Kannada News Karnataka Prajwal video case: What are the limitations of SIT investigation? Here is the information given by a retired police officer
ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಎಸ್ಐಟಿ ತನಿಖೆಯ ಇತಿಮಿತಿಗಳೇನು? ನಿವೃತ್ತ ಪೊಲೀಸ್ ಅಧಿಕಾರಿ ನೀಡಿದ ಮಾಹಿತಿ ಇಲ್ಲಿದೆ
ಸಾಮಾನ್ಯವಾಗಿ ಪೊಲೀಸರು ನಡೆಸುವ ತನಿಖೆ ಪ್ರಕ್ರಿಯೆಗೂ ಎಸ್ಐಟಿ ತನಿಖೆಗೂ ಏನಾದರೂ ವ್ಯತ್ಯಾಸವಿದೆಯೇ? ಎಸ್ಐಟಿ ತನಿಖೆಗೆ ಇರುವ ಇತಿ ಮಿತಿಗಳೇನು? ಇತ್ಯಾದಿ ಪ್ರಶ್ನೆಗಳಿಗೆ ಮತ್ತು ಸಂದೇಹಗಳಿಗೆ ಮೈಸೂರಿನಲ್ಲಿ ನಿವೃತ್ತ ಡಿವೈ ಎಸ್ಪಿ ಮೋಹನ್ ಉತ್ತರ ನೀಡಿದ್ದಾರೆ. ಆ ವಿವರ ಇಲ್ಲಿದೆ.
ಮೈಸೂರು, ಮೇ 2: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಪ್ರಕರಣ ಇದೀಗ ರಾಜ್ಯ, ದೇಶದ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಈಗಾಗಲೇ ಎಸ್ಐಟಿ (SIT) ರಚನೆ ಮಾಡಿದ್ದು, ಅದರ ಮೂರು ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ. ಎಸ್ಐಟಿ ತನಿಖೆಗೂ (SIT Investigation) ಸಾಮಾನ್ಯವಾಗಿ ಪೊಲೀಸರು ನಡೆಸುವ ತನಿಖೆ ಪ್ರಕ್ರಿಯೆಗೂ ಏನು ವ್ಯತ್ಯಾಸ ಹಾಗೂ ಎಸ್ಐಟಿ ತನಿಖೆಗೆ ಇರುವ ಇತಿ ಮಿತಿಗಳೇನು ಎಂಬುದನ್ನು ಮೈಸೂರಿನ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಪ್ರಜ್ವಲ್ ಪ್ರಕರಣ ಹಾಗೂ ಎಸ್ಐಟಿ ತನಿಖೆ ಬಗ್ಗೆ ನಿವೃತ್ತ ಡಿವೈ ಎಸ್ಪಿ ಮೋಹನ್ ‘ಟಿವಿ9’ಗೆ ನೀಡಿರುವ ಮಾಹಿತಿ ಇಲ್ಲಿದೆ.
ಎಸ್ಐಟಿ ವಿಶೇಷ ತನಿಖ ತಂಡವಾಗಿರುತ್ತದೆ. ಆದ್ರೆ ಠಾಣೆಯಲ್ಲಿ ಒಬ್ಬ ಪಿಎಸ್ಐ ಹೇಗೆ ತನಿಖೆ ನಡೆಸುತ್ತಾನೆಯೋ ಅದೇ ಮಾದರಿಯಲ್ಲಿ ತನಿಖೆ ನಡೆಸಬೇಕಾಗುತ್ತದೆ. ಅದನ್ನು ಹೊರತು ಪಡಿಸಿ ವಿಶೇಷವಾದ ಕಾನೂನಿನ ಅವಕಾಶ ಇರುವುದಿಲ್ಲ. ವಿಶೇಷ ಪ್ರಕರಣಗಳಲ್ಲಿ ಸರ್ಕಾರ ತನಿಖಾ ತಂಡ ರಚನೆ ಮಾಡಿ ತನಿಖೆ ಮಾಡಿಸುತ್ತದೆ.
ಆರೋಪಗಳಿಗೆ ನೋಟಿಸ್ ಕೊಡಲೇ ಬೇಕಾಗುತ್ತದೆ. ಈಗಾಗಲೇ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಈ ಕಾರಣದಿಂದ ನೋಟಿಸ್ ಕೊಟ್ಟು ತನಿಖೆಗೆ ಬರುವಂತೆ ಕೋರಲಾಗುತ್ತದೆ. ಆರೋಪಿಗಳಿಗೆ ಸಮಯಾವಕಾಶ ಕೊಡುವುದು ಇತ್ಯಾದಿ ವಿಚಾರಗಳ ಬಗ್ಗೆ ಆಯಾ ತನಿಖಾಧಿಕಾರಿಗಳಿಗೆ ಸ್ವಾತಂತ್ರವಿರುತ್ತದೆ. ತನಿಖಾಧಿಕಾರಿ ಸಮಯವನ್ನು ಕೊಡಬಹುದು ಅಥವಾ ನಿರಾಕರಿಸಬಹದು. ಇದು ತನಿಖಾಧಿಕಾರಿಗೆ ಬಿಟ್ಟಿರುವ ವಿಚಾರ.
ಸಂತ್ರಸ್ತರಿಗೆ ನೋಟಿಸ್ ಕೊಡಬಹುದು. ಆದರೆ, ಅವರನ್ನು ಬಲವಂತ ಮಾಡುವಂತಿಲ್ಲ. ಒಪ್ಪಿಗೆಯಿಂದ ಮಾಡಿದ್ದರೆ ಅದನ್ನು ಪ್ರಶ್ನೆ ಮಾಡುವಂತಿಲ್ಲ, ಪ್ರಶ್ನೆ ಮಾಡುವ ಅಧಿಕಾರವು ಇರುವುದಿಲ್ಲ. ಸಂತ್ರಸ್ತೆಯರು ತನಿಖೆಗೆ ಸಹಕಾರ ಮಾಡುವುದು ಬಿಡುವುದು ಅವರಿಗೆ ಬಿಟ್ಟಿದ್ದು. ತನಿಖೆ ವಿಚಾರವಾಗಿ ಅವರನ್ನು ಬಲವಂತ ಮಾಡಲು ಆಗುವುದಿಲ್ಲ.
ತಾಂತ್ರಿಕವಾಗಿಯು ತನಿಖೆ ನಡೆಸಬಹದು. ಮೊದಲಿಗೆ ಈ ವೀಡಿಯೋ ಅಸಲಿಯೋ ನಕಲಿಯೋ ಅನ್ನುವುದನ್ನು ತಾಂತ್ರಿಕವಾಗಿ ಸಾಬೀತು ಮಾಡಬೇಕು. ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ತಾಂತ್ರಿಕವಾಗಿ ತನಿಖೆ ಮಾಡಬಹುದು.
ಆರೋಪಿಗಳನ್ನು ಎಸ್ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಬಹುದು. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆ.
ಸಂತ್ರಸ್ತೆಯರು ಕೊಡುವ ಹೇಳಿಕೆಗಳ ಆಧಾರದ ಮೇಲೆ ಆರೋಪ ಸಾಬೀತುಪಡಿಸಬಹುದು. ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಸಾಧ್ಯತೆ ಇರುತ್ತದೆ. ಆದರೆ ಸಂತ್ರಸ್ತೆಯ ಹೇಳಿಕೆ ಹಾಗೂ ಸಾಕ್ಷಿಗಳ ಆಧಾರದ ಮೇಲೆ ಸಾಬೀತು ಮಾಡಬಹದು. ಸಂತ್ರಸ್ತೆ ಸರ್ಕಾರಿ ಅಧಿಕಾರಿಯಾಗಿದ್ದರೂ ಒಪ್ಪಿತ್ತವಾಗಿ ಮಾಡಿದ್ದರೆ ಯಾವುದೇ ಸಮಸ್ಯೆ ಇಲ್ಲ. ಅವರು ಆರೋಪ ಮಾಡಿದರೆ ಮಾತ್ರ ಪರಿಗಣಿಸಲಾಗುತ್ತದೆ. ಇಲ್ಲದಿದ್ದರೆ ಸರ್ಕಾರಿ ಅಧಿಕಾರಿಯಾದರೂ ಅವರನ್ನು ಬಲವಂತವಾಗಿ ತನಿಖೆ ಮಾಡಲು ಸಾಧ್ಯವಿಲ್ಲ.