AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಣಿ ಚೆನ್ನಭೈರಾದೇವಿ ಅಂಚೆ ಚೀಟಿ ಅನಾವರಣಗೊಳಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು "ಮೆಣಸಿನ ರಾಣಿ" ಎಂದೇ ಪ್ರಸಿದ್ಧಳಾದ ರಾಣಿ ಚೆನ್ನಭೈರಾದೇವಿ ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ. ಚೆನ್ನಮ್ಮನ ಧೈರ್ಯ, ಸಾಮ್ರಾಜ್ಯ ನಿರ್ವಹಣೆ ಮತ್ತು ವ್ಯಾಪಾರ ಕೌಶಲ್ಯಗಳನ್ನು ಸ್ಮರಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಡಾ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಣಿ ಚೆನ್ನಭೈರಾದೇವಿ ಅಂಚೆ ಚೀಟಿ ಅನಾವರಣಗೊಳಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಣಿ ಚೆನ್ನಭೈರಾದೇವಿ ಅಂಚೆ ಚೀಟಿ ಅನಾವರಣ
ಗಂಗಾಧರ​ ಬ. ಸಾಬೋಜಿ
|

Updated on:Jul 25, 2025 | 10:10 AM

Share

ಬೆಂಗಳೂರು, ಜುಲೈ 25: “ಮೆಣಸಿನ ರಾಣಿ” ಎಂದೇ ಪ್ರಸಿದ್ಧಳಾದ ರಾಣಿ ಚೆನ್ನಭೈರಾದೇವಿ (Rani Chennabhairadevi) ಅವರ ಸ್ಮರಣಾರ್ಥವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಅಂಚೆ ಚೀಟಿ ಬಿಡುಗಡೆ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ರಾಣಿ ಚೆನ್ನಭೈರಾದೇವಿ ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ಮತ್ತು ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಚೆನ್ನಭೈರಾದೇವಿಯ ಸಾಧನೆ ವಜ್ರದ ಅಕ್ಷರಗಳಲ್ಲಿ ಕೆತ್ತಬೇಕು: ದ್ರೌಪದಿ ಮುರ್ಮು

ರಾಣಿ ಚೆನ್ನಭೈರಾದೇವಿ ಅಂಚೆ ಚೀಟಿ ಬಿಡುಗಡೆ ಬಳಿಕ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಣಿ ಚೆನ್ನಭೈರಾದೇವಿಯ ಧೈರ್ಯ, ಸ್ಥೈರ್ಯ ಮತ್ತು ಸಾಧನೆಯನ್ನು ನಾವು ಸುವರ್ಣಾಕ್ಷರಗಳಲ್ಲಿ ಮಾತ್ರವಲ್ಲ, ವಜ್ರದ ಅಕ್ಷರಗಳಲ್ಲಿ ಕೆತ್ತಬೇಕು. ಇದೊಂದು ಅವಿಸ್ಮರಣೀಯ ಘಟನೆ. ನಿಜವೇ ಎಂದು ಮೈ ಚಿವುಟಿ ನೋಡಿಕೊಳ್ಳಬೇಕಾದ ಸಂಗತಿ. ಏಕೆಂದರೆ ನನ್ನಂಥವರಿಗೆ ರಾಷ್ಟ್ರಪತಿ ಭವನವನ್ನು ಪ್ರವೇಶಿಸುವ ಅವಕಾಶವೇ ದೊಡ್ಡದು. ಇನ್ನು ಅವರನ್ನು ಸಮೀಪದಲ್ಲಿ ಕಾಣುವ ಭಾಗ್ಯ ಮತ್ತಷ್ಟು ಹಿರಿದಾದುದು ಎಂದಿದ್ದಾರೆ.

ಪ್ರಲ್ಹಾದ್​ ಜೋಶಿ ಟ್ವೀಟ್​

ಬೇರೆ ಮಹಾರಾಣಿಯೂ ಆಳದಷ್ಟು ಸುದೀರ್ಘ ಐವತ್ನಾಲ್ಕು ವರ್ಷಗಳಷ್ಟು ಕಾಲ ರಾಜ್ಯವಾಳಿದ್ದಳೋ, ಯಾವ ಮಹಾರಾಣಿ ಇಡಿಯ ಯುರೋಪಿನ ಕಾಳುಮೆಣಸು, ದಾಲ್ಚಿನ್ನಿ, ಭತ್ತ, ಶುಂಠಿ ವ್ಯವಹಾರಗಳನ್ನು ಸಂಪೂರ್ಣ ಹಿಡಿತದಲ್ಲಿ ಇಟ್ಟುಕೊಂಡಿದ್ದಳೋ, ಯಾವ ರಾಣಿ ಪೂರ್ಚುಗೀಸರು ದಕ್ಷಿಣ ಕೊಂಕಣಕ್ಕೆ ಕಾಲಿಟ್ಟು ರಾಜಕೀಯ ಮತ್ತು ಮತೀಯ ಅತಿರೇಕಗಳನ್ನು ಎಸಗದಂತೆ ಅವರನ್ನು ಕಾಳಿ ನದಿಯಾಚೆಯ ತೀರದಲ್ಲೇ ತಡೆದು ನಿಲ್ಲಿಸಿದ್ದಳೋ, ಯಾವ ರಾಣಿ ಸ್ವತಃ ಯಾರ ಮೇಲೂ ತಾನಾಗಿ ಯುದ್ದ ಸಾರದಿದ್ದರೂ ತಾವಾಗಿ ಮೇಲೆ ಬಿದ್ದ ಯಾರನ್ನೂ ಬಗ್ಗು ಬಡಿಯದೆ ಬಿಟ್ಟಿರಲಿಲ್ಲವೋ, ಯಾವ ಮಹಾರಾಣಿ ಸರ್ವಸಮನ್ವಯತೆಯಿಂದ ಎಲ್ಲರನ್ನೂ ಒಳಗೊಂಡು ಆಡಳಿತ ನಡೆಸಿ, ನಾಡಿನ ಸರ್ವೋದಯಕ್ಕೆ ಕಾರಣಳಾಗಿದ್ದಳೋ, ಯಾವ ರಾಣಿ ತನ್ನ ವ್ಯಾಪಾರ, ವ್ಯವಹಾರ ಮತ್ತು ಆಡಳಿತ ಕೌಶಲ್ಯಗಳಿಂದ ರಾಜ್ಯವನ್ನು ಸಮೃದ್ಧವಾಗಿ, ಶ್ರೀಮಂತವಾಗಿ ಸುರಕ್ಷಿತವಾಗಿ ಕಟ್ಟಿದ್ದಳೋ ಆ ಮಹಾರಾಣಿಯ ಘನತೆಗೆ ತಕ್ಕ ಗೌರವ ನೀಡಿದ ಕಾರ್ಯಕ್ರಮವಾಗಿದೆ ಎಂದರು.

ಇದನ್ನೂ ಓದಿ: Mysuru Dasara: ಮೈಸೂರು ದಸರಾ ಜಂಬೂ ಸವಾರಿಗೆ 9 ಆನೆಗಳ ಆಯ್ಕೆ ಅಂತಿಮ: ಇಲ್ಲಿದೆ ಪಟ್ಟಿ

ದೌರ್ಭಾಗ್ಯವೆಂದರೆ ವಿದೇಶೀಯರಿಂದ ಇಂತಹ ಶ್ಲಾಘನೆ ಪಡೆದ ರಾಣಿ ಚೆನ್ನಭೈರಾದೇವಿ ಅದೇಕೋ ನಮ್ಮ ಇತಿಹಾಸದ ಮುಖ್ಯ ವಾಹಿನಿಯ ಪುಟಗಳನ್ನು ಅಲಂಕರಿಸಲೇ ಇಲ್ಲ. ಅವಳನ್ನು ನಾವು ಬದಿಗಿಟ್ಟೆವು. ಯಾವ ಪೋರ್ಚುಗೀಸರೊಂದಿಗೆ ಆಕೆ ಘೋರ ಸಂಗ್ರಾಮಕ್ಕೆ ಇಳಿದಿದ್ದಳೋ ಆ ಪೋರ್ಚುಗೀಸರೇ ಆಕೆಗೆ ರೈನಾ ದಿ ಪೆಮೆಂಟಾ ಅರ್ಥಾತ್ “ಕಾಳುಮೆಣಸಿನ ರಾಣಿ” ಎಂಬ ಬಿರುದನ್ನಿತ್ತು ಗೌರವಿಸಿದ್ದರು ಎಂದು ಹೇಳಿದರು.

1552 ರಿಂದ 1606 ರವರೆಗೆ ಒಟ್ಟು 54 ವರ್ಷಗಳ ಕಾಲ ಹೈವ, ತುಳುವ, ಕೊಂಕಣ ಪ್ರದೇಶಗಳನ್ನು ಹಾಡುವಳ್ಳಿ ಗೇರುಸೊಪ್ಪೆ ಅವಳಿ ಪಟ್ಟಣಗಳನ್ನು ಕೇಂದ್ರವಾಗಿ ಇಟ್ಟುಕೊಂಡು ಆಳಿದ ವೀರ ರಾಣಿ ಚೆನ್ನಭೈರಾದೇವಿ ಸರ್ವಧರ್ಮ ಸಮನ್ವಯ ಸಾಧಿಸಿದ ಜಿನಮಾನಿನಿ. ಎಲ್ಲ ಸಮಾಜದ ಎಲ್ಲ ಪ್ರಜೆಗಳಿಗೂ ಕೃಷಿ, ವ್ಯಾಪಾರ ಮತ್ತು ವ್ಯವಹಾರವನ್ನು ಕಲಿಸಿ ತನ್ನ ಸಾಮ್ರಾಜ್ಯದ ಆದಾಯವನ್ನು ಹೆಚ್ಚಿಸಿದ್ದಳು. 1606ರಲ್ಲಿ ಕೆಳದಿ ಅರಸರ ತಂತ್ರಗಾರಿಕೆಯಿಂದ ಬಂಧನಕ್ಕೆ ಒಳಗಾಗಿ ಸಾಮ್ರಾಜ್ಯವನ್ನು ಕಳೆದುಕೊಂಡು ಹಳೆ ಇಕ್ಕೇರಿಯಲ್ಲಿ ಬಂಧನದಲ್ಲಿದ್ದು, ಜಿನಪದ್ಧತಿಗೆ ಅನುಗುಣವಾಗಿ ನಿರಾಹಾರ ವ್ರತಧಾರಿಯಾಗಿ ಸಲ್ಲೇಖದ ಮೂಲಕ ಇಹಲೋಕ ತ್ಯಜಿಸಿದ್ದಳು.

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದ್ದಿಷ್ಟು

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಮಾತನಾಡಿ, ಚೆನ್ನಭೈರಾದೇವಿ ಕರ್ನಾಟಕದ ಹೆಮ್ಮೆ. ಆಕೆ ನಮ್ಮ ಹೆಣ್ಣು ಮಕ್ಕಳು ಮತ್ತು ಸಹೋದರಿಯರಿಗೆ ಸ್ಫೂರ್ತಿಯ ಚಿಲುಮೆ. ಐನೂರು ವರ್ಷಗಳ ಹಿಂದೆಯೇ ನಮ್ಮ ಮಹಿಳೆಯರ ಸ್ವಾವಲಂಬನೆ ಮತ್ತು ಆತ್ಮರಕ್ಷಣೆಗೆ ಬೇಕಾದ ಕಲಿಕೆಗೆ ಅವಕಾಶ ಕಲ್ಪಿಸಿ ಅವರ ಸಬಲೀಕರಣಕ್ಕೆ ಕಾರಣಳಾದ ಜಿನ ಮಹಿಳೆ ಆಕೆ. ವಾಣಿಜ್ಯ ವ್ಯವಹಾರದಲ್ಲಿ ನಮ್ಮ ನೆಲಕ್ಕೆ ನೈಪುಣ್ಯತೆ ಗಳಿಸಿಕೊಟ್ಟವಳು. ಕೌಶಲದ ಜೊತೆಗೆ ಹೃದಯವಂತಿಕೆ, ಶೌರ್ಯದ ಜೊತೆಗೆ ದಯೆ ಕರುಣೆ ಇಟ್ಟುಕೊಂಡ ಘನ ವ್ಯಕ್ತಿತ್ವ ಆಕೆಯದು ಎಂದರು.

ಇದನ್ನೂ ಓದಿ: ನಾಳೆಯ ಹವಾಮಾನ: ಕರ್ನಾಟಕದಲ್ಲಿ ಮಳೆ ಅಬ್ಬರ ಮುಂದುವರಿಕೆ, ಈ ಜಿಲ್ಲೆಗಳಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ

ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗಡೆ ಮಾತನಾಡಿ, ಇತಿಹಾಸದ ಗರ್ಭದಲ್ಲಿ ಅಡಗಿಹೋದ ಚೆನ್ನಭೈರಾದೇವಿಯಂತಹ ವ್ಯಕ್ತಿತ್ವಕ್ಕೆ ನ್ಯಾಯ ಸಂದಾಯವಾಗುತ್ತಿರುವ ಈ ಸಂದರ್ಭದಲ್ಲಿ ಆಕೆಯ ಸಾಧನೆಯನ್ನು ಸ್ಮರಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:09 am, Fri, 25 July 25