
ಬೆಂಗಳೂರು, ಆಗಸ್ಟ್ 1: ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ತೀರ್ಪು ಪ್ರಕಟಿಸಿದೆ. ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್, ಜುಲೈ 29 ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದ್ದರು. ಇದೀಗ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದ್ದಾರೆ.
ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಏನು? ಎಷ್ಟು? ಎಂಬುದನ್ನು ನ್ಯಾಯಾಲಯ ಇನ್ನಷ್ಟೇ ಪ್ರಕಟಿಸಬೇಕಿದೆ. ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ ಶಿಕ್ಷೆಗೆ ಒಳಪಡುವ ಸಾಧ್ಯತೆ ಇದೆ.
ಜಡ್ಜ್ ಸಂತೋಷ್ ಗಜಾನನ ಭಟ್ ತೀರ್ಪು ಪ್ರಕಟಿಸುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಕಣ್ಣೀರಿಟ್ಟರು. ಕಣ್ಣೀರು ಒರೆಸುತ್ತಲೇ ಪ್ರಜ್ವಲ್ ರೇವಣ್ಣ ಅಲ್ಲಿಂದ ತೆರಳಿದರು.
ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜುಲೈ 30 ರಂದೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಬೇಕಿತ್ತು. ಆದರೆ, ಕೆಲವೊಂದು ಸ್ಪಷ್ಟೀಕರಣ ಬೇಕಿದ್ದರಿಂದ ತೀರ್ಪನ್ನು ಕಾಯ್ದಿರಿಸುತ್ತಿರುವುದಾಗಿ ಜಡ್ಜ್ ತಿಳಿಸಿದ್ದರು.
ಪ್ರಾಸಿಕ್ಯೂಷನ್ ಹಾಗೂ ಆರೋಪಿಗಳ ಪರ ವಕೀಲರು ಗೂಗಲ್ ಮ್ಯಾಪ್ ಅನ್ನು ಕೂಡಾ ಸಾಕ್ಷ್ಯವನ್ನಾಗಿಸಿ ವಾದ ಮಂಡಿಸಿದ್ದಾರೆ. ಗೂಗಲ್ ಕಂಪನಿಯ ದೃಢೀಕರಣವಿಲ್ಲದೇ ಸಲ್ಲಿಸಿರುವ ಮ್ಯಾಪ್ ಅನ್ನು ಸಾಕ್ಷಿಯನ್ನಾಗಿ ಪರಿಗಣಿಸಬಹುದೇ ಎಂದು ನ್ಯಾಯಾಲಯ ಸ್ಪಷ್ಟನೆ ಕೇಳಿತ್ತು. ಇದಕ್ಕೆ ಉತ್ತರ ನೀಡಿದ್ದ ಎಸ್ಪಿ, ಅತ್ಯಾಚಾರ ನಡೆದ ಹೊಳೆನರಸೀಪುರ ಫಾರ್ಮ್ ಹೌಸ್ನ ಅಕ್ಷಾಂಶ ಹಾಗೂ ರೇಖಾಂಶವನ್ನು ಮಹಜರು ದಾಖಲೆಯಲ್ಲಿ ನಮೂದಿಸಿ ಸಲ್ಲಿಸಲಾಗಿದೆ. ಈ ಅಕ್ಷಾಂಶ ರೇಖಾಂಶಗಳನ್ನು ಕ್ಲಿಕ್ ಮಾಡಿದರೆ ಗೂಗಲ್ ಮ್ಯಾಪ್ನಲ್ಲಿ ಫಾರ್ಮ್ ಹೌಸ್ ಲೊಕೇಷನ್ ಹಾಗೂ 2021ರ ಫೋಟೋ ಸಿಗಲಿದೆ. ಹೀಗಾಗಿ ಇದನ್ನೂ ದಾಖಲೆಯ ಭಾಗವೆಂದು ಪರಿಗಣಿಸಬೇಕು ಎಂದು ಮನವಿ ಮಾಡಿದರು.
ವಶಕ್ಕೆ ಪಡೆಯಲಾದ ಸ್ಯಾಮ್ಸಂಗ್ ಜೆ 4 ಮೊಬೈಲ್ ಫೋನ್ ಅನ್ನು ತನಿಖಾಧಿಕಾರಿ ಈ ಕೇಸಿನಲ್ಲಿ ಜಪ್ತಿ ಮಾಡಿರುವ ಬಗ್ಗೆ ಸ್ಪಷ್ಟೀಕರಣ ಬೇಕಿದೆ ಎಂದು ಕೋರ್ಟ್ ಕೇಳಿತ್ತು. ಇದಕ್ಕೆ ಪ್ರಜ್ವಲ್ ಪರ ವಕೀಲ ವಿಪಿನ್ ಕುಮಾರ್ ಜೈನ್ ಉತ್ತರಿಸಿ, ಬೇರೊಂದು ಕೇಸ್ನಲ್ಲಿ ವಶಕ್ಕೆ ಪಡೆದ ಮೊಬೈಲ್ ಅನ್ನು ತನಿಖಾಧಿಕಾರಿ ಈ ಕೇಸಿನಲ್ಲಿ ವಶಕ್ಕೆ ಪಡೆದಿಲ್ಲ. ಎಫ್ಎಸ್ಎಲ್ನಿಂದ ಅವರು ಸ್ವೀಕರಿಸುವ ಬಗ್ಗೆಯಾಗಲೀ ದಾಖಲೆಯಿಲ್ಲ. ಹೀಗಾಗಿ ಮೊಬೈಲ್ ತನಿಖಾಧಿಕಾರಿ ಬಳಿಯಲ್ಲಿರಲೇ ಇಲ್ಲ. ಹೀಗಾಗಿ ಈ ಸಾಕ್ಷ್ಯಕ್ಕೆ ಬೆಲೆಯಿಲ್ಲ ಎಂದು ವಾದ ಮಂಡಿಸಿದ್ದರು.
ಸರಣಿ ಅತ್ಯಾಚಾರ ಎಸಗಿರುವ ಆರೋಪ ಪ್ರಜ್ವಲ್ ರೇವಣ್ಣ ಮೇಲಿದ್ದು, ಇದರಲ್ಲಿ ಮೈಸೂರಿನ ಕೆಆರ್ ನಗರದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪವೂ ಒಂದಾಗಿದೆ. ಅತ್ಯಾಚಾರ ಪ್ರಕರಣ ಬೆಳಕಿಗೆ ಬರಬಾರದು ಎಂದು ಮಹಿಳೆಯನ್ನು ಅಪಹರಿಸಿ ಹುಣಸೂರು ಬಳಿಯ ತೋಟದ ಮನೆಯಲ್ಲಿ ಕೂಡಿಹಾಕಲಾಗಿತ್ತು ಎಂಬ ಆರೋಪದ ಅಡಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸೇರಿದಂತೆ ಒಟ್ಟು 9 ಆರೋಪಿಗಳಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ತೀರ್ಪು ಮತ್ತೆ ಮುಂದೂಡಿಕೆ
ಕೆಆರ್ ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಹೆಚ್ಡಿ ರೇವಣ್ಣ ಹಾಗೂ ಭವಾನಿ ರೇವಣ್ಣಗೆ ಈಗಾಗಲೇ ಜಾಮೀನು ದೊರೆತಿದೆ. ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಒಂದು ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣರನ್ನು ಪೊಲೀಸರು ಬಂಧಿಸಿದ್ದರು.
Published On - 1:35 pm, Fri, 1 August 25