ಬೆಂಗಳೂರು, ಮೇ 1: ಹಾಸನ (Hassan) ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧದ ಲೈಂಗಿಕ ದೌರ್ಜನ್ಯ ಹಗರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಈ ಘಟನೆ ವಿರುದ್ಧ ಆಕ್ರೋಶ ಸ್ಫೋಟಗೊಂಡಿದೆ. ಇದರಿಂದ ಪಕ್ಷದ ಮೇಲಾಗಿರುವ ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನಿಸಿರುವ ರಾಜ್ಯಾಧ್ಯಕ್ಷ ಹೆಚ್‌ಡಿ ಕುಮಾರಸ್ವಾಮಿ ಮಂಗಳವಾರವಷ್ಟೇ ಪ್ರಜ್ವಲ್‌ರನ್ನು ಪಕ್ಷದಿಂದ ಅಮಾನತು ಮಾಡುವ ಘೋಷಣೆ ಮಾಡಿದ್ದಾರೆ. ನಂತರ ಆ ಬಗ್ಗೆ ಪಕ್ಷ ಕ್ರಮ ಕೈಗೊಂಡ ಅಧಿಕೃತ ಆದೇಶವೂ ಹೊರಬಿದ್ದಿದೆ. ಸಂತ್ರಸ್ತ ಮಹಿಳೆಯರು ಹೆಚ್‌ಡಿ ರೇವಣ್ಣ (HD Revanna) ಮತ್ತು ಪ್ರಜ್ವಲ್ ವಿರುದ್ಧ ಹೊಳೆನರಸೀಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಪ್ರಕರಣದ ತನಿಖೆಗೆ ಈಗಾಗಲೇ ರಾಜ್ಯಸರ್ಕಾರ ಎಸ್‌ಐಟಿ (SIT) ತಂಡ ರಚಿಸಿದೆ.
ಸಿಐಡಿ ಎಡಿಜಿಪಿ ಬಿಕೆ ಸಿಂಗ್ ನೇತೃತ್ವದಲ್ಲಿ 18 ಅಧಿಕಾರಿಗಳ ಎಸ್‌ಐಟಿ ತಂಡ ನೇಮಕವಾಗಿದೆ. ಮಾಜಿ ಪ್ರಧಾನಿಯವರ ಕುಟುಂಬಕ್ಕೆ ಸಂಬಂಧಿಸಿದ ಹೈಪ್ರೊಫೈಲ್ ಪ್ರಕರಣವಾಗಿರೋದ್ರಿಂದ ಎಸ್‌ಐಟಿ ತಂಡ ಒಂದೊಂದು ವಿಚಾರವನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಇಡೀ ಹಗರಣದಲ್ಲಿ ಲೈಂಗಿಕ ದೌರ್ಜನ್ಯ, ಅಶ್ಲೀಲ ದೃಶ್ಯ ಚಿತ್ರೀಕರಣ, ಅಶ್ಲೀಲ ದೃಶ್ಯಗಳ ಹಂಚಿಕೆ ಮತ್ತು ಡೀಪ್ ಫೇಕ್ ಹೀಗೆ ಹಲವು ಆ್ಯಂಗಲ್‌ಗಳು ಇವೆ. ಹೀಗಾಗಿ, ಸಂತ್ರಸ್ತೆಯ ದೂರಿನ ಸತ್ಯಾಸತ್ಯತೆ ಏನು? ಪೆನ್‌ಡ್ರೈವ್‌ಗೆ ವಿಡಿಯೋಗಳನ್ನು ಹಾಕಿದ್ದು ಯಾರು? ಪೆನ್‌ಡ್ರೈವ್ ಹಂಚಿದ್ದು ಯಾರು? ಇತ್ಯಾದಿಗಳ ಮೂಲ ಹುಡುಕಲು ಎಸ್‌ಐಟಿ ಮುಂದಾಗಿದೆ. ಎಸ್‌ಐಟಿ ತಂಡವನ್ನ 3 ಉಪ ತಂಡಗಳಾಗಿ ವಿಂಗಡಿಸಲಾಗಿದೆ.
ಎಸ್‌ಪಿ ಸುಮನ್ ಡಿ ಪನ್ನೆಕರ್ ಅವರ ನೇತೃತ್ವದಲ್ಲಿ ಮೊದಲನೆಯ ತಂಡ ರಚಿಸಲಾಗಿದೆ. ಈ ತಂಡ ಹೊಳೆನರಸೀಪುರದಲ್ಲಿ ದಾಖಲಾದ ಕೇಸ್ನ ತನಿಖೆ ನಡೆಸಲಿದೆ. ದೂರುದಾರರಿಂದ ಮಾಹಿತಿ ಕಲೆ ಹಾಕುತ್ತಿದೆ. ಹೇಳಿಕೆ, ಸಾಕ್ಷಿಗಳನ್ನು ಸಂಗ್ರಹಿಸುತ್ತಿದೆ. ಈಗಾಗಲೇ ಹಲವಾರು ಸಾಕ್ಷಿಗಳನ್ನು ಸಂಗ್ರಹಿಸಿದ್ದು, ದೂರುದಾರ ಮಹಿಳೆಯಿಂದ ಯಾವಾಗ, ಎಲ್ಲಿ ದೌರ್ಜನ್ಯ ಮಾಡಲಾಗಿದೆ. ರೇವಣ್ಣ ಹಾಗೂ ಪ್ರಜ್ವಲ್ ಯಾವಾಗ ದೌರ್ಜನ್ಯ ಮಾಡಿದ್ರು? ಯಾವ ರೀತಿ ದೌರ್ಜನ್ಯ ಮಾಡಿದ್ರು ಎಂದು ವಿಚಾರಿಸಿದೆ. ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಲಿದೆ.
ಪ್ರಜ್ವಲ್ ಪ್ರಕರಣದ ತನಿಖೆಗಾಗಿ ಎಸ್‌ಪಿ ಸೀಮಾ ಲಾಟ್ಕರ್ ನೇತೃತ್ವದ ಎರಡನೇ ತಂಡ ರಚಿಸಲಾಗಿದೆ. ಇದು ಮತ್ತೊಂದು ರೀತಿಯ ಆಯಾಮದಲ್ಲಿ ತನಿಖೆ ನಡೆಸಲಿದೆ. ವಿಡಿಯೋದಲ್ಲಿರುವ ಸಂತ್ರಸ್ತೆಯರ ವಿಚಾರಣೆ ನಡೆಸಲಿದೆ. ಈಗಾಗಲೇ ಅಧಿಕಾರಿಗಳು ಸಂತ್ರಸ್ತೆಯರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಹಾಸನ ಭಾಗದಲ್ಲೇ ಹೆಚ್ಚಾಗಿ ತನಿಖೆ ನಡೆಸಲಾಗ್ತಿದೆ. ಈಗಾಗಲೇ ಹಲವು ಮಹಿಳೆಯರನ್ನ ಸಂಪರ್ಕಿಸಿದ್ದಾರೆ. ಹಾಸನದಲ್ಲೇ ಬೀಡುಬಿಟ್ಟು ಸಂತ್ರಸ್ತೆಯ ಹೇಳಿಕೆ ಪಡೆಯಲು ಸಿದ್ಧತೆ ನಡೆಸಿದೆ.
ಇನ್ನು ಎಸ್‌ಐಟಿ ಮೂರನೇ ಟೀಂನಲ್ಲಿ ಸೈಬರ್ ಕ್ರೈಂ ತಂಡ ಕಾರ್ಯನಿರ್ವಹಿಸಲಿದೆ. ಎಸಿಪಿಗಳ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ವಿಡಿಯೋ ರಿಲೀಸ್ ಮಾಡಿದ್ಯಾರು? ಪೆನ್‌ಡ್ರೈವ್ ಹಂಚಿಕೆ ಮಾಡಿದ್ಯಾರು? ಪೆನ್‌ಡ್ರೈವ್‌ನಲ್ಲಿ ವಿಡಿಯೋ ಕಾಪಿ ಆಗಿದ್ದು ಎಲ್ಲಿ? ಯಾವ ಕಂಪ್ಯೂಟರ್‌ನಿಂದ ಮೊದಲು ಕಾಪಿ ಆಗಿದೆ ಎಂಬೆಲ್ಲಾ ಆಯಾಮದಲ್ಲಿ ತನಿಖೆ ನಡೆಯಲಿದೆ.
ಇದನ್ನೂ ಓದಿ: 3 ತಿಂಗಳ ಹಿಂದೆಯೇ ಪ್ರಜ್ವಲ್ ರೇವಣ್ಣ ವಿಡಿಯೋ ಗುಟ್ಟು ರಟ್ಟು ಮಾಡಿದ್ದ ಬಿಜೆಪಿ ನಾಯಕ
ಎಸ್‌ಐಟಿ ತಂಡ ಪ್ರಜ್ವಲ್ ವಿರುದ್ಧದ ಲೈಂಗಿಕ ಹಗರಣ ಸಂಬಂಧ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಬೇಕಿದೆ. ಅಪ್ಪ, ಮಕ್ಕಳಿಗೆ ಈ ಪ್ರಕರಣ ಸಂಕಷ್ಟ ತಂದಿಟ್ಟಿದ್ದು, ಇದರ ಹಿಂದೆ ಯಾಱರ ಕೈವಾಡವಿದೆ? ವಿಡಿಯೋ ಮೂಲವೇನು ಅನ್ನೋದು ತನಿಖೆ ಬಳಿಕವಷ್ಟೇ ಬಯಲಾಗಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ