ರಾಜ್ಯಪಾಲರ ಅಂಗಳಕ್ಕೆ ಪ್ರಜ್ವಲ್ ಪೆನ್‌ಡ್ರೈವ್ ಕೇಸ್: 15 ದಿನದ ತನಿಖೆಯಲ್ಲಿ ಇವರ ಸಾಧನೆ ಏನು, ಹೆಚ್‌ಡಿಕೆ ಪ್ರಶ್ನೆ
ಪ್ರಜ್ವಲ್ ರೇವಣ್ಣ ಹಾಗೂ ಹೆಚ್‌ಡಿ ರೇವಣ್ಣ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಬಗ್ಗೆ ಪ್ರಶ್ನೆ ಎತ್ತಿರುವ ಹೆಚ್‌ಡಿ ಕುಮಾರಸ್ವಾಮಿ, ಇವರಿಗೆ ತನಿಖೆ ಬೇಕಿಲ್ಲ. ಪ್ರಚಾರ ಬೇಕಾಗಿದೆ. 15 ದಿನದ ತನಿಖೆಯ ಸಾಧನೆ ಏನು ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕಿಡ್ನ್ಯಾಪ್ ಆದ ಮಹಿಳೆಯನ್ನ ಕೋರ್ಟ್‌ಗೆ ಹಾಜರುಪಡಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಈ ವಿಚಾರವಾಗಿ ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದ್ದಾರೆ.
ಬೆಂಗಳೂರು, ಮೇ 9: ಪ್ರಜ್ವಲ್ ರೇವಣ್ಣ (Prajwal Revanna) ಪೆನ್‌ಡ್ರೈವ್ ಪ್ರಕರಣ ಎಸ್‌ಐಟಿ ತನಿಖೆಿಗಿಂತ ಹೆಚ್ಚಾಗಿ ರಾಜಕೀಯವಾಗಿಯೇ ಸದ್ದು ಮಾಡುತ್ತಿದೆ. ಎಸ್‌ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ರಾಜ್ಯಪಾಲರ ಭೇಟಿಗೆ ನಿರ್ಧರಿಸಿದ್ದಾರೆ. ಮಧ್ಯಾಹ್ನ 3ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಿ ದೂರು ನೀಡಲು ಜೆಡಿಎಸ್ ನಿಯೋಗ ನಿರ್ಧರಿಸಿದೆ. ತನಿಖೆಯನ್ನು ಎಸ್‌ಐಟಿ ಪಾರದರ್ಶಕವಾಗಿ ನಡೆಸುತ್ತಿಲ್ಲ ಎಂದು ದೂರು ನೀಡಲು ಜೆಡಿಎಸ್ ನಿಯೋಗ ಮುಂದಾಗಿದೆ.
ಕಿಡ್ನ್ಯಾಪ್ ಆದ ಮಹಿಳೆಯನ್ನ ಕೋರ್ಟ್‌ಗೆ ಹಾಜರುಪಡಿಸಿಲ್ಲ ಯಾಕೆ; ಹೆಚ್‌ಡಿಕೆ ಪ್ರಶ್ನೆ
ಎಸ್‌ಐಟಿ ತನಿಖೆ ಬಗ್ಗೆ ಪ್ರಶ್ನೆ ಎತ್ತಿರುವ ಹೆಚ್‌ಡಿಕೆ, ಇವರಿಗೆ ತನಿಖೆ ಬೇಕಿಲ್ಲ. ಪ್ರಚಾರ ಬೇಕಾಗಿದೆ. 15 ದಿನದ ತನಿಖೆಯ ಸಾಧನೆ ಏನು ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕಿಡ್ನ್ಯಾಪ್ ಆದ ಮಹಿಳೆಯನ್ನ ಕೋರ್ಟ್‌ಗೆ ಹಾಜರುಪಡಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಈ ಮಧ್ಯೆ, ಎಸ್‌ಐಟಿ ಪಾರದರ್ಶಕವಾಗಿ ತನಿಖೆ ನಡೆಸ್ತಿಲ್ಲ ಎಂಬ ಜೆಡಿಎಸ್ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಗೃಹ ಸಚಿವ ಜಿ ಪರಮೇಶ್ವರ್, ಎಸ್‌ಐಟಿ ತನಿಖೆ ಮಾಡುತ್ತಿರುವುದರ ಮಾಹಿತಿ ಶೇರ್ ಮಾಡಲು ಆಗಲ್ಲ. ಅವರು ದೂರು ಕೊಡಲಿ ಎಂದಿದ್ದಾರೆ.
ಈ ಮಧ್ಯೆ, ರೇವಣ್ಣ ಜಾಮೀನು ಭವಿಷ್ಯ ಕೆಲವೇ ಹೊತ್ತಲ್ಲಿ ನಿರ್ಧಾರವಾಗಲಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬೆಳಗ್ಗೆ ಅರ್ಜಿ ವಿಚಾರಣೆ ನಡೆಸಿತು. ಈ ವೇಳೆ ಎಸ್‌ಪಿಪಿಗಳಾದ ಜಾಯ್ನಾ ಕೊಥಾರಿ ಮತ್ತು ಅಶೋಕ್ ನಾಯಕ್, ನಾವು ಹೊಸದಾಗಿ ನೇಮಕವಾಗಿದ್ದೇವೆ. ಹೀಗಾಗಿ ಆಕ್ಷೇಪಣೆ ಸಲ್ಲಿಸಲು ಸೋಮವಾರದವರೆಗೂ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಆದರೆ, ಮನವಿ ತಿರಸ್ಕರಿಸಿದ ಕೋರ್ಟ್, ಹೊಸದಾಗಿ ಎಸ್‌ಪಿಪಿ ನೇಮಕವಾದ್ರೆ ವಿಚಾರಣೆ ಮುಂದೂಡಿಕೆ ಮಾಡಲು ಆಗಲ್ಲ. ಮಧ್ಯಾಹ್ನದವರೆಗೂ ಕಾಲಾವಕಾಶ ನೀಡುತ್ತೇವೆ, ಮೊದಲು ಆಕ್ಷೇಪಣೆ ಸಲ್ಲಿಸಿ ಎಂದು ಮಧ್ಯಾಹ್ನ 2.45ಕ್ಕೆ ಅರ್ಜಿ ವಿಚಾರಣೆ ಮುಂದೂಡಿತು.
ಜೈಲಲ್ಲಿ ಮೊದಲ ದಿನ ಕಳೆದ ರೇವಣ್ಣಗೆ ಹೊಟ್ಟೆನೋವು!
ಪರಪ್ಪನ ಅಗ್ರಹಾರದಲ್ಲಿ ಒಂದು ದಿನ ಕಳೆದಿರುವ ರೇವಣ್ಣ, ರಾತ್ರಿ ಮುದ್ದೆ, ಚಪಾತಿ, ರೈಸ್ ಸಾಂಬಾರ್ ಸೇರಿಸಿ ಮೌನಕ್ಕೆ ಜಾರಿದ್ದರು. ಇವತ್ತು ಬೆಳಗ್ಗೆ 5.30ಕ್ಕೆ ಎದ್ದು ಕಾಫಿ ಟೀ ಸೇವಿಸಿದ್ದಾರೆ. ಹೊರಗಿನ ವಿದ್ಯಮಾನ ತಿಳಿಯಲು ನ್ಯೂಸ್ ಪೇಪರ್ ವ್ಯವಸ್ಥೆ ಮಾಡಲಾಗಿದ್ದು, ರೇವಣ್ಣ ದಿನಪತ್ರಿಕೆ ಓದಿದ್ದಾರೆ. ಜೈಲಿನ ಮೆನುವಿನಂತೆ ಜೈಲಿನ ಮೆನುವಿನಂತೆ ರೇವಣ್ಣಗೆ ಪುಳಿಯೊಗರೆ ನೀಡಲಾಗಿದ್ದು, ಸಮಾನ್ಯ ಕೈದಿಯಂತೆ ದಿನ ದೂಡುತ್ತಿದ್ದಾರೆ. ಈ ಮಧ್ಯೆ ರೇವಣ್ಣಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಜೈಲಿನ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಆಸ್ಪತ್ರೆಗೆ ರವಾನಿಸುವ ಸಾಧ್ಯತೆ ಇದೆ.
ಸಂತ್ರಸ್ತೆ ಕಿಡ್ನ್ಯಾಪ್ ಕೇಸ್ನಲ್ಲಿ ಮತ್ತೆ ಮೂವರು ವಶಕ್ಕೆ
ರೇವಣ್ಣ ಮಾತ್ರ ಯಾರನ್ನೂ ಕಿಡ್ನ್ಯಾಪ್ ಮಾಡಿಲ್ಲ, ಕಿಡ್ನ್ಯಾಪ್ ಕೇಸ್‌ಗೂ ನನಗೂ ಸಂಬಂಧವಿಲ್ಲ ಎಂದು ಎಸ್‌ಐಟಿ ಮುಂದೆ ಹೇಳಿದ್ದಾರೆ. ಆದರೆ, ಈ ಪ್ರಕರಣ ಸಂಬಂಧ ಮತ್ತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ. ರೇವಣ್ಣ ಪತ್ನಿ ಭವಾನಿ ಸಂಬಂಧಿ ಸುಜಯ್ ಹೆಬ್ಬಾಳು, ಕೀರ್ತಿ ಮತ್ತು ತಿಮ್ಮಪ್ಪ ಎಂಬುವವರನ್ನ ಎಸ್‌ಐಟಿ ವಶಕ್ಕೆ ಪಡೆದಿದೆ. ಈ ಮೂವರು ಸತೀಶ್ ಬಾಬು ಜೊತೆಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಪ್ರಜ್ವಲ್ ವಿಡಿಯೋ ಹಂಚಿಕೆ ಆರೋಪದಲ್ಲಿ ಕಾರ್ತಿಕ್‌ಗೆ ಸಂಕಷ್ಟ
ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಕಾರ್ತಿಕ್‌ಗೆ ಬಂಧನ ಭೀತಿ ಎದುರಾಗಿದೆ. ಜೊತೆಗೆ ಪುಟ್ಟಿ ಅಲಿಯಾಸ್ ಪುಟ್ಟರಾಜು, ನವೀನ್ ಗೌಡ ಮತ್ತು ಚೇತನ್ ಬಂಧನಕ್ಕೆ ಎಸ್‌ಐಟಿ ಬಲೆ ಬೀಸಿದೆ. ಈ ನಾಲ್ವರ ವಿರುದ್ಧ ವಿಡಿಯೋ ಎಡಿಟ್ ಮಾಡಿ ವಿಡಿಯೋ ಹಂಚಿಕೆ ಮಾಡಿದ ಆರೋಪವಿದ್ದು, ಜೆಡಿಎಸ್ ಕಾರ್ಯಕರ್ತರು ದೂರು ನೀಡಿದ್ದರು.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದು ರಾತ್ರಿ ಕಳೆದ ರೇವಣ್ಣ: ಹೀಗಿದೆ ಐಷಾರಾಮಿ ರಾಜಕಾರಣಿಯ ಸೆರೆವಾಸ!
ಈ ಮಧ್ಯೆ, ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡಗೂ ಎಸ್‌ಐಟಿ ನೋಟಿಸ್ ನೀಡಿದೆ. ಇತ್ತೀಚೆಗೆ ಒಂದಷ್ಟು ದಾಖಲೆ ಬಿಡುಗಡೆ ಮಾಡಿದ್ದ ದೇವರಾಜೇಗೌಡ, ಕೆಲವರ ವಿರುದ್ಧ ಆರೋಪ ಮಾಡಿದ್ರು. ಈ ಬೆಳವಣೆಗೆ ಬೆನ್ನಲ್ಲೆ, ಸಾಕ್ಷ್ಯ, ಫೋಟೋ, ಆಡಿಯೋ ವಿಡಿಯೋ ತರುವಂತೆ ನೋಟಿಸ್ ಜಾರಿ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ