್ ರೆಡ್ಡಿ, ಹರದೀಪ್ ಸಿಂಗ್ ಪುರಿ, ಆರ್.ಕೆ.ಸಿಂಗ್ ಸೇರಿದಂತೆ 7 ಮಂದಿ ರಾಜ್ಯಖಾತೆ, ಸ್ವತಂತ್ರ ಖಾತೆ ಸಚಿವರಾಗಿದ್ದವರಿಗೆ ಕ್ಯಾಬಿನೆಟ್ ದರ್ಜೆಗೆ ಬಡ್ತಿ ನೀಡಲಾಗಿದೆ. ತಮಗೆ ವಹಿಸಿದ ಕೆಲಸಗಳಲ್ಲಿ ಉತ್ತಮ ಸಾಧನೆ ತೋರಿದರೇ, ಅದನ್ನು ಪುರಸ್ಕರಿಸಿ, ಬಡ್ತಿ ನೀಡಲಾಗುತ್ತೆ ಎಂಬ ಸಂದೇಶವನ್ನು ಈ ಮೂಲಕ ಪಕ್ಷದ ಸಂಸದರು, ಕೇಡರ್ ಗೆ ರವಾನಿಸಿದಂತಾಗಿದೆ.
ಇನ್ನೂ ತ್ರಿಪುರದಲ್ಲಿ 1991 ರಲ್ಲಿ ಬಿಜೆಪಿ ಸದಸ್ಯತ್ವ ಪಡೆದು, ಬಿಜೆಪಿ ಸಂಘಟನೆಗಾಗಿ ದುಡಿದವರು ಪ್ರತಿಮಾ ಭೂಮಿಕಾ ಅವರು. ಆಗ ತ್ರಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಯಾವುದೇ ಸುಳಿವು ಇರಲಿಲ್ಲ. ಅಂಥ ಕಷ್ಟಕಾಲದಲ್ಲಿ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೇ ದುಡಿದ ಪ್ರತಿಮಾ ಭೂಮಿಕಾಗೂ ಈಗ ಕೇಂದ್ರ ಸಚಿವ ಸ್ಥಾನ ನೀಡಲಾಗಿದೆ.
ಮಧ್ಯಪ್ರದೇಶದಲ್ಲಿ ಕಳೆದುಕೊಂಡಿದ್ದ ಅಧಿಕಾರವನ್ನು ಮತ್ತೆ ಗಳಿಸಿಕೊಟ್ಟಿದ್ದು ಜ್ಯೋತಿರಾಧಿತ್ಯ ಸಿಂಧಿಯಾ. ತಮ್ಮ ಬೆಂಬಲಿಗ 15 ಶಾಸಕರನ್ನು ಕಾಂಗ್ರೆಸ್ ನಿಂದ ರಾಜೀನಾಮೆ ಕೊಡಿಸಿ ಬಿಜೆಪಿಗೆ ಕರೆ ತಂದರು. 15 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ತಂದುಕೊಟ್ಟು ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವನ್ನು ಭದ್ರಪಡಿಸಿದರು. ಇದಕ್ಕಾಗಿ ಈಗ ಮಾತು ಕೊಟ್ಟಂತೆ ಜ್ಯೋತಿರಾಧಿತ್ಯ ಸಿಂಧಿಯಾಗೆ ಕೇಂದ್ರದ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಲಾಗಿದೆ. ತಂದೆ ಮಾಧವ್ ರಾವ್ ಸಿಂಧಿಯಾ ನಿರ್ವಹಿಸಿದ ನಾಗರಿಕ ವಿಮಾನ ಯಾನ ಖಾತೆಯನ್ನೇ ಈಗ ಪುತ್ರ ಜ್ಯೋತಿರಾಧಿತ್ಯ ಸಿಂಧಿಯಾಗೂ ನೀಡಲಾಗಿದೆ.
ನಿರೀಕ್ಷಿತ ಫಲಿತಾಂಶ ನೀಡದಿದ್ದರೇ ಗೇಟ್ ಪಾಸ್
ಕೇಂದ್ರ ಸರ್ಕಾರವು ಈಗ ಪಿಎಂಓ ಕೇಂದ್ರೀತ ಸರ್ಕಾರ ಎಂಬ ಚರ್ಚೆ ನಡೆಯುತ್ತಿದೆ. ಎಲ್ಲವನ್ನೂ ಪ್ರಧಾನಿ ಕಾರ್ಯಾಲಯದಿಂದಲೇ ನಿರ್ವಹಿಸಲಾಗುತ್ತೆ. ಪ್ರಧಾನಿ ಮೋದಿ ಹಾಗೂ ಪಿಎಂಓ ಹೇಳಿದ್ದ ಕೆಲಸವನ್ನು ಸಚಿವರು ಕಾಲಮಿತಿಯಲ್ಲಿ ಚಾಚೂ ತಪ್ಪದೇ ಮಾಡಿ ಮುಗಿಸಬೇಕು. ಟಾಸ್ಕ್ ಗಳನ್ನು ಸಮರ್ಥವಾಗಿ ನಿರ್ವಹಿಸಿ, ಉತ್ತಮ ಫಲಿತಾಂಶ ನೀಡಬೇಕು. ಕಾರ್ಪೋರೇಟ್ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಕೆಆರ್‌ಎ ಅಂದರೇ, ಕೀ ರಿಸಲ್ಟ್ ಏರಿಯಾ ನೀಡಲಾಗುತ್ತೆ. ಇಂಥ ವಿಷಯದಲ್ಲಿ ನಿಗದಿಪಡಿಸಿದ ಪ್ರಗತಿಯಾಗಿ ಉತ್ತಮ ಫಲಿತಾಂಶ ಬರಬೇಕೆಂದು ಕೆಲಸದ ಗುರಿ ನೀಡಲಾಗುತ್ತೆ.
ಮೋದಿ ಸರ್ಕಾರವು ನಡೆಯುವುದು ಹಾಗೆಯೇ. ಸಚಿವರಿಗೆ ಕೊಟ್ಟ ಕೆಲಸದ ಗುರಿಯನ್ನು ಸಾಧಿಸಬೇಕು. ಸಾಧಿಸದಿದ್ದರೇ, ಅಂಥವರಿಗೆ ಗೇಟ್ ಪಾಸ್ ಗ್ಯಾರಂಟಿ ಎಂಬುದು ಈ ಬಾರಿಯ ಸಚಿವ ಸಂಪುಟ ಪುನರ್ ರಚನೆಯಿಂದ ಸಾಬೀತಾಗಿದೆ. ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್, ಸದಾನಂದಗೌಡ, ಹರ್ಷವರ್ಧನ್, ರಮೇಶ್ ಪೋಕ್ರಿಯಾಲ್ ನಿಶಾಂಕ್ ರಂಥವರು ಆಡಳಿತ ನಡೆಸಿದ ಅನುಭವ ಇದ್ದರೂ, ನಿರೀಕ್ಷಿತ ಸಾಧನೆ ತೋರದ ಕಾರಣಕ್ಕೆ ಈಗ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಬಿಜೆಪಿಯ ಮಾತೃಸಂಘಟನೆಯಾದ ಆರ್‌ಎಸ್‌ಎಸ್ ಸಚಿವರು, ಇಲಾಖೆಗಳ ಕಾರ್ಯವೈಖರಿ ಬಗ್ಗೆ ನೀಡಿದ ಫೀಡ್ ಬ್ಯಾಕ್ ಅನ್ನು ಮೋದಿ ಗಂಭೀರವಾಗಿ ಪರಿಗಣಿಸಿ ಕೆಲ ಸಚಿವರಿಗೆ ಕೊಕ್ ನೀಡುವ ತೀರ್ಮಾನ ಕೈಗೊಂಡಿದ್ದಾರೆ.
ಶಿಕ್ಷಣ, ಆರೋಗ್ಯ, ಐಟಿ ಖಾತೆಗಳ ಕ್ಯಾಬಿನೆಟ್ ದರ್ಜೆ ಸಚಿವರು, ರಾಜ್ಯ ಸಚಿವರಿಗೆ ಗೇಟ್ ಪಾಸ್ ನೀಡಲಾಗಿದೆ. ಪ್ರಕಾಶ್ ಜಾವಡೇಕರ್ ಕಾರ್ಯನಿರ್ವಹಣೆ ಬಗ್ಗೆ ಆರ್.ಎಸ್.ಎಸ್ ಗೆ ತೃಪ್ತಿ ಇರಲಿಲ್ಲವಂತೆ. ಸಂತೋಷ್ ಗಂಗ್ವಾರ್, ಕೇಂದ್ರದ ಕಾರ್ಮಿಕ ಖಾತೆ ಸಚಿವರಾಗಿ ಸುಪ್ರೀಂಕೋರ್ಟ್ ಟೀಕೆಯನ್ನು ಎದುರಿಸಿದ್ದರು. ಯುಪಿಯಲ್ಲಿ ತಮ್ಮದೇ ಸರ್ಕಾರ ಸರಿಯಾಗಿ ಕೋವಿಡ್ ನಿರ್ವಹಿಸುತ್ತಿಲ್ಲ ಎಂದು ಪತ್ರ ಬರೆದು ಮೋದಿ ಕೋಪಕ್ಕೆ ತುತ್ತಾಗಿದ್ದರು.
ಯೋಗಿ, ಯಡಿಯೂರಪ್ಪ ಸ್ಟ್ರಾಂಗ್
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದ ಏಪ್ರಿಲ್ ತಿಂಗಳ ವೇಳೆಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಈ ಬಾರಿಯ ಸಂಪುಟ ಪುನರ್ ರಚನೆಯಲ್ಲಿ ಉತ್ತರ ಪ್ರದೇಶದ ಏಳು ಮಂದಿಗೆ ಸ್ಥಾನ ನೀಡಲಾಗಿದೆ. ಅದರಲ್ಲೂ ಓಬಿಸಿ ಸಮುದಾಯದ ಮೂವರಿಗೆ ಸ್ಥಾನ ಸಿಕ್ಕಿದೆ. ಅನುಪ್ರಿಯಾ ಪಟೇಲ್, ಪಂಕಜ್ ಚೌಧರಿ, ಬಿ.ಎಲ್. ವರ್ಮಾ ಓಬಿಸಿ ಸಮುದಾಯದವರು. ಉತ್ತರ ಪ್ರದೇಶದಲ್ಲಿ ಓಬಿಸಿ ಸಮುದಾಯ ಶೇ.50 ರಷ್ಟು ಜನಸಂಖ್ಯೆ ಹೊಂದಿದೆ.
ಕುಶಾಲ್ ಕಿಶೋರ್, ಭಾನುಪ್ರತಾಪ್ ಸಿಂಗ್ ವರ್ಮಾ, ಎಸ್‌ಪಿ ಬಗೇಲಾ ಸೇರಿದಂತೆ ಮೂವರು ಪರಿಶಿಷ್ಟ ಜಾತಿಗೆ ಸೇರಿದವರು. ಉತ್ತರ ಪ್ರದೇಶದಲ್ಲಿ ಎಸ್.ಸಿ. ಸಮುದಾಯದ ಜನಸಂಖ್ಯೆ ಶೇ.20 ರಷ್ಟಿದೆ. ಅಜಯ ಕುಮಾರ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯ ಶೇ.10 ರಷ್ಟಿದೆ. ಜಾತಿ ಲೆಕ್ಕಾಚಾರದಿಂದ ಯುಪಿ ಸಂಸದರನ್ನು ಕ್ಯಾಬಿನೆಟ್ ಗೆ ಸೇರ್ಪಡೆ ಮಾಡಿಕೊಂಡಿರುವುದು ಸಿಎಂ ಯೋಗಿ ಆದಿತ್ಯನಾಥ್ ಕೈ ಬಲಪಡಿಸಿದಂತೆ ಆಗಿದೆ. ಕೇಂದ್ರದ ಕ್ಯಾಬಿನೆಟ್ ನಲ್ಲಿ ಉತ್ತರ ಪ್ರದೇಶದ ಸಚಿವರ ಸಂಖ್ಯೆ 15ಕ್ಕೇರಿಕೆ ಆಗಿದೆ.
ಇದೇ ರೀತಿ ಕರ್ನಾಟಕದಲ್ಲೂ ಸಚಿವ ಸಂಪುಟ ಪುನರ್ ರಚನೆಯಿಂದ ಸದ್ಯಕ್ಕೆ ಯಡಿಯೂರಪ್ಪ ಅವರ ಸಿಎಂ ಕುರ್ಚಿಗೆ ಯಾವುದೇ ಭಂಗ ಇಲ್ಲ ಎಂಬ ಸಂದೇಶ ರವಾನೆ ಆಗಿದೆ. ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರಗೆ ಕೇಂದ್ರದ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡಿದ್ದರೇ, ಮುಂದಿನ ದಿನಗಳಲ್ಲಿ ಸಿಎಂ ಹುದ್ದೆಯಿಂದ ಯಡಿಯೂರಪ್ಪ ಕೆಳಗಿಳಿಸುತ್ತಾರೆ ಎಂಬ ಲೆಕ್ಕಾಚಾರ ಶುರುವಾಗುತ್ತಿತ್ತು. ಆದರೇ, ಈಗ ಈ ಚರ್ಚೆಗೆ ಅವಕಾಶ ಸಿಕ್ಕಿಲ್ಲ. ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯುತ್ತಾರೆ ಎಂಬ ವಾದಕ್ಕೆ ಈಗ ಪುಷ್ಟಿ ಸಿಕ್ಕಿದೆ.
ಆದರೇ, ಈಗಾಗಲೇ 78 ವರ್ಷ ಪೂರೈಸಿ ಫೆಬ್ರವರಿಯಲ್ಲೇ 79 ಕ್ಕೆ ಕಾಲಿಟ್ಟಿರುವ ಸಿಎಂ ಯಡಿಯೂರಪ್ಪರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಬೇಕೇ ಬೇಡವೇ ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಬಿಜೆಪಿ ಹೈಕಮ್ಯಾಂಡ್ ನಿರ್ಧರಿಸಬಹುದು. ಆದರೇ, ರಾಜಕೀಯ ಚದುರಂಗದಾಟದಲ್ಲಿ ಸದ್ಯಕ್ಕಂತೂ ಯಡಿಯೂರಪ್ಪ ಸಿಎಂ ಕುರ್ಚಿಯಲ್ಲಿ ಸೇಫ್ . ಕರ್ನಾಟಕದ ಪ್ರಮುಖ ಜಾತಿಗಳಿಗೆ ಸಚಿವ ಸಂಪುಟ ಪುನರ್ ರಚನೆ ವೇಳೆ ಮಣೆ ಹಾಕಲಾಗಿದೆ. ಒಕ್ಕಲಿಗ, ಲಿಂಗಾಯತ, ದಲಿತ ಸಮುದಾಯದವರನ್ನು ಕ್ಯಾಬಿನೆಟ್ ಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಷಿ ಕೇಂದ್ರದ ಸಂಸದೀಯ ವ್ಯವಹಾರಗಳ ಖಾತೆ ಮಂತ್ರಿಯಾಗಿದ್ದಾರೆ. ಆಂಧ್ರ, ಕೇರಳ ಮೂಲದ ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್ ಕೂಡ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವರಾಗಿದ್ದಾರೆ.
ಶಿವಸೇನೆ ವಿರುದ್ಧ ಸಮರಕ್ಕೆ ರೆಡಿ
ಮಹಾರಾಷ್ಟ್ರದ ನಾರಾಯಣ್ ರಾಣೆ ಅವರನ್ನು ಕ್ಯಾಬಿನೆಟ್ ಗೆ ಸೇರ್ಪಡೆ ಮಾಡಿಕೊಂಡು ಎಂಎಸ್ಎಂಇ ಖಾತೆ ನೀಡಲಾಗಿದೆ. ಈ ಮೂಲಕ ಬಿಜೆಪಿಯ ಹಳೆಯ ಮಿತ್ರಪಕ್ಷ ಶಿವಸೇನೆಗೂ ಸಂದೇಶವೊಂದನ್ನು ರವಾನಿಸಲಾಗಿದೆ. ಅದೇನೇಂದರೇ ಶಿವಸೇನೆ ವಿರುದ್ಧ ಸಮರಕ್ಕೆ ಬಿಜೆಪಿ ರೆಡಿಯಾಗಿದೆ ಎಂಬ ಸಂದೇಶ ರವಾನೆಯಾಗಿದೆ. 2023ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನ ಬಿಜೆಪಿ ಏಕಾಂಗಿಯಾಗಿ ಎದುರಿಸಲಿದೆ ಎಂಬ ಸಂದೇಶವು ರವಾನೆಯಾಗಿದೆ. ಈ ಹಿಂದೆ ಶಿವಸೇನೆಯಲ್ಲೇ ಇದ್ದು, ನಾರಾಯಣ್ ರಾಣೆ ಈಗ ಶಿವಸೇನೆಯ ರಾಜಕೀಯ ಎದುರಾಳಿಯಾಗಿದ್ದಾರೆ. ನಾರಾಯಣ್ ರಾಣೆಗೆ ಮುಂಬೈ ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲುವಿನತ್ತ ಮುನ್ನಡೆಸುವ ಸವಾಲು ಇದೆ.