ಅಶ್ಲೀಲ ವಿಡಿಯೋ ಪ್ರಕರಣ: 9 ಸಂತ್ರಸ್ತೆಯರು ಎಸ್​​ಐಟಿ ಬಳಿ ಹೇಳಿದ್ದೇನು? ಇಲ್ಲಿದೆ ವಿವರ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ಹೆಚ್​​ಡಿ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಹಾಗೂ ಕಿಡ್ನಾಪ್ ಪ್ರಕರಣದ ತನಿಖೆಯ ನಡೆಸುತ್ತಿರುವ ಎಸ್​ಐಟಿ, 9 ಮಂದಿ ಸಂತ್ರಸ್ತೆಯರನ್ನು ಗುರುತಿಸಿ ಅವರ ಹೇಳಿಕೆ ಪಡೆದಿದೆ. ಈ ಪೈಕಿ ಇಬ್ಬರು ಸರ್ಕಾರಿ ಅಧಿಕಾರಿಗಳೂ ಇದ್ದಾರೆ. ಸಂತ್ರಸ್ತೆಯರು ಕೊಟ್ಟ ಹೇಳಿಕೆಯ ವಿವರ ಇಲ್ಲಿದೆ ನೋಡಿ.

ಅಶ್ಲೀಲ ವಿಡಿಯೋ ಪ್ರಕರಣ: 9 ಸಂತ್ರಸ್ತೆಯರು ಎಸ್​​ಐಟಿ ಬಳಿ ಹೇಳಿದ್ದೇನು? ಇಲ್ಲಿದೆ ವಿವರ
ಅಶ್ಲೀಲ ವಿಡಿಯೋ ಪ್ರಕರಣ: 9 ಸಂತ್ರಸ್ತೆಯರು ಎಸ್​​ಐಟಿ ಬಳಿ ಹೇಳಿದ್ದೇನು?
Follow us
Kiran HV
| Updated By: Ganapathi Sharma

Updated on: May 08, 2024 | 2:29 PM

ಬೆಂಗಳೂರು, ಮೇ 8: ಪ್ರಜ್ವಲ್ ರೇವಣ್ಣ (Prajwal Revanna) ಹಾಗೂ ಹೆಚ್​​ಡಿ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಹಾಗೂ ಕಿಡ್ನಾಪ್ ಪ್ರಕರಣದ ತನಿಖೆಯನ್ನು ಎಸ್​ಐಟಿ (SIT) ಚುರುಕುಗೊಳಿಸಿದ್ದು, ಇದುವರೆಗೂ 9 ಮಂದಿ ಸಂತ್ರಸ್ತೆಯರನ್ನು ಗುರುತಿಸಿ ವಿಚಾರಣೆ ನಡೆಸಿದೆ. ಇದಷ್ಟೇ ಅಲ್ಲದೆ, ಲೈಂಗಿಕ ದೌರ್ಜನ್ಯ ಯಾವಾಗೆಲೆಲ್ಲ ನಡೆದಿದೆ ಎಂಬ ಮಾಹಿತಿಯನ್ನೂ ಎಸ್​ಐಟಿ ಕಲೆ ಹಾಕಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೋಗಳನ್ನು ಆಧರಿಸಿ ಅಧಿಕಾರಿಗಳು ಸಂತ್ರಸ್ತೆಯರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ 9 ಸಂತ್ರಸ್ತೆಯರನ್ನು ಪತ್ತೆ ಹಚ್ಚಿ ಅವರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ 9 ಸಂತ್ರಸ್ತೆಯರ ಪೈಕಿ ಇಬ್ಬರು ಸರ್ಕಾರಿ ಅಧಿಕಾರಿಗಳು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಇಲ್ಲಿದೆ ಸಂತ್ರಸ್ತೆಯರ ಹೇಳಿಕೆಯ ಸ್ಫೋಟಕ ಮಾಹಿತಿ

9 ಮಂದಿ ಸಂತ್ರಸ್ತೆಯರು ಎಸ್​ಐಟಿ ಅಧಿಕಾರಿಗಳ ಮುಂದೆ ಕೊಟ್ಟ ಹೇಳಿಕೆಯ ಸ್ಫೋಟಕ ಮಾಹಿತಿ ಇಲ್ಲಿದೆ. ವಿಚಾರಣೆ ವೇಳೆ ಎಸ್​ಐಟಿ ಅಧಿಕಾರಿಗಳು, ಸಂತ್ರಸ್ತೆಯರಿಂದ ಹೇಳಿಕೆಗಳನ್ನು ಮಾತ್ರ ದಾಖಲಿಸಿಕೊಂಡಿದ್ದಾರೆ. ಅವರ ಹೇಳಿಕೆ ಸಂಬಂಧ ಯಾವುದೇ ಮರು ಪ್ರಶ್ನೆ ಮಾಡಿಲ್ಲ. ಅದರಂತೆ ಲೈಂಗಿಕ ದೌರ್ಜನ್ಯ 3 ವರ್ಷಗಳ ಅವಧಿಯಲ್ಲಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ. ಇದರಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ವರ್ಗಾವಣೆ ಬೇಕು ಎಂದು ಪ್ರಜ್ವಲ್​ರನ್ನ ಭೇಟಿ ಮಾಡಿದ್ದರು. ಅವರ ಮೇಲೆ 2019 ರಿಂದ 2021ರ ತನಕ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವ ಮಾಹಿತಿ ಇದೆ. ಅಂದರೆ, ಪ್ರಜ್ವಲ್ ರೇವಣ್ಣ ಸಂಸದ ಆದಮೇಲೆ ಸಂತ್ರಸ್ತೆಯರು ಭೇಟಿ ಮಾಡಿರುವ ಬಗ್ಗೆ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದ ಕೆಲ ಮಹಿಳಾ ಜನಪ್ರತಿನಿಧಿಗಳು ತಮಗೆ ಬೇಕಾದ ಅನುದಾನಗಳ ಬಗ್ಗೆ ಮಾತನಾಡಲು ಭೇಟಿ ಮಾಡಿದ್ದರು ಎಂಬ ಮಾಹಿತಿ ಇದೆ. ಕೆಲ ಕಾರ್ಯಕರ್ತರು ತಮ್ಮ ತಮ್ಮ ಕೆಲಸಗಳು ಆಗಬೇಕು ಎಂದು ಪ್ರಜ್ವಲ್​ರನ್ನ ಭೇಟಿ ಮಾಡಿದ್ದರು ಎಂದು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗೇಯೇ, ಕೆಲ ಗುತ್ತಿಗೆ ಕೆಲಸಗಳನ್ನು ಕೊಡಿಸುವ ಆಮಿಷ ಒಡ್ಡಿದ್ದ ಬಗ್ಗೆಯೂ ಮಾಹಿತಿ ಇದೆ.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜತೆ ಕಾರ್ತಿಕ್, ಫೋಟೊ ವೈರಲ್

ಈ ಮಧ್ಯೆ ಎಸ್​ಐಟಿ ಮುಂದೆ ಹಾಜರಾಗಲು ಪ್ರಜ್ವಲ್ ರೇವಣ್ಣಗೆ ನೀಡಿದ ಕಾಲಾವಕಾಶ ಇಂದಿಗೆ ಮುಗಿಯಲಿದೆ. ಹೀಗಾಗಿ ಪ್ರಜ್ವಲ್ ಯಾವಾಗ ವಿಚಾರಣೆಗೆ ಹಾಜರಾಗ್ತಾರೆ ಅನ್ನೋ ಪ್ರಶ್ನೆ ಇದೆ. ಈ ಮಧ್ಯೆ 196 ರಾಷ್ಟ್ರಗಳಲ್ಲಿ ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಹೀಗಾಗಿ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ