ಪಿಎಂ ಸೂರ್ಯಘರ್ ಯೋಜನೆಯಲ್ಲಿ ಭರ್ಜರಿ ಸಬ್ಸಿಡಿ, ಫ್ರಿ ವಿದ್ಯುತ್ ಜತೆ ಹಣ ಗಳಿಸಬಹುದು
PM Surya Ghar Muft Bijli Yojana: ಪ್ರಧಾನಿ ಮೋದಿ ಮಹತ್ವಾಕಾಂಕ್ಷಿ ಸೂರ್ಯ ಘರ್ ಯೋಜನೆ ಮೂಲಕ ಉಚಿತ ವಿದ್ಯುತ್ ಪಡೆಯುವುದು ಮಾತ್ರವಲ್ಲ, ಆದಾಯವನ್ನೂ ಗಳಿಸಲು ಸಾಧ್ಯವಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿದ್ದು, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಕೆ ಹೇಗೆ? ಇದರ ಪ್ರಯೋಜನೆಗಳು ಏನು? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು ,(ಫೆಬ್ರವರಿ 09): 2024ರ ಫೆಬ್ರುವರಿಯಲ್ಲಿ ಆರಂಭವಾದ ಪಿಎಂ ಸೂರ್ಯಘರ್ ಮುಫ್ತ್ ಬಿಜಿಲಿ ಉಚಿತ ವಿದ್ಯುತ್ ಯೋಜನೆ ಅಡಿಯಲ್ಲಿ ಜನರ ಮನೆಗಳ ಮೇಲ್ಛಾವಣಿಯಲ್ಲಿ ಸೋಲಾರ್ ಘಟಕಗಳನ್ನು ಸ್ಥಾಪಿಸುವ ಮೂಲಕ ವಿದ್ಯುತ್ ಸ್ವಾಲಂಬನೆ ಸಾಧಿಸುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ಸಬ್ಸಿಡಿ ಮೊತ್ತದ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಪ್ರಧಾನಮಂತ್ರಿ ಸೂರ್ಯ ಘರ್ ಮುಕ್ತ ವಿದ್ಯುತ್ ಯೋಜನೆಯಡಿಯಲ್ಲಿನ ಸಬ್ಸಿಡಿ ಮಾಹಿತಿಯನ್ನು ಬೆಸ್ಕಾಂ (BESCOM) ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. 5 ವರ್ಷ ಪಾವತಿಯನ್ನು ಮಾಡಿ, 20 ವರ್ಷ ಯಾವುದೇ ಹಣ ಪಾವತಿಸದೇ, ವಿದ್ಯುತ್ ಅನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದೆ.
ರೂಫ್ ಟಾಪ್ ಸೋಲಾರ್ ಪ್ಲ್ಯಾಂಟ್ ಹಾಕಿಸಿಕೊಳ್ಳಲು ತಗಲುವ ಖರ್ಚು ಮತ್ತು ಅದರಿಂದಾಗುವ ಉಳಿತಾಯದ ಬಗ್ಗೆಯೂ ಬೆಸ್ಕಾಂ ವಿವರಣೆಯನ್ನು ನೀಡಿದೆ. ಇದಕ್ಕೆ ವಾರ್ಷಿಕ 7% ನಲ್ಲಿ ಬ್ಯಾಂಕ್ ಲೋನ್ ಕೂಡಾ ಲಭ್ಯವಿದೆ. ಹತ್ತು ವರ್ಷದವರೆಗೆ ಇಎಂಐ ಕಟ್ಟುವ ಅವಕಾಶವೂ ಇದೆ ಎಂದು ಬೆಸ್ಕಾಂ ತನ್ನ ಎಕ್ಸ್ ಅಕೌಂಟ್ ನಲ್ಲಿ ಮಾಹಿತಿ ನೀಡಿದೆ.
ಸೂರ್ಯಘರ್ ಯೋಜನೆಯ ಮೂಲಕ ನಿಮ್ಮ ಮನೆ ಮೇಲ್ಛಾವಣಿಯಲ್ಲಿ ಸೌರವಿದ್ಯುತ್ ಘಟಕ ಸ್ಥಾಪಿಸಿ ಆಕರ್ಷಕ ಸಬ್ಸಿಡಿ ಪಡೆಯಿರಿ.
ಹೆಚ್ಚಿನ ಮಾಹಿತಿಗಾಗಿ
ಸೂರ್ಯಘರ್ ಯೋಜನೆಗೆ ಈ ಲಿಂಕ್ ಮೂಲಕ https://t.co/iALIML395s ನೋಂದಾಯಿಸಿಕೊಳ್ಳಿ ಹಾಗೂ
ಬೆಸ್ಕಾಂನ ಸೋಲಾರ್ ಸಹಾಯವಾಣಿ ಸಂಖ್ಯೆ 080-22340816 ಕ್ಕೆ ಕರೆಮಾಡಿ.#Bescom #SuryagharScheme… pic.twitter.com/TfQ7cBFX2R
— Namma BESCOM | ನಮ್ಮ ಬೆಸ್ಕಾಂ (@NammaBESCOM) February 9, 2025
ಒಂದು ಕಿಲೋವ್ಯಾಟ್ ಸೋಲಾರ್ ಫಲಕ ಹಾಕಲು 10 X 10 ಜಾಗ ಸಾಕು ಮತ್ತು ಪ್ಲ್ಯಾಂಟಿನ ಮೊತ್ತ ಐದು ವರ್ಷದ ನಿರ್ವಹಣಾ ವೆಚ್ಚವೂ ಒಳಗೊಂಡಂತೆ ಸೇರಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಹೇಳಿದೆ. ಲೇಟೆಸ್ಟ್ ವಿದ್ಯುತ್ ಬಿಲ್ ಮತ್ತು ಆಧಾರ್ ಕಾರ್ಡಿನ ಕಾಪಿಯೊಂದಿಗೆ ಇದಕ್ಕೆ ಅರ್ಜಿ ಸಲ್ಲಿಸಬಹುದು.
ಮನೆಬಳಕೆಯ ನಂತರ ಉಳಿಯುವ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ, ತಿಂಗಳು ತಿಂಗಳು ಹಣವನ್ನೂ ಸಹ ಸಂಪಾದಿಸಬಹುದು ಎಂದು ಬೆಸ್ಕಾಂ ಹೇಳಿದೆ. 1, 2 ಮತ್ತು 3 ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಲ್ಯಾಂಟ್ ಅಳವಡಿಸಬಹುದಾಗಿದೆ.
ಸಬ್ಸಿಡಿ ಮೊತ್ತದ ವಿವರ ಹೀಗಿದೆ :
- 1ಕಿಲೋವ್ಯಾಟ್ : 30 ಸಾವಿರ ರೂಪಾಯಿ.
- 2ಕಿಲೋವ್ಯಾಟ್ : 60 ಸಾವಿರ ರೂಪಾಯಿ.
- 3 ಕಿಲೋವ್ಯಾಟ್ : 78 ಸಾವಿರ ರೂಪಾಯಿ.
- ವಸತಿ ಸಮುಚ್ಚಯಗಳಿಗಾದರೆ, 500 ಕಿಲೋವ್ಯಾಟ್ ವರೆಗಿನ ಸಾಮರ್ಥ್ಯದ ಪ್ಲ್ಯಾಂಟಿಗೆ 18 ಸಾವಿರ ರೂಪಾಯಿ ಸಬ್ಸಿಡಿ.
- 101 – 200 ಯುನಿಟ್ ಬಳಕೆಯಾಗುತ್ತಿದ್ದರೆ, 1 ಕಿಲೋವ್ಯಾಟ್ ಸೋಲಾರ್ ಪ್ಲ್ಯಾಂಟ್ ಹಾಕಿಕೊಂಡರೆ, ಅದರ ವೆಚ್ಚ 60 ರಿಂದ 80 ಸಾವಿರ ರೂಪಾಯಿ, ಇದರಿಂದ ವಾರ್ಷಿಕ ಉಳಿತಾಯದ ಮೊತ್ತ 9,600 ರೂಪಾಯಿ.
- 101 – 200 ಯುನಿಟ್ ಬಳಕೆಯಾಗುತ್ತಿದ್ದರೆ, 2 ಕಿಲೋವ್ಯಾಟ್ ಸೋಲಾರ್ ಪ್ಲ್ಯಾಂಟ್ ಹಾಕಿಕೊಂಡರೆ, ಅದರ ವೆಚ್ಚ 1.2 ಲಕ್ಷದಿಂದ 1.6ಲಕ್ಷದವರೆಗೆ, ಇದರಿಂದ ವಾರ್ಷಿಕ ಉಳಿತಾಯದ ಮೊತ್ತ 21,600 ರೂಪಾಯಿ.
- 201 – 300 ಯುನಿಟ್ ಬಳಕೆಯಾಗುತ್ತಿದ್ದರೆ, 3 ಕಿಲೋವ್ಯಾಟ್ ಸೋಲಾರ್ ಪ್ಲ್ಯಾಂಟ್ ಹಾಕಿಕೊಂಡರೆ, ಅದರ ವೆಚ್ಚ 1.8 ಲಕ್ಷದಿಂದ 2.4 ಲಕ್ಷದವರೆಗೆ, ಇದರಿಂದ ವಾರ್ಷಿಕ ಉಳಿತಾಯದ ಮೊತ್ತ 36,000 ರೂಪಾಯಿ.
ಇದರ ಪ್ರಯೋಜನೆಗಳೇನು?
- ವಿದ್ಯುತ್ ಬಿಲ್ನಲ್ಲಿ ಉಳಿತಾಯ
- ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡುವ ಮೂಲಕ ಆದಾಯ ಗಳಿಸಬಹುದು.
- ಪರಿಸರ ಸ್ನೇಹಿ ವಿದ್ಯುತ್ ವ್ಯವಸ್ಥೆ
- ಈ ವ್ಯವಸ್ಥೆ ಪಡೆಯಲು ಬೇಕಿರುವ ದಾಖಲೆಗಳು ವಿದ್ಯುತ್ ಬಿಲ್ ಮತ್ತು ಆಧಾರ್ ಕಾರ್ಡ್ ಮಾತ್ರ.
ಅರ್ಜಿ ಸಲ್ಲಿಕೆ ಹೇಗೆ?
ಇದಕ್ಕೆ ಯಾರೂ ಬೇಕಾದರೂ ಅರ್ಜಿ ಸಲ್ಲಿಕೆ ಮಾಡಬಹುದು. ಸಬ್ಸಿಡಿ ಪಡೆಯಲು ಗರಿಷ್ಠ ಪೇಲೋಡ್ ಶೇಕಡಾ 85 ರಷ್ಟು ಮೀರಿರಬಾರದು ಅಷ್ಟೇ. ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರದ ಅಧಿಕೃತ ಪಿಎಂ ಘರ್ ಮುಕ್ತ್ ಬಿಜಿಲಿ ಯೋಜನೆ ಅಧಿಕೃತ ವೆಬ್‌ಸೈಟ್(https://www.pmsuryaghar.gov.in/) ಮೂಲಕ ಸುಲಭವಾಗಿ ಸಲ್ಲಿಕೆ ಮಾಡಬಹುದು.
ಯೋಜನೆ ಲಾಭ ಪಡೆಯಲು ಬಯಸಿದವರು ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ ಕೆಲ ಅಗತ್ಯ ಮಾಹಿತಿ ಹಾಗೂ ದಾಖಲೆ ಸಲ್ಲಿಸಬೇಕು. ಪ್ರಮುಖವಾಗಿ ವಿದ್ಯುತ್ ಗ್ರಾಹಕರ ಸಂಖ್ಯೆ, ಮೊಬೈಲ್ ಸಂಖ್ಯೆ, ಇಮೇಲ್, ವಿದ್ಯುತ್ ವಿತರಣಾ ಕಂಪನಿ ಸೇರಿದಂತೆ ಅಗತ್ಯ ಮಾಹಿತಿ ದಾಖಲಿಸಿ ರೂಫ್ ಟಾಪ್ ಸೋಲಾರ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕು.
DISCOMನಲ್ಲಿ ಅದಿಕೃತಗೊಳಿಸಿರುವ ಡೀಲರ್‌ನಿಂದ ಸೋಲಾರ್ ಪ್ಯಾನಲ್ ಖರೀದಿಸಿ ಅಳವಡಿಸಿಕೊಳ್ಳಬೇಕು. ಅಳವಡಿಕೆ ಬಳಿಕ ನಿಮ್ಮ ಸೋಲಾರ್ ಘಟಕದ ವಿವರಗಳೊಂದಿಗೆ ನೆಟ್ ಮೀಟರ್‌ಗೆ ಮನವಿ ಸಲ್ಲಿಸಬೇಕು. ಈ ಎಲ್ಲಾ ಪರಿಶೀಲನೆ ಬಳಿಕ ಕಮಿಷನಿಂಗ್ ವರದಿ ಬರಲಿದೆ. ಈ ವರದಿ ಬಳಿಕ ಬ್ಯಾಂಕ್ ಖಾತೆ ವಿವರ, ರದ್ದು ಮಾಡಿರುವ ಚೆಕ್ ಸೇರಿದಂತೆ ಇತರ ಮಾಹಿತಿಗಳನ್ನು ನೀಡಬೇಕು. ಈ ವೇಳೆ ನೀವು ನೀಡಿದ ಬ್ಯಾಂಕ್ ಖಾತೆಗೆ ಯೋಜನೆಯ ಸಬ್ಸಿಡಿ ಮೊತ್ತವನ್ನು ಕೇಂದ್ರ ಸರ್ಕಾರ ಜಮೆ ಮಾಡಲಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಮೊದಲ ಐದು ವರ್ಷದಲ್ಲೇ ಹಾಕಿದ ಬಂಡವಾಳ ವಾಪಸ್ ಬರುತ್ತದೆ. ಬಳಕೆಯ ನಂತರ ಉಳಿದ ವಿದ್ಯುತ್ ಅನ್ನು ಆಯಾಯ ವಿದ್ಯುತ್ ಪೂರೈಕೆ ಕಂಪೆನಿಗಳಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸೂರ್ಯಘರ್ ಯೋಜನೆಗೆ ಈ ಲಿಂಕ್ ಮೂಲಕ https://pmsuryaghar.gov.in ನೋಂದಾಯಿಸಿಕೊಳ್ಳಬಹುದು ಹಾಗೂ ಬೆಸ್ಕಾಂನ ಸೋಲಾರ್ ಸಹಾಯವಾಣಿ ಸಂಖ್ಯೆ 080-22340816 ಕ್ಕೆ ಕರೆ ಮಾಡಬಹುದು.




