ಬೌರಿಂಗ್ ಆಸ್ಪತ್ರೆಯಲ್ಲಿ ಶಶಿಕಲಾರನ್ನು ಭೇಟಿ ಮಾಡಲು ಬಂದ ವಕೀಲರಿಗೆ ಅವಕಾಶ ನಿರಾಕರಿಸಿದ ಪೊಲೀಸರು
ಆಸ್ಪತ್ರೆ ಒಳಗಿನ ಆವರಣದಲ್ಲಿ ಪೊಲೀಸರು ಹಾಗೂ ಶಶಿಕಲಾ ಪರ ವಕೀಲರ ನಡುವೆ ಮಾತುಕತೆ ನಡೆದಿದ್ದು, ಗೇಟ್ ನಿಂದ ಹೊರಗೆ ಹೋಗುವಂತೆ ಪೊಲೀಸರು ತಾಕೀತು ಮಾಡಿದ್ದಾರೆ.
ಬೆಂಗಳೂರು: ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರನ್ನು ಭೇಟಿ ಮಾಡಲು ಬಂದ ವಕೀಲರಿಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ.
ಆಸ್ಪತ್ರೆ ಒಳಗಿನ ಆವರಣದಲ್ಲಿ ಪೊಲೀಸರು ಹಾಗೂ ಶಶಿಕಲಾ ಪರ ವಕೀಲರ ನಡುವೆ ಮಾತುಕತೆ ನಡೆದಿದ್ದು, ಗೇಟ್ ನಿಂದ ಹೊರಗೆ ಹೋಗುವಂತೆ ಪೊಲೀಸರು ತಾಕೀತು ಮಾಡಿದ್ದಾರೆ. ನಾವು ಅನುಮತಿ ಪಡೆದು ಬಂದಿದ್ದೇವೆ. ಶಶಿಕಲಾ ಅವರನ್ನು ಭೇಟಿಯಾಗಲು ಅನುಮತಿ ಪಡೆದಿದ್ದೇವೆ ಎಂದು ಹೇಳಿದರೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಿಡಲಿಲ್ಲ.
ಶಶಿಕಲಾ ಅವರಿಗೆ ಕೋವಿಡ್ ನೆಗೆಟಿವ್ ಎರಡು ದಿನಗಳ ಹಿಂದೆ ಅವರಿಗೆ ಜ್ವರ ಬಂದಿದ್ದು ಪರಪ್ಪನ ಅಗ್ರಹಾರ ಜೈಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆತಂದಾಗ ಉಸಿರಾಟದ ಸಮಸ್ಯೆ ಇತ್ತು, ಜ್ವರ ಇರಲಿಲ್ಲ. ಅವರ ಮೇಲೆ ನಿಗಾ ಇರಿಸುವುದಕ್ಕಾಗಿ ಗುರುವಾರ ಬೆಳಗ್ಗೆ ಐಸಿಯುಗೆ ದಾಖಲಿಸಲಾಗಿದೆ. ಅವರಿಗೆ ತೀವ್ರ ಉಸಿರಾಟದ ಸೋಂಕು (SARI) ಇದೆ. ಆದರೆ ಕೋವಿಡ್ ಇಲ್ಲ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಬೌರಿಂಗ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಈ ಮಧ್ಯೆ ಸಿಟಿ ಸ್ಕ್ಯಾನ್ಗಾಗಿ ಶಶಿಕಲಾ ಅವರನ್ನು ವಿಕ್ಟೋರಿಯಾಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಸಿಟಿ ಸ್ಕ್ಯಾನ್ ಬಳಿಕ ಮತ್ತೆ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆತರಲಾಗುತ್ತದೆ.